ADVERTISEMENT

ಲಿನ್‌ ಡಾನ್‌ಗೆ ಆಘಾತ ನೀಡಿದ ಪ್ರಣಯ್‌

ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಸಮೀರ್‌ಗೆ ಜಯ

ಪಿಟಿಐ
Published 3 ಜುಲೈ 2018, 19:39 IST
Last Updated 3 ಜುಲೈ 2018, 19:39 IST
ಎಚ್‌.ಎಸ್‌.ಪ್ರಣಯ್‌ ಷಟಲ್‌ ಹಿಂತಿರುಗಿಸಲು ಮುಂದಾದರು ಎಎಫ್‌ಪಿ ಚಿತ್ರ
ಎಚ್‌.ಎಸ್‌.ಪ್ರಣಯ್‌ ಷಟಲ್‌ ಹಿಂತಿರುಗಿಸಲು ಮುಂದಾದರು ಎಎಫ್‌ಪಿ ಚಿತ್ರ   

ಜಕಾರ್ತ: ಭಾರತದ ಎಚ್‌.ಎಸ್‌.ಪ್ರಣಯ್ ಅವರು ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಚೀನಾದ ಲಿನ್‌ ಡಾನ್‌ಗೆ ಆಘಾತ ನೀಡಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಪ್ರಣಯ್‌ 21–15, 21–9ರ ನೇರ ಗೇಮ್‌ಗಳಿಂದ ಎದುರಾಳಿಯ ಸವಾಲು ಮೀರಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿರುವ ಪ್ರಣಯ್‌ ಆರಂಭಿಕ ಗೇಮ್‌ನ ಶುರುವಿನಿಂದಲೇ ಎಂಟನೇ ಶ್ರೇಯಾಂಕಿತ ಆಟಗಾರ ಲಿನ್‌ಗೆ ಪ್ರಬಲ ಪೈಪೋಟಿ ನೀಡಿದರು. ಹೀಗಾಗಿ 15–15ರ ಸಮಬಲ ಕಂಡುಬಂತು. ನಂತರ ಭಾರತದ ಆಟಗಾರ ಮೋಡಿ ಮಾಡಿದರು. ಚುರುಕಿನ ಸರ್ವ್‌ ಮತ್ತು ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳನ್ನು ಸಿಡಿಸಿ ಎದುರಾಳಿಯನ್ನು ಕಂಗೆಡಿಸಿದರು.

ADVERTISEMENT

ಲಿನ್‌ ಡಾನ್‌ ಎರಡನೇ ಗೇಮ್‌ನಲ್ಲಿ ಲಯ ಕಂಡುಕೊಳ್ಳಬಹುದು ಎಂಬ ನಿರೀಕ್ಷೆಯೂ ಹುಸಿಯಾಯಿತು. ಚೀನಾದ ಆಟಗಾರನ ತಂತ್ರಗಳಿಗೆ ಪ್ರತಿತಂತ್ರ ಹೆಣೆದ ಪ್ರಣಯ್‌ 9–9ರಲ್ಲಿ ಸಮಬಲ ಮಾಡಿಕೊಂಡರು. ವಿರಾಮದ ನಂತರವೂ ಪ್ರಾಬಲ್ಯ ಮೆರೆದ ಅವರು ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

ಸಮೀರ್‌ಗೆ ಜಯ: ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ಮತ್ತೊಬ್ಬ ಆಟಗಾರ ಸಮೀರ್‌ ವರ್ಮಾ ಕೂಡಾ ಶುಭಾರಂಭ ಮಾಡಿದರು.

ಮೊದಲ ಸುತ್ತಿನ ಹೋರಾಟದಲ್ಲಿ ಸಮೀರ್‌ 21–9, 12–21, 22–20ರಲ್ಲಿ ಡೆನ್ಮಾರ್ಕ್‌ನ ರಸ್ಮಸ್‌ ಗೆಮ್ಕೆ ವಿರುದ್ಧ ಗೆದ್ದರು.

ಮೊದಲ ಗೇಮ್‌ನಲ್ಲಿ ಸೋತ ರಸ್ಮಸ್‌ ಎರಡನೇ ಗೇಮ್‌ನಲ್ಲಿ ಗೆದ್ದು 1–1ರಲ್ಲಿ ಸಮಬಲ ಮಾಡಿಕೊಂಡರು.ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲಿ ಸಮೀರ್‌ ಮೋಡಿ ಮಾಡಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಸೈನಾ ನೆಹ್ವಾಲ್‌ ಅವರು 21–12, 21–12ರಲ್ಲಿ ದಿನಾರ್‌ ದ್ಯಾಹ್‌ ಎದುರು ಹೆದ್ದರು.

ಮಹಿಳೆಯರ ಡಬಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಜಕ್ಕಂಪುಡಿ ಮೇಘನಾ ಮತ್ತು ಪೂರ್ವಿಶಾ ಎಸ್‌.ರಾಮ್‌ 11–21, 18–21ರಲ್ಲಿ ಇಂಡೊನೇಷ್ಯಾದ ಅಗತಾ ಇಮಾನುಯೆಲ್‌ ಮತ್ತು ಸಿತಿ ಫಾಡಿಯಾಸಿಲ್ವಾ ರಾಮದಾಂತಿ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.