ADVERTISEMENT

ಹಾಕಿ ಕೋಚ್‌ ಟೆರ್ರಿ ವಾಲ್ಶ್ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 11:33 IST
Last Updated 21 ಅಕ್ಟೋಬರ್ 2014, 11:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ‘ವೇತನ ವಿವಾದ’ ಕಾರಣದಿಂದಾಗಿ ಭಾರತ ಪುರುಷರ ಹಾಕಿ ತಂಡದ ಮುಖ್ಯ ಕೋಚ್‌ ಟೆರ್ರಿ ವಾಲ್ಶ್‌ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಆಸ್ಟ್ರೇಲಿಯಾ ಪ್ರಜೆಯಾಗಿರುವ 60 ವರ್ಷದ ವಾಲ್ಶ್‌ ಅವರ ಮಾರ್ಗದರ್ಶನದಲ್ಲಿ ಭಾರತವು ಇಂಚೆನ್‌ನಲ್ಲಿ ಇತ್ತೀಚೆಗೆ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಐತಿಹಾಸಿಕ ಬಂಗಾರದ ಸಾಧನೆ ತೋರಿತ್ತು.

‘ಭಾರತ ಪುರುಷರ ತಂಡದ ಮುಖ್ಯ ಕೋಚ್‌ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿರುವೆ’ ಎಂದು ವಾಲ್ಶ್ ಅವರು  ಅಕ್ಟೋಬರ್ 19ರಂದು ಭಾರತ ಕ್ರೀಡಾ ಪ್ರಾಧಿಕಾರದ  (ಸಾಯ್‌) ಪ್ರಧಾನ ನಿರ್ದೇಶಕ ಜಿಜಿ ಥಾಮಸನ್‌ ಅವರಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

‘ಭಾರತದಲ್ಲಿ ಕ್ರೀಡಾಡಳಿತಗಾರರು ಕೈಗೊಳ್ಳುತ್ತಿರುವ ನಿರ್ಧಾರದ ಶೈಲಿಗೆ ಹೊಂದಿಕೊಳ್ಳಲು ನನಗೆ ಸಾಕಷ್ಟು ಕಷ್ಟವಾಗುತ್ತಿದೆ. ನಾನು ದೀರ್ಘಾವಧಿಯ ಯೋಜನೆಯಲ್ಲಿ ನಂಬಿಕೆ ಇಟ್ಟವನು. ಆದರೆ ಅವರು ಕೈಗೊಳ್ಳುತ್ತಿರುವ ನಿರ್ಧಾರಗಳಿಂದ ಭಾರತ ಹಾಕಿ ತಂಡ ಅಥವಾ ಅವರ ಆಟಗಾರರ ಹಿತಾಸಕ್ತಿಗೆ ಉತ್ತಮವೇನೂ ಅಲ್ಲ’ ಎಂದೂ ಪತ್ರದಲ್ಲಿ ವಾಲ್ಶ್‌ ಅವರು ತಿಳಿಸಿದ್ದಾರೆ.

ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವು ವಾಲ್ಶ್‌ ಅವರ ತರಬೇತಿಯಲ್ಲಿ  ಬೆಳ್ಳಿ ಸಾಧನೆ ತೋರಿತ್ತು.

ಮತ್ತೊಂದೆಡೆ, ವಾಲ್ಶ್‌ ಹಾಗೂ ಅವರ ಸಹಾಯಕ ಸಿಬ್ಬಂದಿ, ವೇತನದ ಮೇಲಿನ ಟಿಡಿಎಸ್‌್ (ಮೂಲದಲ್ಲಿ ತೆರಿಗೆ ಕಡಿತ) ವಿಷಯವಾಗಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.