ADVERTISEMENT

ಸಾನಿಯಾ–ಮಾರ್ಟಿನಾ ಕಿರೀಟಕ್ಕೆ ಮತ್ತೊಂದು ಗರಿ

ಟೆನಿಸ್‌: ಸತತ 30ನೇ ಗೆಲುವು ಪಡೆದ ಭಾರತ–ಸ್ವಿಸ್‌ ಜೋಡಿ; ಕ್ಯಾರೋಲಿನಾ–ಕ್ರಿಸ್ಟಿನಾ ಜೋಡಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2016, 19:31 IST
Last Updated 15 ಜನವರಿ 2016, 19:31 IST
ಪ್ರಶಸ್ತಿಯೊಂದಿಗೆ ಮಾರ್ಟಿನಾ ಹಿಂಗಿಸ್ ಮತ್ತು ಸಾನಿಯಾ ಮಿರ್ಜಾ  ಎಎಫ್‌ಪಿ ಚಿತ್ರ
ಪ್ರಶಸ್ತಿಯೊಂದಿಗೆ ಮಾರ್ಟಿನಾ ಹಿಂಗಿಸ್ ಮತ್ತು ಸಾನಿಯಾ ಮಿರ್ಜಾ ಎಎಫ್‌ಪಿ ಚಿತ್ರ   

ಸಿಡ್ನಿ (ಪಿಟಿಐ/ಐಎಎನ್‌ಎಸ್‌): ಆರಂಭದಲ್ಲಿ ಎದುರಾದ ಸಂಕಷ್ಟವನ್ನು ಅಮೋಘ ರೀತಿಯಲ್ಲಿ ಎದುರಿಸಿದ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಡಬ್ಲ್ಯುಟಿಎ ಅಪಿಯಾ ಇಂಟರ್‌ ನ್ಯಾಷನಲ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ.

ಭಾರತ ಮತ್ತು ಸ್ವಿಸ್‌ ಜೋಡಿ ಜತೆಯಾಗಿ ಆಡಲು ಶುರುಮಾಡಿದ ಬಳಿಕ ಗೆದ್ದ 11ನೇ ಪ್ರಶಸ್ತಿ ಇದಾಗಿದೆ. ಡಬಲ್ಸ್‌ ವಿಭಾಗದಲ್ಲಿ ಗುರುವಾರವಷ್ಟೇ ಸತತ 29ನೇ ಪಂದ್ಯ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ್ದ ಸಾನಿಯಾ ಮತ್ತು ಮಾರ್ಟಿನಾ ಈ ಟೂರ್ನಿಯ ಫೈನಲ್‌ ನಲ್ಲೂ ಜಯ ಪಡೆದು ಒಟ್ಟು ಪಂದ್ಯದ ಜಯದ ಸಂಖ್ಯೆಯನ್ನು  30ಕ್ಕೆ ಹೆಚ್ಚಿಸಿ ಕೊಂಡರು.

ಫೈನಲ್‌ ಹೋರಾಟದಲ್ಲಿ ಸಾನಿಯಾ ಮತ್ತು ಮಾರ್ಟಿನಾ 1–6, 7–5, 10–5ರಲ್ಲಿ ಕ್ಯಾರೋಲಿನಾ ಗ್ರೇಸಿಯಾ ಮತ್ತು ಕ್ರಿಸ್ಟಿನಾ ಮ್ಲಾಡೆನೊವಿಚ್‌ ಅವರನ್ನು ಸೋಲಿಸಿದರು. ವಿಶ್ವಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಭಾರತ–ಸ್ವಿಸ್‌ ಜೋಡಿ ಅಂತಿಮ ಘಟ್ಟದ ಮೊದಲ ಸೆಟ್‌ನಲ್ಲಿ ನಿರೀಕ್ಷಿತ ಆಟ ಆಡಲಿಲ್ಲ.  ಎದುರಾಳಿಗಳ ಸವಾಲನ್ನು ಮೆಟ್ಟಿನಿಲ್ಲಲು ವಿಫಲರಾದ ಅವರು ಕೇವಲ ಒಂದು ಗೇಮ್‌ ಗೆಲ್ಲಲಷ್ಟೇ ಶಕ್ತರಾದರು.

