ADVERTISEMENT

ಸತೀಶ್‌ ಚಿನ್ನದ ನಗು, ರವಿ ಬೆಳ್ಳಿ ಬೆಡಗು

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಸ್ಪರ್ಧಿಗಳ ಪ್ರಾಬಲ್ಯ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST
ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕೂಟದ 50ಮೀ. ರೈಫಲ್‌ ಪ್ರೊನೊ ವಿಭಾಗದಲ್ಲಿ ರಜತ ಪದಕ ಗೆದ್ದುಕೊಂಡ ಶೂಟರ್‌ ಗಗನ್‌ ನಾರಂಗ್.
ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕೂಟದ 50ಮೀ. ರೈಫಲ್‌ ಪ್ರೊನೊ ವಿಭಾಗದಲ್ಲಿ ರಜತ ಪದಕ ಗೆದ್ದುಕೊಂಡ ಶೂಟರ್‌ ಗಗನ್‌ ನಾರಂಗ್.   

ಗ್ಲಾಸ್ಗೊ (ಪಿಟಿಐ): ವೇಟ್‌ಲಿಫ್ಟಿಂಗ್‌ ನಲ್ಲಿ ಪ್ರಾಬಲ್ಯ ಮೆರೆದ ಸತೀಶ್‌ ಶಿವ ಲಿಂಗಮ್‌್ ಮತ್ತು ಕೆ. ರವಿ ಕುಮಾರ್ 20ನೇ ಕಾಮನ್‌ವೆಲ್ತ್‌್ ಕ್ರೀಡಾಕೂಟ ದಲ್ಲಿ ಕ್ರಮವಾಗಿ ಚಿನ್ನ ಹಾಗೂ ರಜತ ಪದಕಗಳನ್ನು ಗೆದ್ದುಕೊಂಡರು.

22 ವರ್ಷದ ಸತೀಶ್‌ ಹೋದ ವರ್ಷ ನಡೆದ ಕಾಮನ್‌ವೆಲ್ತ್‌ ಚಾಂಪಿ ಯನ್‌ಷಿಪ್‌ನಲ್ಲಿ ಬಂಗಾರದ ಪದಕ ಜಯಿಸಿದ್ದರು. ಶನಿವಾರ ರಾತ್ರಿ ಜರುಗಿದ 77 ಕೆ.ಜಿ. ವಿಭಾಗದ ಪೈಪೋಟಿಯಲ್ಲಿ ಒಟ್ಟು 328 ಕೆ.ಜಿ. ಭಾರ ಎತ್ತಿ ಚಿನ್ನದ ಪದಕ  ಕೊರಳಿಗೇರಿಸಿಕೊಂಡರು.

ತಮಿಳುನಾಡಿನ ಸತೀಶ್‌ ಸ್ನ್ಯಾಚ್‌ನ ಮೊದಲ ಪ್ರಯತ್ನದಲ್ಲಿ 142  ಕೆ.ಜಿ. ಭಾರ ಎತ್ತಿದರು. ನಂತರದ ಎರಡೂ ಯತ್ನಗಳಲ್ಲಿ ಕ್ರಮವಾಗಿ 146 ಮತ್ತು 149 ಕೆ.ಜಿ. ಭಾರ ಎತ್ತಿ ಹೊಸ ದಾಖಲೆ ಬರೆದರು. ಸ್ನ್ಯಾಚ್‌ನಲ್ಲಿ 148 ಕೆ.ಜಿ. ಭಾರ ಎತ್ತಿದ್ದು  ಕಾಮನ್‌ವೆಲ್ತ್‌ ಕೂಟ ದಲ್ಲಿ ಇದುವರೆಗಿನ ಉತ್ತಮ ಸಾಧನೆ ಎನಿಸಿತ್ತು. 2010ರ ಕೂಟದಲ್ಲಿ ನಾರ್ವೆ ಯ ಯೂಕಿ ಪೀಟರ್‌ ಅವರ ಹೆಸರಲ್ಲಿ ಈ ದಾಖಲೆಯಿತ್ತು.

