ADVERTISEMENT

ಏಷ್ಯಾಡ್‌ ಶೂಟಿಂಗ್‌: ಬೆಳ್ಳಿ ಪದಕ ಗೆದ್ದ 9ನೇ ತರಗತಿ ವಿದ್ಯಾರ್ಥಿ ವಿಹಾನ್‌

ಶೂಟಿಂಗ್‌: ಪುರುಷರ ಡಬಲ್‌ಟ್ರ್ಯಾಪ್‌ ವಿಭಾಗದಲ್ಲಿ ಸಾಧನೆ: ಶ್ರೇಯಸಿ, ವರ್ಷಾಗೆ ನಿರಾಸೆ

ಏಜೆನ್ಸೀಸ್
Published 23 ಆಗಸ್ಟ್ 2018, 18:58 IST
Last Updated 23 ಆಗಸ್ಟ್ 2018, 18:58 IST
ಶಾರ್ದೂಲ್‌ ವಿಹಾನ್‌
ಶಾರ್ದೂಲ್‌ ವಿಹಾನ್‌   

ಜಕಾರ್ತ: ಒಂಬತ್ತನೆ ತರಗತಿ ವಿದ್ಯಾರ್ಥಿ ಶಾರ್ದೂಲ್‌ ವಿಹಾನ್‌, ಗುರುವಾರ ಜಕಾಬಾರಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ಹೊಸ ಭಾಷ್ಯ ಬರೆದರು.

ಪುರುಷರ ಡಬಲ್‌ ಟ್ರ್ಯಾಪ್‌ ಶೂಟಿಂಗ್‌ನಲ್ಲಿ 15 ವರ್ಷ ವಯಸ್ಸಿನ ವಿಹಾನ್‌ ಬೆಳ್ಳಿಯ ಪದಕ ಗೆದ್ದು ಏಷ್ಯನ್‌ ಕ್ರೀಡಾಕೂಟದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದರು.

ಫೈನಲ್‌ನಲ್ಲಿ ಭಾರತದ ಶೂಟರ್‌ 73 ಪಾಯಿಂಟ್ಸ್‌ ಕಲೆಹಾಕಿದರು. ದಕ್ಷಿಣ ಕೊರಿಯಾದ ಶಿನ್‌ ಹ್ಯೂನ್‌ ವೂ, ಈ ವಿಭಾಗದ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 34 ವರ್ಷ ವಯಸ್ಸಿನ ಶಿನ್‌, 74 ಪಾಯಿಂಟ್ಸ್‌ ಗಳಿಸಿದರು.

ADVERTISEMENT

ಕತಾರ್‌ನ ಅಲ್‌ ಮಾರಿ ಹಮದ್‌ ಅಲಿ (53 ಪಾ.) ಕಂಚಿನ ಪದಕ ಜಯಿಸಿದರು.

ವಿಹಾನ್‌, ಮೂರು ವರ್ಷಗಳ ಹಿಂದೆ ಶೂಟಿಂಗ್‌ಗೆ ಪದಾರ್ಪಣೆ ಮಾಡಿದ್ದರು. ಫೈನಲ್‌ನಲ್ಲಿ ಅನುಭವಿ ಮತ್ತು ಹಿರಿಯ ಶೂಟರ್‌ಗಳಿದ್ದರೂ ಅವರು ಅಂಜಲಿಲ್ಲ.

ಮೊದಲ ಶಾಟ್‌ನಲ್ಲಿ ಕೃತಕ ಹಕ್ಕಿಯನ್ನು ಹೊಡೆದುರುಳಿಸಲು ವಿಫಲರಾದ ವಿಹಾನ್‌, ನಂತರ ನಿಖರ ಗುರಿ ಹಿಡಿದು ಗಮನ ಸೆಳೆದರು. 20 ಶಾಟ್ಸ್‌ಗಳ ನಂತರ ಭಾರತದ ಶೂಟರ್‌, ಕೊರಿಯಾದ ಶಿನ್‌ ಜೊತೆ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದರು. 21ನೆ ಶಾಟ್ಸ್‌ನಲ್ಲಿ ಇಬ್ಬರೂ ಗುರಿ ತಪ್ಪಿದರು.

30 ಶಾಟ್ಸ್‌ಗಳ ನಂತರ ಉಭಯ ಶೂಟರ್‌ಗಳ ಖಾತೆಯಲ್ಲಿ ತಲಾ 28 ಹಿಟ್ಸ್‌ಗಳಿದ್ದವು. ಈ ಹಂತದಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಖಾಲೆದ್‌ ಅಲಕಾಬಿ ಸ್ಪರ್ಧೆಯಿಂದ ಹೊರಬಿದ್ದರು.