ಆರಂಭಿಕ ಸೆಟ್‌ನಲ್ಲಿ ಸಿಕ್ಕ ಗೆಲುವಿ ನಿಂದ ವಿಶ್ವಾಸ ಹೆಚ್ಚಿಸಿಕೊಂಡ  ಕ್ಯಾರೋಲಿನ್‌ ಮತ್ತು ಕ್ರಿಸ್ಟಿನಾ ಎರಡನೇ  ಸೆಟ್‌ನ ಆರಂಭದಲ್ಲೂ ಸೆಟ್‌ ಮೇಲೆ ಹಿಡಿತ ಸಾಧಿಸಿದರು. ತಮ್ಮ ಸರ್ವ್‌ ಕಾಪಾಡಿಕೊಳ್ಳುವ ಜತೆಗೆ  ಎರಡು ಬಾರಿ ಎದುರಾಳಿ ಜೋಡಿಯ ಸರ್ವ್‌ ಮುರಿದ ಅವರು 4–1ರ ಮುನ್ನಡೆ ಗಳಿಸಿ ಪ್ರಶಸ್ತಿಯ ಆಸೆ ಹೊಂದಿದ್ದರು.

ಈ ಹಂತದಲ್ಲಿ ಸಾನಿಯಾ ಮತ್ತು ಮಾರ್ಟಿನಾ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಫಿನಿಕ್ಸ್‌ನಂತೆ ಎದ್ದುಬಂದ ವಿಶ್ವದ ಅಗ್ರಮಾನ್ಯ ಜೋಡಿ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟಿತು.

ಮನಮೋಹಕ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ ಮತ್ತು ಸೊಬಗಿನ ಸರ್ವ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಭಾರತ –ಸ್ವಿಸ್‌ ಜೋಡಿ ಸತತ ಮೂರು ಗೇಮ್‌ ಗೆದ್ದು 4–4ರಲ್ಲಿ ಸಮಬಲ ಮಾಡಿ ಕೊಂಡಿತು. ಬಳಿಕವೂ ಗುಣಮಟ್ಟದ ಆಟವಾಡಿದ ಸಾನಿಯಾ ಮತ್ತು ಮಾರ್ಟಿನಾ 5–5ರಲ್ಲಿ ಸಮಬಲ ಸಾಧಿಸಿ ದರಲ್ಲದೇ ಟೈ ಬ್ರೇಕರ್‌ನಲ್ಲಿ ಪಂದ್ಯ ಗೆದ್ದು ಪ್ರಶಸ್ತಿ ಆಸೆಯನ್ನು ಜೀವಂತ ವಾಗಿಟ್ಟು ಕೊಂಡರು. 

ಮೂರನೇ ಹಾಗೂ ನಿರ್ಣಾ ಯಕ ಸೆಟ್‌ನಲ್ಲಿ ಆರಂಭ ದಿಂದಲೇ ಮುನ್ನಡೆ ಕಾಯ್ದುಕೊಂಡು ಸಾಗಿದ ಸಾನಿಯಾ ಜೋಡಿ ಸುಲಭವಾಗಿ ಗೆಲು ವು ಒಲಿಸಿಕೊಂಡಿತು. ಪಂದ್ಯವು ಒಂದು ಗಂಟೆ 13 ನಿಮಿಷಗಳ ಕಾಲ ನಡೆಯಿತು.

ಫೈನಲ್‌ಗೆ ಬೋಪಣ್ಣ ಜೋಡಿ:  ಆ ಭಾರತದ ರೋಹನ್‌ ಬೋಪಣ್ಣ ಮತ್ತು ರುಮೇನಿಯಾದ ಫ್ಲೋರಿನ್‌ ಮಾರ್ಗಿಯಾ ಪುರುಷರ ಡಬಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದರು.

ನಾಲ್ಕನೇ ಶ್ರೇಯಾಂಕದ ಬೋಪಣ್ಣ ಮತ್ತು ಮಾರ್ಗಿಯಾ ಸೆಮಿಫೈನಲ್‌ನಲ್ಲಿ 7–6, 6–2ರಲ್ಲಿ ಬ್ರೆಜಿಲ್‌ನ ಥಾಮಸ್‌ ಬೆಲ್ಲುಕಿ ಮತ್ತು ಅರ್ಜೆಂಟೀನಾದ ಲಿಯೊನಾರ್ಡೊ ಮೇಯರ್‌ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT