ADVERTISEMENT

‘ಟ್ರಿಪಲ್–ಟ್ರಿಪಲ್ ನನ್ನ ಗುರಿ’

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST
ಉಸೇನ್ ಬೋಲ್ಟ್
ಉಸೇನ್ ಬೋಲ್ಟ್   

ಕಿಂಗ್ಸ್‌ಟನ್, ಜಮೈಕಾ (ಎಎಫ್‌ಪಿ): ರಿಯೊ ಒಲಿಂಪಿಕ್ಸ್‌ನಲ್ಲಿ ನಾನು ಮೂರು ಚಿನ್ನದ ಪದಕಗಳನ್ನು ಗೆಲ್ಲುತ್ತೇನೆ.  ಅದರೊಂದಿಗೆ ‘ಟ್ರಿಪಲ್–ಟ್ರಿಪಲ್’ ಸಾಧನೆ ಮಾಡುತ್ತೇನೆ ಎಂದು ಜಮೈಕಾದ ಅಥ್ಲೀಟ್ ಉಸೇನ್ ಬೋಲ್ಟ್ ಹೇಳಿದ್ದಾರೆ.

ಕಳೆದ ಎರಡೂ ಒಲಿಂಪಿಕ್ಸ್‌ಗಳಲ್ಲಿ ಬೋಲ್ಟ್‌ ಒಟ್ಟು ಆರು ಪದಕಗಳನ್ನು (ಬೀಜಿಂಗ್‌ನಲ್ಲಿ ಮೂರು ಮತ್ತು ಲಂಡನ್‌ನಲ್ಲಿ ಮೂರು) ಗೆದ್ದು ದಾಖಲೆ ಬರೆದಿದ್ದಾರೆ.  100 ಮೀಟರ್ಸ್, 200 ಮೀಟರ್ಸ್ ಮತ್ತು ರಿಲೆ ಓಟಗಳಲ್ಲಿ ಅವರು ದಾಖಲೆ ನಿರ್ಮಿಸಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ಮೂರು ಪದಕಗಳನ್ನು ಮೂರು ವರ್ಷವೂ ಸತತವಾಗಿ ಗೆಲ್ಲುವ ದಾಖಲೆ ಮಾಡಲು ನಾನು ಉತ್ಸುಕನಾಗಿದ್ದೇನೆ. ನಾನು ಈಗಾಗಲೇ ಜೀವಂತ ದಂತಕಥೆಯಾಗಿದ್ದೇನೆ.  ಆ ಪಟ್ಟದಲ್ಲಿಯೇ ಮುಂದುವರೆಯಲು ಇಚ್ಛಿಸುತ್ತೇನೆ’ ಎಂದು ಬೋಲ್ಟ್ ಸುದ್ದಿಗಾರರಿಗೆ ಹೇಳಿದರು.

ಜುಲೈ 22ರಂದು ಅವರು ಲಂಡನ್ ಡೈಮಂಡ್ ಲೀಗ್ ಕೂಟದಲ್ಲಿ 200 ಮೀಟರ್ಸ್  ಗುರಿಯನ್ನು 19.89ಸೆಕೆಂಡುಗಳಲ್ಲಿ  ಮುಟ್ಟಿದ್ದರು. ಆ ಮೂಲಕ ತಾವು ಗಾಯದಿಂದ ಚೇತರಿಸಿಕೊಂಡಿದ್ದು ರಿಯೊದಲ್ಲಿ ಮಿಂಚಲು ಸಿದ್ಧ ಎಂದು ಸಂದೇಶ ನೀಡಿದ್ದರು.

‘ಟ್ರಿಪಲ್ –ಟ್ರಿಪಲ್ ಸಾಧನೆ ಮಾಡಿದ ವಿಶ್ವದ ಪ್ರಥಮ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದೇ ನನ್ನ ಗುರಿಯಾಗಿದೆ. ನಾನು ಟ್ರ್ಯಾಕ್‌ನಲ್ಲಿ ಗೆಲುವಿನ ಗುರಿ ಮುಟ್ಟುವುದನ್ನು ಅಭಿಮಾನಿಗಳು ಯಾವಾಗಲೂ ನಿರೀಕ್ಷಿಸುತ್ತಾರೆ. ಅವರ ಆಸೆಯನ್ನು ಈಡೇರಿಸುತ್ತೇನೆ’ ಎಂದು ಬೋಲ್ಟ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.