ADVERTISEMENT

ಲಾಯನ್ ಗರ್ಜನೆಗೆ ಬೆದರಿದ ಆತಿಥೇಯರು

ತವರಿನಂಗಳದಲ್ಲಿ ರಾಹುಲ್ ಏಕಾಂಗಿ ಹೋರಾಟ

ಗಿರೀಶದೊಡ್ಡಮನಿ
Published 4 ಮಾರ್ಚ್ 2017, 20:27 IST
Last Updated 4 ಮಾರ್ಚ್ 2017, 20:27 IST
ಲಾಯನ್ ಗರ್ಜನೆಗೆ ಬೆದರಿದ ಆತಿಥೇಯರು
ಲಾಯನ್ ಗರ್ಜನೆಗೆ ಬೆದರಿದ ಆತಿಥೇಯರು   

ಬೆಂಗಳೂರು: ತವರಿನ ಅಂಗಳದಲ್ಲಿ ಶತಕದ ಸಂಭ್ರಮ ಆಚರಿಸಲು ಕೆ.ಎಲ್. ರಾಹುಲ್‌ಗೆ ಸಾಧ್ಯವಾಗಲಿಲ್ಲ. ಆದರೆ ಕಳೆದ ಆರು ದಶಕಗಳಲ್ಲಿ ಆಸ್ಟ್ರೇಲಿಯಾದ ಖ್ಯಾತನಾಮ ಸ್ಪಿನ್ನರ್‌ಗಳು ಮಾಡದ ಸಾಧನೆಯನ್ನು ನೇಥನ್ ಲಾಯನ್ ಮಾಡಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಟೆಸ್ಟ್‌ನಲ್ಲಿ ತಮ್ಮ ಬಲತೋಳಿನ ನೋವು ಸಹಿಸಿಕೊಂಡು 90 ರನ್ ಗಳಿಸಿದ ರಾಹುಲ್ ಏಕಾಂಗಿ ಹೋರಾಟ ನಡೆಸಿದರು.



ಆದರೆ ಎಂಟು ವಿಕೆಟ್‌ಗಳನ್ನು ಬಳಿಸಿ ದಾಖಲೆ ಬರೆದ ಲಾಯನ್ (50ಕ್ಕೆ8) ಆತಿಥೇಯ ತಂಡವನ್ನು 189 ರನ್‌ಗಳಿಗೆ ಹೆಡೆಮುರಿ ಕಟ್ಟಿದರು. ಹೋದ ವಾರ ಪುಣೆಯಲ್ಲಿ ಹೀನಾಯವಾಗಿ ಸೋತಿದ್ದ ಆತಿಥೇಯರ ಗಾಯಕ್ಕೆ ಉಪ್ಸು ಸವರಿದರು. ಭಾರತದಲ್ಲಿ ಒಂದೇ ಇನಿಂಗ್ಸ್‌ನಲ್ಲಿ ನೀಡಿ ಎಂಟು ವಿಕೆಟ್ ಗಳಿಸಿದ ಆಸ್ಟ್ರೇಲಿಯಾದ  ಎರಡನೇ ಮತ್ತು ಚಿನ್ನಸ್ವಾಮಿ ಅಂಗಳದಲ್ಲಿ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಮೊದಲ ದಿನದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ಇಡೀ ದಿನ ನಿರಾಸೆಯನ್ನೇ ಅನುಭವಿಸಿತು. ಇದೆಲ್ಲದವರ ನಡುವೆಯೂ ‘ಸ್ಥಳೀಯ ಹೀರೊ’ ರಾಹುಲ್ ಅಭಿಮಾನಿಗಳ ಮನಸ್ಸಿಗೆ ಒಂದಷ್ಟು ತಂಪೆರೆದರು. 



ಬೌಂಡರಿಯೊಂದಿಗೆ ಆರಂಭ
ಬಾಲ್ಯದಿಂದಲೂ ಆಡಿ ಬೆಳೆದ ಅಂಗಳದಲ್ಲಿ ಮೊದಲ ಬಾರಿ ಟೆಸ್ಟ್ ಆಡುವ ಅವಕಾಶ ಪಡೆದ ರಾಹುಲ್ ಇನಿಂಗ್ಸ್‌ನ ಮೊದಲ ಎಸೆತವನ್ನು ಬೌಂಡರಿಗೆ ಕಳಿಸಿದರು. ಮಿಷೆಲ್ ಸ್ಟಾರ್ಕ್‌ ಎಸೆತವನ್ನು ಡ್ರೈವ್ ಮಾಡಿದ ಅವರು ತಮ್ಮ ಟೆಸ್ಟ್‌ ಜೀವನದ ನೂರನೇ ಬೌಂಡರಿ ಬಾರಿಸಿದರು. ಅದೇ ಓವರ್‌ನ ಕೊನೆಯ ಎಸೆತವನ್ನು ಅವರು ಬೌಂಡರಿಗೆ ಅಟ್ಟಿದರು. 

ಅಚ್ಚರಿಯ ಬೆಳವಣಿಗೆಯಲ್ಲಿ ಮುರಳಿ ವಿಜಯ್ ಬದಲಿಗೆ ಸ್ಥಾನ ಪಡೆದ ಎಡಗೈ ಬ್ಯಾಟ್ಸ್‌ಮನ್ ಅಭಿನವ್ ಮುಕುಂದ್ ಅವರು ಮೂರನೇ ಓವರ್‌ನಲ್ಲಿ ಸ್ಟಾರ್ಕ್‌ಗೆ ಎಲ್‌ಬಿಡಬ್ಲ್ಯು ಆಗುವುದರೊಂದಿಗೆ ಆತಿಥೇಯರ ಸಂಕಷ್ಟ ಆರಂಭವಾಯಿತು.

ಆದರೆ, ಎರಡು ಬಾರಿ ಲಭಿಸಿದ ಜೀವದಾನಗಳನ್ನು  ಬಳಸಿಕೊಂಡ ರಾಹುಲ್ ಇನಿಂಗ್ಸ್‌ ಕಟ್ಟಲು ಪ್ರಯತ್ನಿಸಿದರು. 16ನೇ ಓವರ್‌ನಲ್ಲಿ ಸ್ಟೀವ್ ಓಕೀಫ್ ಎಸೆತದಲ್ಲಿ ಸಿಲ್ಲಿ ಮಿಡ್‌ಆಫ್‌ನಲ್ಲಿ ಹ್ಯಾಂಡ್ಸ್‌ಕಂಬ್ ಕ್ಯಾಚ್‌ ನೆಲಕ್ಕೆ ಚೆಲ್ಲಿದರು. ಆಗ ರಾಹುಲ್ 30 ರನ್ ಗಳಿಸಿದ್ದರು. ತಂಡದ ಮೊತ್ತ ಕೇವಲ 37 ರನ್ ಆಗಿತ್ತು.  ಲಯಾನ್ ಹಾಕಿದ 44ನೇ ಓವರ್‌ನಲ್ಲಿ ರಾಹುಲ್ ಹೊಡೆದ ಚೆಂಡನ್ನು ಹಿಡಿತಕ್ಕೆ ಪಡೆಯುವಲ್ಲಿ ಲೆಗ್‌ಸ್ಲಿಪ್ ಫೀಲ್ಡರ್‌ ಡೇವಿಡ್ ವಾರ್ನರ್ ವಿಫಲರಾದರು.

ADVERTISEMENT



ಒಂದೆಡೆ ಚುರುಕು ಬಿಸಿಲು, ಮತ್ತೊಂದೆಡೆ  ಪ್ರವಾಸಿ ಬಳಗದ ಐವರು ಬೌಲರ್‌ಗಳ ಶಿಸ್ತಿನ ದಾಳಿಯನ್ನು ರಾಹುಲ್ ಎದುರಿಸಿ ನಿಂತರು. ಯಶಸ್ವಿ ಬೌಲರ್ ಲಾಯನ್  ಅವರ 50 ಎಸೆತಗಳನ್ನು ಎದುರಿಸಿದ ಅವರು 23 ರನ್‌ಗಳನ್ನು ಗಳಿಸಿದರು. ಅದರಲ್ಲಿ ಕೇವಲ ಒಂದು ಬೌಂಡರಿ ಇತ್ತು. ಆದರೆ ಚಹಾ ವಿರಾಮದ ನಂತರ ಸಾಕಷ್ಟು ಬಳಲಿದ್ದ ಅವರು ಏಕಾಗ್ರತೆ ಕಳೆದುಕೊಂಡು ಔಟಾದರು. 

ಲಾಯನ್  ದಾಳಿಗೆ ನಲುಗಿದ ಆತಿಥೇಯರು
ಆಸ್ಟ್ರೇಲಿಯಾದ  ಖ್ಯಾತ ಸ್ಪಿನ್ನರ್‌ಗಳಾದ ರಿಚಿ ಬೆನಾಡ್, ಆ್ಯಷ್ಲೆ ಮೆಲೆಟ್, ಶೇನ್ ವಾರ್ನ್ ಅವರು ಭಾರತದಲ್ಲಿ ಆಡಿ ಐದು ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದರು.  2008ರಲ್ಲಿ ಜೇಸನ್ ಕ್ರೀಜಾ (215ಕ್ಕೆ8) ಕೂಡ ಮಿಂಚಿದ್ದರು.  ಅವರಿಗಿಂತಲೂ ಹೆಚ್ಚಿನ ಸಾಧನೆಯನ್ನು ಲಾಯನ್ ಮಾಡಿದರು.    ಹಸಿರು ಗರಿಕೆಗಳು ಮತ್ತು ಬಿರುಕುಗಳು ಇರುವ ಪಿಚ್‌ನಲ್ಲಿ ಚಾಣಾಕ್ಷತನಿಂದ ಬೌಲಿಂಗ್ ಮಾಡಿದರು. 

