ADVERTISEMENT

ವಿಶ್ವಾಸದಲ್ಲಿ ಆತಿಥೇಯರು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 19:30 IST
Last Updated 26 ನವೆಂಬರ್ 2015, 19:30 IST

ರಾಯಪುರ : ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಲು ವೇದಿಕೆ ಎನಿಸಿರುವ ವಿಶ್ವ ಹಾಕಿ ಲೀಗ್‌ ಫೈನಲ್ಸ್ ಟೂರ್ನಿಯು ಶುಕ್ರವಾರ ಆರಂಭವಾಗಲಿದ್ದು ಭಾರತ ತನ್ನ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ಎದುರು ಪೈಪೋಟಿ ನಡೆಸಲಿದೆ.

ಸರ್ದಾರ್ ಸಿಂಗ್‌ ನಾಯಕತ್ವದ ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.  ವಿಶ್ವ ರ್‍ಯಾಂಕ್‌ನಲ್ಲಿ ಐದನೇ ಸ್ಥಾನದಲ್ಲಿರುವ ಅರ್ಜೆಂಟೀನಾ, ಎರಡನೇ ಸ್ಥಾನದಲ್ಲಿರುವ ನೆದರ್ಲೆಂಡ್ಸ್‌ ಮತ್ತು ಮೂರನೇ ಸ್ಥಾನ ಹೊಂದಿರುವ ಜರ್ಮನಿ ತಂಡಗಳು ಇದೇ ಗುಂಪಿನಲ್ಲಿವೆ. ಆದ್ದರಿಂದ ಆತಿಥೇಯರಿಗೆ ಪ್ರತಿ ಪಂದ್ಯವೂ ಅಗ್ನಿಪರೀಕ್ಷೆ ಎನಿಸಿದೆ. ಭಾರತ ಆರನೇ ಸ್ಥಾನದಲ್ಲಿದೆ.

ಭಾರತ ತಂಡ ನ್ಯೂಜಿಲೆಂಡ್‌ ಎದುರಿನ ಹಾಕಿ ಟೆಸ್ಟ್‌ ಸರಣಿಯಲ್ಲಿ 2–1ರಲ್ಲಿ ಗೆಲುವು ಪಡೆದಿತ್ತು. ವಿಶ್ವ ಹಾಕಿ ಫೈನಲ್ಸ್‌ಗೆ ಸಜ್ಜಾಗಲು ಸರ್ದಾರ್‌ ಪಡೆ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳ ಸರಣಿ ಆಡಿತ್ತು. ಆ ಸರಣಿಯಲ್ಲಿ ಭಾರತ  ಸೋತಿತ್ತು.

ಆಸ್ಟ್ರೇಲಿಯಾ, ಬ್ರಿಟನ್‌, ಬೆಲ್ಜಿಯಂ ಮತ್ತು ಕೆನಡಾ ತಂಡಗಳು ‘ಬಿ’ ಗುಂಪಿನಲ್ಲಿ ಸ್ಥಾನ ಹೊಂದಿವೆ. ವಿಶೇಷವೆಂದರೆ   ಟೂರ್ನಿಯಲ್ಲಿ ಪಾಲ್ಗೊಂಡಿರುವ ಎಲ್ಲಾ ಎಂಟು ತಂಡಗಳು ರಿಯೊ ಡಿ ಜನೈರೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿವೆ. 
ಇಲ್ಲಿ ಪ್ರಶಸ್ತಿ ಜಯಿಸುವ ತಂಡ 2016ರಲ್ಲಿ ಅರ್ಜೆಂಟೀನಾದಲ್ಲಿ ನಡೆಯಲಿರುವ ಪುರುಷರ ಚಾಂಪಿಯನ್ಸ್ ಹಾಕಿ ಲೀಗ್ ಟೂರ್ನಿಗೆ ನೇರ ಅರ್ಹತೆ ಗಳಿಸಲಿದೆ. ಆದ್ದರಿಂದ ಟೂರ್ನಿಯ ಮಹತ್ವ ಹೆಚ್ಚಿದೆ.

ಆ್ಯಂಟ್‌ವರ್ಪ್‌ ನಡೆದಿದ್ದ ವಿಶ್ವ ಹಾಕಿ ಲೀಗ್ ಸೆಮಿಫೈನಲ್ಸ್‌ನಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿತ್ತು. ಆದ್ದರಿಂದ ತವರಿನ ಅಂಗಳದಲ್ಲಿಯೂ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಿದೆ. ಗೋಲ್ ಕೀಪರ್ ಪಿ.ಆರ್‌. ಶ್ರೀಜೇಶ್‌ ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಬೀರೇಂದ್ರ ಲಾಕ್ರಾ, ಕೊತಾಜಿತ್ ಸಿಂಗ್‌, ಜಸ್ಜೀತ್‌ ಸಿಂಗ್‌ ಕುಲಾರ್‌, ವಿ.ಆರ್‌ ರಘುನಾಥ್‌ ಮತ್ತು ರೂಪಿಂದರ್ ಪಾಲ್‌ ಸಿಂಗ್‌ ರಕ್ಷಣಾ ವಿಭಾಗದ ಪ್ರಮುಖರೆನಿಸಿದ್ದಾರೆ. ರಘುನಾಥ್‌ ಮತ್ತು ರೂಪಿಂದರ್ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಪರಿಣತಿ ಹೊಂದಿದ್ದಾರೆ.

ಸರ್ದಾರ್ ಪಡೆ ಈಚೆಗಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಗ್ಲಾಸ್ಗೊ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿ, ಇಂಚೆನ್‌ ಏಷ್ಯನ್‌ ಕೂಟದಲ್ಲಿ ಚಿನ್ನ ಜಯಿಸಿತ್ತು. ತವರಿನಲ್ಲಿ ನಡೆದಿದ್ದ
ಚಾಂಪಿಯನ್ಸ್ ಟ್ರೋಫಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಆದ್ದರಿಂದ ಈ ಮಹತ್ವದ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.