ADVERTISEMENT

ಶ್ರೀನಿವಾಸನ್, ನಿರಂಜನ್ ಷಾಗೆ ಸುಪ್ರೀಂ ಚಾಟಿ

ಪಿಟಿಐ
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST

ನವದೆಹಲಿ (ಪಿಟಿಐ): ಬಿಸಿಸಿಐ ಪದಚ್ಯುತ  ಅಧ್ಯಕ್ಷ ಎನ್. ಶ್ರೀನಿವಾಸನ್ ಮತ್ತು ನಿರಂಜನ್ ಷಾ ಅವರು ಮಂಡಳಿಯ ವಿಶೇಷ ಸಾಮಾನ್ಯ ಸಭೆಗೆ ಹಾಜರಾಗಬಾರದು ಎಂದು ಸುಪ್ರೀ ಂ ಕೋರ್ಟ್‌ ಆದೇಶ ನೀಡಿದೆ.

ಜುಲೈ 26ರಂದು ವಿಶೇಷ ಸಭೆ ನಡೆಯಲಿದೆ. ಅದರಲ್ಲಿ ಶ್ರೀನಿವಾಸನ್ ಮತ್ತು ನಿರಂಜನ್ ಷಾ ಅವರು ಕ್ರಮವಾಗಿ ತಮಿಳುನಾಡು ಕ್ರಿಕೆಟ್ ಸಂಸ್ಥೆ ಮತ್ತು ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಪ್ರತಿನಿಧಿ ಗಳಾಗಿ ಭಾಗವಹಿಸುವ ಸಿದ್ಧತೆಯಲ್ಲಿದ್ದರು. ಹೋದ ತಿಂಗಳಿನ ಸಭೆಯಲ್ಲಿಯೂ ಇವರು ಭಾಗವಹಿಸಿದ್ದರು. ಆಗ ಸಭೆ ಯನ್ನು ರದ್ದುಗೊಳಿಸಲಾಗಿತ್ತು.  ಇವರಿ ಬ್ಬರಿಗೂ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡುವ ಕುರಿತು ಸ್ಪಷ್ಟಪಡಿಸಬೇಕೆಂದು  ಕೋರಿ ಕ್ರಿಕೆಟ್  ಆಡಳಿತ ಸಮಿತಿ (ಸಿಒಎ) ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. 

ನ್ಯಾಯಮೂರ್ತಿ ದೀಪಕ್ ಮಿಶ್ರಾ, ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರು ಇರುವ ನ್ಯಾಯಪೀಠವು  ಈ ತೀರ್ಪು ನೀಡಿದೆ.
2013ರ ಐಪಿಎಲ್ ಸ್ಪಾಟ್‌ ಫಿಕ್ಸಿಂಗ್ ಪ್ರಕರಣದಲ್ಲಿ ಎನ್. ಶ್ರೀನಿವಾಸನ್  ಅವರನ್ನು ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ  ವಜಾ ಮಾಡಲಾಗಿತ್ತು.
70 ವರ್ಷ ದಾಟಿದವರು ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗುವಂತಿಲ್ಲ ಎಂಬ ಲೋಧಾ ಸಮಿತಿಯ ಶಿಫಾರಸಿನ ಅನ್ವಯ ಷಾ ಅನರ್ಹಗೊಂಡಿದ್ದರು.

ADVERTISEMENT

‘ತಮಿಳುನಾಡು ಮತ್ತು ಸೌರಾಷ್ಟ್ರ ಸಂಸ್ಥೆಗಳು ಸಭೆಗೆ ತಮ್ಮ ಇನ್ನಿತರ ಪ್ರತಿನಿಧಿಗಳನ್ನು ಕಳಿಸಬೇಕು. ಶ್ರೀನಿವಾಸನ್ ಮತ್ತು  ಷಾ ಅವರಿಗೆ ಅವಕಾಶವಿಲ್ಲ. ಈ ಸಭೆಯಲ್ಲಿ ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನ ಗೊಳಿಸುವ ವಿಚಾರವಾಗಿ ನಿರ್ಧಾರ ಕೈಗೊಳ್ಳಬೇಕು’ ಎಂದು ಪೀಠವು ಸೂಚಿಸಿತು.

‘ಬಿಸಿಸಿಐನಲ್ಲಿ ಲೋಧಾ ಸಮಿತಿ ಶಿಫಾರಸುಗಳನ್ನು ಆದಷ್ಟು ಶೀಘ್ರ ಜಾರಿಗೊಳಿಸಬೇಕು.  ಕ್ರಿಕೆಟ್ ಸಭ್ಯರ ಆಟವಾಗಿ ಉಳಿಯಲು ಈ ಕ್ರಮ ಅಗತ್ಯ’ ಎಂದು ನ್ಯಾಯಪೀಠವು ಮಂಡಳಿಗೆ ತಾಕೀತು ಮಾಡಿದೆ.

