ADVERTISEMENT

ಆನ್‌ಲೈನ್‌ನಲ್ಲಿ ಮಾರುಕಟ್ಟೆ ಪಾಠ

ಸುಮಲತಾ ಎನ್, ಪದ್ಮನಾಭ ಭಟ್ಟ
Published 15 ಫೆಬ್ರುವರಿ 2015, 19:30 IST
Last Updated 15 ಫೆಬ್ರುವರಿ 2015, 19:30 IST

ಶೇರು ಮಾರುಕಟ್ಟೆ ಬಗ್ಗೆ ವಿಸ್ತಾರವಾಗಿ ತಿಳಿದುಕೊಳ್ಳಲು ಬಯಸುವವರು ಕಡಿಮೆ. ಅದನ್ನು ಅರ್ಥೈಸಿಕೊಳ್ಳುವುದು ಕಷ್ಟ ಎನ್ನುವುದು ಒಂದು ಕಾರಣವಾದರೆ, ಅವಶ್ಯವಿದ್ದಷ್ಟು ತಿಳಿದುಕೊಂಡರೆ ಸಾಕು ಎನ್ನುವುದು ಇನ್ನೊಂದು ಕಾರಣ.

ವ್ಯವಹಾರಕ್ಕೆ ಅವಶ್ಯವಿದ್ದಷ್ಟು ಮಾತ್ರ ಕೆಲವೇ ಜನರು ಈ ಬಗ್ಗೆ ತಿಳಿದುಕೊಂಡಿರುತ್ತಾರೆ. ಆದರೆ ಪ್ರಸ್ತುತ ‘ಮಾರುಕಟ್ಟೆ ಆರ್ಥಿಕ ವ್ಯವಸ್ಥೆ’ ಬಗ್ಗೆ ಕೆಲವು ಮೂಲ ಸಂಗತಿಗಳ ಕುರಿತು ಅರಿವು ಇರಬೇಕಾದ್ದು ಅನಿವಾರ್ಯವೂ ಆಗಿ ಬದಲಾಗುತ್ತಿದೆ.
ಈ ಅನಿವಾರ್ಯವನ್ನು ಅರಿತು ಇದೀಗ ಆನ್‌ಲೈನ್‌ ಬೆಂಬಲಿತ ಮಾರುಕಟ್ಟೆ ವ್ಯವಹಾರಕ್ಕೆ ಸಂಬಂಧಿಸಿದ ಜೆರೋದ ಆನ್‌ಲೈನ್‌ ಸಂಸ್ಥೆ ‘ವಾರ್ಸಿಟಿ’ ಎಂಬ ಹೊಸ ಉಚಿತ ಶಿಕ್ಷಣ ಅಭಿಯಾನವನ್ನು ಪರಿಚಯಿಸಿದೆ. ‘ಮಾಸಿವ್ ಓಪನ್ ಆನ್‌ಲೈನ್‌ ಕೋರ್ಸ್’ನಿಂದ ಸ್ಫೂರ್ತಿಗೊಂಡು ಈ ಆನ್‌ಲೈನ್ ಶಿಕ್ಷಣವನ್ನು ಪರಿಚಯಿಸಿದೆ.

ಮಾರುಕಟ್ಟೆ ವಿಸ್ತೃತ ರೂಪ
ಮಾರುಕಟ್ಟೆ ಕುರಿತು ಕೆಲವೇ ಸಂಗತಿಗಳು ಸಿಗಲು ಸಾಧ್ಯ. ಎಲ್ಲೇ ಹುಡುಕಿದರೂ ಸ್ಪಷ್ಟ ರೂಪದಲ್ಲಿ ಮಾಹಿತಿ ಸಿಗುವುದಿಲ್ಲ. ಈ ಕೊರತೆ ನೀಗಲೆಂದೇ ಸರಳ ಭಾಷೆಯಲ್ಲಿ ಶೇರು ಮಾರುಕಟ್ಟೆಗೆ ಸಂಬಂಧಿಸಿದ ಸಂಪೂರ್ಣ ವಿಚಾರಗಳನ್ನು ‘ಮಾಡ್ಯೂಲ್’ಗಳ ಮಾದರಿಯಲ್ಲಿ ಹೊರತಂದಿದೆ. 

