ADVERTISEMENT

ಏಷ್ಯಾ ಕ್ರಿಕೆಟ್‌ ಶಕ್ತಿ ದ್ವಿಗುಣ

ಗಿರೀಶದೊಡ್ಡಮನಿ
Published 2 ಆಗಸ್ಟ್ 2015, 19:30 IST
Last Updated 2 ಆಗಸ್ಟ್ 2015, 19:30 IST

ಭಾರತದ ಕ್ರಿಕೆಟ್‌ ರಂಗದಲ್ಲಿ ಈಗ ತಳಮಳದ ಕಾಲ. ಐಪಿಎಲ್ ಸ್ಪಾಟ್‌ ಫಿಕ್ಸಿಂಗ್ ಹಗರಣ, ಮೋಸದಾಟಗಳು, ತಾರಾ ವರ್ಚಸ್ಸಿನ ಆಟಗಾರರ ನಡುವಿನ ಭಿನ್ನಾಭಿಪ್ರಾಯಗಳದ್ದೇ ಸುದ್ದಿ. ಆದರೆ, ನಮ್ಮ ದೇಶದ ಅಕ್ಕಪಕ್ಕದಲ್ಲಿರುವ ಎರಡು ಪುಟ್ಟ ರಾಷ್ಟ್ರಗಳು ಸದ್ದಿಲ್ಲದೇ ಕ್ರಿಕೆಟ್‌ ಜಗತ್ತಿನಲ್ಲಿ ತಮ್ಮ ದೃಢವಾದ ಹೆಜ್ಜೆಗುರುತುಗಳನ್ನು ಮೂಡಿಸುತ್ತ ಮುನ್ನುಗ್ಗುತ್ತಿವೆ.  ಕ್ರಿಕೆಟ್ ಕ್ಷೇತ್ರದ ನವಶಕ್ತಿಯಾಗಿ ಬೆಳೆಯುತ್ತಿದೆ.

ಭಾರತದ ಗಡಿಗೆ ಹೊಂದಿಕೊಂಡಿರುವ ಬಾಂಗ್ಲಾ ಮತ್ತು ದ್ವೀಪ ರಾಷ್ಟ್ರ ಶ್ರೀಲಂಕಾ.  ಎರಡು ದಶಕಗಳಿಗಿಂತ ಹಿಂದೆ ಈ ಎರಡೂ ದೇಶಗಳು ಕ್ರಿಕೆಟ್‌ ಆಡುವ ದೇಶಗಳ ಪಟ್ಟಿಯಲ್ಲಿ ತಳಮಟ್ಟದ ಸ್ಥಾನದಲ್ಲಿದ್ದವು. ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ವೆಸ್ಟ್‌ ಇಂಡೀಸ್, ಪಾಕಿಸ್ತಾನ ದೇಶಗಳು ಬಲಾಢ್ಯವಾಗಿದ್ದವು.  ಆದರೆ, ಈ ಎರಡೂ ದೇಶಗಳ ಕ್ರಿಕೆಟ್‌ ತಂಡಗಳು ಈಗ ಯಾವುದೇ ತಂಡಕ್ಕೂ ಸೋಲಿನ ರುಚಿ ತೋರಿಸಬಲ್ಲ ಸಾಮರ್ಥ್ಯ ಬೆಳೆಸಿಕೊಂಡಿವೆ.

ಅದೇ ರೀತಿ  ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ ಸರಣಿಗಳನ್ನು ಆಯೋಜಿಸುವ ಆರ್ಥಿಕ ಸಾಮರ್ಥ್ಯವನ್ನೂ ವೃದ್ಧಿಸಿಕೊಂಡಿವೆ. ಇದು ಆ ದೇಶಗಳಲ್ಲಿ ಕ್ರಿಕೆಟ್‌ಗೆ ಸಿಗುತ್ತಿರುವ ಜನಪ್ರಿಯತೆ ಮತ್ತು ಪ್ರೋತ್ಸಾಹಗಳು ಬೆಳೆದಿರುವುದರ ಪ್ರತೀಕ.  ಆಗಸ್ಟ್ 12 ರಿಂದ ಸೆಪ್ಟೆಂಬರ್ 1ರವರೆಗೆ ಭಾರತ ತಂಡವು ಮೂರು ಟೆಸ್ಟ್‌ ಪಂದ್ಯಗಳ ಸರಣಿ ಆಡಲು ಶ್ರೀಲಂಕಾಕ್ಕೆ ತೆರಳುತ್ತಿದೆ.

ಬಾಂಗ್ಲಾದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಏಕದಿನ ಸರಣಿ ಮುಕ್ತಾಯವಾಗಿ, ಎರಡನೇ ಟೆಸ್ಟ್‌ ನಡೆಯುತ್ತಿದೆ. ಕಳೆದ ಡಿಸೆಂಬರ್‌ನಿಂದ ಇಲ್ಲಿಯವರೆಗೆ ಬಾಂಗ್ಲಾದೇಶವು ನಾಲ್ಕು ಸರಣಿಗಳನ್ನು ಆಯೋಜಿಸಿದ್ದು ದಾಖಲೆ. ಇಲ್ಲಿ ಹೆಚ್ಚು ಸರಣಿಗಳು ನಡೆಯುತ್ತಿರುವುದರಿಂದ ತವರಿನ ಪ್ರತಿಭೆಗಳಿಗೆ ಹೆಚ್ಚು ಉತ್ತೇಜನ ಸಿಗುತ್ತಿದೆ. 

ಬಾಂಗ್ಲಾದ  ಬೀಸು  ನಡಿಗೆ
ಕ್ರಿಕೆಟ್‌ ಅಂಗಳದಲ್ಲಿ ಈಗ ಮುಸ್ತಫಿಜುರ್ ರಹಮಾನ್ ಎಂಬ ಚಿಗುರುಮೀಸೆಯ  ಹುಡುಗನ ಹೆಸರು ಎಲ್ಲರ ಬಾಯಲ್ಲೂ ನಲಿಯುತ್ತಿದೆ. ಕಳೆದ ಜೂನ್‌ನಲ್ಲಿ  ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಬರೋಬ್ಬರಿ ಪೆಟ್ಟು  ನೀಡಿದ   ಹುಡುಗ ಈ ಮುಸ್ತಫಿಜುರ್  ರಹಮಾನ್. ಬಾಂಗ್ಲಾ ಪ್ರವಾಸಕ್ಕೂ ಮುನ್ನ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಭರ್ಜರಿ ರನ್‌ ಮಳೆ ಸುರಿಸಿದ್ದ ಭಾರತದ ಬ್ಯಾಟ್ಸ್‌ಮನ್‌ಗಳ ಆಟ ರಹಮಾನ್ ಮುಂದೆ ನಡೆಯಲಿಲ್ಲ. ಪದಾರ್ಪಣೆಯ ಪಂದ್ಯದಲ್ಲಿ ಐದು ಮತ್ತು ಎರಡನೇ ಪಂದ್ಯದಲ್ಲಿ ಆರು ವಿಕೆಟ್ ಪಡೆದು ಬಲಶಾಲಿ ಭಾರತ ತಂಡಕ್ಕೆ ದೊಡ್ಡ ಆಘಾತ ನೀಡಿಬಿಟ್ಟರು.

ಮಹೇಂದ್ರಸಿಂಗ್ ದೋನಿ ಬಳಗವು ಸರಣಿ ಸೋಲನುಭವಿಸಿ ಹಿಂದಿರುಗಿತ್ತು. ನಂತರ ದಕ್ಷಿಣ ಆಫ್ರಿಕಾ ತಂಡದ ಎದುರಿನ ಸರಣಿಯಲ್ಲಿಯೂ ತಮ್ಮ ಚುರುಕಿನ ಬೌಲಿಂಗ್ ಮೂಲಕ ಗಮನ ಸೆಳೆದರು. ಹೆಚ್ಚು ವಿಕೆಟ್‌ ಪಡೆಯದಿದ್ದರೂ, ಹಾಶೀಂ ಆಮ್ಲಾ ಬಳಗದ ರನ್ ದಾಹಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಪದಾರ್ಪಣೆಯ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಲ್ಕು ವಿಕೆಟ್‌ಗಳನ್ನು ತಮ್ಮ ಜೇಬಿಗಿಳಿಸಿಕೊಂಡರು. ಅದೇ ರೀತಿ ಸೌಮ್ಯಾ ಸರ್ಕಾರ್, ಮುಷ್ಫಿಕರ್ ರಹೀಂ, ಲಿಟನ್ ದಾಸ್ ಅವರ ಆಟವೂ ಕಳೆಗಟ್ಟಿತ್ತು.

ADVERTISEMENT

ಕಳೆದ ಒಂದು ವರ್ಷದಲ್ಲಿ  ತಾನು ಆತಿಥ್ಯ ವಹಿಸಿದ ನಾಲ್ಕೂ ಸರಣಿಗಳಲ್ಲಿ ಬಾಂಗ್ಲಾ ಗೆದ್ದಿರುವುದು ವಿಶೇಷ. ಈ ಜಯಗಳಿಂದ ತಂಡದ ಆಟಗಾರರ ಆತ್ಮವಿಶ್ವಾಸ ಬೆಳೆಯುತ್ತದೆ. ವಿದೇಶಿ ನೆಲದಲ್ಲಿ ನಡೆಯುವ ಟೂರ್ನಿಗಳಲ್ಲಿಯೂ  ಉತ್ತಮ ಸ್ಪರ್ಧೆಯೊಡ್ಡಲು ಸಾಧ್ಯವಾಗುತ್ತದೆ.

2000ನೇ ಇಸವಿಯಲ್ಲಿ ಟೆಸ್ಟ್ ಕ್ರಿಕೆಟ್‌ ಮಾನ್ಯತೆ ಪಡೆದಾಗ  ಬಾಂಗ್ಲಾ ತಂಡವು ಹಲವು ಸಮಸ್ಯೆಗಳ ಸುಳಿಯಲ್ಲಿತ್ತು. ಉತ್ತಮ ತರಬೇತಿ, ಮೂಲಸೌಲಭ್ಯಗಳ ಕೊರತೆ ಸೇರಿದಂತೆ ಹಲವು ತೊಂದರೆಗಳು ಇದ್ದವು. ಇದೀಗ ತಂಡವನ್ನು  ಉನ್ನತ ದರ್ಜೆಗೆ ಏರಿಸಲು ಎಲ್ಲ ರೀತಿಯ ಅತ್ಯಾಧುನಿಕ ಮತ್ತು ವೈಜ್ಞಾನಿಕವಾದ ವ್ಯವಸ್ಥೆಗಳನ್ನು ಆ ದೇಶದ ಆಡಳಿತವು ನೀಡಲು ಮುಂದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬಾಂಗ್ಲಾದ ಆಟಗಾರರಲ್ಲಿ ಶಕ್ತಿಯುತ ದೇಶಗಳಿಗೆ ಸರಿಸಾಟಿಯಾಗಿ ನಿಲ್ಲಬೇಕು ಎಂಬ ಕಿಚ್ಚು    ಇದೆ. ಅದು ಅವರ ಗೆಲುವಿನ ಹಸಿವನ್ನು ಹೆಚ್ಚಿಸಿದೆ.  ಮುಂದೊಂದು ದಿನ ವಿಶ್ವ ಚಾಂಪಿಯನ್ ಆಗುವ ಕನಸು ಅವರನ್ನು ಮತ್ತಷ್ಟು  ಹುರಿದುಂಬಿಸುತ್ತಿರುವುದಂತೂ ದಿಟ.

ಶ್ರೀಲಂಕಾದ ಬೆಳವಣಿಗೆ
1996ರ ಐಸಿಸಿ ವಿಶ್ವಕಪ್ ಗೆಲ್ಲುವವರೆಗೂ ಶ್ರೀಲಂಕಾ ತಂಡವೂ ಕಪ್ಪುಕುದುರೆಯಾಗಿತ್ತು. ಆದರೆ, ಅರ್ಜುನ್ ರಣತುಂಗಾ, ಸನತ್ ಜಯಸೂರ್ಯ, ಕಲುವಿತರಣ, ಮುತ್ತಯ್ಯ ಮುರಳೀಧರನ್, ಮಾರ್ವನ್ ಅಟಪಟ್ಟು, ಮಾಹೇಲ ಜಯವರ್ಧನೆ, ಅರವಿಂದ ಡಿಸಿಲ್ವಾ, ಚಮಿಂದಾ ವಾಸ್ ಅವರಂತಹ ಪ್ರತಿಭಾಶಾಲಿಗಳು ದ್ವೀಪರಾಷ್ಟ್ರದ ಕ್ರಿಕೆಟ್‌ಗೆ ಹೊಸ ದಿಕ್ಕು ನೀಡಿದರು. ಅವರಿಂದಾಗಿ ಆ ದೇಶದಲ್ಲಿ ಹೊಸ ಯುಗವೇ ಆರಂಭವಾಯಿತು.   ಹಲವಾರು ವಿಶ್ವದಾಖಲೆಗಳಿಗೂ ಇಲ್ಲಿಯ ಆಟಗಾರರು ಒಡೆಯರಾಗಿದ್ದಾರೆ.

ತಾವು ಬೆಳೆಯುವುದರ ಜೊತೆಗೆ ದೇಶದ ಕ್ರಿಕೆಟ್‌ ಅನ್ನು ಬೆಳೆಸಿದರು. ಅದರ ಫಲವಾಗಿ ಪುಟ್ಟ ರಾಷ್ಟ್ರವು  ಪ್ರತಿವರ್ಷವೂ ಕ್ರಿಕೆಟ್‌ನ ಎಲ್ಲ ಮಾದರಿಯ ಸರಣಿಗಳ ಆತಿಥ್ಯ ವಹಿಸುವ ಶಕ್ತಿ ಬೆಳೆಸಿಕೊಂಡಿದೆ.  ಶ್ರೀಲಂಕಾ ತಂಡವು ಕಳೆದ ನಾಲ್ಕು ವರ್ಷಗಳಲ್ಲಿ 22 ಟೆಸ್ಟ್, 47 ಅಂತರರಾಷ್ಟ್ರೀಯ ಏಕದಿನ ಮತ್ತು 15ಕ್ಕೂ ಹೆಚ್ಚು ಚುಟುಕು ಪಂದ್ಯಗಳಿಗೆ ಆತಿಥ್ಯ ವಹಿಸಿದೆ.  

ಇದೀಗ ಪಾಕ್‌ ತಂಡವು ಲಂಕಾದಲ್ಲಿ ಪ್ರವಾಸ ಮಾಡುತ್ತಿದೆ. ಅದರಲ್ಲಿ  ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಶ್ರೀಲಂಕಾ ಸೋತಿದೆ. ಪಂದ್ಯಗಳ ಫಲಿತಾಂಶ ಏನೇ ಇರಲಿ. ವರ್ಷದಿಂದ ವರ್ಷಕ್ಕೆ ಕ್ರಿಕೆಟ್‌ ಕ್ಷೇತ್ರದ ವ್ಯಾಪ್ತಿ ಮತ್ತು ಶಕ್ತಿ ಎರಡನ್ನೂ ಲಂಕಾ ತಂಡವು ವಿಸ್ತಾರಗೊಳಿಸಿಕೊಳ್ಳುತ್ತಿದೆ. 

ಏಷ್ಯಾ ಖಂಡದ ಪ್ರಮುಖ ಕ್ರಿಕೆಟ್‌ ಶಕ್ತಿಗಳಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳಿಗೆ ಸರಿಸಮನಾಗಿ ಈ ಎರಡೂ ಪುಟ್ಟ ದೇಶಗಳು ಈಗ ಬೆಳೆಯುತ್ತಿರುವುದನ್ನು ಇಡೀ ವಿಶ್ವ ಬೆರಗು ಕಂಗಳಿಂದ ವೀಕ್ಷಿಸುತ್ತಿದೆ. ಇದರಿಂದ ಏಷ್ಯಾ ಕ್ರಿಕೆಟ್‌ ಶಕ್ತಿಯು ದುಪ್ಪಟ್ಟಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.