ADVERTISEMENT

ಸೆಲ್ಫಿ ತೆಗೆಯಿರಿ, ಟಿಕೆಟ್‌ ಪಡೆಯಿರಿ

ಕ್ರಿಕೆಟ್‌ ಪ್ರೇಮಿಗಳನ್ನು ಆಕರ್ಷಿಸಲು ಸಂಘಟಕರ ಹೊಸ ಯೋಜನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕೆಪಿಎಲ್ ಟೂರ್ನಿಯಲ್ಲಿ ಸೋಮವಾರ ಚಾರು ಶರ್ಮಾ, ಡೇನಿಯಲ್‌ ವೆಟೋರಿ ಜೊತೆ ಮೈಸೂರು ವಾರಿಯರ್ಸ್ ತಂಡದ ಶ್ರೇಯಸ್‌ ಗೋಪಾಲ್‌ ವೀಕ್ಷಕ ವಿವರಣೆ ನೀಡಿದರು.
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕೆಪಿಎಲ್ ಟೂರ್ನಿಯಲ್ಲಿ ಸೋಮವಾರ ಚಾರು ಶರ್ಮಾ, ಡೇನಿಯಲ್‌ ವೆಟೋರಿ ಜೊತೆ ಮೈಸೂರು ವಾರಿಯರ್ಸ್ ತಂಡದ ಶ್ರೇಯಸ್‌ ಗೋಪಾಲ್‌ ವೀಕ್ಷಕ ವಿವರಣೆ ನೀಡಿದರು.   

ಹುಬ್ಬಳ್ಳಿ: ಕರ್ನಾಟಕ ಪ್ರೀಮಿಯರ್‌ ಲೀಗ್‌ ಟೂರ್ನಿಯ (ಕೆಪಿಎಲ್‌) ಪಂದ್ಯಗಳನ್ನು ನೋಡಲು ಹೆಚ್ಚು ಜನ ಬರಬೇಕು ಎನ್ನುವ ಕಾರಣಕ್ಕಾಗಿ ಸಂಘಟಕರು ಹೊಸ ಯೋಜನೆಯನ್ನು ರೂಪಿಸಿದ್ದಾರೆ.

ನಗರದಲ್ಲಿರುವ ಚನ್ನಮ್ಮ ವೃತ್ತದಲ್ಲಿ ಸೆಲ್ಫಿ ಫೊಟೊ ತೆಗೆದುಕೊಂಡು ಅದನ್ನು #Namma Kpl ಎನ್ನುವ ಹ್ಯಾಷ್‌ಟ್ಯಾಗ್‌ಗೆ ಚಿತ್ರವನ್ನು ಹಾಕಿದವರಿಗೆ ಮೊದಲ ಸೆಮಿಫೈನಲ್‌ ಪಂದ್ಯ ನೋಡಲು ಉಚಿತ ಪ್ರವೇಶ ಲಭಿಸುತ್ತದೆ.

ಈ ಕುರಿತು ಸಂಘಟಕರು ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. ಸೆಮಿಫೈನಲ್‌ ಪಂದ್ಯ ಸೆ. 20ರಂದು ನಡೆಯಲಿದೆ.

ADVERTISEMENT

ಹುಬ್ಬಳ್ಳಿ ಆವೃತ್ತಿಯ ಪಂದ್ಯಗಳು ಆರಂಭವಾದ ದಿನಗಳಂದು ಕ್ರೀಡಾಂಗಣಕ್ಕೆ ಹೆಚ್ಚು ಜನ ಬಂದಿರಲಿಲ್ಲ. ನಂತರ ಒಂದೆರೆಡು ದಿನ ಉತ್ತಮ ಸಂಖ್ಯೆಯಲ್ಲಿ ಜನ ಸೇರಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಧಾರವಾಡ ವಲಯವು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡು ಪಂದ್ಯ ನೋಡಲು ಬರುವವರಿಗೆ ಬಸ್‌ ವ್ಯವಸ್ಥೆ ಮಾಡಿದೆ. ಪ್ರತಿದಿನ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಿದೆ.

ಆಟಗಾರರಿಂದಲೇ ವೀಕ್ಷಕ ವಿವರಣೆ: ಕೆಪಿಎಲ್‌ನ ವಿವಿಧ ತಂಡಗಳಲ್ಲಿ ಆಡುತ್ತಿರುವ ಆಟಗಾರರು ನಿತ್ಯ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದಾರೆ.

ಬಿಜಾಪುರ ಬುಲ್ಸ್ ತಂಡದ ಮೊಹಮ್ಮದ್‌ ತಾಹಾ ಮೊದಲ ದಿನ ಚಾರು ಶರ್ಮಾ ಮತ್ತು ನ್ಯೂಜಿಲೆಂಡ್‌ನ ಕ್ರಿಕೆಟಿಗ ಡೇನಿಯಲ್‌ ವೆಟೋರಿ ಜೊತೆ ವೀಕ್ಷಕ ವಿವರಣೆ ನೀಡಿದ್ದರು. ಕ್ರಿಕೆಟಿಗ ಮೈಕ್‌ ಹಸ್ಸಿ ಕೂಡ ಇದ್ದರು. ನಂತರ ಎಡಗೈ ವೇಗಿ ಎಸ್‌. ಅರವಿಂದ್‌ ಕಾಣಿಸಿಕೊಂಡರು. ಸೋಮವಾರ ನಡೆದ ಬುಲ್ಸ್‌ ಮತ್ತು ಬೆಳಗಾವಿ ಪ್ಯಾಂಥರ್ಸ್‌ ನಡುವಣ ಪಂದ್ಯಕ್ಕೆ ಶ್ರೇಯಸ್‌ ಗೋಪಾಲ್‌ ವೀಕ್ಷಕ ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.