ಶೇರು ಮಾರುಕಟ್ಟೆಯ ಪರಿಚಯ, ತಾಂತ್ರಿಕ ವಿಶ್ಲೇಷಣೆ, ಮೂಲ ವಿಶ್ಲೇಷಣೆ, ಆಯ್ಕೆಗಳು, ಮಾಡೆಲ್, ಉತ್ಪನ್ನ, ಕರೆನ್ಸಿ ಇಂಟರೆಸ್ಟ್ ರೇಟ್ ಮಾರ್ಕೆಟ್್, ರಿಸ್ಕ್ ಮ್ಯಾನೇಜ್‌ಮೆಂಟ್ ಅಂಡ್ ಟ್ರೇಡಿಂಗ್, ಬಿಲ್ಡಿಂಗ್ ಟ್ರೇಡಿಂಗ್ ಸ್ಟ್ರಾಟೆಜೀಸ್ ಅಂಡ್ ಸಿಸ್ಟಮ್‌, ಫೈನಾನ್ಶಿಯಲ್ ಮಾಡೆಲಿಂಗ್ ಫಾರ್ ಇನ್‌ವೆಸ್ಟ್‌ಮೆಂಟ್ ಪ್ರಾಕ್ಟೀಸ್, ಪ್ರೋಗ್ರಾಮಿಂಗ್ ಫಾರ್ ಟ್ರೇಡರ್ಸ್ ಹೀಗೆ ವಿವಿಧ ಕವಲುಗಳೊಂದಿಗೆ ಪಾಠಗಳನ್ನು ಸುಲಭವಾಗಿ ನೀಡುವ ಪ್ರಯತ್ನ ಇದರದ್ದು. 2014ರ ನವೆಂಬರ್‌ನಲ್ಲಿ ಈ ಪಠ್ಯಗಳನ್ನು ಆನ್‌ಲೈನ್‌ನಲ್ಲಿ ರೂಪಸಿದ್ದು, ಹಲವು ವರ್ಷಗಳ ಅನುಭವಸ್ಥರು ಹಾಗೂ ಶಿಕ್ಷಣ ತಜ್ಞರ ಜ್ಞಾನವನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ ಎಂದು ಮಾಹಿತಿ ನೀಡಿದರು ಜೆರೋದ ವಾರ್ಸಿಟಿಯ ಸಂಶೋಧನೆ ಮತ್ತು ಶಿಕ್ಷಣ ಸೇವೆಯ ಉಪಾಧ್ಯಕ್ಷ ಕಾರ್ತಿಕ್ ರಂಗಪ್ಪ.

ವಿದ್ಯಾರ್ಥಿಗಳಿಗೆ ಅನುಕೂಲ
ಕ್ಲಾಸ್‌ರೂಮ್‌ ಪಾಠಗಳನ್ನೇ ಹೋಲುವ ಈ ಆನ್‌ಲೈನ್ ಪಠ್ಯಗಳನ್ನು  ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆಯಂತೆ. ‘ಮಾರುಕಟ್ಟೆ ಕುರಿತು ಮೂಲ ಸಂಗತಿಗಳು ಹಾಗೂ ವಿಚಾರ ವಿನಿಮಯಗಳನ್ನು ಸರಳವಾಗಿ ರೂಪಿಸಿರುವುದು ಬಿಸಿನೆಸ್‌ ಶಿಕ್ಷಣಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಇದರ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು. ಓದಲು ಸುಲಭವಾಗುವಂತೆ ಸಂರಚನೆಯಿದೆ.

