ADVERTISEMENT

ರೋಹಿತ್‌ ಶರ್ಮಾಗೆ ದಂಡ

ಪಿಟಿಐ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
ಅಂಪೈರ್‌ ಜೊತೆ ವಾಗ್ವಾದ ನಡೆಸುತ್ತಿರುವ ರೋಹಿತ್‌ ಶರ್ಮಾ(ಮಧ್ಯ)
ಅಂಪೈರ್‌ ಜೊತೆ ವಾಗ್ವಾದ ನಡೆಸುತ್ತಿರುವ ರೋಹಿತ್‌ ಶರ್ಮಾ(ಮಧ್ಯ)   

ಮುಂಬೈ: ಅಂಗಳದ ಅಂಪೈರ್‌ಗೆ ಅಗೌರವ ತೋರಿರುವ ಕಾರಣ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾಗೆ ಪಂದ್ಯದ ಸಂಭಾವನೆಯ ಶೇಕಡ 50 ರಷ್ಟು ದಂಡ ವಿಧಿಸಲಾಗಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರೈಸಿಂಗ್‌ ಪುಣೆ ವಿರುದ್ಧದ ಐಪಿಎಲ್‌ ಪಂದ್ಯದ ಅಂತಿಮ ಓವರ್‌ನಲ್ಲಿ ಮುಂಬೈ ಗೆಲುವಿಗೆ 17ರನ್‌ ಗಳ ಅಗತ್ಯವಿತ್ತು.

ಜಯದೇವ್‌ ಉನದ್ಕತ್‌ ಹಾಕಿದ ಓವರ್‌ನ ಮೊದಲ ಎಸೆತದಲ್ಲಿ ಹಾರ್ದಿಕ್‌ ಪಾಂಡ್ಯ ಔಟಾದರು. ಮರು ಎಸೆತದಲ್ಲಿ ರೋಹಿತ್‌ ಸಿಕ್ಸರ್‌ ಬಾರಿಸಿದರು. ಮೂರನೇ ಎಸೆತ ವೈಡ್‌ ಆಗಿತ್ತು. ಆದರೂ ಅಂಪೈರ್‌ ಎಸ್‌.ರವಿ ವೈಡ್‌ ತೀರ್ಪು ನೀಡಲಿಲ್ಲ. ಇದರಿಂದ ಕುಪಿತಗೊಂಡ ರೋಹಿತ್‌ ನೇರವಾಗಿ ರವಿ ಅವರ ಬಳಿ ಹೋಗಿ ವಾಗ್ವಾದ ನಡೆಸಿದರು.  ಲೆಗ್‌ ಅಂಪೈರ್‌ ಎ. ನಂದ ಕಿಶೋರ್‌ ಮಧ್ಯಪ್ರವೇಶಿಸಿ  ಸಮಾಧಾನಪಡಿಸಿದ ಬಳಿಕ ರೋಹಿತ್‌ ಮತ್ತೆ ಬ್ಯಾಟಿಂಗ್‌ ಮಾಡಲು ಹೋದರು.

ADVERTISEMENT

ಮರು ಎಸೆತದಲ್ಲಿ ರೋಹಿತ್‌ ಅವರು ಔಟಾಗಿದ್ದರಿಂದ ಪಂದ್ಯ ಮುಂಬೈ ಕೈಯಿಂದ ಜಾರಿತ್ತು.

‘ರೋಹಿತ್‌ ಅವರು ಐಪಿಎಲ್‌ ನೀತಿ ನಿಯಮಗಳಿಗೆ ವಿರುದ್ಧವಾಗಿ ನಡೆದು ಕೊಂಡಿದ್ದಾರೆ. ಹೀಗಾಗಿ ಅವರಿಗೆ ದಂಡ ವಿಧಿಸಲಾಗಿದೆ’ ಎಂದು ಐಪಿಎಲ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರೋಹಿತ್‌ ಅಶಿಸ್ತು ತೋರಿಲ್ಲ: ‘ರೋಹಿತ್‌ ಶರ್ಮಾ  ಅಶಿಸ್ತು ತೋರಿಲ್ಲ’ ಎಂದು ಮುಂಬೈ ಆಲ್‌ ರೌಂಡರ್‌ ಹರಭಜನ್‌ ಸಿಂಗ್‌ ತಿಳಿಸಿದ್ದಾರೆ.

‘ಜಯದೇವ್‌ ಹಾಕಿದ ಚೆಂಡು ಕ್ರೀಸ್‌ನಿಂದ ಬಹಳ ದೂರದಲ್ಲಿ ಸಾಗಿತ್ತು. ಅದು ವೈಡ್‌ ಆಗಿತ್ತೊ ಇಲ್ಲವೋ ನನಗೂ ಸರಿಯಾಗಿ ಗೊತ್ತಿಲ್ಲ. ಇದರಿಂದ ಅಸ ಮಾಧಾನಗೊಂಡಿದ್ದ ರೋಹಿತ್‌, ಅಂಪೈರ್‌ ರವಿ ಅವರ ಬಳಿ ಬಂದು ಚರ್ಚಿಸಿದರಷ್ಟೇ. ಆಗ ನಾನೂ ಅಲ್ಲೇ ಇದ್ದೆ. ಅವರು ಅಂಪೈರ್‌ಗೆ ಅಗೌರವ ತೋರುವ ರೀತಿಯಲ್ಲಿ ಖಂಡಿತ ವಾಗಿಯೂ ವರ್ತಿಸಲಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.