ADVERTISEMENT

ಅಪ್ಪನ ಆತ್ಮವಿಶ್ವಾಸ; ಮಗನ ಛಲ

ಗಿರೀಶದೊಡ್ಡಮನಿ
Published 10 ಸೆಪ್ಟೆಂಬರ್ 2017, 19:30 IST
Last Updated 10 ಸೆಪ್ಟೆಂಬರ್ 2017, 19:30 IST
ಕೆ.ಆರ್. ಶಿವರಾಮೇಗೌಡರು
ಕೆ.ಆರ್. ಶಿವರಾಮೇಗೌಡರು   

‘ಆ ದಿನ ಇಂದಿಗೂ ನೆನಪಿದೆ. ತೇಜಕುಮಾರ್‌ನನ್ನು ಕ್ರಿಕೆಟ್‌ ಆಟ ಬಿಡಿಸಿ ಚೆಸ್‌ ಬೋರ್ಡ್‌ ಮುಂದೆ ಕೂರಿಸಿದ್ದೆ. ಇಂದು ನನ್ನ ಕನಸು ಈಡೇರಿದೆ. ನನ್ನ ಮಗನ ಶ್ರಮ ಹಾಗೂ ತಾಳ್ಮೆಗೆ ತಕ್ಕ ಗೌರವ ಲಭಿಸಿದೆ’– ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಗಳಿಸಿದ್ದ ಕರ್ನಾಟಕದ ಮೊದಲ ಚೆಸ್‌ಪಟು ಎಂ.ಎಸ್‌. ತೇಜಕುಮಾರ್ ಅವರ ತಂದೆ ಕೆ.ಆರ್. ಶಿವರಾಮೇಗೌಡರು ಈ ಮಾತುಗಳನ್ನು ಹೇಳುವಾಗ ಗದ್ಗದಿತರಾಗಿದ್ದರು.

ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ತೇಜಕುಮಾರ್ ಸಾಧನೆಯ ಪಯಣವನ್ನು ‘ಪ್ರಜಾವಾಣಿ’ಯ ಮುಂದೆ ಬಿಚ್ಚಿಟ್ಟರು. ತೇಜ್‌ಕುಮಾರ್‌ಗೆ ಚೆಸ್ ಪಾಠ ಹೇಳಿಕೊಟ್ಟ ಮೊದಲ ಗುರು ಕೂಡ ಅವರೇ. ತಮಗೆ ಗೊತ್ತಿದ್ದ ಅಲ್ಪಸ್ವಲ್ಪ ವಿದ್ಯೆಯನ್ನು ಮಗನಿಗೆ ಕಲಿಸಿಕೊಟ್ಟರು.

‘ಮೂರುವರೆ ದಶಕಗಳ ಹಿಂದೆ ನಾನು ಸ್ವಲ್ಪ ಚೆಸ್ ಕಲಿತಿದ್ದೆ. ಆದರೆ ಅದರಲ್ಲಿ ಅಪಾರ ಆಸಕ್ತಿ ಇತ್ತು. ಮೈಸೂರಿನಲ್ಲಿ ಕೋಳಿ ಫಾರ್ಮ್‌ ತೆರೆಯಲು ತೆಗೆದುಕೊಂಡಿದ್ದ ಜಮೀನು ಸರ್ಕಾರದ ಯೋಜನೆಗಾಗಿ ಕಳೆದುಕೊಂಡೆ. ಆ ನಂತರ ಕೆಲಸವೂ ಇಲ್ಲದೇ, ಜಮೀನು ಇಲ್ಲದೇ ಸಾಕಷ್ಟು ತೊಂದರೆ ಅನುಭವಿಸಿದ್ದೆ. ಆ ನಂತರ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡತೊಡಗಿದೆ. ಇಬ್ಬರೂ ಮಕ್ಕಳು ಬುದ್ಧಿವಂತರಾಗಬೇಕು. ಉತ್ತಮ ಸ್ಥಿತಿವಂತರಾಗಿ ಜೀವನ ನಡೆಸಬೇಕು. ಒಳ್ಳೆಯ ಹೆಸರು ಗಳಿಸಬೇಕು ಎಂಬ ಆಸೆ ಇತ್ತು. ಆಗಲೇ ಅವರಿಗೆ ಚೆಸ್‌ ಕಲಿಸಲು ನಿರ್ಧರಿಸಿದೆ. ಆದ್ದರಿಂದ ಮಕ್ಕಳಿಬ್ಬರನ್ನೂ ಚೆಸ್‌ ಆಡಲು ಹಚ್ಚಿದೆ’ ಎಂದು ನೆನಪಿನಂಗಳಕ್ಕೆ ಜಾರಿದರು.

ADVERTISEMENT

‘ತೇಜಕುಮಾರ್ ಆಸಕ್ತಿ ಗಮನಿಸಿದ್ದೆ. ತರಬೇತಿಗಾಗಿ ಉಪೇಂದ್ರ ಅವರ ಬಳಿ ಸೇರಿಸಿದೆ. ಒಂದೂವರೆ ತಿಂಗಳಿನ ನಂತರ ಉಪೇಂದ್ರ ಅವರು ನಿಮ್ಮ ಮಗನಿಗೆ ಇನ್ನು ಮುಂದೆ ಹೇಳಿಕೊಡಲು ಸಾಧ್ಯವಿಲ್ಲ. ಕರೆದುಕೊಂಡು ಹೋಗಿಬಿಡಿ ಎಂದಿದ್ದರು. ತೇಜಕುಮಾರ್ ಕಲಿಯಲು ಸಾಧ್ಯವಾಗದಷ್ಟು ದಡ್ಡನೇ ಎಂದು ಆತಂಕದಿಂದ ಪ್ರಶ್ನಿಸಿದ್ದೆ. ಆದಕ್ಕವರು ನಕ್ಕು. ನನಗಿಂತಲೂ ಹೆಚ್ಚಿನ ಕೌಶಲಗಳು ತೇಜ್‌ಕುಮಾರ್‌ಗೆ ಗೊತ್ತಿವೆ. ಉನ್ನತ ದರ್ಜೆಯ ತರಬೇತಿ ಅಗತ್ಯವಿದೆ.

ಚೆನ್ನೈಗೆ ಕರೆದುಕೊಂಡು ಹೋಗಿ ಎಂದರು. ಅಲ್ಲಿ ಒಬ್ಬರ ವಿಳಾಸವನ್ನೂ ಕೊಟ್ಟರು. ಚೆನ್ನೈನಲ್ಲಿ ತರಬೇತಿ ಸೇರಿ ಒಂದೂವರೆ ತಿಂಗಳಿನ ನಂತರ ಓಪನ್ ಟೂರ್ನಿಯೊಂದರಲ್ಲಿ ಮೊದಲ ಪ್ರಶಸ್ತಿ ಪಡೆದ ತೇಜ್‌ಕುಮಾರ್  ಹಿಂತಿರುಗಿ ನೋಡಲಿಲ್ಲ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಜಯ ಒಲಿಯಿತು. ರಾಷ್ಟ್ರೀಯ ಫಿಡೆ ರೇಟಿಂಗ್‌ ಚಾಂಪಿಯನ್‌ಷಿಪ್‌ಗಳಲ್ಲಿ ಗೆದ್ದ ತೇಜ್ ಪಾಯಿಂಟ್‌ಗಳನ್ನು ಕಲೆಹಾಕಿದರು.

2008ರಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್‌ (ಐಎಂ) ದರ್ಜೆಗೆ ಏರಿದರು. ನಂತರ ನೈರುತ್ಯ ರೈಲ್ವೆಯಲ್ಲಿ ಉದ್ಯೋಗ ಲಭಿಸಿದಾಗ ಆರ್ಥಿಕವಾಗಿ ಸುಧಾರಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಶಿವರಾಮೇಗೌಡ ಆ ದಿನಗಳನ್ನು ಮೆಲುಕು ಹಾಕಿದರು.

‘2009ರಲ್ಲಿ ವಿದೇಶದಲ್ಲಿ ಟೂರ್ನಿ ಆಡಲು ತೆರಳಬೇಕಿತ್ತು. ಆದರೆ ವೀಸಾ ದೊರೆಯಲಿಲ್ಲ. ಆರ್ಥಿಕ ಸಂಕಷ್ಟವೂ ಎದುರಾಗಿತ್ತು. ಆದರೆ ತೇಜ್ ತನ್ನ ಛಲ ಬಿಡಲಿಲ್ಲ. ಗ್ರ್ಯಾಂಡ್‌ಮಾಸ್ಟರ್‌ ಆಗುವ ಕನಸಿಗೆ ನೀರೆದರು. ಅದೃಷ್ಟವೂ ಅವರಿಗೆ ಒಲಿದಿತ್ತು. ಮೈಸೂರಿನ ಕ್ರೀಡಾ ಪ್ರೇಮಿ ಮುರಳೀಧರ್ ಮತ್ತು ಅಮೆರಿಕದಲ್ಲಿ ನೆಲೆಸಿರುವ ಮೈಸೂರಿನವರಾದ ಯಶಸ್ವಿ ಶಂಕರ್ ಅವರು ತಮ್ಮ ಸಂಸ್ಥೆಯ ಮೂಲಕ ಬೆಂಬಲಕ್ಕೆ ನಿಂತರು. ಅವರೊಂದಿಗೆ ಇನ್ನೂ ಹಲವಾರು ಜನರ ಪ್ರೋತ್ಸಾಹದ ನೆರವಿನ ಫಲವಾಗಿ ತೇಜ್‌ಕುಮಾರ್ ಸಾಧನೆ ಮಾಡಿದ್ದಾರೆ.

ನನ್ನ ಪತ್ನಿ ಲಕ್ಷ್ಮಮ್ಮ, ಸೊಸೆ ಜಯಶ್ರೀ ಅವರ ಬೆಂಬಲವೂ ಮಹತ್ವದ್ದಾಗಿತ್ತು. ಇತ್ತೀಚೆಗಷ್ಟೇ ತೇಜ್‌ ಗಂಡುಮಗುವಿನ ತಂದೆಯಾದ ಸಂಭ್ರಮ ಮನೆಯಲ್ಲಿದೆ. ಈಗ ನಮ್ಮ ಖುಷಿ ಇಮ್ಮಡಿಸಿದೆ. ನಾನು ಗ್ರ್ಯಾಂಡ್‌ಫಾದರ್‌ (ಅಜ್ಜ) ಆದೆ, ನನ್ನ ಮಗ ಗ್ರ್ಯಾಂಡ್‌ಮಾಸ್ಟರ್‌ ಆಗಿದ್ದಾನೆ’ ಎಂದು ನಗುವಿನೊಂದಿಗೆ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.