ADVERTISEMENT

ಅಥ್ಲೆಟಿಕ್ಸ್‌ನಲ್ಲಿ ಹೊಸ ಕನಸು...

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2017, 19:30 IST
Last Updated 6 ಆಗಸ್ಟ್ 2017, 19:30 IST
ಅಥ್ಲೆಟಿಕ್ಸ್‌ನಲ್ಲಿ ಹೊಸ ಕನಸು...
ಅಥ್ಲೆಟಿಕ್ಸ್‌ನಲ್ಲಿ ಹೊಸ ಕನಸು...   

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಶುರುವಾಗಿ ಮೂರು ದಶಕಗಳು ಉರುಳಿವೆ. ಈ ಕೂಟದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಅಲ್ಲಿ ಅಮೆರಿಕ, ರಷ್ಯಾ, ಕೆನ್ಯಾ, ಜಮೈಕಾ ಮತ್ತು ಜರ್ಮನಿ ದೇಶಗಳ ಹೆಸರುಗಳು ರಾರಾಜಿಸುತ್ತವೆ. ಅಥ್ಲೆಟಿಕ್ಸ್‌ ಜಗತ್ತಿನ ದೈತ್ಯ ಶಕ್ತಿಗಳೆಂದೇ ಬಿಂಬಿತವಾಗಿರುವ ಈ ರಾಷ್ಟ್ರಗಳ ಸ್ಪರ್ಧಿಗಳು ಪ್ರತಿ ಕೂಟದಲ್ಲೂ ಪದಕಗಳ ಬೇಟೆಯಾಡಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.

ಪ್ರತಿಷ್ಠಿತ ಕೂಟದಲ್ಲಿ ಭಾರತ ಗೆದ್ದಿರುವುದು ಒಂದೇ ಪದಕ. 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ  ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಚೊಚ್ಚಲ ಪದಕದ ಸಾಧನೆ ಅರಳಿತ್ತು. ಮಹಿಳೆಯರ ಲಾಂಗ್‌ ಜಂಪ್‌ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಅಂಜು ಬಾಬಿ ಜಾರ್ಜ್‌ ಅವರು ಕಂಚು ಗೆದ್ದು ಚಾರಿತ್ರಿಕ ಸಾಧನೆಗೆ ಭಾಜನರಾಗಿದ್ದರು. ಅದಾಗಿ 14 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಆರು ಕೂಟಗಳು ನಡೆದಿವೆ. ಆದರೆ ಭಾರತದ ಯಾವ ಕ್ರೀಡಾಪಟುವೂ ಪದಕದ ಹತ್ತಿರಕ್ಕೂ ಸುಳಿದಿಲ್ಲ.

ಈ ಬಾರಿ ಲಂಡನ್‌ನಲ್ಲಿ ಚಾಂಪಿಯನ್‌ಷಿಪ್‌ ನಡೆಯುತ್ತಿದೆ. 25 ಮಂದಿ ಅಥ್ಲೀಟ್‌ಗಳು ಆಂಗ್ಲರ ನಾಡಿನ ಟ್ರ್ಯಾಕ್‌ ಮತ್ತು ಫೀಲ್ಡ್‌ಗಳಲ್ಲಿ ದೇಶದ ಸವಾಲು ಎತ್ತಿಹಿಡಿಯಲಿದ್ದಾರೆ. ಹೀಗಾಗಿ ಹೊಸ ಕನಸು ಚಿಗುರಿದೆ. ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋ‍ಪ್ರಾ, ಅನು ರಾಣಿ, ಕರ್ನಾಟಕದ ಎಂ.ಆರ್‌. ಪೂವಮ್ಮ, ನಿರ್ಮಲಾ ಶೆರಾನ್‌, ಮಹಮ್ಮದ್‌ ಅನಾಸ್‌ ಅವರಂತಹ ಪ್ರತಿಭೆಗಳ ಮೇಲೆ ದೊಡ್ಡ ಮಟ್ಟದ ಭರವಸೆ ಇದೆ.

ADVERTISEMENT

19 ವರ್ಷದ ನೀರಜ್‌, ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಈ ಬಾರಿ ದೇಶಕ್ಕೆ ಪದಕ ಗೆದ್ದುಕೊಡುವ ನಿರೀಕ್ಷೆ ಮೂಡಿಸಿದ್ದಾರೆ.

ಎಳವೆಯಲ್ಲಿಯೇ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಎತ್ತರದ ಸಾಧನೆ ಮಾಡುವ ಮಹಾದಾಸೆ ಹೊತ್ತಿದ್ದ ಅವರು ಹೋದ ವರ್ಷ ಪೋಲೆಂಡ್‌ನಲ್ಲಿ ನಡೆದಿದ್ದ  ವಿಶ್ವ  ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ 86.48 ಮೀಟರ್ಸ್‌ ಸಾಮರ್ಥ್ಯ ತೋರಿ ದಾಖಲೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದರು.

ಈ ವರ್ಷ ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನದ ಬೇಟೆಯಾಡಿದ್ದ ಹರಿಯಾಣದ ಪ್ರತಿಭೆ ನೀರಜ್‌, ವಿಶ್ವ ಕೂಟದಲ್ಲೂ ಮೋಡಿ ಮಾಡುವ ಹಂಬಲ ಹೊತ್ತಿದ್ದಾರೆ. 2015ರಲ್ಲಿ  ಬೀಜಿಂಗ್‌ನಲ್ಲಿ ನಡೆದಿದ್ದ ಕೂಟದಲ್ಲಿ ಫಿನ್ಲೆಂಡ್‌ನ ಟೆರೊ ಪಿಟ್ಕಾಮಕಿ 87.64 ಮೀಟರ್ಸ್‌ ದೂರ ಜಾವೆಲಿನ್‌ ಎಸೆದು ಕಂಚಿಗೆ ಕೊರಳೊಡ್ಡಿದರು. ಹೀಗಾಗಿ ನೀರಜ್‌, 88 ಮೀಟರ್ಸ್‌ಗೂ ಹೆಚ್ಚಿನ ಸಾಮರ್ಥ್ಯ ತೋರಬೇಕಾಗಿದೆ.

28 ವರ್ಷದ ದೇವಿಂದರ್‌ ಸಿಂಗ್‌ ಖಾಂಗ್‌ ಅವರೂ ಜಾವೆಲಿನ್‌ ಥ್ರೋನಲ್ಲಿ ದೇಶದ ಸವಾಲು ಎತ್ತಿ ಹಿಡಿಯಲಿದ್ದಾರೆ. ವಿಶ್ವ ಕೂಟದ ಒಂದೇ ವಿಭಾಗದಲ್ಲಿ ಭಾರತದ ಇಬ್ಬರು ಕಣದಲ್ಲಿರುವುದು ಇದೇ ಮೊದಲು.

ಮಹಿಳಾ ವಿಭಾಗದ ಜಾವೆಲಿನ್‌ ಥ್ರೋ ಸ್ಪರ್ಧಿ ಅನು ರಾಣಿ ಅವರ ಮೇಲೂ ಬೆಟ್ಟದಷ್ಟು ನಿರೀಕ್ಷೆ ಇಡಲಾಗಿದೆ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 27ನೇ ಸ್ಥಾನ ಹೊಂದಿರುವ ಅನು ಅವರ ಪದಕದ ಹಾದಿ ಸುಲಭದ್ದಂತೂ ಅಲ್ಲ. ಅವರು ಅಗ್ರ ಹತ್ತರೊಳಗೆ ಸ್ಥಾನ ಗಳಿಸಿದರೂ ಅದೊಂದು ಮಹೋನ್ನತ ಸಾಧನೆಯಾಗಲಿದೆ.

400 ಮೀಟರ್ಸ್‌ ಓಟದ ವಿಭಾಗದಲ್ಲಿ ಕಣದಲ್ಲಿರುವ 22 ವರ್ಷದ ನಿರ್ಮಲಾ ಶೆರಾನ್‌ ಮತ್ತು ಮಹಮ್ಮದ್‌ ಅನಾಸ್‌ ಅವರ ಪದಕದ ಹಾದಿಯೂ ಕಠಿಣವೇ. 51.28 ಸೆಕೆಂಡುಗಳಲ್ಲಿ ಗುರಿ ಮುಟ್ಟಿರುವುದು ನಿರ್ಮಲಾ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಲಂಡನ್‌ ಕೂಟದ 400 ಮೀಟರ್ಸ್‌ ಸ್ಪರ್ಧಿಗಳ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿರುವ ಅವರು ಪದಕ ಗೆಲ್ಲದಿದ್ದರೂ ಮಂಜೀತ್‌ ಕೌರ್‌ ಅವರ ಹೆಸರಿನಲ್ಲಿರುವ (51.05ಸೆಕೆಂಡು) ರಾಷ್ಟ್ರೀಯ ದಾಖಲೆಯನ್ನು ಮೀರಿ ನಿಲ್ಲಬಹುದೆಂಬ ನಿರೀಕ್ಷೆ ಇದೆ.

ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ಗೆ  ಅಡಿ ಇಟ್ಟ ವರ್ಷವೇ ಮಿಂಚಿನ ಸಾಮರ್ಥ್ಯ ತೋರಿ ರಾಷ್ಟ್ರೀಯ ದಾಖಲೆ ಬರೆದಿದ್ದ 22 ವರ್ಷದ ಪ್ರತಿಭಾವಂತ ಓಟಗಾರ ಅನಾಸ್‌ ತಮ್ಮದೇ ಹೆಸರಿನಲ್ಲಿರುವ ದಾಖಲೆಯನ್ನು (45.32ಸೆ) ಉತ್ತಮ ಪಡಿಸಿಕೊಳ್ಳಲು ಶ್ರಮಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.