ADVERTISEMENT

ಸೈನಾ,ಪ್ರಣಯ್‌ ಆಕರ್ಷಣೆ

ಇಂದಿನಿಂದ ಚೀನಾ ಓಪನ್‌ ಸೂ‍ಪರ್‌ ಸೀರಿಸ್‌ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 20:09 IST
Last Updated 13 ನವೆಂಬರ್ 2017, 20:09 IST
ಸೈನಾ ನೆಹ್ವಾಲ್‌. ಎಚ್‌.ಎಸ್‌.‍ಪ್ರಣಯ್‌
ಸೈನಾ ನೆಹ್ವಾಲ್‌. ಎಚ್‌.ಎಸ್‌.‍ಪ್ರಣಯ್‌   

ಫುಜೌ, ಚೀನಾ: ರಾಷ್ಟ್ರೀಯ ಚಾಂಪಿಯನ್‌ಗಳಾದ ಸೈನಾ ನೆಹ್ವಾಲ್‌ ಮತ್ತು ಎಚ್.ಎಸ್‌.ಪ್ರಣಯ್‌ ಅವರು ಮಂಗಳವಾರದಿಂದ ಆರಂಭವಾಗುವ ಚೀನಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ.

ಮುಂಬರುವ ದುಬೈ ಸೂಪರ್‌ ಸರಣಿ ಫೈನಲ್ಸ್‌ಗೆ ಅರ್ಹತೆ ಗಳಿಸಲು ಉಭಯರಿಗೂ ಈ ಟೂರ್ನಿ ವೇದಿಕೆಯಾಗಿದೆ.

ಸೈನಾ ನೆಹ್ವಾಲ್‌ ಹೋದ ವಾರ ನಡೆದಿದ್ದ ರಾಷ್ಟ್ರೀಯ ಚಾಂಪಿ ಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ ಫೈನಲ್‌ನಲ್ಲಿ ಪಿ.ವಿ.ಸಿಂಧು ಸವಾಲು ಮೀರಿದ್ದರು. ಪುರುಷರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಪ್ರಣಯ್‌, ಕಿದಂಬಿ ಶ್ರೀಕಾಂತ್‌ಗೆ ಆಘಾತ ನೀಡಿದ್ದರು.

ADVERTISEMENT

ಗ್ಲಾಸ್ಗೊದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿಗೆ ಕೊರಳೊಡ್ಡಿದ್ದ ಸೈನಾ, ಅಮೆರಿಕದ ಬಿಯೆವೆನ್‌ ಜಾಂಗ್‌ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದ್ದಾರೆ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 11ನೇ ಸ್ಥಾನ ಹೊಂದಿರುವ ಪ್ರಣಯ್‌, ಮೊದಲ ಸುತ್ತಿನಲ್ಲಿ ಅರ್ಹತಾ ಹಂತದಲ್ಲಿ ಗೆದ್ದು ಬಂದ ಆಟಗಾರನ ವಿರುದ್ಧ ಸೆಣಸಲಿದ್ದಾರೆ. ಈ ವರ್ಷ ನಾಲ್ಕು ಪ್ರಶಸ್ತಿಗಳನ್ನು ಜಯಿಸಿದ್ದ ಶ್ರೀಕಾಂತ್‌ ಗಾಯದ ಕಾರಣ ಟೂರ್ನಿಯಲ್ಲಿ ಆಡುತ್ತಿಲ್ಲ.

ಶುಭಾರಂಭದ ನಿರೀಕ್ಷೆಯಲ್ಲಿ ಸಿಂಧು: ಪಿ.ವಿ.ಸಿಂಧು ಕೂಡ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಶುಭಾರಂಭ ಮಾಡುವ ವಿಶ್ವಾಸ ಹೊಂದಿದ್ದಾರೆ.

ಇಂಡಿಯಾ ಮತ್ತು ಕೊರಿಯಾ ಓಪನ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದ ಸಿಂಧು,  ಮೊದಲ ಸುತ್ತಿನಲ್ಲಿ ಜಪಾನ್‌ನ ಸಯಾಕ ಸ್ಯಾಟೊ ಎದುರು ಪೈಪೋಟಿ ನಡೆಸುವರು. ಈ ವರ್ಷ ನಡೆದಿದ್ದ ಇಂಡೊನೇಷ್ಯಾ ಓಪನ್‌ನಲ್ಲಿ ಸಯಾಕ ಪ್ರಶಸ್ತಿ ಗೆದ್ದಿದ್ದರು. ಹೀಗಾಗಿ ಸಿಂಧುಗೆ ಆರಂಭದಲ್ಲೇ ಕಠಿಣ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

ಬಿ.ಸಾಯಿ ಪ್ರಣೀತ್‌ ಮತ್ತು ಅಜಯ್‌ ಜಯರಾಮ್‌ ಅವರೂ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಸವಾಲು ಎತ್ತಿ ಹಿಡಿಯಲಿದ್ದಾರೆ. ಸಹೋದರರಾದ ಸೌರಭ್‌ ಮತ್ತು ಸಮೀರ್‌ ವರ್ಮಾ ಕೂಡ ಟೂರ್ನಿಯಲ್ಲಿ ಅಂಗಳಕ್ಕಿಳಿಯಲಿದ್ದಾರೆ. ಗಾಯದ ಕಾರಣ ಇವರು ಹಿಂದಿನ ಕೆಲ ಟೂರ್ನಿಗಳಲ್ಲಿ ಭಾಗವಹಿಸಿರಲಿಲ್ಲ.

