ADVERTISEMENT

ಕೊಹ್ಲಿ ಫಿಟ್‌ನೆಸ್‌ ಮಂತ್ರ

ವರುಣ ನಾಯ್ಕರ
Published 20 ಮೇ 2018, 19:30 IST
Last Updated 20 ಮೇ 2018, 19:30 IST
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ಶನಿವಾರ ಅಭ್ಯಾಸ ನಡೆಸಿದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ಶನಿವಾರ ಅಭ್ಯಾಸ ನಡೆಸಿದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌.   

ಈಗಿನ ಉದಯೋನ್ಮುಖ ಕ್ರಿಕೆಟಿಗರು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅನ್ನು ಮಾತ್ರ ಅನುಕರಿಸುತ್ತಿಲ್ಲ. ವಿರಾಟ್ ಅವರ ಫಿಟ್‌ನೆಸ್‌ ಮಂತ್ರವನ್ನೂ ಪಠಿಸುತ್ತಿದ್ದಾರೆ.

ಇಂದಿನ ಕ್ರಿಕೆಟ್‌ನಲ್ಲಿ ಹಿಂದೆಂದಿಗಿಂತಲೂ ಫಿಟ್‌ನೆಸ್‌ ಮಹತ್ವ ಹೆಚ್ಚಾಗಿದೆ. ಅದಕ್ಕೆ ಒಂದು ರೀತಿಯಲ್ಲಿ ವಿರಾಟ್ ಅವರೇ ಪ್ರೇರಣೆ ಎನ್ನಲಡ್ಡಿಯಿಲ್ಲ. ಅವರ ಕಟ್ಟುನಿಟ್ಟಾದ ವ್ಯಾಯಾಮ, ಆಹಾರ ಪದ್ಧತಿಗಳು ಈಗ ಸುದ್ದಿಯಾಗುತ್ತಿವೆ. ತಮ್ಮ ಶಿಸ್ತಿನ ಜೀವನ ಮತ್ತು ದೈಹಿಕ ಸಾಮರ್ಥ್ಯದಿಂದ ಅವರು ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ಯಶಸ್ವಿ ಆಟಗಾರನಾಗಿದ್ದಾರೆ. ಅಲ್ಲದೇ ಮಾನಸಿಕವಾಗಿ ದೃಢತೆಯುಳ್ಳ ನಾಯಕನಾಗಿಯೂ ಬೆಳೆಯುತ್ತಿದ್ದಾರೆ.

ಇವತ್ತು ವಿಕೆಟ್‌ಗಳ ನಡುವೆ ಅತ್ಯಂತ ವೇಗವಾಗಿ ಓಡುವ ಬೆರಳೆಣಿಕಯಷ್ಟು ಬ್ಯಾಟ್ಸ್‌ಮನ್‌ಗಳಲ್ಲಿ ವಿರಾಟ್ ಕೂಡ ಒಬ್ಬರು.  ಅವರು ಕೇವಲ 8.90 ಸೆಕೆಂಡ್‌ಗಳಲ್ಲಿ 3 ರನ್ ಓಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ತಾವು ರಾಯಭಾರಿಯಾಗಿರುವ ಕ್ರೀಡಾಪರಿಕರಗಳ ಬ್ರ್ಯಾಂಡ್‌ವೊಂದು ನಡೆಸಿರುವ ವಿಶೇಷ ಅಭಿಯಾನದ ಅಂಗವಾಗಿ, ಕೊಹ್ಲಿ ಈ ಸವಾಲು ಸ್ವೀಕರಿಸಿದ್ದರು. ಜತೆಗೆ ತಮ್ಮ ದಾಖಲೆಯನ್ನು ಸಾಧ್ಯವಾದರೆ ಮುರಿಯಿರಿ ಎಂದು ಕ್ರಿಕೆಟಿಗರಿಗೆ ಟ್ವೀಟರ್‌ನಲ್ಲಿ ಸವಾಲೆಸೆದಿದ್ದರು.

ADVERTISEMENT

ಪ್ಯಾಡ್ ಕಟ್ಟಿ, ಕೈಯಲ್ಲಿ ಬ್ಯಾಟ್ ಹಿಡಿದು 20.11 ಯಾರ್ಡ್‌ಗಳ ಪಿಚ್‌ನಲ್ಲಿ ಕೊಹ್ಲಿ ಓಡಿದ್ದಾರೆ. ಅದರಲ್ಲಿ  3 ರನ್ ಮುಕ್ತಾಯಗೊಳಿಸಲು ಕೊಹ್ಲಿ ಒಟ್ಟು 55 ಮೀಟರ್ಸ್‌ ದೂರ ಕ್ರಮಿಸಿದ್ದಾರೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಈ ಬದಲಾವಣೆ ಹೇಗೆ ಸಾಧ್ಯವಾಯಿತು?
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಬಂದ ಆರಂಭದ ದಿನಗಳಲ್ಲಿ ಕೊಹ್ಲಿ ಅವರು ದೈಹಿಕ ಸಾಮರ್ಥ್ಯ ನಿರ್ವಹಿಸಲು ಕಷ್ಟಪಡುತ್ತಿದ್ದರು. ಆಗ  ಭಾರತ ತಂಡದ ಕೋಚ್‌ ಆಗಿದ್ದ ಡಂಕನ್‌ ಫ್ಲೆಚರ್‌ ಅವರು ಫಿಟ್‌ನೆಸ್‌ ಅನ್ನು ಗಂಭೀರವಾಗಿ ತೆಗೆದುಕೊಳ್ಳಲು ಒತ್ತಾಯಿಸಿದ್ದರು ಎಂಬುದನ್ನು ಸ್ವತಃ ಕೊಹ್ಲಿ ಅವರೇ ಒಂದು ಸಂದರ್ಶನಲ್ಲಿ ಹೇಳಿದ್ದರು.

ಇದರ ಪರಿಣಾಮವಾಗಿಯೇ 2011ರ ನಂತರದ ವರ್ಷಗಳಲ್ಲಿ ಕೊಹ್ಲಿ ತಮ್ಮ ದೈಹಿಕ ಹಾಗೂ ಬ್ಯಾಟಿಂಗ್‌ ಶಕ್ತಿಯನ್ನು ವೃದ್ಧಿಮಾಡಿಕೊಳ್ಳುತ್ತಲೇ ಹೋದರು. ಇಂದಿಗೂ ಮೂರು ಮಾದರಿಗಳ ಕ್ರಿಕೆಟ್‌ನಲ್ಲಿ ಅವರು ತಮ್ಮ ‘ವಿರಾಟ್‌’ ಸಾಮರ್ಥ್ಯ ತೋರುತ್ತಲೇ ಇದ್ದಾರೆ.

ಫಿಟ್‌ನೆಸ್‌ ಕಾಪಾಡಿಕೊಳ್ಳಲು ಕೊಹ್ಲಿ ಅವರು ತಮ್ಮ ಇಷ್ಟದ ಖಾದ್ಯಗಳನ್ನು ಮುಲಾಜಿಲ್ಲದೇ ಪಕ್ಕಕ್ಕೆ ಸರಿಸುವ ಗಟ್ಟಿಗ. ವಾರದಲ್ಲಿ ಕನಿಷ್ಠ ಐದು ದಿನ ಎರಡು ಗಂಟೆಗಳವರೆಗೆ ಜಿಮ್‌ನಲ್ಲಿ ದೇಹ ದಂಡಿಸುವ ಕೊಹ್ಲಿ, ಯಾವುದೇ ಕಾರಣಕ್ಕೂ ವ್ಯಾಯಾಮ ತಪ್ಪಿಸುವುದಿಲ್ಲ.

ಸಾಧ್ಯವಾದಷ್ಟು ಮನೆಯಲ್ಲಿ ತಯಾರಾದ ಊಟ ಸೇವಿಸುವುದನ್ನು ಅವರು ಇಷ್ಟಪಡುತ್ತಾರೆ. ಕೊಬ್ಬಿನ ಅಂಶಗಳು ಕಡಿಮೆ ಇರುವ ಆಹಾರ ಸೇವನೆ ಮಾತ್ರ ನಮ್ಮ ದೇಹ ದಂಡನೆಗೆ ಪೂರಕವಾಗಿ ಕೆಲಸ ಮಾಡುತ್ತದೆ ಎಂಬುದು ಅವರ ಅಭಿಪ್ರಾಯ. ನಮ್ಮ ದೇಹ ಕುರುಕಲು ತಿಂಡಿಗಳಿಗೆ ಹೊಂದಿಕೊಳ್ಳದಂತೆ ಎಚ್ಚರವಹಿಸಬೇಕು. ನಮ್ಮ ಇಷ್ಟದ ಖಾದ್ಯಗಳನ್ನು ನಿಯಮಿತವಾಗಿ ತಿನ್ನುವುದನ್ನು ರೂಢಿ ಮಾಡಿಕೊಳ್ಳಬೇಕು ಎನ್ನುತ್ತಾರೆ ಅವರು.

ಅವರಿಗೆ ಹಣ್ಣುಗಳು, ಪ್ರೋಟೀನ್‌ಯುಕ್ತ ಪಾನೀಯ, ಬಾದಾಮಿ, ಅಂಜುರಗಳು ಬೆಳಗಿನ ಉಪಹಾರದಲ್ಲಿ ಇರಬೇಕು. ರಾತ್ರಿ ಮಲಗುವ ವೇಳೆ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವುದು ಹಾಗೂ ಸರಿಯಾದ ಸಮಯಕ್ಕೆ ಮಲಗುವುದನ್ನು ಶಿಸ್ತಾಗಿ ಬೆಳೆಸಿಕೊಳ್ಳದಿದ್ದರೆ ನಾವು ಎಷ್ಟೇ ಉತ್ಸಾಹದಲ್ಲಿ ವ್ಯಾಯಾಮ ಮಾಡಿದರೂ ಉಪಯೋಗವಿಲ್ಲ. ಕೇವಲ ದೇಹದ ತೂಕ ಕಡಿಮೆ ಮಾಡುವ ವ್ಯಾಯಾಮಗಳಿಗಿಂತ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವಲ್ಲಿ ವಿರಾಟ್‌ ಗಮನಹರಿಸುತ್ತಾರೆ. ಅವರ ಪ್ರಕಾರ ಕ್ರೀಡಾಪಟುಗಳು ಶಿಸ್ತು ಬೆಳೆಸಿಕೊಳ್ಳಬೇಕು. ವ್ಯಾಯಾಮವು ಅದರ ಒಂದು ಪ್ರಮುಖ ಅಂಶ. ಅದಕ್ಕಾಗಿ ಒಂದಿಷ್ಟು ತ್ಯಾಗ ಮಾಡಬೇಕಾಗುತ್ತದೆ ಎಂದು ಹೇಳುತ್ತಾರೆ.

ವಿರಾಟ್‌ ಎಷ್ಟು ವೇಗವಾಗಿ ಓಡುತ್ತಾರೆ ಗೊತ್ತಾ?
ಮೂರು ಮಾದರಿಯ ಕ್ರಿಕೆಟ್‌ ಪಂದ್ಯಗಳಲ್ಲೂ ಕೊಹ್ಲಿ ಅವರು ವಿಕೆಟ್‌ಗಳ ನಡುವೆ ವೇಗವಾಗಿ ರನ್‌ ಗಳಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ವಿಕೆಟ್‌ಗಳ ನಡುವೆ ಚಾಕಚಕ್ಯತೆಯಿಂದ ರನ್‌ ಕದಿಯುವ ಕೊಹ್ಲಿ ಇತ್ತೀಚೆಗೆ ಹೊಸ ಪ್ರಯೋಗದಿಂದ ಜಗತ್ತಿನ ಗಮನೆ ಸೆಳೆದಿದ್ದಾರೆ.

ಅವರು ಕೇವಲ 8.90 ಸೆಕೆಂಡ್‌ಗಳಲ್ಲಿ 3 ರನ್ ಓಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ತಾವು ರಾಯಭಾರಿಯಾಗಿರುವ ಕ್ರೀಡಾಪರಿಕರಗಳ ಬ್ರ್ಯಾಂಡ್‌ವೊಂದು ನಡೆಸಿರುವ ವಿಶೇಷ ಅಭಿಯಾನದ ಅಂಗವಾಗಿ, ಕೊಹ್ಲಿ ಈ ಸವಾಲು ಸ್ವೀಕರಿಸಿದ್ದರು. ಜತೆಗೆ ತಮ್ಮ ದಾಖಲೆಯನ್ನು ಸಾಧ್ಯವಾದರೆ ಮುರಿಯಿರಿ ಎಂದು ಕ್ರಿಕೆಟಿಗರಿಗೆ ಟ್ವೀಟರ್‌ನಲ್ಲಿ ಸವಾಲೆಸೆದಿದ್ದರು.

ಪ್ಯಾಡ್ ಕಟ್ಟಿ, ಕೈಯಲ್ಲಿ ಬ್ಯಾಟ್ ಹಿಡಿದು 20.11 ಮೀಟರ್ಸ್‌ ಉದ್ದದ ಪಿಚ್‌ನಲ್ಲಿ ಕೊಹ್ಲಿ ಓಡಿದ್ದಾರೆ. 20.11 ಮೀಟರ್ಸ್‌ಗಳಂತೆ 3 ರನ್ ಮುಕ್ತಾಯಗೊಳಿಸಲು ಕೊಹ್ಲಿ 60.33 ಮೀಟರ್ಸ್‌ ದೂರ ಕ್ರಮಿಸಿದ್ದಾರೆ. ಒಳಾಂಗಣ ಅಥ್ಲೆಟಿಕ್ಸ್‌ನಲ್ಲಿ ಅತಿ ವೇಗದ 60 ಮೀಟರ್ಸ್‌ ಓಟದ ವಿಶ್ವ ದಾಖಲೆಯು ಅಮೆರಿಕದ ಕ್ರಿಶ್ಚಿಯನ್ ಕೋಲ್ಮನ್ ಹೆಸರಿನಲ್ಲಿದೆ. ಕೋಲ್ಮನ್ 6.34 ಸೆಕೆಂಡ್‌ಗಳಲ್ಲಿ 60 ಮೀಟರ್ಸ್‌ ದೂರ ಓಡಿದ್ದರು. ಟ್ರ್ಯಾಕ್‌ನಲ್ಲಿ ನೇರವಾಗಿ ಓಡಲು 6.34 ಸೆಕೆಂಡ್‌ಗಳನ್ನು ತೆಗೆದುಕೊಂಡಿದ್ದಕ್ಕೆ ಹೋಲಿಸಿದರೆ, ಕೊಹ್ಲಿ ಕ್ರಿಕೆಟ್ ಪಿಚ್‌ನಲ್ಲಿ ಪ್ಯಾಡ್, ಬ್ಯಾಟ್ ಸಹಿತ ಕೇವಲ 8.90 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.