ADVERTISEMENT

ಶೂಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಕಂಚು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 6:12 IST
Last Updated 22 ಸೆಪ್ಟೆಂಬರ್ 2014, 6:12 IST

ಇಂಚೆನ್‌ (ಪಿಟಿಐ): ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ರಾಹಿ ಸರ್ನೊಬತ್‌, ಅನಿಸಾ ಸಯ್ಯದ್‌ ಹಾಗೂ ಹೀನಾ ಸಿಧು ಅವರನ್ನೊಳಗೊಂಡ ಭಾರತದ ಮಹಿಳೆಯರ ತಂಡವು 25 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಸೋಮವಾರ ಕಂಚಿನ ಪದಕ ಗೆದ್ದಿದೆ.

ಮೂವರು ಶೂಟರ್ ಗಳನ್ನು ಒಳಗೊಂಡ ಭಾರತದ ತಂಡ 1729 ಪಾಯಿಂಟ್‌ಗಳನ್ನು ಕಲೆಹಾಕಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಚೀನಾ ಬೆಳ್ಳಿ ಗೆದ್ದರೆ ಆತಿಥೇಯ ದಕ್ಷಿಣ ಕೊರಿಯ ಚಿನ್ನದ ಪದಕವನ್ನು ಬಾಚಿಕೊಂಡಿತು.

ಭಾರತಕ್ಕೆ ಶೂಟಿಂಗ್‌ನಲ್ಲಿ ದೊರೆತ ನಾಲ್ಕನೇ ಪದಕ ಇದಾಗಿದೆ. ಜಿತು ರಾಯ್‌ ಅವರನ್ನೊಳಗೊಂಡ ಭಾರತದ ಪುರುಷರ ತಂಡ 10 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಭಾನುವಾರ ಕಂಚಿನ ಪದಕ ಗೆದ್ದಿತ್ತು. ಇದಕ್ಕೂ ಮೊದಲು ಜಿತು ಅವರು 50 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಬಂಗಾರದ ಸಾಧನೆ ತೋರಿದ್ದರು. 10 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಶ್ವೇತಾ ಚೌಧರಿ ಅವರು ಕಂಚಿನ ಪದಕ ಪಡೆದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.