ಕ್ಲೀನ್‌ ಮತ್ತು ಜರ್ಕ್‌ನ ಮೊದಲ ಯತ್ನದಲ್ಲಿ 178 ಕೆ.ಜಿ. ಎತ್ತಿದ ಸತೀಶ್‌ ನಂತರದ ಯತ್ನದಲ್ಲಿ 179 ಕೆ.ಜಿ. ಭಾರ ಎತ್ತಿದರು. ಆದರೆ,

ಮೂರನೇ ಹಾಗೂ ಕೊನೆಯ ಯತ್ನದಲ್ಲಿ ಅವರು ‘ಫೌಲ್‌’ ಮಾಡಿದ್ದರಿಂದ ಎರಡನೇ ಯತ್ನದಲ್ಲಿ ತೋರಿದ ಸಾಮರ್ಥ್ಯವನ್ನೇ ಪರಿಗಣಿನೆಗೆ ತಗೆದುಕೊಳ್ಳಲಾಯಿತು.

ರವಿ ಬೆಳ್ಳಿ ಬೆಡಗು: ಹೋದ ಸಲದ ಕಾಮನ್‌ವೆಲ್ತ್‌ ಕೂಟದ 69 ಕೆ.ಜಿ. ವಿಭಾಗದಲ್ಲಿ ಚಿನ್ನ ಜಯಿಸಿದ್ದ ರವಿ ಕುಮಾರ್‌ ಈ ಸಲ ಬೆಳ್ಳಿ  ಗೆರೆ ಮೂಡಿಸಿದರು.

ರವಿಗೆ ಚಿನ್ನ ಗೆಲ್ಲಲು ಅವಕಾಶವಿತ್ತು.  ಆದರೆ, ಒಡಿಶಾದ ವೇಟ್‌ಲಿಫ್ಟರ್‌ ಸ್ನ್ಯಾಚ್‌ನ  ಮೊದಲ ಮತ್ತು ಮೂರನೇ ಯತ್ನದಲ್ಲಿ ಕ್ರಮವಾಗಿ 142 ಹಾಗೂ 147 ಕೆ.ಜಿ. ಭಾರ ಎತ್ತಿದರಾದರೂ, ಅದು ‘ಫೌಲ್‌’ ಆಗಿತ್ತು. ಆದ್ದರಿಂದ ಎರಡನೇ ಯತ್ನದಲ್ಲಿ 142  ಕೆ.ಜಿ. ಭಾರ ಎತ್ತಿದ್ದನ್ನು ಪರಿಗಣಿಸಲಾಯಿತು.

ಕ್ಲೀನ್‌ ಮತ್ತು ಜರ್ಕ್‌ನ ಎರಡು ಮತ್ತು ಮೂರನೇ ಯತ್ನದಲ್ಲಿ 185 ಕೆ.ಜಿ. ಭಾರ ಎತ್ತಿದರಾದರೂ, ಮತ್ತೆ ‘ಫೌಲ್‌’ ಆಗಿತ್ತು. ಮೊದಲ ಯತ್ನದಲ್ಲಿ 175 ಕೆ.ಜಿ. ಭಾರ ಎತ್ತಿದ್ದರು.  ಇವರು ಒಟ್ಟು 317 ಕೆ.ಜಿ. ಭಾರ ಎತ್ತುವಲ್ಲಿ ಸಫಲರಾದರು. ಈ ಸಾಧನೆಗೆ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅಭಿನಂದಿಸಿದ್ದಾರೆ.

ಒಟ್ಟು 314 ಕೆ.ಜಿ. ಭಾರ ಎತ್ತಿದ ಆಸ್ಟ್ರೇಲಿಯದ ಫ್ರಾನ್ಸಿಸ್‌ ಇಟೌಂಡಿ ಕಂಚು ತಮ್ಮದಾಗಿಸಿಕೊಂಡರು.
ಗ್ಲಾಸ್ಗೊದಲ್ಲಿ ಪಾರಮ್ಯ: ಹೋದ ಸಲದ ಕಾಮನ್‌ವೆಲ್ತ್‌ ಕೂಟಕ್ಕಿಂತಲೂ ಭಾರ ತದ ವೇಟ್‌ಲಿಫ್ಟರ್‌ಗಳು ಈ ಸಲ ಉತ್ತ ಮ ಸಾಮರ್ಥ್ಯ ತೋರುತ್ತಿದ್ದಾರೆ. 2010ರ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ 2 ಚಿನ್ನ, 2 ಬೆಳ್ಳಿ ಹಾಗೂ 4 ಕಂಚು ಜಯಿಸಿತ್ತು. ಇಲ್ಲಿ 3 ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ ಒಟ್ಟು 9 ಪದಕಗಳನ್ನು ಜಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT