ADVERTISEMENT

ಕಾಫಿ ಕಣಿವೆಯಲ್ಲಿ ಕಾರು ರ‍್ಯಾಲಿ

ಕೆ.ಎಂ.ಸಂತೋಷಕುಮಾರ್
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST
ಚಿಕ್ಕಮಗಳೂರಿನಲ್ಲಿ ಹೋದ ವರ್ಷ ನಡೆದಿದ್ದ ಎಪಿಆರ್‌ಸಿ ರ‍್ಯಾಲಿ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಚಾಲಕರು ತೋರಿದ ಚಾಲನಾ ಕೌಶಲ್ಯ.     ಪ್ರಜಾವಾಣಿ ಚಿತ್ರ/ ಎ.ಎನ್‌.ಮೂರ್ತಿ
ಚಿಕ್ಕಮಗಳೂರಿನಲ್ಲಿ ಹೋದ ವರ್ಷ ನಡೆದಿದ್ದ ಎಪಿಆರ್‌ಸಿ ರ‍್ಯಾಲಿ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಚಾಲಕರು ತೋರಿದ ಚಾಲನಾ ಕೌಶಲ್ಯ. ಪ್ರಜಾವಾಣಿ ಚಿತ್ರ/ ಎ.ಎನ್‌.ಮೂರ್ತಿ   

ಹೆಸರು ಮಾತ್ರ ‘ಚಿಕ್ಕ’ಮಗಳೂರು. ಅತ್ಯುತ್ತಮ ದರ್ಜೆಯ ಕಾಫಿ, ಕಾಳು ಮೆಣಸು, ಸುಂದರ ಪ್ರವಾಸಿ ತಾಣಗಳಿಗೆ ಅಷ್ಟೇ ಅಲ್ಲ, ಅಂತರರಾಷ್ಟ್ರೀಯ ಕಾರು ರ‍್ಯಾಲಿ ಸ್ಪರ್ಧೆಯ ಆತಿಥ್ಯಕ್ಕೆ ಇದು ‘ದೊಡ್ಡ ಊರು’.

ಹೌದು, ನಾಲ್ಕು ದಶಕಗಳ ಹಿಂದೆ ಅಂತರರಾಜ್ಯ ಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದ ‘ಕಾಫಿ 500’ ಕಾರು ರ‍್ಯಾಲಿ ಪಯಣ ಇಂದು ಏಷ್ಯಾ ಪೆಸಿಫಿಕ್‌ ರ‍್ಯಾಲಿಯವರೆಗೆ ಬೆಳೆದಿದೆ.  ಸಿಕ್ಕಿದ ಅವಕಾಶದಲ್ಲಿ ರ‍್ಯಾಲಿ ಯಶಸ್ವಿಯಾಗಿ ಸಂಘಟಿಸಲು ಚಿಕ್ಕಮಗಳೂರು ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ಹಗಲು ರಾತ್ರಿ ಶ್ರಮಿಸುತ್ತಿದೆ. ಭವಿಷ್ಯದಲ್ಲಿ ವಿಶ್ವಮಟ್ಟದ ಕಾರು ರ‍್ಯಾಲಿ ಚಾಂಪಿಯನ್‌ಶಿಪ್‌ (ಡಬ್ಲ್ಯುಆರ್‌ಸಿ) ಸ್ಪರ್ಧೆಗೆ ಆತಿಥ್ಯ ವಹಿಸುವ ಸುವರ್ಣಾವಕಾಶ ಗಿಟ್ಟಿಸಲು ಕ್ಲಬ್‌, ಸದ್ದಿಲ್ಲದೆ ತಕ್ಕ ಅಡಿಪಾಯವನ್ನೂ ಹಾಕಿಕೊಳ್ಳುತ್ತಿದೆ.

1980ರ ದಶಕದಲ್ಲಿ ಆರಂಭವಾದ ‘ಕಾಫಿ 500’ ರ‍್ಯಾಲಿಗೆ ಜಿಲ್ಲೆಯಷ್ಟೇ ಅಲ್ಲ ಹೊರ ಜಿಲ್ಲೆ, ರಾಜ್ಯಗಳಿಂದಲೂ ಚಾಲಕ ಸ್ಪರ್ಧಿಗಳು ಬರುತ್ತಿದ್ದರು. ಈ ರ‍್ಯಾಲಿ ಮಲೆನಾಡಿನ ಜನರಿಗೆ ಅಕ್ಷರಶಃ ಕಾರು ರ‍್ಯಾಲಿ ಆಸಕ್ತಿ ಬೆಳೆಸಲಾರಂಭಿಸಿತು. ಆರಂಭದ ದಿನಗಳಲ್ಲಿ ಕಾಫಿ ಬೆಳೆಗಾರರು ಮತ್ತು ರ‍್ಯಾಲಿ ಆಸಕ್ತ ಸ್ಥಿತಿವಂತರು ರ‍್ಯಾಲಿ ಪ್ರಾಯೋಜಕತ್ವ ವಹಿಸುತ್ತಿದ್ದರು.

