ADVERTISEMENT

ಎಂಜಿನಿಯರಿಂಗ್‌ ವಿದ್ಯಾರ್ಥಿನಿಯ ಕ್ರೀಡಾ ಸಾಧನೆ

ಕೆ.ಓಂಕಾರ ಮೂರ್ತಿ
Published 18 ಡಿಸೆಂಬರ್ 2016, 19:30 IST
Last Updated 18 ಡಿಸೆಂಬರ್ 2016, 19:30 IST
ಎಂಜಿನಿಯರಿಂಗ್‌ ವಿದ್ಯಾರ್ಥಿನಿಯ ಕ್ರೀಡಾ ಸಾಧನೆ
ಎಂಜಿನಿಯರಿಂಗ್‌ ವಿದ್ಯಾರ್ಥಿನಿಯ ಕ್ರೀಡಾ ಸಾಧನೆ   

‘ನನ್ನ ಕುಟುಂಬದ ಹೆಚ್ಚಿನವರು ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ನಾನು ಕೂಡ ವೈದ್ಯೆ ಆಗಬೇಕೆಂಬ ಕನಸು ಕಂಡವಳು. ಅಂದಹಾಗೆ, ನನಗೆ ಎಂಬಿಬಿಎಸ್‌ ಸೀಟು ಲಭಿಸಿತ್ತು. ಆದರೆ, ಎಂಬಿಬಿಎಸ್‌ ಓದುತ್ತಾ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಕಷ್ಟವಾಗುತ್ತೆ ಎಂಬ ಕಾರಣಕ್ಕಾಗಿ ಎಂಜಿನಿಯರಿಂಗ್‌ ಸೇರಿದೆ’.ಲಾಂಗ್‌ಜಂಪ್‌, 100 ಮೀಟರ್‌ ಓಟ ಹಾಗೂ ರಿಲೇ ಸ್ಪರ್ಧೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಪ್ರಣೀತಾ ಪ್ರದೀಪ್‌ ಅವರು ಮಾತುಗಳಿವು.

ಈಚೆಗೆ ಕೋಲಾರದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಅವರು 13 ವರ್ಷಗಳ ಹಿಂದಿನ ದಾಖಲೆ ಅಳಿಸಿ ಹಾಕಿದ್ದಾರೆ. 5.18 ಮೀಟರ್‌ ದೂರ ಜಿಗಿಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲ; ಕೊಯಮತ್ತೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ ವಿ.ವಿ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ.

ಪ್ರಣೀತಾ ಅವರು ಮೈಸೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ (ಎನ್‌ಐಇ) ವ್ಯಾಸಂಗ ಮಾಡುತ್ತಿದ್ದಾರೆ. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿರುವ ಡಿವೈಇಎಸ್‌ ಕ್ರೀಡಾ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ತಾಲೀಮು ನಡೆಸುತ್ತಿದ್ದಾರೆ.

‘ಪ್ರಶಸ್ತಿ ಗೆಲ್ಲಬೇಕು, ಹೆಸರು ಮಾಡಬೇಕು ಎಂಬ ಉದ್ದೇಶದೊಂದಿಗೆ ನಾನು ಕ್ರೀಡೆಗೆ ಬಂದಿಲ್ಲ. ಕ್ರೀಡೆಯಿಂದ ಉತ್ತಮ ಆರೋಗ್ಯ ಹಾಗೂ ಫಿಟ್‌ನೆಸ್‌ ಕಾಯ್ದುಕೊಳ್ಳಬಹುದು.ಜೀವನ ಪಾಠ ಕಲಿಯಬಹುದು. ಓದಿದರಷ್ಟೇ ಸಾಲದು, ಕ್ರೀಡೆಗೂ ಒತ್ತು ನೀಡಬೇಕು’ ಎಂದು 20 ವರ್ಷ ವಯಸ್ಸಿನ ಪ್ರಣೀತಾ ಹೇಳುತ್ತಾರೆ.

‘ಪೋಷಕರ ಬೆಂಬಲವೂ ನನ್ನ ಈ ಸಾಧನೆಯಲ್ಲಿ ಅಡಗಿದೆ. ಬೆಂಗಳೂರಿನಲ್ಲಿದ್ದಾಗ ತಂದೆ ಪ್ರದೀಪ್ ನಾಯ್ಡು ನಿತ್ಯ ಬೆಳಿಗ್ಗೆ ಐದೂವರೆ ಗಂಟೆಗೆ ನನ್ನನ್ನು ಕಂಠೀರವ ಕ್ರೀಡಾಂಗಣಕ್ಕೆ ಬಿಟ್ಟು ಬರುತ್ತಿದ್ದರು. ಅಭ್ಯಾಸ ಮುಗಿದ ಮೇಲೆ ತಾಯಿ ಪದ್ಮಜಾ  ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅವರು ತೋರಿದ ಆ ಪ್ರೀತಿಯೇ ನನಗೆ ಸ್ಫೂರ್ತಿ’ ಎಂದು ಕ್ರೀಡಾ ಜೀವನದ ಆರಂಭಿಕ ದಿನಗಳನ್ನು ಪ್ರಣೀತಾ ನೆನಪಿಸಿಕೊಳ್ಳುತ್ತಾರೆ.

