ADVERTISEMENT

ಶ್ರೀಲಂಕಾಕ್ಕೆ ಹ್ಯಾಟ್ರಿಕ್‌ ಜಯದ ಸಂಭ್ರಮ

ತಿರಿಮಾನ್ನೆ, ಸಂಗಕ್ಕಾರ ಶತಕ; ಸವಾಲಿನ ಗುರಿಗೆ ದಿಟ್ಟ ಉತ್ತರ, ಇಂಗ್ಲೆಂಡ್‌ಗೆ ಸೋಲು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2015, 19:44 IST
Last Updated 1 ಮಾರ್ಚ್ 2015, 19:44 IST
ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಗಳಿಸಿ ಶ್ರೀಲಂಕಾ ತಂಡಕ್ಕೆ ಗೆಲುವು ತಂದಿತ್ತ ಕುಮಾರ ಸಂಗಕ್ಕಾರ (ಎಡಬದಿ) ಮತ್ತು ಲಾಹಿರು ತಿರಿಮಾನ್ನೆ ಸಂತಸದಿಂದ ಪೆವಿಲಿಯನ್‌ಗೆ ಹೆಜ್ಜೆಯಿಟ್ಟ ಕ್ಷಣ 	–ಎಪಿ ಚಿತ್ರ
ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಗಳಿಸಿ ಶ್ರೀಲಂಕಾ ತಂಡಕ್ಕೆ ಗೆಲುವು ತಂದಿತ್ತ ಕುಮಾರ ಸಂಗಕ್ಕಾರ (ಎಡಬದಿ) ಮತ್ತು ಲಾಹಿರು ತಿರಿಮಾನ್ನೆ ಸಂತಸದಿಂದ ಪೆವಿಲಿಯನ್‌ಗೆ ಹೆಜ್ಜೆಯಿಟ್ಟ ಕ್ಷಣ –ಎಪಿ ಚಿತ್ರ   

ವೆಲಿಂಗ್ಟನ್‌ (ಎಎಫ್‌ಪಿ/ಐಎಎನ್‌ಎಸ್‌):  ಹೋದ ವಾರವಷ್ಟೇ ಬಾಂಗ್ಲಾದೇಶದ ಎದುರು ಮುನ್ನೂರಕ್ಕಿಂತಲೂ ಹೆಚ್ಚು ರನ್‌ ಗಳಿಸಿದ್ದ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಅಬ್ಬರಿಸಿದ್ದಾರೆ. ಇದರಿಂದ ಸಿಂಹಳೀಯ ನಾಡಿನ ತಂಡ ಇಂಗ್ಲೆಂಡ್‌ ಎದುರಿನ ವಿಶ್ವಕಪ್‌ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳ ಗೆಲುವು ಪಡೆಯಿತು.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಆಂಗ್ಲರ ತಂಡ ನಿಗದಿತ ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 309 ರನ್‌ ಗಳಿಸಿತು. ಲಂಕಾ ಪಡೆ 47.2 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು. ಟೂರ್ನಿಯಲ್ಲಿ ಲಂಕಾ ಪಡೆದ ಸತತ ಮೂರನೇ ಗೆಲುವು ಇದಾಗಿದೆ. ಈ ತಂಡ ಹಿಂದಿನ ಪಂದ್ಯಗಳಲ್ಲಿ ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶವನ್ನು ಮಣಿಸಿತ್ತು. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು ಸೋತಿತ್ತು. ಆರು ಪಾಯಿಂಟ್ಸ್ ಹೊಂದಿರುವ ಲಂಕಾ ‘ಎ’ ಗುಂಪಿನ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಇಂಗ್ಲೆಂಡ್‌ ಮೆರೆದಾಟ: ಕ್ವಾರ್ಟರ್ ಫೈನಲ್‌ ಪ್ರವೇಶಿಸಬೇಕಾದರೆ ಇಂಗ್ಲೆಂಡ್‌ ತಂಡಕ್ಕೆ ಲಂಕಾ ಎದುರು ಗೆಲುವು ಅನಿವಾರ್ಯವಾಗಿತ್ತು. ಆದ್ದರಿಂದ ಈ ತಂಡ ಆರಂಭದಿಂದಲೇ ವೇಗದ ಆಟಕ್ಕೆ ಮುಂದಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ ಮೊಯೀನ್ ಅಲಿ (15) ಬೇಗನೆ ಔಟಾದರಾದರೂ ಇಯಾನ್ ಬೆಲ್‌ (49) ಜೊತೆ ಸೇರಿ ಗಟ್ಟಿ ಬುನಾದಿ ನಿರ್ಮಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 62 ರನ್‌ ಸೇರಿಸಿತು. ನಂತರದ ಒಂಬತ್ತು ರನ್‌ ಗಳಿಸುವ ಅಂತರದಲ್ಲಿ ಗ್ಯಾರಿ ಬಲಾನ್ಸ್ ಔಟಾದರು. ಕೆಲವೇ ಹೊತ್ತಿನಲ್ಲಿ ಇಯಾನ್‌ ಬೆಲ್‌ ಕೂಡಾ ಪೆವಿಲಿಯನ್‌ ಸೇರಿದರು. ಈ ವೇಳೆ ಇಂಗ್ಲೆಂಡ್‌ ಮೊತ್ತ 101ಆಗಿತ್ತು.

ಬಲಗೈ ಬ್ಯಾಟ್ಸ್‌ಮನ್‌ ಜೋ ರೂಟ್‌ ಕ್ರೀಸ್‌ಗೆ ಬಂದ ಬಳಿಕ ಇಂಗ್ಲೆಂಡ್ ತಂಡದ ರನ್‌ ವೇಗ ಹೆಚ್ಚಿತು. 108 ಎಸೆತಗಳನ್ನು ಎದುರಿಸಿದ ರೂಟ್‌ 14 ಬೌಂಡರಿ ಮತ್ತು ಎರಡು ಸಿಕ್ಸರ್‌ ಸೇರಿದಂತೆ 121 ರನ್‌ ಗಳಿಸಿದರು. 43 ಓವರ್‌ಗಳು ಪೂರ್ಣಗೊಂಡಾಗ ರೂಟ್ 90 ರನ್‌ ಗಳಿಸಿದ್ದರು. ನಂತರದ ಓವರ್‌ನ ಮೂರನೇ ಎಸೆತವನ್ನು ವೈಡ್‌ ಲಾಂಗ್‌ ಆನ್ ಬಳಿ ಸಿಕ್ಸರ್ ಸಿಡಿಸಿದರು.

ಐದನೇ ಎಸೆತವನ್ನು ಬೌಂಡರಿ ಬಾರಿಸಿ ಮೂರಂಕಿ ಮುಟ್ಟಿದರು. ಏಕದಿನ ಕ್ರಿಕೆಟ್‌ನಲ್ಲಿ ರೂಟ್‌ ಗಳಿಸಿದ ನಾಲ್ಕನೇ ಶತಕವಾಗಿದೆ. ಇದರಿಂದ ಇಂಗ್ಲೆಂಡ್‌ಗೆ ಮೂನ್ನೂರಕ್ಕಿಂತಲೂ ಹೆಚ್ಚು ರನ್‌ ಗಳಿಸಲು ಸಾಧ್ಯವಾಯಿತು. ಆದರೆ, ಲಂಕಾ ಗೆಲುವು ಪಡೆದ ಕಾರಣ ರೂಟ್‌ ಶತಕ ಹೊಳಪು ಕಳೆದುಕೊಂಡಿತು.

ಲಂಕಾ ತಿರುಗೇಟು: ಸವಾಲಿನ ಗುರಿಯ ಎದುರು ಲಂಕಾ ತಂಡ ಯಾವುದೇ ಒತ್ತಡಕ್ಕೆ ಒಳಗಾಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ ತಿಲಕರತ್ನೆ ದಿಲ್ಶಾನ್‌ 44 ರನ್‌ ಗಳಿಸಿದರು. ಇವರನ್ನು ಹೊರತು ಪಡಿಸಿದರೆ ಲಾಹಿರು ತಿರಿಮಾನ್ನೆ ಮತ್ತು ಕುಮಾರ ಸಂಗಕ್ಕಾರ ಅಬ್ಬರಿಸಿದರು. ಈ ಜೋಡಿ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 212 ರನ್‌ ಕಲೆ ಹಾಕಿ ತಂಡವನ್ನು ಗೆಲುವಿನ ದಡ ಸೇರಿಸಿತು.
143 ಎಸೆತಗಳನ್ನು ಎದುರಿಸಿದ ತಿರಿಮಾನ್ನೆ 13 ಬೌಂಡರಿ ಮತ್ತು ಎರಡು ಸಿಕ್ಸರ್‌ ಒಳಗೊಂಡಂತೆ 139 ರನ್‌ ಬಾರಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಇವರು ಗಳಿಸಿದ ನಾಲ್ಕನೇ ಶತಕ ಇದಾಗಿದೆ.