ಒಂದು ದಶಕ ಕಾಲ 11 ರ‍್ಯಾಲಿಗಳು ಕಾಫಿ ಬೆಳೆಗಾರರ ಪ್ರೋತ್ಸಾಹದಿಂದಲೇ ಯಶಸ್ವಿಯಾಗಿ ನಡೆದವು. ಕಾಫಿ ಬೆಲೆ ಕುಸಿದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದಾಗ ರ‍್ಯಾಲಿಗೆ ಪ್ರಾಯೋಜಕತ್ವವೂ ಸಿಗದೆ ಎರಡುಮೂರು ವರ್ಷ ಕಾಲ ರ‍್ಯಾಲಿ ಸಂಘಟಿಸಲು ಆಗಲಿಲ್ಲ. ಮತ್ತೆ 90ರ ದಶಕದ ನಂತರ ‘ಕಾಫಿ ಡೇ’ ಪ್ರಾಯೋಜಕತ್ವದಲ್ಲಿ ‘ಕಾಫಿ ಡೇ ರ‍್ಯಾಲಿ’ ಚಾಲನೆ ಪಡೆಯಿತು.

ಮಲೆನಾಡಿನ ಡರ್ಟ್‌ ಟ್ರ್ಯಾಕಿನಲ್ಲಿ ಬಣ್ಣಬಣ್ಣದ ಕಾರುಗಳು ಸದ್ದು ಮಾಡಲು ಶುರು ಮಾಡಿದವು. ಉದ್ಯಮಿ ಸಿದ್ಧಾರ್ಥ ಹೆಗ್ಡೆ ಅವರ ಒತ್ತಾಸೆ ಮತ್ತು ಪ್ರೋತ್ಸಾಹದಿಂದ ಇಂದು ಜಗತ್ತಿನ ಹಲವು ದೇಶಗಳು ಕಾಫಿ ನಾಡಿನಲ್ಲಿ ನಡೆಯುವ ರ‍್ಯಾಲಿಯತ್ತ ಕುತೂಹಲದ ಕಣ್ಣು ನೆಟ್ಟಿವೆ. ರ‍್ಯಾಲಿ ಸಂಘಟನೆಯಲ್ಲಿ ಚಿಕ್ಕಮಗಳೂರು ಕ್ಲಬ್‌ ಕಳೆದ 6 ವರ್ಷಗಳಿಂದ ಸತತ ಅಗ್ರಸ್ಥಾನ ಕಾಯ್ದುಕೊಂಡಿದೆ ಎನ್ನುತ್ತಾರೆ ಚಿಕ್ಕಮಗಳೂರು ಮೋಟಾರ್‌ ಸ್ಪೋಟ್ಸ್‌ ಕ್ಲಬ್‌ (ಎಂಎಸ್‌ಸಿಸಿ) ಅಧ್ಯಕ್ಷ ಜಯಂತ್‌ ಪೈ.

2014ರಲ್ಲಿ ನಡೆದ ಏಷ್ಯಾ ಕಪ್‌ ರ‍್ಯಾಲಿ, 2015ರಲ್ಲಿ ಏಷ್ಯಾ ಕಪ್‌ ಜತೆಗೆ ಎಪಿಆರ್‌ಸಿ ರ‍್ಯಾಲಿ ಅರ್ಹತಾ ಸುತ್ತು ಯಶಸ್ವಿಯಾಗಿ ಸಂಘಟಿಸಿದ ಹಿನ್ನೆಲೆಯಲ್ಲಿ ಎಫ್‌ಐಎ (ಫೆಡರೇಷನ್ ಇಂಟರ್‌ನ್ಯಾಷನಲ್‌ ಆಟೋಮೊಬೈಲ್‌) ಅಧಿಕೃತವಾಗಿ ಎಪಿಆರ್‌ಸಿ ರ‍್ಯಾಲಿ ಚಾಂಪಿಯನ್‌ಶಿಪ್‌ 6ನೇ ಸುತ್ತಿನ ಸ್ಪರ್ಧೆ ಆತಿಥ್ಯ ವಹಿಸಲು ಕಾಫಿ ನಾಡಿಗೆ ಅವಕಾಶ ಕೊಟ್ಟಿದೆ. ಅಲ್ಲದೆ, 2017ರ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ನಡೆಯಲಿರುವ 6ನೇ ಸುತ್ತಿನ ಎಪಿಆರ್‌ಸಿ ರ‍್ಯಾಲಿ ಚಾಂಪಿಯನ್‌ಶಿಪ್‌ ಆತಿಥ್ಯ ವಹಿಸುವ ಅವಕಾಶವೂ ಚಿಕ್ಕಮಗಳೂರು ಮೋಟಾರ್‌ ಸ್ಪೋಟ್ಸ್‌ ಕ್ಲಬ್‌ಗೆ ದೊರೆತಿದೆ!