ಬೆಂಗಳೂರಿನಲ್ಲಿ ಬೆಥನಿ ಶಾಲೆಯಲ್ಲಿ ಓದುವಾಗಲೇ ಅವರು ಅಥ್ಲೆಟಿಕ್ಸ್‌ನಲ್ಲಿ ತೊಡಗಿಸಿಕೊಂಡಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಮಂಜಪ್ಪ ಅವರು ಅದಕ್ಕೆ ಆಸರೆ ಆದರು. ಅಲ್ಲಿಂದ ಆರಂಭವಾದ ಕ್ರೀಡಾ ಪಯಣ ಈಗಲೂ ಮುಂದುವರಿದಿದೆ. ಹಿರಿಯ ಕೋಚ್‌ಗಳಾದ ವಿ.ಆರ್‌.ಬೀಡು ಹಾಗೂ ಉದಯ್‌ ಪ್ರಭು ಅವರ ಬಳಿ ಹಲವು ವರ್ಷ ಮಾರ್ಗದರ್ಶನ ಪಡೆದಿದ್ದಾರೆ. ರಾಂಚಿಯಲ್ಲಿ ನಡೆದ ಜೂನಿಯರ್‌ ಕ್ರೀಡಾಕೂಟದ 14 ವರ್ಷದೊಳಗಿನವರ ವಿಭಾಗದ ಟ್ರಯಥ್ಲಾನ್‌ನಲ್ಲಿ ಕೂಟ ದಾಖಲೆ ನಿರ್ಮಿಸಿದಾಗ ಅವರ ಪ್ರತಿಭೆ ಬೆಳಕಿಗೆ ಬಂತು.

‘ಮತ್ತಷ್ಟು ಸಾಧನೆ ಮಾಡಬೇಕು. ಸೀನಿಯರ್‌ ವಿಭಾಗದಲ್ಲಿ ಸ್ಪರ್ಧಿಸಬೇಕು. ಇಂಡಿಯನ್ ಗ್ರ್ಯಾನ್‌ ಪ್ರಿ ಅಥ್ಲೆಟಿಕ್ಸ್‌ಗೆ ಅರ್ಹತೆ ಪಡೆಯಬೇಕು’ ಎಂದು ಅವರು ತಮ್ಮ ಕನಸನ್ನು ಬಿಚ್ಚಿಟ್ಟರು. ಪ್ರಣೀತಾ 100 ಮೀಟರ್‌ ಓಟದಲ್ಲೂ ಮಿಂಚಿದ್ದಾರೆ. 2014ರಲ್ಲಿ ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ನಲ್ಲಿ ಪದಕ ಜಯಿಸಿದ್ದರು.

ನವದೆಹಲಿಯಲ್ಲಿ ನಡೆದ ಕ್ರೀಡಾಕೂಟದ 4x100 ಮೀಟರ್‌ ರಿಲೇನಲ್ಲಿ ಪದ್ಮಿನಿ, ಅರ್ಪಿತಾ ಹಾಗೂ ಪ್ರಜ್ಞಾ ಜೊತೆಗೂಡಿ ಬೆಳ್ಳಿ ಪದಕದ ಸಾಧನೆ ಮಾಡಿದ್ದರು. 2014ರಲ್ಲಿ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‌ಎಐ) ನಡೆದ ರಾಷ್ಟ್ರೀಯ ಸೀನಿಯರ್‌ ಶಿಬಿರದಲ್ಲಿ ಪಾಲ್ಗೊಂಡಿದ್ದರು.

‘100 ಮೀಟರ್‌ ಹಾಗೂ ರಿಲೇನಲ್ಲಿ ಸ್ಪರ್ಧಿಸುತ್ತಿದ್ದರೂ ಹೆಚ್ಚು ಗಮನ ಹರಿಸುತ್ತಿರುವುದು ಲಾಂಗ್‌ಜಂಪ್‌ಗೆ. ಎಂಜಿನಿಯರಿಂಗ್ ಓದುತ್ತಾ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಕೂಡ ಕಷ್ಟ. ಆದಾಗ್ಯೂ ಓದಿಗಿಂತ ಹೆಚ್ಚು ಕ್ರೀಡೆಯತ್ತ ಗಮನ ಹರಿಸುತ್ತಿದ್ದೇನೆ. 2 ಗಂಟೆ ಮಾತ್ರ ಓದಿಗೆ ಮೀಸಲು. ಓದುವುದು ಸುಲಭ, ಓಡುವುದು ಕಷ್ಟ’ ಎಂದು ಪ್ರಣೀತಾ ನುಡಿಯುತ್ತಾರೆ.

ಲಾಂಗ್‌ಜಂಪ್‌ನಲ್ಲಿ ಪ್ರಣೀತಾ ಅವರ ಉತ್ತಮ ಸಾಧನೆ ಎಂದರೆ 6.15 ಮೀಟರ್ ದೂರ. ಆದರೆ, ಇಂಡಿಯನ್‌ ಗ್ರ್ಯಾನ್‌ ಪ್ರಿಗೆ ಆಯ್ಕೆ ಆಗಲು 6.40 ಮೀಟರ್‌ ದೂರ ಜಿಗಿಯಬೇಕು. ಅದಕ್ಕಾಗಿ ಹೆಚ್ಚಿನ ಸಮಯವನ್ನು ತಾಲೀಮಿಗೆ ಮೀಸಲಿಟ್ಟಿದ್ದೇನೆ ಎಂದು ಅವರು ಹೇಳುತ್ತಾರೆ. ಅಂದಹಾಗೆ, ಅವರು ಓದಿನಲ್ಲೂ ಮುಂದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.