ADVERTISEMENT

ಶ್ರೀನಿವಾಸನ್‌ ಕೋರಿಕೆ ತಳ್ಳಿ ಹಾಕಿದ ಸುಪ್ರೀಂ

ಐಪಿಎಲ್‌ ಬೆಟ್ಟಿಂಗ್‌ ಪ್ರಕರಣ: ಕ್ರಿಕೆಟ್‌ ಮಂಡಳಿಯೇ ತನಿಖೆ ನಡೆಸಲಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST
ಮತ್ತಷ್ಟು ಸಂಕಷ್ಟದಲ್ಲಿ ಎನ್‌.ಶ್ರೀನಿವಾಸನ್‌...	 (ಸಂಗ್ರಹ ಚಿತ್ರ)
ಮತ್ತಷ್ಟು ಸಂಕಷ್ಟದಲ್ಲಿ ಎನ್‌.ಶ್ರೀನಿವಾಸನ್‌... (ಸಂಗ್ರಹ ಚಿತ್ರ)   

ನವದೆಹಲಿ (ಪಿಟಿಐ): ಐಪಿಎಲ್‌ ಬೆಟ್ಟಿಂಗ್‌ ಹಾಗೂ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದ ತನಿಖೆ ಕೊನೆಗೊಳ್ಳುವವರೆಗೆ ಎನ್‌. ಶ್ರೀನಿವಾಸನ್‌ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಸಿರುವ ಮುಕುಲ್‌ ಮುದ್ಗಲ್‌ ಸಮಿತಿ ಸಲ್ಲಿಸಿದ್ದ ವರದಿಯಲ್ಲಿ ಶ್ರೀನಿವಾಸನ್‌ ಹಾಗೂ ಕೆಲವು ಆಟಗಾರರು ಒಳಗೊಂಡಂತೆ 13 ಮಂದಿಯ ಹೆಸರು ಇದೆ ಎಂದು ನ್ಯಾಯಮೂರ್ತಿಗಳಾದ  ಎ.ಕೆ.ಪಟ್ನಾಯಕ್‌ ಮತ್ತು ಎಫ್‌.ಎಂ. ಇಬ್ರಾಹಿಂ ಕಲೀಫುಲ್ಲಾ ಅವರನ್ನೊಳಗೊಂಡ ಪೀಠ ಬುಧವಾರ ತಿಳಿಸಿತು.

ಪ್ರಕರಣದ ತನಿಖೆ ಕೊನೆಗೊಂಡು ತಪ್ಪಿತಸ್ಥನಲ್ಲ ಎಂಬುದು ಸಾಬೀತಾದ ಬಳಿಕವೇ ಶ್ರೀನಿವಾಸನ್‌ ಮಂಡಳಿಯ ಅಧ್ಯಕ್ಷನಾಗಿ ಮುಂದುವರಿಯಬಹುದು ಎಂದು ಪೀಠ ಸ್ಪಷ್ಟಪಡಿಸಿತು.ಮುದ್ಗಲ್‌ ಸಮಿತಿ ತನಿಖಾ ವರದಿಯ ವಿವರಗಳನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದ ಪೀಠ ವರದಿಯಲ್ಲಿ 13 ಮಂದಿಯ ಹೆಸರು ಇದೆ ಎಂದಿದೆ. ಇದರಲ್ಲಿ 13ನೇ ಹೆಸರು ಶ್ರೀನಿವಾಸನ್‌ ಅವರದ್ದಾಗಿದ್ದು, ಒಟ್ಟು 12 ಆರೋಪಗಳು ಅವರ ಮೇಲಿವೆ.

‘ಕೆಲವು ಗಂಭೀರ ಆರೋಪಗಳು ತನಿಖಾ ವರದಿಯಲ್ಲಿವೆ. ಆದ್ದರಿಂದ ನಮಗೆ ಕಣ್ಣು ಮುಚ್ಚಿಕೊಂಡಿರಲು ಸಾಧ್ಯವಿಲ್ಲ’ ಎಂದು ಪೀಠ ತಿಳಿಸಿದೆ. ಮುದ್ಗಲ್‌ ಸಮಿತಿ ವರದಿಯ ಬಗ್ಗೆ ಉಲ್ಲೇಖಿಸಿದ ಪೀಠ, ‘ಈ ಎಲ್ಲಾ ಆರೋಪಗಳನ್ನು ಶ್ರೀನಿವಾಸನ್‌ ಗಮನಕ್ಕೆ ತರಲಾಗಿತ್ತು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆರೋಪಗಳ ಬಗ್ಗೆ ಅರಿವಿದ್ದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದಿದೆ.

