ADVERTISEMENT

ಸಿದ್ದಿ ಕ್ರೀಡಾ ಪ್ರತಿಭೆ ಶೋಧಕ್ಕೆ ಮರು ಯತ್ನ

ವಿಶೇಷ ಕ್ರೀಡಾ ತರಬೇತಿ ಯೋಜನೆ: ಎರಡು ವರ್ಷದಲ್ಲಿ ಸಿಗದ ಫಲ

ವಿಕ್ರಂ ಕಾಂತಿಕೆರೆ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST
ಶ್ಯಾಮಸುಂದರ್‌
ಶ್ಯಾಮಸುಂದರ್‌   

ಹುಬ್ಬಳ್ಳಿ:  ಎರಡು ವರ್ಷಗಳ ‘ಶೂನ್ಯ ಸಂಪಾದನೆ’ ನಂತರ ಸಿದ್ದಿ ಜನಾಂಗದ ಕ್ರೀಡಾ ಪ್ರತಿಭೆಗಳ ಶೋಧಕ್ಕೆ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಮತ್ತೊಂದು ಪ್ರಯತ್ನ ನಡೆಸಲು ಮುಂದಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿರುವ ಲೊಯೋಲ ಶಾಲೆಯಲ್ಲಿ ಸಾಯ್‌ ಪ್ರಾದೇಶಿಕ ಕೇಂದ್ರ (ಬೆಂಗಳೂರು) ಎರಡು ವರ್ಷಗಳಿಂದ ಸಿದ್ದಿ ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್‌ ತರಬೇತಿ ನೀಡುತ್ತಿದೆ. ಒಂದು ವರ್ಷದ ಅವಧಿಯಲ್ಲಿ ಕನಿಷ್ಠ ಜಿಲ್ಲಾ ಮಟ್ಟದಲ್ಲಾ ದರೂ ಪದಕ ಗೆದ್ದರೆ ತರಬೇತಿ ಮುಂದು ವರಿಯಲಿದೆ.

ಆದರೆ ಈವರೆಗಿನ ತರಬೇತಿಯಲ್ಲಿ ಒಬ್ಬರಿಗೂ ಈ ಮಾನದಂಡ ದಾಟಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಸಾಯ್‌ ನಿರೀಕ್ಷೆ ಕೈಗೂಡಲಿಲ್ಲ.
ಮೂರನೇ ವರ್ಷದ ತರಬೇತಿಗೆ ಇದೀಗ ಸಿದ್ಧತೆ ನಡೆಯುತ್ತಿದ್ದು ಜುಲೈ 20 ಮತ್ತು 21ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಶಾಶ್ವತ ತರಬೇತಿ ಕೇಂದ್ರ ಇಲ್ಲದಿರುವುದು ಮತ್ತು ತರಬೇತುದಾರರ ಕೊರತೆ ಇಂಥ ಸ್ಥಿತಿಗೆ ಕಾರಣ ಎಂದು ಸಾಯ್ ಮೂಲಗಳು ಹೇಳಿವೆ.

ಯಾಕೆ ತರಬೇತಿ?
ಸಿದ್ದಿಗಳ ಕುರಿತು ಮೂರು ವರ್ಷಗಳ ಹಿಂದೆ ಅಧ್ಯಯನ ಮಾಡಿದ ಸಾಯ್‌ ನಿವೃತ್ತ ನಿರ್ದೇಶಕ ವಿ.ವಿ.ಎಸ್‌.ಎನ್‌ ರಾವ್‌ ಅವರ ಶಿಫಾರಸಿನ ಆಧಾರದಲ್ಲಿ ಈ ಯೋಜನೆ ಜಾರಿಗೆ ತರಲಾಗಿತ್ತು. ದೂರ ಮತ್ತು ಮಧ್ಯಮ ದೂರ ಓಟದಲ್ಲಿ ಪ್ರತಿಭೆಗಳನ್ನು ಹೆಕ್ಕುವುದು ಇದರ ಉದ್ದೇಶ.