ಸುಲಭ ಗ್ರಹಿಕೆಗೆ ಚಿತ್ರ, ಚಾರ್ಟ್‌, ಪಟ್ಟಿಗಳೂ ಇವೆ. ಪಠ್ಯ ವಿನ್ಯಾಸಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಯಾವುದೇ ಸಾಧನದಲ್ಲೂ ಸುಲಭವಾಗಿ ಓದುವ ಅನುಕೂಲ ಇದೆ. ಮಾಹಿತಿಗಳೂ ಪರಿಷ್ಕೃತಗೊಳ್ಳುತ್ತಲೇ ಇರುತ್ತದೆ. ಭಾರತೀಯ ಮಾರುಕಟ್ಟೆಯಿಂದಲೇ ಹಲವು ಉದಾಹರಣೆಗಳನ್ನು ತೆಗೆದುಕೊಳ್ಳಲಾಗಿದೆ. ಸಂದೇಹಗಳಿದ್ದರೆ ಅದನ್ನು ನಿವಾರಿಸಿಕೊಳ್ಳಲು ಇಲ್ಲಿ ಅವಕಾಶವಿದೆ’ ಎಂದರು ಜೆರೋದದ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ನಿತಿನ್ ಕಾಮತ್. ಈ ಪಠ್ಯಗಳನ್ನು ಓದಬೇಕೆಂದರೆ: http://zerodha.com/varsity/ಗೆ ಲಾಗಿನ್ ಆಗಬಹುದು.

ಸಮಯದೊಂದಿಗೆ ಕಲಿಕೆ ಗುರಿ
‘ಪುಸ್ತಕ ಓದುವುದು, ಸಿನಿಮಾ ನೋಡುವುದು, ವ್ಯವಹಾರ ಮಾಡುವುದು ಎಲ್ಲವೂ ಇದೀಗ ಡಿಜಿಟಲ್ ರೂಪ ಪಡೆದುಕೊಳ್ಳುತ್ತಿದೆ. ಜೀವನದ ಪ್ರತಿಯೊಂದು ಅಂಶದಲ್ಲೂ ತಂತ್ರಜ್ಞಾನ ಹಾಸುಹೊಕ್ಕಾಗಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಅದರ ಪಾಲು ಹೆಚ್ಚಿನದ್ದೇ. ಈಗ ಯಾರಿಗೂ ಹೆಚ್ಚು ಸಮಯವಿರುವುದಿಲ್ಲ. ಅಂಥವರು ಮೊಬೈಲ್‌ನಲ್ಲಿಯೇ ‘ಮಾರುಕಟ್ಟೆ ಆರ್ಥಿಕ ವ್ಯವಸ್ಥೆ’ ಬಗ್ಗೆ ಸಮಗ್ರವಾಗಿ ಓದಬಹುದು. ಭಾಷೆ ಸರಳವಾಗಿರುವುದರಿಂದ ಶೇರು ಮಾರುಕಟ್ಟೆಯ ಮೂಲ ಅಂಶಗಳು, ಅವುಗಳ ಪ್ರಸ್ತುತತೆಯನ್ನು ಸುಲಭವಾಗಿ ಅರಿಯಬಹುದು. ಶೇರು ಮಾರುಕಟ್ಟೆ ಕುರಿತು ಸಾಮಾನ್ಯ ಜ್ಞಾನವನ್ನು ಎಲ್ಲರಲ್ಲೂ ಮೂಡಿಸುವ ಪ್ರಯತ್ನ ಇದು. ಒಟ್ಟು ನೂರ ಮೂವತ್ತು ಮಂದಿ ತಂಡದಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಇದರ ವಿನ್ಯಾಸವನ್ನೂ ಓದಲು ನೆರವಾಗುವಂತೆ ಮಾಡಲಾಗಿದೆ’.
–ಕಾರ್ತಿಕ್ ರಂಗಪ್ಪ.
ಜೆರೋದ ವಾರ್ಸಿಟಿಯ ಸಂಶೋಧನೆ ಮತ್ತು ಶಿಕ್ಷಣ ಸೇವೆಯ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT