ADVERTISEMENT

ಕ್ರೀಡೆಯಲ್ಲಿ ಯಾದಗಿರಿ ಹಿಂದೆ

ಸಿದ್ದೇಶ
Published 20 ನವೆಂಬರ್ 2016, 19:30 IST
Last Updated 20 ನವೆಂಬರ್ 2016, 19:30 IST
ಯಾದಗಿರಿ ಜಿಲ್ಲಾ ಕ್ರೀಡಾಂಗಣ. –ಪ್ರಜಾವಾಣಿ ಚಿತ್ರಗಳು/ ರವೀಂದ್ರ ಕುಲಕರ್ಣಿ
ಯಾದಗಿರಿ ಜಿಲ್ಲಾ ಕ್ರೀಡಾಂಗಣ. –ಪ್ರಜಾವಾಣಿ ಚಿತ್ರಗಳು/ ರವೀಂದ್ರ ಕುಲಕರ್ಣಿ   

ಯಾದಗಿರಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಕರಾಟೆ ಟೂರ್ನಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆಯು ಒಂದು ವಾರದ ಹಿಂದೆ ಆಯೋಜಿಸಿತ್ತು. ರಾಜ್ಯದ 26 ಜಿಲ್ಲೆಗಳ 184 ಕ್ರೀಡಾಪಟುಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಏಳು ವಿಭಾಗಗಳಲ್ಲಿ ಟೂರ್ನಿ ನಡೆಯಿತು. ಆದರೆ, ತವರಿನ ಜನರ ಮುಂದೆ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಆತಿಥೇಯ ಜಿಲ್ಲೆಯ ಒಬ್ಬ ಪ್ರತಿನಿಧಿಯೂ ಇರಲಿಲ್ಲ!

ಇದು ಭೀಮಾ ತೀರದ ನಾಡಿನ ಕ್ರೀಡಾಲೋಕದ ದುರಂತ ಕಥೆ. ಇಲ್ಲಿ ಕರಾಟೆ ಮಾತ್ರವಲ್ಲ, ಬಹುತೇಕ ಕ್ರೀಡೆಗಳ ಸ್ಥಿತಿ ಇದಕ್ಕಿನ ಭಿನ್ನವಾಗಿಲ್ಲ.
ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳು ಸೇರಿ ಒಟ್ಟು 65 ಕಾಲೇಜುಗಳು ಜಿಲ್ಲೆಯಲ್ಲಿದ್ದು, ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಇಷ್ಟಾದರೂ ಒಬ್ಬ ಕರಾಟೆ ಪಟು ಸಿಗಲಿಲ್ಲವೇ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಗುರುಲಿಂಗಪ್ಪ ಮಿಣಜಿಗಿ ಅವರನ್ನು ಪ್ರಶ್ನಿಸಿದರೆ, ‘ಜಿಲ್ಲೆಯಲ್ಲಿ ಪ್ರಾಥಮಿಕ ಹಂತದಲ್ಲೇ ಕ್ರೀಡೆಗೆ ಪ್ರೋತ್ಸಾಹವಿಲ್ಲ. ಇಂಥ ಸಂದರ್ಭದಲ್ಲಿ ಕ್ರೀಡಾಪಟುಗಳು ಮೇಲಿಂದ ಉದುರುತ್ತಾರೆಯೇ’ ಎಂದು ಅವರು ಮರು ಪ್ರಶ್ನಿಸುತ್ತಾರೆ. 

‘ಟೂರ್ನಿ ಆರಂಭಕ್ಕೂ ಮುನ್ನವೇ ಎಲ್ಲಾ ಕಾಲೇಜುಗಳಿಗೂ ಕರಾಟೆ ಪೈಪೋಟಿ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೆ, ಯಾರೊಬ್ಬರೂ ಪ್ರವೇಶ ಪಡೆಯಲು ಮುಂದೆ ಬಂದಿಲ್ಲ. ಇದರ ಅರ್ಥ ಯಾರೂ ಇಲ್ಲ ಎಂದೇ ಅಲ್ಲವೇ? ಪ್ರಾಥಮಿಕ ಹಂತದಿಂದಲೇ ಮಕ್ಕಳು ಕರಾಟೆ ಸೇರಿದಂತೆ ಯಾವುದೇ ಕ್ರೀಡೆ ಕಲಿತಿದ್ದರೆ, ಸ್ವಾಭಾವಿಕವಾಗಿ ಮುಂದಿನ ಹಂತದಲ್ಲಿ ಅದನ್ನು ಮುಂದುವರಿಸುತ್ತಾರೆ. ಇದು ನಮ್ಮಲ್ಲಿ ಆಗುತ್ತಿಲ್ಲ’ ಎಂಬುದು ಅವರ ವಿವರಣೆ.