ಅವರು ತಮ್ಮ ಮೊದಲ ಸ್ಪೆಲ್‌ನಲ್ಲಿ (16–3–40–3) ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರನ್ನು  ಪೆವಿಲಿಯನ್‌ಗೆ ಕಳಿಸಿದರು.   ತಮ್ಮ ಎರಡನೇ ಸ್ಪೆಲ್‌ನಲ್ಲಿ (6.2-1-10-5) ಇನ್ನೂ ಹೆಚ್ಚು ಪ್ರಖರವಾಗಿ ಬೆಳಗಿದರು.  ಆರ್. ಅಶ್ವಿನ್, ವೃದ್ಧಿಮಾನ್ ಸಹಾ, ರವೀಂದ್ರ ಜಡೇಜ, ರಾಹುಲ್ ಮತ್ತು ಇಶಾಂತ್ ಶರ್ಮಾ ಅವರ ವಿಕೆಟ್ ಗಳಿಸಿದರು.  ಇದರಿಂದಾಗಿ ಚಹಾ ವಿರಾಮದ ನಂತರ ಭಾರತ ತಂಡವು ಕೇವಲ 20 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು.

ದುಡುಕಿದ ಕರುಣ್
ಜಯಂತ್ ಯಾದವ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಕರುಣ್ ನಾಯರ್ ಅವರು ಕೇವಲ 39 ಎಸೆತಗಳಲ್ಲಿ 26 ರನ್‌ಗಳನ್ನು ಗಳಿಸುವ ಮೂಲಕ ಭರವಸೆ ಮೂಡಿಸಿದ್ದರು. ತಂಡವು 118 ರನ್‌ಗಳಿಗೆ 4 ವಿಕೆಟ್‌ ಕಳದುಕೊಂಡಿದ್ದ ಸಂದರ್ಭದಲ್ಲಿ ತಮ್ಮ ಗೆಳೆಯ ರಾಹುಲ್ ಜೊತೆಗೂಡಿದ ಕರುಣ್  ದಿಟ್ಟತನದಿಂದ ಆಡಿದರು. ಇವರಿಬ್ಬರ ನಡುವೆ ಉತ್ತಮ ಜೊತೆಯಾಟ ಬೆಳೆಯುವ ನಿರೀಕ್ಷೆ ಇತ್ತು.

ಆದರೆ, 58ನೇ ಓವರ್‌ನಲ್ಲಿ ತಾಳ್ಮೆ ಕಳೆದುಕೊಂಡ ಕರುಣ್ ಅವರು  ಓಕೀಫ್ ಎಸೆತವನ್ನು ಹೊಡೆಯಲು ಮುನ್ನುಗಿದರು. ಆದರೆ, ತಿರುವು ಪಡೆದ ಚೆಂಡು ಅವರನ್ನು ವಂಚಿಸಿತು. ಚೆಂಡನ್ನು ಹಿಡಿತಕ್ಕೆ ಪಡೆದ ಮ್ಯಾಥ್ಯೂ ವೇಡ್ ಬೇಲ್ಸ್‌ ಎಗರಿಸಿದರು. ಇವರಿಗಿಂತ ಮುನ್ನ ಅಜಿಂಕ್ಯ ರಹಾನೆ ಕೂಡ ಇಂತಹ ದುಡುಕಿನಿಂದ ವಿಕೆಟ್‌ ಕಳೆದುಕೊಂಡಿದ್ದರು.

ಉತ್ತಮ ಆರಂಭ
ನಂತರ ಬ್ಯಾಟಿಂಗ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡವು 16 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 40 ರನ್‌ ಗಳಿಸಿದೆ. ಡೇವಿಡ್ ವಾರ್ನರ್ (ಬ್ಯಾಟಿಂಗ್  23) ಮತ್ತು ಮ್ಯಾಟ್ ರೆನ್‌ಶಾ (ಬ್ಯಾಟಿಂಗ್ 15)  ಕ್ರೀಸ್‌ನಲ್ಲಿದ್ದಾರೆ.

