ADVERTISEMENT

ಅರ್ಹತಾ ಸುತ್ತಿನಲ್ಲಿ ಸೋತ ಕಶ್ಯಪ್‌

ಭಾರತದ ಸ್ಪರ್ಧಿಗಳಿಗೆ ನಿರಾಸೆ

ಪಿಟಿಐ
Published 16 ಜನವರಿ 2018, 19:49 IST
Last Updated 16 ಜನವರಿ 2018, 19:49 IST
ಅರ್ಹತಾ ಸುತ್ತಿನಲ್ಲಿ ಸೋತ ಕಶ್ಯಪ್‌
ಅರ್ಹತಾ ಸುತ್ತಿನಲ್ಲಿ ಸೋತ ಕಶ್ಯಪ್‌   

ಕ್ವಾಲಾಲಂಪುರ: ಭಾರತದ ಪರುಪಳ್ಳಿ ಕಶ್ಯಪ್‌, ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಅರ್ಹತಾ ಹಂತದಲ್ಲಿ ಮುಗ್ಗರಿಸಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಕಶ್ಯಪ್‌ 14–21, 17–21ರ ನೇರ ಗೇಮ್‌ಗಳಿಂದ ಥಾಯ್ಲೆಂಡ್‌ನ ಕೆಂಟಾಫೊನ್‌ ವಾಂಗ್‌ಚಾರೊಯೆನ್‌ ವಿರುದ್ಧ ಸೋತರು. ಭಾರತದ ಆಟಗಾರ ಎರಡೂ ಗೇಮ್‌ಗಳಲ್ಲೂ ಪರಿಣಾಮಕಾರಿ ಆಟ ಆಡಲಿಲ್ಲ.

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸವಾಲು ಎತ್ತಿಹಿಡಿದಿದ್ದ ಪ್ರಣವ್‌ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಮೊದಲ ಸುತ್ತಿನಲ್ಲಿ ನಿರಾಶರಾದರು.

ADVERTISEMENT

ಭಾರತದ ಜೋಡಿ 18–21, 17–21ರಲ್ಲಿ ಹಾಂಕಾಂಗ್‌ನ ಏಳನೇ ಶ್ರೇಯಾಂಕಿತ ಜೋಡಿ ಲೀ ಚುನ್‌ ಹೀ ರೆಗಿನಾಲ್ಡ್‌ ಮತ್ತು ಚಾವು ಹೊಯಿ ವಾಹಟೊ ವಿರುದ್ಧ ಮಣಿಯಿತು.

ಭಾರತದ ಪ್ರಜಕ್ತಾ ಸಾವಂತ್‌ ಮತ್ತು ಮಲೇಷ್ಯಾದ ಯೋಗೇಂದ್ರನ್‌ ಕೃಷ್ಣನ್‌ ಅವರಿಗೆ ಮಿಶ್ರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ‘ಬೈ’ ಸಿಕ್ಕಿತು. ಆಸ್ಟ್ರೇಲಿಯಾದ ಸಾವನ್‌ ಸೆರಾಸಿಂಘೆ ಮತ್ತು ಸೆತ್ಯಾನ ಮಪಾಸ, ಪಂದ್ಯದಿಂದ ಹಿಂದೆ ಸರಿದ ಕಾರಣ, ಪ್ರಜಕ್ತಾ ಮತ್ತು ಯೋಗೇಂದ್ರನ್‌ ಅವರನ್ನು ವಿಜಯಿ ಎಂದು ಘೋಷಿಸಲಾಯಿತು.

ಪುರುಷರ ಸಿಂಗಲ್ಸ್‌ ವಿಭಾಗದ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಶುಭಂಕರ್‌ 21–11, 11–21, 9–21ರಲ್ಲಿ ಡೆನ್ಮಾರ್ಕ್‌ನ ಕಿಮ್‌ ಬ್ರುನ್‌ ವಿರುದ್ಧ  ಸೋತರು.

ಮಹಿಳೆಯರ ಡಬಲ್ಸ್‌ ವಿಭಾಗದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅ‍ಪರ್ಣಾ ಬಾಲನ್‌ ಮತ್ತು ಕೆ.ಪಿ.ಶ್ರುತಿ 12–21, 21–18, 15–21ರಲ್ಲಿ ಸಿಂಗ‍ಪುರದ ಒಂಗ್‌ ರೆನ್‌ ನೆ ಮತ್ತು ವಾಂಗ್‌ ಜಿಯಾ ಯಿಂಗ್‌ ಕ್ರಿಸ್ಟಲ್‌ ವಿರುದ್ಧ ಪರಾಭವಗೊಂಡರು.

ಇನ್ನೊಂದು ಪಂದ್ಯದಲ್ಲಿ ಸನ್ಯೋಗಿತಾ ಘೋರ್ಪಡೆ ಮತ್ತು ಪ್ರಜಕ್ತಾ ಸಾವಂತ್‌ 20–22, 18–21ರಲ್ಲಿ ಮಲೇಷ್ಯಾದ ಚಿಯೆವ್‌ ಸಿಯೆನ್‌ ಲಿಮ್‌ ಮತ್ತು ಜೆನ್‌ ಯಾಪ್‌ ವಿರುದ್ಧ ಸೋತರು. ಬುಧವಾರ ನಡೆಯುವ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಬಿ.ಸಾಯಿಪ್ರಣೀತ್‌, ಕೆಂಟಾಫೊನ್‌ ವಾಂಗ್‌ಚಾರೊಯೆನ್‌ ವಿರುದ್ಧ ಆಡಲಿದ್ದಾರೆ.

ಮಹಿಳೆಯರ ಡಬಲ್ಸ್‌ನಲ್ಲಿ ಕರ್ನಾಟಕದ ಅಶ್ವಿನಿ ‍ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರು ಜರ್ಮನಿಯ ಜೊಹಾನ್ನಾ ಗೊಲಿಸ್‌ಜ್ವೆಸ್ಕಿ ಮತ್ತು ಕಯೆಪ್ಲೀನ್‌ ವಿರುದ್ಧ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.