ವಿದೇಶಿ ಕಾರುಗಳ ಕಲರವ
ಎಪಿಆರ್‌ಸಿ ರ‍್ಯಾಲಿ ಜತೆಗೆ ಇಂಡಿಯನ್‌ ರ‍್ಯಾಲಿ ಚಾಂಪಿಯನ್‌ಶಿಪ್‌ ಮತ್ತು ಇಂಡಿಯನ್‌ ನ್ಯಾಷನಲ್‌ ರ‍್ಯಾಲಿ ಚಾಂಪಿಯನ್‌ಶಿಪ್‌ ನಡೆಯುತ್ತಿವೆ. ಈ ಬಾರಿ ದಾಖಲೆ ಸಂಖ್ಯೆಯಲ್ಲಿ 50 ಚಾಲಕ ಜೋಡಿ ಸ್ಪರ್ಧಿಗಳು ಭಾಗವಹಿಸಿದ್ದಾರೆ. 10 ಚಾಲಕ ಜೋಡಿ ಸ್ಪರ್ಧಿಗಳು ಎಪಿಆರ್‌ಸಿ ರ‍್ಯಾಲಿಯಲ್ಲಿ ದೂಳೆಬ್ಬಿಸಲಿದ್ದಾರೆ. ಐವರು ವಿದೇಶಿ ಚಾಲಕ ಜೋಡಿ ಸ್ಪರ್ಧಿಗಳು ಸಾಮರ್ಥ್ಯ ತೋರಲಿದ್ದಾರೆ.

ಈ ಬಾರಿ ಸುಮಾರು ₹80 ಲಕ್ಷದಿಂದ ₹1 ಕೋಟಿವರೆಗಿನ ಬೆಲೆಯ ವಿದೇಶಿ ನಿರ್ಮಿತ ಸ್ಕೋಡಾ, ಸುಬಾರೊ ಕಾರುಗಳು ಪಾಲ್ಗೊಳ್ಳಲಿವೆ. ಚಾಂಪಿಯನ್‌ ಚಾಲಕರಾದ ಗೌರವ್‌ಗಿಲ್‌, ಗ್ಲೇನ್‌ ಮೇಕ್ಲೀನ್‌, ಜರ್ಮನಿಯ ಪ್ಯಾಬಿಯನ್‌ ಕ್ರೀಮ್‌–ಪ್ರಾಂಕ್‌ ಕ್ರಿಶ್ಚಿಯನ್‌, ನ್ಯೂಜಿಲೆಂಡಿನ ಮೈಕ್‌ಯಂಗ್‌–ಮ್ಯಾಲ್‌ಕಮ್‌ ರೀಡ್‌, ಸಂಜಯ್‌ ಟಕಲೆ–ಟಾಕಶೀಟಾನುರಿಯೊ, ಜಪಾನಿನ ಯುವ ಸುಮಿಯಾಮ–ಟಾಕಹೀರೊ ಯಸುಹಿ ಅವರ ಚಾಲನಾ ಸಾಮರ್ಥ್ಯ ಮತ್ತು ಕೌಶಲ್ಯ ಕಣ್ತುಂಬಿಕೊಳ್ಳಬಹುದು.

ಚಟ್ಟನಹಳ್ಳಿ, ಕಮ್ಮರಗೋಡು, ಚಂದ್ರಾಪುರ ಹಾಗೂ ಜಾಗೀನಮನೆ ಕಾಫಿ ಎಸ್ಟೇಟ್‌ಗಳಲ್ಲಿ ಸುಮಾರು 220 ಕಿ.ಮೀ. ಡರ್ಟ್‌ ಟ್ರ್ಯಾಕ್‌ ನಿರ್ಮಾಣವಾಗಿದೆ. ಕಳೆದ ಬಾರಿ ಎದುರಾಗಿದ್ದ ಅಡೆತಡೆ ನಿವಾರಿಸಲಾಗಿದೆ. ಅಪಾಯಕಾರಿ ಇಕಟ್ಟಿನ ರಸ್ತೆ ಕೊಂಚ ವಿಸ್ತರಿಸಿ, ಚಾಲಕಸ್ನೇಹಿಯಾಗಿಸಲಾಗಿದೆ. ವಿಶ್ವ ರ‍್ಯಾಲಿ ಚಾಂಪಿಯನ್‌ಶಿಪ್‌ ನಡೆಸಲು ಇನ್ನೂ ಸುಮಾರು 100 ಕಿ.ಮೀ. ಟ್ರ್ಯಾಕ್‌ ಅವಶ್ಯವಿರುವುದರಿಂದ ಅದನ್ನೂ ಗಮನದಲ್ಲಿಟ್ಟುಕೊಂಡು ವಿಶ್ವದರ್ಜೆಯ ಟ್ರ್ಯಾಕ್‌ ನಿರ್ಮಿಸಲಾಗಿದೆ ಎನ್ನುತ್ತಾರೆ ರ‍್ಯಾಲಿ ಸಂಘಟಕರು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.