ADVERTISEMENT

ಆರ್ಚರಿ ಶಾಲೆಗೆ ಕ್ರೀಡಾ ಪರಿಕರವೇ ಬಂದಿಲ್ಲ!

ಕೆ.ಎಚ್.ಓಬಳೇಶ್
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಯಲ್ಲಿ ಇರುವ ಆರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾ ವಸತಿ ಶಾಲೆ.
ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಯಲ್ಲಿ ಇರುವ ಆರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾ ವಸತಿ ಶಾಲೆ.   
ಚಾಮರಾಜನಗರ ಜಿಲ್ಲೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಆದರೆ, ಇಲ್ಲಿ ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸುವುದು ಅತಿವಿರಳ. ಇದು ಕ್ರೀಡಾಪಟುಗಳ ಅಭ್ಯುದಯಕ್ಕೆ ಮುಳುವಾಗಿದೆ. ಇನ್ನೊಂದೆಡೆ ಕ್ರೀಡಾಂಗಣ ಇದ್ದರೂ ಕ್ರೀಡಾಪಟುಗಳಿಗೆ ಬೇಕಿರುವ ಅಗತ್ಯ ಸೌಕರ್ಯ ಕಲ್ಪಿಸಿಲ್ಲ.
 
ಈ ಪಟ್ಟಿಗೆ ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಯಲ್ಲಿ ಇರುವ ರಾಜ್ಯದ ಏಕೈಕ ಆರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾ ವಸತಿ ಶಾಲೆಯೂ ಸೇರಿದೆ. ರಾಷ್ಟ್ರೀಯ ಹೆದ್ದಾರಿ 209ಕ್ಕೆ ಹೊಂದಿಕೊಂಡಂತೆ ಶಾಲೆಯ ಕಟ್ಟಡ ನಿರ್ಮಿಸಲಾಗಿದೆ. ಈ ಶಾಲೆಯು 5.3 ಎಕರೆ ವಿಸ್ತೀರ್ಣ ಪ್ರದೇಶದಲ್ಲಿದೆ. 
 
ಮೂಲ ಸೌಕರ್ಯದ ಕೊರತೆ ನಡುವೆ ಹೋದ ವರ್ಷ ಶಾಲೆಯು ಕಾರ್ಯಾರಂಭ ಮಾಡಿತು. ಮೊದಲ ವರ್ಷ 40 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ದೊರಕಿತ್ತು. ಈ ಪೈಕಿ 27 ವಿದ್ಯಾರ್ಥಿಗಳು ಮಾತ್ರವೇ ಪ್ರವೇಶ ಪಡೆದರು. ಜಿಲ್ಲೆಯ 10 ವಿದ್ಯಾರ್ಥಿಗಳಿಗೂ ಪ್ರವೇಶ ಕಲ್ಪಿಸಲಾಗಿದೆ.
 
ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದ ಪರಿಣಾಮ ತರಾತುರಿಯಲ್ಲಿ ಶಾಲೆ ಆರಂಭಗೊಂಡಿತು. ಆದರೆ, ಒಂದು ವರ್ಷ ಉಳಿದರುರೂ ವಿದ್ಯಾರ್ಥಿಗಳಿಗೆ ಕ್ರೀಡಾ ಪರಿಕರ ಸರಬರಾಜಾಗಿಲ್ಲ. ಇದರಿಂದ ವಿದ್ಯಾರ್ಥಿಗಳ ಕ್ರೀಡಾಭ್ಯಾಸಕ್ಕೆ ತೊಡಕಾಗಿದೆ. 
 
ಇನ್ನೊಂದೆಡೆ ವಸತಿ ಶಾಲೆಗೆ ನಿಲಯ ಪಾಲಕರನ್ನು ನೇಮಿಸಿಲ್ಲ. ಹಾಗಾಗಿ, ನಿರ್ವಹಣೆಗೆ ತೊಂದರೆಯಾಗಿದೆ. ವಸತಿ ಶಾಲೆಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಭಾಗದಲ್ಲಿ ಇನ್ನೂ ಸುತ್ತುಗೋಡೆ ನಿರ್ಮಿಸಿಲ್ಲ. ಹಾಗಾಗಿ, ಸುರಕ್ಷತೆಯ ಪ್ರಶ್ನೆ ಎದುರಾಗಿದೆ.  
 
ಗಿರಿಜನ ಉಪ ಯೋಜನೆಯಡಿ ಈ ಶಾಲೆ ನಿರ್ಮಿಸಲಾಗಿದೆ. ಹಾಗಾಗಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮಾತ್ರವೇ ಇಲ್ಲಿ ಪ್ರವೇಶ ನೀಡಲಾಗುತ್ತದೆ. ಈ ವರ್ಷವೂ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಸಿದ್ಧತೆ ನಡೆಸಿದೆ. 
 
‘ಈ ವರ್ಷವೂ ವಸತಿ ಶಾಲೆಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ಕೋರಿ ಇಲಾಖೆಗೆ ಪತ್ರ ಬರೆಯಲಾಗಿದೆ. ಜತೆಗೆ, ನಿಲಯ ಪಾಲಕರನ್ನು ನೇಮಿಸುವಂತೆಯೂ ಕೋರಲಾಗಿದೆ’ ಎನ್ನುತ್ತಾರೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಚಲುವಯ್ಯ.
 
‘ವಸತಿ ಶಾಲೆಗೆ ಸುತ್ತುಗೋಡೆ ನಿರ್ಮಾಣಕ್ಕೆ ₹ 21 ಲಕ್ಷ ಮೊತ್ತದ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.