ADVERTISEMENT

ಸ್ಪಾಟ್ ಫಿಕ್ಸಿಂಗ್: ದಾರಾಸಿಂಗ್ ಪುತ್ರ ವಿಂದು ಬಂಧನ

​ಪ್ರಜಾವಾಣಿ ವಾರ್ತೆ
Published 21 ಮೇ 2013, 20:19 IST
Last Updated 21 ಮೇ 2013, 20:19 IST

ಮುಂಬೈ (ಪಿಟಿಐ/ಐಎಎನ್‌ಎಸ್): ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಮತ್ತೊಂದು ಮಹತ್ವದ ತಿರುವು ಲಭಿಸಿದೆ. ಬೆಟ್ಟಿಂಗ್ ಮಾಫಿಯಾದೊಂದಿಗೆ ಸಂಪರ್ಕ ಬೆಳೆಸಿದ ಆರೋಪದ ಮೇಲೆ ಖ್ಯಾತ ಕುಸ್ತಿಪಟು ದಾರಾ ಸಿಂಗ್ ಪುತ್ರ ಹಾಗೂ ಬಾಲಿವುಡ್ ನಟ ವಿಂದು ದಾರಾಸಿಂಗ್ ಅವರನ್ನು ಮುಂಬೈ ಪೊಲೀಸರು (ಅಪರಾಧ ದಳ) ಬಂಧಿಸಿದ್ದಾರೆ.

ವಿಂದು ಬಂಧನದಿಂದ ಬಾಲಿವುಡ್, ಬೆಟ್ಟಿಂಗ್ ಮಾಫಿಯಾ ಹಾಗೂ ಕ್ರಿಕೆಟಿಗರ ನಡುವಿನ ಸಂಪರ್ಕ ಸೇರಿದಂತೆ ಹಲವು ಮಹತ್ವದ ವಿಷಯಗಳು ಬಹಿರಂಗವಾಗುವ ನಿರೀಕ್ಷೆ ಇದೆ. ಈಗಾಗಲೇ ಬಂಧನದಲ್ಲಿರುವ ಬುಕ್ಕಿ ರಮೇಶ್ ಯಾದವ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ವಿಂದು ಹೆಸರನ್ನು ಉಲ್ಲೇಖಿಸಿರುವುದು ತಿಳಿದು ಬಂದಿದೆ. ಇದನ್ನು ಆಧರಿಸಿ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಸೋಮವಾರ ರಾತ್ರಿಯೇ ಜುಹುನಲ್ಲಿರುವ ವಿಂದು ಅವರ `ದಾರಾ ವಿಲ್ಲಾ' ನಿವಾಸದ ಮೇಲೆ ದಾಳಿ ನಡೆಸಿ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

`ವಿಂದು ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಹಾಗಾಗಿ ಅವರನ್ನು ನಾವು ಬಂಧಿಸಿದ್ದೇವೆ' ಎಂದು ಮುಂಬೈ ಪೊಲೀಸ್ ಕಮಿಷನರ್ ಹಿಮಾನ್ಷು ರಾಯ್ ಹೇಳಿದ್ದಾರೆ.

ಭಾರತ ದಂಡ ಸಂಹಿತೆ 420, 465, 466, 467 ಹಾಗೂ 486ರ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ಅವರನ್ನು ಮಂಗಳವಾರ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎಂ.ಎನ್.ಸಲೀಮ್ ಎದುರು ಹಾಜರುಪಡಿಸಲಾಯಿತು. ಬಳಿಕ ಅವರು ಮೇ 24ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.

ಜಿಜು ಜನಾರ್ದನ್ ಹಾಗೂ ಬುಕ್ಕಿ ಜುಪಿಟರ್ ಅವರೊಂದಿಗೆ ವಿಂದು ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. 49 ವರ್ಷ ವಯಸ್ಸಿನ ಅವರು ಹಲವು ಪಂದ್ಯಗಳಲ್ಲಿ ವಿಐಪಿ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದ್ದಾರೆ. ಅಷ್ಟು ಮಾತ್ರವಲ್ಲದೇ, ದೋನಿ ಪತ್ನಿ ಸಾಕ್ಷಿಯೊಂದಿಗೆ ಕುಳಿತು ಪಂದ್ಯ ನೋಡಿದ್ದಾರೆ. ಹರಭಜನ್ ಸಿಂಗ್, ಆ್ಯಡಮ್ ಗಿಲ್‌ಕ್ರಿಸ್ಟ್ ಜೊತೆಯೂ ಔತಣಕೂಟಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಹವಾಲ ವ್ಯವಹಾರ ನಡೆಸುತ್ತಿರುವ ಆಲ್ಪೇಶ್‌ಕುಮಾರ್ ಪಟೇಲ್ ಎಂಬಾತನನ್ನೂ ಈ ಸಂದರ್ಭದಲ್ಲಿ ಬಂಧಿಸಲಾಗಿದೆ. ಬುಕ್ಕಿಗಳ ಜೊತೆ ಸಂಪರ್ಕ ಹೊಂದಿದ್ದ ಅವರಿಂದ ರೂ1.28 ಕೋಟಿ  ವಶಪಡಿಸಿಕೊಳ್ಳಲಾಗಿದೆ. ವಿಂದು ಅವರ ನಿವಾಸದಿಂದ ಒಂದು ಲ್ಯಾಪ್‌ಟಾಪ್, ಮೊಬೈಲ್ ಹಾಗೂ ದಿನಚರಿ ಪುಸ್ತಕ ವಶಪಡಿಸಿಕೊಂಡಿದ್ದೇವೆ ಎಂದು ಹಿಮಾನ್ಷು ರಾಯ್ ತಿಳಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ವಿಂದು ಪತ್ನಿ ದೀನಾ, `ಏನು ನಡೆಯುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಸದ್ಯ ನಾನು ಅವರೊಂದಿಗೆ ಸಂಪರ್ಕದಲ್ಲಿಲ್ಲ. ಅವರು ಎಲ್ಲಿದ್ದಾರೆ ಎಂಬುದೂ ನನಗೆ ಗೊತ್ತಿಲ್ಲ. ನಾನು ಈಗಷ್ಟೆ ಶಾಲೆಯಿಂದ ಪುತ್ರಿಯನ್ನು ಕರೆದುಕೊಂಡು ಬರುತ್ತಿದ್ದೇನೆ. ಆದರೆ ಅವರು ಈ ರೀತಿ ತಪ್ಪು ಮಾಡಿರಲಾರರು' ಎಂದಿದ್ದಾರೆ.

ಯಾರು ಈ ವಿಂದೂ?
ವಿಂದು ಖ್ಯಾತ ಕುಸ್ತಿಪಟು ಹಾಗೂ ನಟ ದಿವಂಗತ ದಾರಾಸಿಂಗ್ ಅವರ ಪುತ್ರ. ಅವರು ರಿಯಾಲಿಟಿ ಶೋ `ಬಿಗ್ ಬಾಸ್-3'ನಲ್ಲಿ (2010) ವಿಜೇತರಾಗಿದ್ದವರು. `ಕರಣ್' ಎಂಬ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಧಾರಾವಾಹಿಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡ್ದ್ದಿದಾರೆ. ಸನ್ ಆಫ್ ಸರ್ದಾರ್, ಪಾರ್ಟ್‌ನರ್, ಹೌಸ್‌ಫುಲ್ ಸಿನಿಮಾಗಳಲ್ಲೂ ನಟಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.