‘ಕೆಲವು ಪ್ರಮುಖ ಆಟಗಾರರ ಹೆಸರುಗಳೂ ವರದಿಯಲ್ಲಿವೆ. ಆದರೆ ಆ ಹೆಸರುಗಳನ್ನು ಈಗ ಬಹಿರಂಗಪಡಿಸುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ ತಿಳಿಸಿತು.

ಶ್ರೀನಿವಾಸನ್‌ ಕೋರಿಕೆ ತಳ್ಳಿಹಾಕಿದ ಪೀಠ
ಮಂಡಳಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು ಎಂಬ ಶ್ರೀನಿವಾಸನ್ ಕೋರಿಕೆಯನ್ನು ಪೀಠ ತಳ್ಳಿಹಾಕಿದೆ.
ಸುಪ್ರೀಂ ಕೋರ್ಟ್‌ ಮಾರ್ಚ್‌ 28 ರಂದು ನೀಡಿದ್ದ ಮಧ್ಯಾಂತರ ತೀರ್ಪಿನಲ್ಲಿ ಶ್ರೀನಿವಾಸನ್‌ ಅವರನ್ನು ಹುದ್ದೆಯಿಂದ ವಜಾಗೊಳಿಸಿತ್ತು. ಮಾತ್ರವಲ್ಲ, ಐಪಿಎಲ್‌ ಮತ್ತು ಬಿಸಿಸಿಐನ ವ್ಯವಹಾರ ನೋಡಿಕೊಳ್ಳಲು ಸುನಿಲ್‌ ಗಾವಸ್ಕರ್‌ ಹಾಗೂ ಶಿವಲಾಲ್‌ ಯಾದವ್‌ ಅವರನ್ನು ನೇಮಿಸಿತ್ತು.

ಮಧ್ಯಾಂತರ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೋರಿ ಶ್ರೀನಿವಾಸನ್‌ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದರು. ಮಂಡಳಿಯ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ವಜಾಗೊಳಿಸಲು ಯಾವುದೇ ಕಾರಣ ಇಲ್ಲ ಎಂದು ಅವರು ಹೇಳಿದ್ದರು.

‘ಬಿಹಾರ ಕ್ರಿಕೆಟ್‌ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ವಕೀಲರು ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ’ ಎಂದು ಅಫಿಡವಿಟ್‌ನಲ್ಲಿ ವಿವರಿಸಿದ್ದರು. ಆದರೆ ಮಂಡಳಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದರೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ ಎಂದು ಶ್ರೀನಿವಾಸನ್‌ ಕೋರಿಕೆಯನ್ನು ಪೀಠ ತಳ್ಳಿಹಾಕಿತು.

ಮಂಡಳಿಯೇ ತನಿಖೆ ನಡೆಸಲಿ
ಐಪಿಎಲ್‌ ಬೆಟ್ಟಿಂಗ್‌ ಪ್ರಕರಣದ ತನಿಖೆಯನ್ನು ಕ್ರಿಕೆಟ್‌ ಮಂಡಳಿಯೇ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿತು. ಬಿಸಿಸಿಐನ ಸಾಂಸ್ಥಿಕ ಸ್ವಾಯತ್ತತೆ ಕಾಪಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಈ ತೀರ್ಮಾನ ಕೈಗೊಂಡಿದೆ.

‘ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ), ಸಿಬಿಐ ಅಥವಾ ಪೊಲೀಸರಿಗೆ ವಹಿಸಿಕೊಡುವುದಿಲ್ಲ. ಆದರೆ ಅನಿವಾರ್ಯವೆಂದರೆ ಅಂತಹ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ಸರಿಯಾಗಿ ಚಿಂತಿಸಿ ಮುಂದಿನ ವಿಚಾರಣೆ ವೇಳೆ ಉತ್ತರ ನೀಡಿ’ ಎಂದು  ಬಿಸಿಸಿಐಗೆ ಸೂಚಿಸಿದೆ. ಮುಂದಿನ ವಿಚಾರಣೆ ಏಪ್ರಿಲ್‌ 22 ರಂದು ನಡೆಯಲಿದೆ.