ಬಿಸಿಸಿಐ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳಲ್ಲಿ ಲೋಧಾ ಸಮಿತಿ ಶಿಫಾರಸುಗಳ ಜಾರಿಯ ಕ್ರಮ ಮತ್ತು ಪ್ರಗತಿಯ ಬಗ್ಗೆ  ಆಗಸ್ಟ್ 18ರಂದು ವಿಚಾರಣೆ ನಡೆಸಲು ನ್ಯಾಯಪೀಠ ತೀರ್ಮಾನಿಸಿತು. ‘ಶ್ರೀನಿವಾಸನ್ ಅವರು ಸಭೆಯಲ್ಲಿ ಭಾಗವಹಿಸುವುದು ಕಾನೂನು ಬಾಹಿರ ವಾಗಿದೆ. ಅವರನ್ನು ನಿರ್ಬಂಧಿ ಸಿರುವುದು ಸೂಕ್ತವಾಗಿದೆ’ ಎಂದು ಹಿರಿಯ ವಕೀಲ ಮತ್ತು ಅಮಿಕಸ್ ಕ್ಯೂರಿ ಗೋಪಾಲ್ ಸುಬ್ರಮಣಿಯಂ ಹೇಳಿದರು.

ಒಂದು ರಾಜ್ಯ ಒಂದು ಮತ ಮರುಪರಿಶೀಲನೆಗೆ ಸೂಚನೆ
ಕ್ರಿಕೆಟ್ ಆಡಳಿತ ಸುಧಾರಣೆಗಾಗಿ ನೇಮಕವಾಗಿದ್ದ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ವರದಿಯಲ್ಲಿರುವ ಒಂದು ರಾಜ್ಯ ಒಂದು ಮತ ಶಿಫಾರಸ್ಸನ್ನು ಮರುಪರಿಶೀಲಿಸ ಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ‘ಬಿಸಿಸಿಐನ ಮಾನ್ಯತೆ ಪಡೆದಿರುವ ರೈಲ್ವೆ ಇಲಾಖೆ ಮತ್ತು ಸರ್ವಿಸಸ್‌ ತಂಡಗಳು ಈ ನಿಯಮದಿಂದಾಗಿ ಅನರ್ಹಗೊಳ್ಳಲಿವೆ. ಆದರೆ ಈ  ಇಲಾಖೆಗಳು ಕ್ರಿಕೆಟ್‌ ಬೆಳವಣಿಗೆಗೆ ನೀಡಿರುವ ಕಾಣಿಕೆ ದೊಡ್ಡದು. ಆದ್ದರಿಂದ   ಈ ವಿಷಯದ ಕುರಿತು ಮರುಪರಿಶೀಲನೆ ನಡೆಸುವುದು ಒಳಿತು’ ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ  ನೇತೃತ್ವದ ನ್ಯಾಯಪೀಠವು ಹೇಳಿದೆ. 

‘ಒಂದು ರಾಜ್ಯ ಒಂದು ಮತ’ ಶಿಫಾರಸು ಜಾರಿಯಾದರೆ ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ,  ಕೋಲ್ಕತ್ತದ ನ್ಯಾಷನಲ್ ಕ್ರಿಕೆಟ್ ಕ್ಲಬ್,    ರೈಲ್ವೆ  ಕ್ರೀಡಾ ಅಭಿವೃದ್ಧಿ ಮಂಡಳಿ (ಆರ್‌ಎಸ್‌ಪಿಬಿ),  ಸರ್ವಿಸಸ್‌ ಮತ್ತು ವಿಶ್ವವಿದ್ಯಾಲಯಗಳ ಒಕ್ಕೂಟ, ಸೌರಾಷ್ಟ್ರ, ವಿದರ್ಭ, ಬರೋಡ ಕ್ರಿಕೆಟ್ ಸಂಸ್ಥೆಗಳು ಮತ ಚಲಾವಣೆ ಹಕ್ಕು ಕಳೆದುಕೊಳ್ಳಲಿವೆ.  ಆದ್ದರಿಂದ ಈ ಸಂಸ್ಥೆಗಳು ನಿಯಮವನ್ನು  ಮರುಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದವು.  ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಇರಬೇಕಾದ ಸದಸ್ಯರ ಸಂಖ್ಯೆಯ ನಿಗದಿಯ ಕುರಿತು ಮಾಡಿರುವ ಶಿಫಾರಸು ಕೂಡ ಮರುಪರಿಶೀ ಲನೆಯಾಗಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.