ಮೊದಲ ಸುತ್ತಿನಲ್ಲಿ ಪ್ರಣೀತ್‌, ಡೆನ್ಮಾರ್ಕ್‌ನ ಆ್ಯಂಡರ್ಸ್‌ ಆ್ಯಂಟೊನ್‌ಸೆನ್‌ ಸವಾಲಿಗೆ ಎದೆಯೊಡ್ಡಲಿದ್ದರೆ, ಅಜಯ್‌, ಜಪಾನ್‌ನ ಕಜುಮಾಸ ಸಕಾಯ್‌ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.

ಸೌರಭ್‌ ಮತ್ತು ಸಮೀರ್‌ಗೆ ಕ್ರಮವಾಗಿ ಫ್ರಾನ್ಸ್‌ನ ಬ್ರೈಸ್ ಲೆವೆರ್‌ಡೆಜ್‌ ಮತ್ತು ವಿಕ್ಟರ್‌ ಆ್ಯಕ್ಸೆಲ್‌ಸನ್‌ ಸವಾಲು ಎದುರಾಗಲಿದೆ.

ಮಿಶ್ರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಪ್ರಣವ್‌ ಜೆರ‍್ರಿ ಚೋಪ್ರಾ ಮತ್ತು ಎನ್‌. ಸಿಕ್ಕಿ ರೆಡ್ಡಿ ಐದನೇ ಶ್ರೇಯಾಂಕ ಹೊಂದಿರುವ ಚೀನಾದ ಜೆಂಗ್‌ ಸಿವೀ ಮತ್ತು ಹುವಾಂಗ್‌ ಯಾಕಿಯಂಗ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಮನು ಅತ್ರಿ ಮತ್ತು ಬಿ.ಸುಮೀತ್ ರೆಡ್ಡಿ, ಇಂಡೊನೇಷ್ಯಾದ ಮಾರ್ಕಸ್‌ ಫರ್ನಾಲ್ಡಿ ಗಿಡಿಯೊನ್‌ ಮತ್ತು ಕೆವಿನ್‌ ಸಂಜಯ ಸುಕಮುಲ್‌ಜೊ ವಿರುದ್ಧ ಆಡಲಿದ್ದಾರೆ. ಸಾತ್ವಿಕ್‌ ಸಾಯಿರಾಜ್‌ ಮತ್ತು ಚಿರಾಗ್‌ ಶೆಟ್ಟಿ, ಚೀನಾದ ಲಿಯು ಚೆಂಗ್‌ ಮತ್ತು ಜಾಂಗ್‌ ನಾನ್‌ ಎದುರು ಹಣಾಹಣಿ ನಡೆಸಲಿದ್ದಾರೆ.

ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ‍‍ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿಗೆ ಕೊರಿಯಾದ ಹಾ ನಾ ಬೆಕ್‌ ಮತ್ತು ಚೆಯೆ ಯೂ ಜಾಂಗ್‌ ನಾನ್‌ ಅವರ ಸವಾಲು ಎದುರಾಗಲಿದೆ.

ಅರ್ಹತಾ ಸುತ್ತಿನಲ್ಲಿ ಕಶ್ಯಪ್‌ಗೆ ಗೊವೊ ಕಾಯ್ ಎದುರಾಳಿ: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಪರುಪಳ್ಳಿ ಕಶ್ಯಪ್‌, ಅರ್ಹತಾ ಸುತ್ತಿನ ಪಂದ್ಯದಲ್ಲಿ ಚೀನಾದ ಗೊವೊ ಕಾಯ್‌ ವಿರುದ್ಧ ಆಡಲಿದ್ದಾರೆ.

ಮಂಗಳವಾರ ನಡೆಯುವ ಮಿಶ್ರ ಡಬಲ್ಸ್‌ ವಿಭಾಗದ ಹಣಾಹಣಿಯಲ್ಲಿ ಸಾತ್ವಿಕ್‌ ಸಾಯಿರಾಜ್‌ ಮತ್ತು ಕರ್ನಾಟಕದ ಅಶ್ವಿನಿ ಪೊನ್ನಪ್ಪ, ಚೀನಾ ತೈಪೆಯ ಲೀ ಜೆ ಹುಯಿ ಮತ್ತು ವು ಟಿ ಜಂಗ್‌ ಎದುರು ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.