‘ತನಿಖಾ ವರದಿಯಲ್ಲಿ ಪ್ರಮುಖ ಕ್ರಿಕೆಟ್‌ ಆಟಗಾರರ ಹೆಸರು ಇರುವ ಕಾರಣ ಅದನ್ನು ಪೊಲೀಸ್‌ ಅಥವಾ ಇತರ ತನಿಖಾ ಸಂಸ್ಥೆಗಳ ಜೊತೆ ಹಂಚಿಕೊಳ್ಳುವುದಿಲ್ಲ. ಹಾಗಾದಲ್ಲಿ ಆಟಗಾರರ ಹೆಸರು ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಸೋರಿಕೆಯಾಗುವ ಸಾಧ್ಯತೆಯಿದೆ’ ಎಂದು ತಿಳಿಸಿತು.

‘ತನಿಖಾ ವರದಿಯನ್ನು ನಾವು ಯಾರಿಗೆ ನೀಡಲಿ? ಬಿಸಿಸಿಐ ಮತ್ತು ಶ್ರೀನಿವಾಸನ್‌ಗೆ ನೀಡಬೇಕೆ ಅಥವಾ ತನಿಖೆಗೆ ವಿಶೇಷ ತನಿಖಾ ದಳವನ್ನು ನೇಮಿಸಬೇಕೆ’ ಎಂದು ಪೀಠವು ಬಿಸಿಸಿನಲ್ಲಿ ಕೇಳಿತು. ‘ಬಿಸಿಸಿಐ ಮೇಲೆ ನಮಗೆ ವಿಶ್ವಾಸವಿದೆ. ಮಂಡಳಿಯು ತನಿಖೆಗೆ ಸಮಿತಿಯನ್ನು ನೇಮಿಸಬೇಕು. ಆ ಸಮಿತಿಯಲ್ಲಿ ವಿಶ್ವಾಸಾರ್ಹ ವ್ಯಕ್ತಿಗಳಿರಬೇಕು’ ಎಂದು ಸೂಚಿಸಿತು.

ಧ್ವನಿ ಮುದ್ರಿಕೆ; ಏ. 22 ರಂದು ತೀರ್ಪು:
ಎನ್‌.ಶ್ರೀನಿವಾಸನ್‌ ಹಾಗೂ ಮಹೇಂದ್ರ ಸಿಂಗ್‌ ದೋನಿ ಅವರು ವಿಚಾರಣೆ ವೇಳೆ ನಿವೃತ್ತ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ಸಮಿತಿ  ಮುಂದೆ ನೀಡಿರುವ ಹೇಳಿಕೆಗಳ ಧ್ವನಿ ಮುದ್ರಿಕೆಗಳನ್ನು ನೀಡುವಂತೆ ಬಿಸಿಸಿಐ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್‌  ಪುರಸ್ಕರಿಸಿದೆ. ಈ ಮನವಿಯ ವಿಚಾರಣೆಯನ್ನು ಏ. 22 ರಂದು  ನಡೆಸಲಾಗುವುದು ಎಂದು ಪೀಠ ಹೇಳಿದೆ.

ಐಪಿಎಲ್‌ ಏಳನೇ ಋತುವಿನ ಟೂರ್ನಿ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಐಪಿಎಲ್‌ ಟೂರ್ನಿಗೆ ಅಬುಧಾಬಿಯಲ್ಲಿ ಬುಧವಾರ ಚಾಲನೆ ಲಭಿಸಿದೆ.

ಸುಂದರ್‌ ರಾಮನ್‌ ನಿರಾಳ
ಐಪಿಎಲ್‌ ಸಿಒಒ ಸುಂದರ್‌ ರಾಮನ್‌ ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ನ್ಯಾಯಮೂರ್ತಿ  ಎ.ಕೆ.ಪಟ್ನಾಯಕ್‌ ನೇತೃತ್ವದ ಪೀಠ ಅನುಮತಿ ನೀಡಿತು.

ಸುಂದರ್‌ ರಾಮನ್‌ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸುನಿಲ್‌ ಗಾವಸ್ಕರ್‌ಗೆ ನೀಡಿತ್ತು. ಆದರೆ ‘ತನಿಖಾ ಸಮಿತಿಯು ಸುಂದರ್‌ ರಾಮನ್‌ ಬಗ್ಗೆ ಹೊಂದಿರುವ ಮಾಹಿತಿ ನನಗೆ ತಿಳಿದಿಲ್ಲ. ಅವರ ಭವಿಷ್ಯದ ಬಗ್ಗೆ ಪೀಠವೇ ಒಂದು ನಿರ್ಧಾರ ಕೈಗೊಳ್ಳಲಿ’ ಎಂದು ಗಾವಸ್ಕರ್‌ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಸುಂದರ್‌ ರಾಮನ್‌ಗೆ ಅಧಿಕಾರದಲ್ಲಿ ಮುಂದುವರಿಯಲು ಅನುಮತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.