ಲಂಕಾ ಆರಂಭದಲ್ಲಿ ವೇಗವಾಗಿ ರನ್‌ ಗಳಿಸಲಿಲ್ಲ. ಮೊದಲ 25 ಓವರ್‌ಗಳು ಪೂರ್ಣಗೊಂಡಾಗ 131 ರನ್‌ಗಳನ್ನಷ್ಟೇ ಕಲೆ ಹಾಕಿತ್ತು. ಕೊನೆಯ 25 ಓವರ್‌ಗಳಲ್ಲಿ 178 ರನ್‌ ಗಳಿಸಿತು. ಇದಕ್ಕೆ ಕಾರಣವಾಗಿದ್ದು ಸಂಗಕ್ಕಾರ ಸೊಗಸಾದ ಆಟ. ಮಾಜಿ ನಾಯಕ ಸಂಗಕ್ಕಾರ 86 ಎಸೆತಗಳನ್ನು ಎದುರಿಸಿದರು. ಬೌಂಡರಿ (11) ಮತ್ತು ಸಿಕ್ಸರ್‌ (2) ಮೂಲಕವೇ 56 ರನ್‌ ಗಳಿಸಿ ಗೆಲುವು ತಂದುಕೊಟ್ಟರು. 73 ಎಸೆತಗಳಲ್ಲಿ ಮೂರಂಕಿಯ ಗಡಿ ದಾಟಿದರು. ಈ ಬ್ಯಾಟ್ಸ್‌ಮನ್‌ ಬಾಂಗ್ಲಾ ವಿರುದ್ಧವೂ ಶತಕ ಬಾರಿಸಿದ್ದರು.

ಬಲಗೈ ವೇಗಿಗಳಾದ ಸ್ಟುವರ್ಟ್‌ ಬ್ರಾಡ್‌ ಮತ್ತು ಕ್ರಿಸ್‌ ವೋಕ್ಸ್‌ ಕ್ರಮವಾಗಿ 67 ಮತ್ತು 72 ರನ್‌ ನೀಡಿದರು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಆಂಗ್ಲರ ತಂಡಕ್ಕೆ ಚುರುಕಿನ ಬೌಲಿಂಗ್ ತೋರಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ತಂಡಕ್ಕೆ ಟೂರ್ನಿಯಲ್ಲಿ ಮೂರನೇ ಸೋಲು ಎದುರಾಯಿತು. ಹಿಂದಿನ ಪಂದ್ಯಗಳಲ್ಲಿ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಎದುರು ಸೋತಿತ್ತು.

ಸಂಕಷ್ಟ: ಚೊಚ್ಚಲ ವಿಶ್ವಕಪ್‌ ಗೆಲ್ಲುವ ಕನಸು ಹೊತ್ತಿರುವ ಇಂಗ್ಲೆಂಡ್‌ ತಂಡ ಈ ಬಾರಿ ಲೀಗ್ ಹಂತದಿಂದಲೇ ಹೊರ ಬೀಳುವ ಸಂಕಷ್ಟದಲ್ಲಿದೆ. ಎಯೊನ್ ಮಾರ್ಗನ್‌ ನಾಯಕತ್ವದ ಇಂಗ್ಲೆಂಡ್‌ ನಾಲ್ಕು ಪಂದ್ಯಗಳನ್ನಾಡಿದ್ದು ಒಂದರಲ್ಲಷ್ಟೇ ಗೆಲುವು ಪಡೆದಿದೆ.  ತಂಡದ ಬಳಿ ಎರಡು ಪಾಯಿಂಟ್ಸ್‌ ಇದ್ದು ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಹೊಂದಿದೆ.

ಗುಂಪಿನಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ. ಎಲ್ಲಾ ಪಂದ್ಯಗಳಲ್ಲಿ ಗೆದ್ದಿರುವ ನ್ಯೂಜಿಲೆಂಡ್ ಈಗಾಗಲೇ ನಾಕೌಟ್‌ ತಲುಪಿದೆ.  ಶ್ರೀಲಂಕಾ ಸ್ಥಾನವೂ ಬಹುತೇಕ ಖಚಿತವಾಗಿದೆ. ತಲಾ ಮೂರು ಪಾಯಿಂಟ್ಸ್‌ ಹೊಂದಿರುವ ಬಾಂಗ್ಲಾ ಮತ್ತು ಆಸ್ಟ್ರೇಲಿಯಾ ಪೈಪೋಟಿಯಲ್ಲಿವೆ. ಆದ್ದರಿಂದ ಇಂಗ್ಲೆಂಡ್‌ ಹಾದಿ ಕಷ್ಟವಾಗಿದೆ. ಈ ತಂಡ ಹೋದ ವರ್ಷ ಕ್ವಾರ್ಟರ್‌ ಫೈನಲ್‌ನಿಂದ ಹೊರಬಿದ್ದಿತ್ತು.

ಪ್ರಮುಖ ಅಂಕಿಅಂಶಗಳು
* ಒಂದೇ ವಿಕೆಟ್‌ ಕಳೆದುಕೊಂಡು 300ಕ್ಕಿಂತಲೂ ಹೆಚ್ಚಿನ ರನ್‌ ಗುರಿ ಮುಟ್ಟಿದ ಎರಡನೇ ತಂಡ ಎನ್ನುವ ಕೀರ್ತಿಗೆ ಲಂಕಾ ಭಾಜನವಾಯಿತು. 2013ರಲ್ಲಿ ಭಾರತ ಆಸ್ಟ್ರೇಲಿಯಾ ಎದುರು 362 ರನ್ ಗುರಿ ತಲುಪಿತ್ತು.

* ಸಂಗಕ್ಕಾರ –ತಿರಿಮಾನ್ನೆ ನಡುವೆ 2ನೇ ವಿಕೆಟ್‌ ಮೂಡಿಬಂದ 212 ರನ್‌ಗಳ ಜೊತೆಯಾಟ ವಿಶ್ವಕಪ್‌ನಲ್ಲಿ ಲಂಕಾದ ಮೂರನೇ ದೊಡ್ಡ ಜೊತೆಯಾಟವೆನಿಸಿದೆ. 2011ರಲ್ಲಿ ದಿಲ್ಶಾನ್‌ ಮತ್ತು ಉಪುಲ್‌ ತರಂಗ ಜಿಂಬಾಬ್ವೆ ಎದುರು ಗಳಿಸಿದ್ದ 282 ಅತ್ಯಧಿಕ ರನ್‌ ಜೊತೆಯಾಟವಾಗಿದೆ.

* 139 ರನ್– ಇದು  ತಿರಿಮಾನ್ನೆ ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ ವೈಯಕ್ತಿಕ ಗರಿಷ್ಠ ಸ್ಕೋರು. ವಿಶ್ವಕಪ್‌ನಲ್ಲಿ ಶತಕ ಗಳಿಸಿದ  ಕಿರಿಯ ಆಟಗಾರ (25 ವರ್ಷ) ಎನ್ನುವ ಗೌರವ ತಮ್ಮದಾಗಿಸಿಕೊಂಡರು.

* ಏಕದಿನ ಕ್ರಿಕೆಟ್‌ನಲ್ಲಿ 300 ಕ್ಕಿಂತಲೂ ಹೆಚ್ಚು ರನ್‌ ಗುರಿಯನ್ನು ಲಂಕಾ ಮುಟ್ಟಿದ್ದು ಇದು ಎಂಟನೇ ಬಾರಿ.
* ರೂಟ್‌ ಹಾಗೂ ಜೇಮ್ಸ್‌ ಟೇಲರ್‌ ನಡುವೆ ಐದನೇ ವಿಕೆಟ್‌ಗೆ 98 ರನ್‌ ಜೊತೆಯಾಟ ಮೂಡಿ ಬಂದಿತು. ಇದು ವಿಶ್ವಕಪ್‌ನಲ್ಲಿ ಐದನೇ ವಿಕೆಟ್‌ಗೆ ದಾಖ ಲಾದ ಗರಿಷ್ಠ ರನ್ ಜೊತೆಯಾಟವಾಗಿದೆ.