‘ಕೆಲವು ಖಾಸಗಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಮಾತ್ರ ದೈಹಿಕ ಶಿಕ್ಷಣ ಶಿಕ್ಷಕರು ಇದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅಂಥ ಯಾವುದೇ ಹುದ್ದೆ ಸೃಷ್ಟಿಯಾಗಿಲ್ಲ. ಇದು ಕ್ರೀಡಾ ಚಟುವಟಿಕೆಗಳಿಗೆ ಹಿನ್ನಡೆಯಾಗಲು ಪ್ರಮುಖ ಕಾರಣ’ ಎಂಬುದು ಅವರ ವಿಶ್ಲೇಷಣೆ.

‘ಮೂಲಸೌಕರ್ಯಗಳಲ್ಲೊಂದಾದ ಕೊಠಡಿ ನಿರ್ಮಾಣಕ್ಕೆ ಹಲವಾರು ಪ್ರಾಥಮಿಕ ಶಾಲೆಗಳಲ್ಲಿ ಜಾಗವಿಲ್ಲ. ಇನ್ನು ಕ್ರೀಡಾಂಗಣಕ್ಕೆ ಎಲ್ಲಿಂದ ಜಾಗ ಹುಡುಕುವುದು. ಇಂಥ ಸಂದರ್ಭದಲ್ಲಿ ಮಕ್ಕಳಲ್ಲಿ ಕ್ರೀಡಾ ಸಂಸ್ಕೃತಿ ಬೆಳೆಸಬೇಕೆಂದರೆ ಹೇಗೆ ಸಾಧ್ಯ’ ಎಂಬುದು ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರ ಪ್ರಶ್ನೆ.

ಎರಡು ನದಿಗಳ ತವರೂರದ ಯಾದಗಿರಿ ಪ್ರದೇಶವು ಜಿಲ್ಲೆಯಾಗಿ ಏಳು ವಸಂತಗಳು ಇದೀಗ ಪೂರ್ಣಗೊಳ್ಳಲಿವೆ. ಸಂಘಟನೆ ಮತ್ತು ಸೌಕರ್ಯಗಳ ಕೊರತೆಯ ನೆಪವೊಡ್ಡಿ ಯಾರೂ ಇಲ್ಲಿ ಕ್ರೀಡಾಕೂಟ ನಡೆಸಲು ಮುಂದೆ ಬರುವುದಿಲ್ಲ.

ಕ್ರೀಡಾಂಗಣ, ಕ್ರೀಡಾ ಸಾಮಗ್ರಿಗಳ ಕೊರತೆಯೂ ಈ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳು ಹಿಂದುಳಿಯಲು ಕಾರಣ. ನಗರದ ಹೊರವಲಯದಲ್ಲಿ ಸುಮಾರು 50 ಎಕರೆಯ ವಿಶಾಲವಾದ ಜಿಲ್ಲಾ ಕ್ರೀಡಾಂಗಣವಿದೆ. ಆದರೆ, ಎರಡು ಕಟ್ಟಡಗಳನ್ನು ಹೊರತುಪಡಿಸಿ ಮತ್ತೇನು ಅಲ್ಲಿ ಇಲ್ಲ. ವಿಶಾಲ ಪ್ರದೇಶದಲ್ಲಿ ಮುಳ್ಳು–ಕಂಟಿ ಬೆಳೆದು ನಿಂತಿದೆ. 

ಅವ್ಯವಸ್ಥೆಯ ಆಗರ...
‘ಪೊಲೀಸ್‌, ಕೆಇಬಿ ಆಯ್ಕೆ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲೇ ಅಭ್ಯರ್ಥಿಗಳನ್ನು ಓಡಿಸಲಾಗುತ್ತದೆ. ಕಲ್ಲು–ಮಣ್ಣಿನಿಂದ ಕೂಡಿರುವ ಕ್ರೀಡಾಂಗಣದಲ್ಲಿ  ಓಡುವಾಗ ಸಾಕಷ್ಟು ಮಂದಿ ಬಿದ್ದು, ಚರ್ಮ ಕಿತ್ತುಕೊಂಡಿರುವುದನ್ನು ಕಣ್ಣಾರೆ ಕಂಡಿದ್ದೇನೆ’ ಎನ್ನುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕ ಶಂಕರಗೌಡ ಪಾಟೀಲ.

ADVERTISEMENT

‘ಪ್ರಾಥಮಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಪ್ರೌಢಶಾಲೆ ಮಕ್ಕಳು, ಪ್ರೌಢಶಾಲೆ ಕ್ರೀಡಾಕೂಟಗಳಲ್ಲಿ ಕಾಲೇಜಿನ ಮಕ್ಕಳು ಜಿಲ್ಲೆಯನ್ನು ಪ್ರತಿನಿಧಿಸುವುದನ್ನು ನಾನು ಕಂಡಿದ್ದೇನೆ. ಇಂಥ ಪರಿಸ್ಥಿತಿಯಲ್ಲಿ ಕ್ರೀಡೆ ಹೇಗೆ ಬೆಳೆಯಲು ಸಾಧ್ಯ’ ಎಂಬುದು ಅವರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.