ADVERTISEMENT

‘ಮುಂದೆ ಸವಾಲಿನ ಹಾದಿಯಿದೆ’

ಕಾಮನ್‌ವೆಲ್ತ್‌ ಕೂಟದ ಚಿನ್ನದ ಪದಕ ವಿಜೇತ ವಿಕಾಸ್‌ ಮುಕ್ತಮಾತು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST
‘ಮುಂದೆ ಸವಾಲಿನ ಹಾದಿಯಿದೆ’
‘ಮುಂದೆ ಸವಾಲಿನ ಹಾದಿಯಿದೆ’   

ಬೆಂಗಳೂರು: ‘ಮುಂದಿನ ಕ್ರೀಡಾ­ಕೂಟಗಳಲ್ಲಿ ಹೇಗೆ ಸಾಧನೆ ತೋರು­ತ್ತೇನೆ ಎನ್ನುವುದರ ಬಗ್ಗೆ ಈಗಲೇ ಭವಿಷ್ಯ ನುಡಿಯುವುದಿಲ್ಲ. ನನ್ನ ಹಿಂದಿನ ಎಲ್ಲಾ ಅನುಭವಗಳನ್ನು ಒಟ್ಟುಗೂಡಿಸಿ ಪ್ರದರ್ಶನದಲ್ಲಿ ಸುಧಾ­ರಣೆ ಕಂಡು­ಕೊಳ್ಳುತ್ತೇನೆ. ಮುಂದೆ ಸವಾಲಿನ ಹಾದಿಯಿದೆ...’

-ಅಂತರರಾಷ್ಟ್ರೀಯ ಡಿಸ್ಕಸ್‌ ಎಸೆತ ಸ್ಪರ್ಧಿ ವಿಕಾಸ್‌ ಗೌಡ ಅವರು ಹೇಳಿದ ಮಾತಿದು. ಒಲಿಂಪಿಕ್‌ ‘ಗೋಲ್ಡ್‌ ಕೋಸ್ಟ್‌’ ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿ­ಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುಂದೆ ಏಷ್ಯನ್‌ ಚಾಂಪಿಯನ್‌­ಷಿಪ್‌ ಮತ್ತು ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಇದೆ. ಜೊತೆಗೆ 2016ರ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಗುರಿ­ಯಿದೆ’ ಎಂದೂ ಅವರು ತಮ್ಮ ಮುಂದಿ­ರುವ ಸವಾಲುಗಳನ್ನು ಬಿಚ್ಚಿಟ್ಟರು.

2011ರಲ್ಲಿ ದಕ್ಷಿಣ ಕೊರಿಯದ ಡೇಗುವಿನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ ವಿಕಾಸ್‌ 64.05ಮೀ. ದೂರ ಡಿಸ್ಕ್‌ ಎಸೆದು ಏಳನೇ ಸ್ಥಾನ ಪಡೆದಿದ್ದರು. 66.28­ಮೀ. ಡಿಸ್ಕ್‌ ಎಸೆದದ್ದು ಅವರ ವೈಯ­ಕ್ತಿಕ ಶ್ರೇಷ್ಠ ಸಾಧನೆ ಎನಿಸಿದೆ. ಇದು ಭಾರತದ ಮಟ್ಟಿಗೂ ಉತ್ತಮ ದಾಖಲೆ.

‘ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಜಯಿಸಿದ್ದು, ಏಷ್ಯನ್‌ ಕೂಟದಲ್ಲಿ ಬೆಳ್ಳಿ ಗೆದ್ದಿದ್ದು ಹೀಗೆ ಹಲವು ಸ್ಮರಣೀಯ ನೆನಪುಗಳಿವೆ. ಮುಂದೆ ಇನ್ನಷ್ಟು ಎತ್ತರದ ಸಾಧನೆ ತೋರಲು ಹಿಂದಿನ ಪದಕಗಳು ಸ್ಫೂರ್ತಿಯಾಗಲಿವೆ. ಕೆಲ ತಿಂಗಳುಗಳ ಹಿಂದೆ ವಿಪರೀತ ಭುಜದ ನೋವು ಕಾಡಿತ್ತು. ಈಗ ಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ದೈಹಿಕವಾಗಿ ಫಿಟ್ ಆಗಿರುವವರೆಗೂ ಪದಕಗಳನ್ನು ಗೆಲ್ಲುವುದೇ ಗುರಿಯಾಗಿ­ಟ್ಟುಕೊಂಡಿ­ರುತ್ತೇನೆ. ಸೋಮವಾರ ಅಭ್ಯಾಸ ಆರಂಭಿಸುತ್ತೇನೆ.’ ಎಂದೂ ಅವರು ತಿಳಿಸಿದರು.

‘ಚಿಕನ್‌ ಮೇಲೆ ಅತೀವ ಪ್ರೀತಿ’
*ನೆಚ್ಚಿನ ಕ್ರೀಡೆ?
: ಬ್ಯಾಸ್ಕೆಟ್‌­ಬಾಲ್‌. ಈ ಕ್ರೀಡೆಯನ್ನು ತುಂಬಾ ಪ್ರೀತಿಸುತ್ತೇನೆ. ಅಮೆರಿಕದಲ್ಲಿ ಕಾಲೇಜು ಬ್ಯಾಸ್ಕೆಟ್‌ಬಾಲ್‌ ಟೂರ್ನಿಯನ್ನು ತಪ್ಪದೇ ನೋಡುತ್ತೇನೆ.
*ನೆಚ್ಚಿನ ಕ್ರೀಡಾ ತಾರೆ: ಬ್ಯಾಸ್ಕೆಟ್‌­ಬಾಲ್‌ ಆಟಗಾರ ಮೈಕಲ್‌ ಜೋರ್ಡಾನ್‌. ಇವರ ಆಟ ನೋಡು­ವು­ದೆಂದರೆ ನನಗೆ ತುಂಬಾ ಖುಷಿ.
*ನೆಚ್ಚಿನ ತಾಣ?: ಅಮೆರಿಕದ ಜನ ಕ್ರೀಡೆಯನ್ನು ತುಂಬಾ ಪ್ರೀತಿಸುತ್ತಾರೆ. ಜತೆಗೆ ಕ್ರೀಡೆಯ ಬಗ್ಗೆಯೂ ಚೆನ್ನಾಗಿ ಗೊತ್ತಿದೆ. ಲಂಡನ್‌ನಲ್ಲಿರುವ ಒಲಿಂಪಿಕ್ಸ್‌ ಕ್ರೀಡಾಂಗಣವೆಂದರೆ ತುಂಬಾ ಇಷ್ಟ.
*ನೆಚ್ಚಿನ ಆಹಾರ?: ಭಾರತದ ತಿನಿಸುಗಳು. ಅದರಲ್ಲೂ ಚಿಕನ್‌ ಎಂದರೆ ವಿಶೇಷ ಪ್ರೀತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.