ಸ್ಕೋರ್‌ ವಿವರ :
ಇಂಗ್ಲೆಂಡ್‌ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 309
ಮೊಯೀನ್‌ ಅಲಿ ಸಿ ಸುರಂಗ ಲಕ್ಮಲ್‌ ಬಿ ಏಂಜೆಲೊ ಮ್ಯಾಥ್ಯೂಸ್‌  15
ಇಯಾನ್‌ ಬೆಲ್‌ ಬಿ ಸುರಂಗ ಲಕ್ಮಲ್‌  49
ಗ್ಯಾರಿ ಬಲಾನ್ಸ್‌ ಸಿ ಮತ್ತು ಬಿ ತಿಲಕರತ್ನೆ ದಿಲ್ಶಾನ್‌  06
ಜೋ ರೂಟ್‌ ಎಲ್‌ಬಿಡಬ್ಲ್ಯು ರಂಗನಾ ಹೆರಾತ್‌  121
ಎಯೊನ್‌ ಮಾರ್ಗನ್‌ ಸಿ ತಿಲಕರತ್ನೆ ದಿಲ್ಶಾನ್‌ ಬಿ ತಿಸಾರ ಪೆರೇರಾ  27
ಜೇಮ್ಸ್‌ ಟೇಲರ್‌ ಸಿ ತಿಲಕರತ್ನೆ ದಿಲ್ಶಾನ್‌ ಬಿ ಲಸಿತ್‌ ಮಾಲಿಂಗ  25
ಜಾಸ್‌ ಬಟ್ಲರ್‌ ಔಟಾಗದೆ  39‌
ಕ್ರಿಸ್‌ ವೋಕ್ಸ್‌ ಔಟಾಗದೆ  09
ಇತರೆ: (ಬೈ–4, ಲೆಗ್‌ ಬೈ–3, ವೈಡ್‌–9, ನೋ ಬಾಲ್‌–2)  18
ವಿಕೆಟ್ ಪತನ: 1–62  (ಅಲಿ; 9.2), 2–71 (ಬಲಾನ್ಸ್‌; 12.2), 3–101 (ಬೆಲ್‌; 20.2), 4–161 (ಮಾರ್ಗನ್‌; 34.3), 5–259 (ಟೇಲರ್‌; 45.3), 6–265 (ರೂಟ್‌; 46.3).
ಬೌಲಿಂಗ್‌: ಲಸಿತ್‌ ಮಾಲಿಂಗ 10–0–63–1, ಸುರಂಗ ಲಕ್ಮಲ್‌ 7.4–0–71–1, ಎಂಜೆಲೊ ಮ್ಯಾಥ್ಯೂಸ್ 10–1–43–1, ತಿಲಕರತ್ನೆ ದಿಲ್ಶಾನ್ 8.2–0–35–1,     ರಂಗನಾ ಹೆರಾತ್ 5.5–0–35–1, ತಿಸಾರ ಪೆರೇರಾ 8.1–0–55–1.

ಶ್ರೀಲಂಕಾ 47.2 ಓವರ್‌ಗಳಲ್ಲಿ 1 ವಿಕೆಟ್‌ಗೆ 312
ಲಾಹಿರು ತಿರಿಮಾನ್ನೆ ಔಟಾಗದೆ  139
ತಿಲಕರತ್ನೆ ದಿಲ್ಶಾನ್ ಸಿ ಎಯೊನ್‌ ಮಾರ್ಗನ್‌ ಬಿ ಮೊಯೀನ್‌ ಅಲಿ  44
ಕುಮಾರ ಸಂಗಕ್ಕಾರ ಔಟಾಗದೆ  117
ಇತರೆ: (ಬೈ–8, ಲೆಗ್‌ ಬೈ–1, ವೈಡ್‌–3)  12
ವಿಕೆಟ್ ಪತನ: 1–100 (ದಿಲ್ಶಾನ್‌; 18.6).
ಬೌಲಿಂಗ್: ಜೇಮ್ಸ್‌ ಆ್ಯಂಡರ್‌ಸನ್‌ 8–0–48–0, ಸ್ಟುವರ್ಟ್‌ ಬ್ರಾಡ್ 10–1–67–0, ಕ್ರಿಸ್‌ ವೋಕ್ಸ್ 9.2–0–72–0, ಸ್ಟೀವನ್‌ ಫಿನ್‌ 8–0–54–0, ಮೊಯೀನ್‌ ಅಲಿ       10–0–50–1, ಜೋ ರೂಟ್‌ 2–0–12–0.
ಫಲಿತಾಂಶ: ಶ್ರೀಲಂಕಾಕ್ಕೆ 9 ವಿಕೆಟ್‌ ಗೆಲುವು, ಪಂದ್ಯ ಶ್ರೇಷ್ಠ: ಕುಮಾರ ಸಂಗಕ್ಕಾರ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.