ADVERTISEMENT

22 ವರ್ಷಗಳ ಬಳಿಕ ಲಂಕಾದಲ್ಲಿ ಟೆಸ್ಟ್‌ ಸರಣಿ ಗೆದ್ದ ಭಾರತ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 13:51 IST
Last Updated 1 ಸೆಪ್ಟೆಂಬರ್ 2015, 13:51 IST

ಕೊಲಂಬೊ (ಪಿಟಿಐ): ಶ್ರೀಲಂಕಾ ವಿರುದ್ಧದ ತ್ರಿಕೋನ ಟೆಸ್ಟ್‌ ಸರಣಿಯನ್ನು ಭಾರತ 2–1ರಲ್ಲಿ ಗೆದ್ದುಕೊಂಡಿದೆ. ಈ ಮೂಲಕ ಲಂಕಾ ನೆಲದಲ್ಲಿ 22 ವರ್ಷಗಳ ಬಳಿಕ ಟೆಸ್ಟ್‌ ಸರಣಿ ಜಯಿಸಿದ ಹೆಗ್ಗಳಿಕೆಗೆ ಕೊಹ್ಲಿ ಪಡೆ ಪಾತ್ರವಾಗಿದೆ.

1993ರಲ್ಲಿ ಮಹಮ್ಮದ್‌ ಅಜರುದ್ದೀನ್‌ ನಾಯಕತ್ವದ ಭಾರತ ತಂಡ ಲಂಕಾ ವಿರುದ್ಧ  ಟೆಸ್ಟ್‌ ಸರಣಿ ಜಯಿಸಿತ್ತು. ಆದಾದ ನಂತರ ಇಲ್ಲಿಯವರೆಗೆ ಭಾರತ ತಂಡ ಐದು ಬಾರಿ ಲಂಕಾ ಪ್ರವಾಸ ಮಾಡಿದರೂ‌, ಅಲ್ಲಿನ ನೆಲದಲ್ಲಿ ಸರಣಿ ಜಯಿಸಲು ಸಾಧ್ಯವಾಗಿರಲಿಲ್ಲ. ಸದ್ಯ ಭಾರತ ತಂಡದ ಚುಕ್ಕಾಣಿ ಹಿಡಿದಿರುವ ಹೊಸ ನಾಯಕ ವಿರಾಟ್‌ ಕೊಹ್ಲಿ, ಮೊದಲ ಪ್ರಯತ್ನದಲ್ಲೇ ಈ ಐತಿಹಾಸಿಕ ಗೆಲುವನ್ನು ತಂದಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ಭಾರತ 117 ರನ್‌ಗಳ ಐತಿಹಾಸಿಕ ಗೆಲುವು ಪಡೆಯಿತು. 

ಎರಡನೆಯ ಇನಿಂಗ್ಸ್‌ನಲ್ಲಿ 386 ರನ್‌ಗಳ ಗೆಲುವಿನ ಗುರಿ ಬೆನ್ನೆಟ್ಟಿದ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳನ್ನು ಭಾರತದ ವೇಗಿಗಳು 268 ರನ್‌ಗಳಿಗೆ ಕಟ್ಟಿ ಹಾಕಿದರು. ನಾಯಕ ಏಂಜೆಲೊ ಮ್ಯಾಥ್ಯೂಸ್‌ ಶತಕ (110), ಕುಶಾಲ್‌ ಪೆರೇರಾ 70 ರನ್‌  ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಿಲ್ಲ. ಇಶಾಂತ್‌ ಶರ್ಮಾ 3 ಮತ್ತು ರವಿಚಂದ್ರನ್‌ ಅಶ್ವಿನ್‌ 4 ವಿಕೆಟ್‌ ಪಡೆದು ಮಿಂಚಿದರು.

2011ರಲ್ಲಿ ವೆಸ್ಟ್‌ ಇಂಡೀಸ್‌ ಸರಣಿಯ ನಂತರ, ಭಾರತಕ್ಕೆ ವಿದೇಶಿ ನೆಲದಲ್ಲಿ ಲಭಿಸುತ್ತಿರುವ ಮೊದಲ ಟೆಸ್ಟ್‌ ಸರಣಿ ಗೆಲುವು ಇದಾಗಿದೆ.   1973ರಲ್ಲಿ ಇಂಗ್ಲೆಂಡ್‌ ವಿರುದ್ಧ, ಮತ್ತು 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ವಿದೇಶಿ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದಿತ್ತು.

ಸ್ಕೋರ್‌: ಭಾರತ ಮೊದಲ ಮತ್ತು ಎರಡನೆಯ ಇನಿಂಗ್ಸ್‌  312/274
ಲಂಕಾ ಮೊದಲ ಮತ್ತು ಎರಡನೆಯ ಇನಿಂಗ್ಸ್‌ 201/268

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.