ನಂತರವೂ ವಿಹಾನ್‌ ಮತ್ತು ಶಿನ್‌ ಅವರ ಜಿದ್ದಾಜಿದ್ದಿ ಮುಂದುವರಿದಿತ್ತು. 40 ಶಾಟ್ಸ್‌ಗಳ ನಂತರ ಇಬ್ಬರೂ 37 ಹಿಟ್ಸ್‌ ಹೊಂದಿದ್ದರು. ಬಳಿಕ ಶಿನ್‌ ಮೇಲುಗೈ ಸಾಧಿಸಿದರು. 50 ಶಾಟ್ಸ್‌ಗಳ ಬಳಿಕ ವಿಹಾನ್‌ ಎರಡನೆ ಸ್ಥಾನಕ್ಕೆ ಕುಸಿದರು. ಆಗ ಅವರ ಖಾತೆಯಲ್ಲಿ 45 ಪಾಯಿಂಟ್ಸ್‌ ಇದ್ದವು. 47 ಪಾಯಿಂಟ್ಸ್‌ ಕಲೆಹಾಕಿದ್ದ ಶಿನ್‌ ಮುನ್ನಡೆ ಕಂಡರು.

ಅನಂತರವೂ ಉಭಯ ಶೂಟರ್‌ಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿತು. 70 ಶಾಟ್ಸ್‌ಗಳ ಸ್ಪರ್ಧೆ ಮುಗಿದಾಗ ಎರಡು ಪಾಯಿಂಟ್ಸ್‌ನಿಂದ ಹಿಂದಿದ್ದ ವಿಹಾನ್‌, ನಂತರದ ಐದು ಹಿಟ್ಸ್‌ಗಳಲ್ಲಿ ಅಮೋಘ ಸಾಮರ್ಥ್ಯ ತೋರಿದರು. ಈ ಮೂಲಕ ಒಟ್ಟು ಪಾಯಿಂಟ್ಸ್‌ ಅನ್ನು 73ಕ್ಕೆ ಹೆಚ್ಚಿಸಿಕೊಂಡರು.

ಅನುಭವಿ ಶೂಟರ್ ಶಿನ್‌ ಕೂಡಾ ಗುಣಮಟ್ಟದ ಸಾಮರ್ಥ್ಯ ತೋರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಶ್ರೇಯಸಿಗೆ ನಿರಾಸೆ: ಮಹಿಳೆಯರ ಡಬಲ್‌ ಟ್ರ್ಯಾಪ್‌ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಶ್ರೇಯಸಿ ಸಿಂಗ್‌ ಮತ್ತು ವರ್ಷಾ ವರ್ಮನ್‌ ಅವರು ಪದಕ ಗೆಲ್ಲಲು ವಿಫಲರಾದರು.

ಫೈನಲ್‌ನಲ್ಲಿ ಶ್ರೇಯಸಿ 121 ಪಾಯಿಂಟ್ಸ್‌ ಗಳಿಸಿ ಆರನೆ ಸ್ಥಾನಕ್ಕೆ ತೃಪ್ತಿಪಟ್ಟರು. 120 ಪಾಯಿಂಟ್ಸ್‌ ಕಲೆಹಾಕಿದ ವರ್ಷಾ ಏಳನೆ ಸ್ಥಾನದೊಂದಿಗೆ ಹೋರಾಟ ಮುಗಿಸಿದರು.

ಚೀನಾದ ಲಿ ಕ್ವಿಂಗ್‌ನಿಯಾನ್‌ ಏಷ್ಯನ್‌ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಅವರು 136 ಪಾಯಿಂಟ್ಸ್‌ ಸಂಗ್ರಹಿಸಿದರು.

ಚೀನಾದವರೇ ಆದ ಬಾಯ್‌ ಯಿಟಿಂಗ್‌ (134 ಪಾ.) ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರು. ಕಜಕಸ್ತಾನದ ಮರಿಯಾ ದಿಮಿಟ್ರಿಯೆಂಕೊ (125 ಪಾ.) ಕಂಚಿನ ಪದಕ ಜಯಿಸಿದರು.

**

ವಿಹಾನ್‌ ಪರಿಚಯ

ಜನನ: 2003

ಸ್ಥಳ: ಮೀರಟ್‌, ಉತ್ತರ ಪ್ರದೇಶ.

ವೃತ್ತಿಪರ ಶೂಟಿಂಗ್‌ಗೆ ಪದಾರ್ಪಣೆ: 2015

ಜೂನಿಯರ್‌ ವಿಭಾಗದಲ್ಲಿ ಹೆಜ್ಜೆ ಗುರುತು

ಮೂರು ವರ್ಷಗಳ ಹಿಂದೆ ವೃತ್ತಿಪರ ಶೂಟಿಂಗ್‌ಗೆ ಪದಾರ್ಪಣೆ ಮಾಡಿದ್ದ ವಿಹಾನ್‌, ಹೋದ ವರ್ಷ ನವದೆಹಲಿಯಲ್ಲಿ ನಡೆದಿದ್ದ ರಾಷ್ಟ್ರೀಯ ಶಾಟ್‌ಗನ್‌ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಜಯಿಸಿ ಗಮನ ಸೆಳೆದಿದ್ದರು.

ಒಲಿಂಪಿಯನ್‌ ಶೂಟರ್‌ ಅನ್ವರ್‌ ಸುಲ್ತಾನ್‌ ಅವರ ಬಳಿ ತರಬೇತಿ ಪಡೆಯುತ್ತಿರುವ ಅವರು ಹೋದ ವರ್ಷ ಮಾಸ್ಕೊ ದಲ್ಲಿ ಆಯೋಜನೆಯಾಗಿದ್ದ ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರನೆ ಸ್ಥಾನ ಗಳಿಸಿ ಭರವಸೆ ಮೂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.