ಸ್ಕೋರ್‌ಕಾರ್ಡ್‌
ಭಾರತ ಪ್ರಥಮ ಇನಿಂಗ್ಸ್‌ 189
(71.2  ಓವರ್‌ಗಳಲ್ಲಿ)

ಕೆ.ಎಲ್. ರಾಹುಲ್ ಸಿ ಮ್ಯಾಟ್ ರೆನ್‌ಶಾ ಬಿ ನೇಥನ್ ಲಾಯನ್  90
ಅಭಿನವ್ ಮುಕುಂದ ಎಲ್‌ಬಿಡಬ್ಲ್ಯು ಬಿ ಮಿಷೆಲ್ ಸ್ಟಾರ್ಕ್  00
ಚೇತೇಶ್ವರ್ ಪೂಜಾರ ಸಿ ಹ್ಯಾಂಡ್ಸ್‌ಕಂಬ್ ಬಿ  ನೇಥನ್ ಲಾಯನ್  17
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಿ ನೇಥನ್ ಲಾಯನ್  12
ಅಜಿಂಕ್ಯ ರಹಾನೆ ಸ್ಟಂಪ್ಡ್ ಮ್ಯಾಥ್ಯೂ ವೇಡ್ ಬಿ ನೇಥನ್ ಲಾಯನ್  17
ಕರುಣ್ ನಾಯರ್ ಸ್ಟಂಪ್ಡ್ ಮ್ಯಾಥ್ಯೂ ವೇಡ್ ಬಿ ಸ್ಟೀವ್ ಓಕೀಫ್  26
ಆರ್. ಅಶ್ವಿನ್ ಸಿ ಡೇವಿಡ್ ವಾರ್ನರ್ ಬಿ ನೇಥನ್ ಲಾಯನ್  07
ವೃದ್ಧಿಮಾನ್ ಸಹಾ  ಸಿ  ಸ್ಟೀವನ್ ಸ್ಮಿತ್ ಬಿ ನೇಥನ್ ಲಾಯನ್  01
ರವೀಂದ್ರ ಜಡೇಜ ಸಿ ಸ್ಟೀವನ್ ಸ್ಮಿತ್ ಬಿ ನೇಥನ್ ಲಾಯನ್  03
ಉಮೇಶ ಯಾದವ್ ಔಟಾಗದೆ  00
ಇಶಾಂತ್ ಶರ್ಮಾ ಸಿ ಹ್ಯಾಂಡ್ಸ್‌ಕಂಬ್ ಬಿ ನೇಥನ್ ಲಾಯನ್  00
ಇತರೆ: (ಬೈ 12, ಲೆಗ್‌ಬೈ 4) 16

ವಿಕೆಟ್‌ ಪತನ: 1–11 (ಮುಕುಂದ; 2.5), 2–72 (ಪೂಜಾರ; 27.1), 3–88 (ಕೊಹ್ಲಿ; 33.5), 4–118 (ರಹಾನೆ; 47.3), 5–156 (ನಾಯರ್; 57.2), 6–174 (ಅಶ್ವಿನ್; 61.5), 7–178 (ಸಹಾ; 65.3), 8–188(ಜಡೇಜ; 69.2), 9–189 (ರಾಹುಲ್; 71.1), 10–189 (ಶರ್ಮಾ; 71.2).

ಬೌಲಿಂಗ್‌:  ಮಿಚೆಲ್ ಸ್ಟಾರ್ಕ್ 15–5–39–1, ಜೋಶ್ ಹ್ಯಾಜಲ್‌ವುಡ್ 11–2–42–0, ಸ್ಟೀವ್ ಓಕೀಫ್ 21–5–40–1, ಮಿಚೆಲ್ ಮಾರ್ಷ್ 2–0–2–0, ನೇಥನ್ ಲಾಯನ್ 22.2–4–50–8.

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ ವಿಕೆಟ್ ನಷ್ಟವಿಲ್ಲದೆ 40
(16  ಓವರ್‌ಗಳಲ್ಲಿ) 

ಡೇವಿಡ್ ವಾರ್ನರ್  ಬ್ಯಾಟಿಂಗ್  23
ಮ್ಯಾಟ್ ರೆನ್‌ಶಾ ಬ್ಯಾಟಿಂಗ್  15
ಇತರೆ: (ನೋಬಾಲ್ 2) 02
ಬೌಲಿಂಗ್‌:  ಇಶಾಂತ್ ಶರ್ಮಾ 5–0–8–0, ಉಮೇಶ್ ಯಾದವ್ 4–1–16–0, ಅಶ್ವಿನ್ 6–0–4–0, ರವೀಂದ್ರ ಜಡೇಜ 1–0–5–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.