ಪ್ರತಿ ವರ್ಷ ತಲಾ 20 ಅಥ್ಲೀಟ್‌ಗಳನ್ನು ತರಬೇತಿಗೆ ಆಯ್ಕೆ ಮಾಡಲು ಅವಕಾಶವಿದೆ. ಆದರೆ ಸಾಯ್‌ ಮೂಲಗಳ ಪ್ರಕಾರ ಇಲ್ಲಿವರೆಗೆ ತರಬೇತಿಗೆ ಹಾಜರಾದವರು ಕೇವಲ 19 ಮಂದಿ ಮಾತ್ರ. ಅವರ ಪೈಕಿ ಯಾರೂ ಮುಂದುವರಿದ ತರಬೇತಿಗೆ ಅರ್ಹತೆ ಗಳಿಸಲಿಲ್ಲ.

ಆಧುನಿಕತೆಯ ಹೊಡೆತ
‘ಕಾಡಿನ ಪರಿಸರದಲ್ಲಿ ಜೀವನ ನಡೆಸುತ್ತಿದ್ದ ಸಿದ್ದಿಗಳ ಬದುಕಿನಲ್ಲಿ ಈಗ ಭಾರಿ ಬದಲಾವಣೆಯಾಗಿದೆ. ಗೆಡ್ಡೆ ಗೆಣಸು ತಿನ್ನುತ್ತಿದ್ದವರು ಆಧುನಿಕ ಆಹಾರ ಪದ್ಧತಿಗೆ ಮಾರುಹೋಗಿ ದ್ದಾರೆ. ನಾಟಿ ಔಷಧಿಯನ್ನೇ ನಂಬಿದವರು ಈಗ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ.

ಜೀವನ ಶೈಲಿಯಲ್ಲಿನ ಬದಲಾವಣೆಯಿಂದ ಕ್ರೀಡಾ ಸಾಮರ್ಥ್ಯದ ಮೇಲೆಯೂ ಪರಿಣಾಮ ಆಗಿರುವ ಸಾಧ್ಯತೆ ಇದೆ. ಸಮರ್ಪಕ ತರಬೇತಿ ಮತ್ತು ಅಗತ್ಯ ಕ್ರೀಡಾ ಸಾಮಗ್ರಿಗಳ ಕೊರತೆಯೂ ಪ್ರತಿಭೆ ಹೊರಬರುವುದಕ್ಕೆ ಅಡ್ಡಿಯಾಗಿದೆ’ ಎಂದು ಸಿದ್ದಿ ಜನಾಂಗ ನಾಯಕಿ ಜೂಲಿಯಾನಾ ಫರ್ನಾಂಡಿಸ್‌ ಹೇಳುತ್ತಾರೆ.

ಪ್ರತಿ ಕ್ರೀಡಾಪಟುವಿಗೆ ಸಿಗುವ ಸೌಲಭ್ಯ
* ₹ 4 ಸಾವಿರ ಮೊತ್ತದ ಕ್ರೀಡಾ ಸಾಮಗ್ರಿ
* ಸ್ಪರ್ಧೆಗೆ ಹಾಜರಾಗಲು ₹ 2 ಸಾವಿರ
* ಶಿಷ್ಯ ವೇತನ ₹ 6 ಸಾವಿರ
* ವಿಮೆ ₹ 150
ಒಟ್ಟು ₹ 12,150

ADVERTISEMENT

*
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಸದ್ಯದಲ್ಲೇ ತರಬೇತಿ ಕೇಂದ್ರ ಸ್ಥಾಪಿಸುವ ಉದ್ದೇಶವಿದ್ದು ಅದರ ನಂತರ ಸಿದ್ದಿ ಕ್ರೀಡಾಪಟುಗಳ ಚಿತ್ರಣ ಸಂಪೂರ್ಣ ಬದಲಾಗಲಿದೆ.
-ಶ್ಯಾಮಸುಂದರ್,
ಸಾಯ್‌ ಪ್ರಾದೇಶಿಕ ಕೇಂದ್ರದ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.