ADVERTISEMENT

ಛಲ–ಬಲದ ಹಿಂದಿನ ನೋವು

ವಿಕ್ರಂ ಕಾಂತಿಕೆರೆ
Published 19 ಫೆಬ್ರುವರಿ 2017, 19:30 IST
Last Updated 19 ಫೆಬ್ರುವರಿ 2017, 19:30 IST
ಸಂತೋಷ ಹೊಸಮನಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ
ಸಂತೋಷ ಹೊಸಮನಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ   
‘ನಾಟಿ ವೈದ್ಯರು ಕೂಡ ಸುಲಭವಾಗಿ ಮಾಡಿ ಮುಗಿಸುವ ಚಿಕಿತ್ಸೆ, ಎಲ್ಲ ಸೌಲಭ್ಯ ಇರುವ ಕಿಮ್ಸ್‌ನ ತಜ್ಞ ವೈದ್ಯರಿಗೆ ಕಷ್ಟವಾಯಿತೇ...?
ರಾಜ್ಯ ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆಯ ಸಂದರ್ಭದಲ್ಲಿ ಬಲತೊಡೆಯ ಎಲುಬು ಮುರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಸಾವಿಗೀಡಾದ ಧಾರವಾಡದ ಪೈಲ್ವಾನ್‌ ಸಂತೋಷ ಹೊಸಮನಿ ಎದುರಿಸಿದ ದುರಂತದ ಬಗ್ಗೆ ಜನರು ಕೇಳುವ ಪ್ರಶ್ನೆ ಇದು.
 
ರಾಜ್ಯ ಒಲಿಂಪಿಕ್ಸ್‌ನ ಆರನೇ ದಿನ ಧಾರವಾಡದ ಕಲಾಭವನ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ದಾವಣಗೆರೆಯ ಮಹಮ್ಮದ್ ಅಲಿ ವಿರುದ್ಧ ಸೆಣಸುತ್ತಿದ್ದಾಗ ಸಂತೋಷ ಅವರ ಬಲ ತೊಡೆಯ ಮೂಳೆ ಮುರಿದಿತ್ತು. ಐದು ದಿನಗಳ ಚಿಕಿತ್ಸೆಯ ನಂತರ ಕಿಮ್ಸ್‌ನಲ್ಲಿ ಅವರು ಕೊನೆಯುಸಿರೆಳೆದಿದ್ದರು. ಮುರಿದ ಎಲುಬಿನಿಂದ ಕೊಬ್ಬು ರಕ್ತನಾಳದಲ್ಲಿ ಸೇರಿ (ambolism) ಉಸಿರಾಟಕ್ಕೆ ತೊಂದರೆಯಾದದ್ದೇ ಸಾವಿಗೆ ಕಾರಣ ಎಂಬುದು ವೈದ್ಯರ ಹೇಳಿಕೆ.
 
ಕ್ರೀಡೆಯಲ್ಲಿ ಗಾಯಗಳಾಗುವುದು ಸಹಜ. ಕುಸ್ತಿಯಲ್ಲಿ ಕೈ ಕಾಲು ಉಳುಕುವುದು, ಮಾಂಸಖಂಡಗಳಿಗೆ ಬಲವಾದ ಪೆಟ್ಟು ಬೀಳುವುದು, ಎಲುಬು ಮುರಿಯುವುದು ಇತ್ಯಾದಿ ಇದ್ದೇ ಇರುತ್ತದೆ. ಆದರೆ ಇದರಿಂದ ಸಾವು ಸಂಭವಿಸುವುದು ಸಾಧ್ಯವೇ ಇಲ್ಲ ಎಂದು ಕುಸ್ತಿಯಲ್ಲಿ ಪಳಗಿದವರ ಅಭಿಪ್ರಾಯ. ಕುಸ್ತಿ ಜನಪ್ರಿಯವಾಗಿರುವ ಉತ್ತರ ಕರ್ನಾಟಕದಲ್ಲಿ ಅಖಾಡದಲ್ಲಿ ಗಾಯಗೊಂಡು ಪೈಲ್ವಾನರು ಪ್ರಾಣ ಬಿಟ್ಟ ಉದಾಹರಣೆಗಳೇ ಇಲ್ಲ ಎನ್ನುತ್ತಾರೆ ಈ ಭಾಗದ ಕುಸ್ತಿ ಸಂಘಟಕರು.
ಗಂಭೀರ ಗಾಯಗೊಂಡವರು ಕೆಲವೇ ತಿಂಗಳಲ್ಲಿ ಸುಧಾರಿಸಿಕೊಂಡು ಕಣಕ್ಕೆ ಇಳಿದ ಪ್ರಸಂಗಗಳು ಇಲ್ಲಿ ಸಾಕಷ್ಟು ಇವೆ. ಹುಬ್ಬಳ್ಳಿಯ ವಾಯುಪುತ್ರ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ, ಮಾಜಿ ಪೈಲ್ವಾನ್ ಅಶೋಕ ಅವರು ಕತ್ತು ಉಳುಕಿನಿಂದ ಗಂಭೀರ ಅಸ್ವಸ್ಥಗೊಂಡು ನಂತರ ಕುಸ್ತಿ ಹಿಡಿದಿದ್ದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. 
 
‘ಇನ್ನೇನು ನನ್ನ ಕುಸ್ತಿ ಜೀವನ ಮುಗಿಯಿತು ಎಂದುಕೊಂಡಿದ್ದೆ. ಆದರೆ ಕೆಲವೇ ದಿನಗಳ ಚಿಕಿತ್ಸೆಯ ನಂತರ ಮತ್ತೆ ಸ್ಪರ್ಧಿಸಿದ್ದೆ. ಭಾರಿ ತೂಕದ ಗೋಣಿಚೀಲ ಹೊತ್ತಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ ಅವರು. 
 
ಸಂತೋಷ ಹೊಸಮನಿ ಅವರ ಕೋಚ್‌ ಚಂದ್ರಶೇಖರ ಗರಗದ ಅವರು ದಸರಾ ಕುಸ್ತಿಯಲ್ಲಿ ಭುಜದ ಎಲುಬು ಮುರಿತಕ್ಕೆ ಒಳಗಾಗಿದ್ದರು. ಕೆಲವು ತಿಂಗಳ ನಂತರ ಅಖಾಡಕ್ಕೆ ಇಳಿದಿದ್ದರು. ‘ನಾನು ಗಂಭೀರ ಗಾಯದಿಂದ ಚೇತರಿಸಿಕೊಂಡಂತೆ ನನ್ನ ಶಿಷ್ಯನೂ ಚಿಕಿತ್ಸೆಯ ನಂತರ ಅಖಾಡಕ್ಕೆ ಇಳಿಯುತ್ತಾನೆ ಎಂಬ ವಿಶ್ವಾಸವಿತ್ತು. ಆದರೆ ವಿಧಿಯಾಟ ಬೇರೆಯೇ ಆಗಿತ್ತು’ ಎನ್ನುತ್ತಾರೆ ಚಂದ್ರಶೇಖರ.  
 
‘ಪೈಲ್ವಾನರು ಅಖಾಡದಲ್ಲಿದ್ದಾಗ ಕಾದಾಡುವ ಛಲ ಇರುತ್ತದೆ. ಎಂಥ ಪರಿಸ್ಥಿತಿಯನ್ನೂ ನಿಭಾಯಿಸುವ ಆತ್ಮವಿಶ್ವಾಸ ಅವರಲ್ಲಿರುತ್ತದೆ. ಆದ್ದರಿಂದ ಅಪಾಯಕಾರಿ ಪಟ್ಟುಗಳನ್ನು ಹಾಕಲು ಮುಂದಾಗುತ್ತಾರೆ. ಆದರೆ ಎದುರಾಳಿಯಿಂದ ಅಪಾಯ ಇದೆ ಎಂದು ಗೊತ್ತಾದಾಗ ರೆಫರಿಗಳೇ ಸೀಟಿ ಹೊಡೆದು ಬಿಡಿಸುತ್ತಾರೆ. ಎದುರಾಳಿಯಿಂದ ಎದುರಾಗುವ ಅಪಾಯವನ್ನು ಹೇಗೆ ಮೆಟ್ಟಿನಿಲ್ಲಬೇಕು ಎಂಬುದನ್ನು ತರಬೇತಿ ಸಂದರ್ಭದಲ್ಲಿ ಹೇಳಿಕೊಡಲಾಗುತ್ತದೆ. ಅದನ್ನು ಅವರು ರೂಢಿಸಿಕೊಂಡಿರುತ್ತಾರೆ’ ಎಂದು ಕುಸ್ತಿ ಕೋಚ್ ಜಿನ್ನಪ್ಪ ಕುಂದಗೋಳ ಹೇಳುತ್ತಾರೆ. 
 
ಸಂತೋಷ ಹೊಸಮನಿ ಅವರಿಗೆ ಗಾಯ ಆದದ್ದು ತಾವೇ ತೆಗೆದುಕೊಂಡ ಛಲದ ನಿರ್ಧಾರದಿಂದ. 97 ಕೆಜಿ ತೂಕದ ಎದುರಾಳಿಯನ್ನು ಎತ್ತಿ ಬ್ಯಾಕ್‌ಥ್ರೋ ಪಟ್ಟು ಮೂಲಕ ಗರಿಷ್ಠ ಪಾಯಿಂಟ್ ಗಳಿಸಲು ಶ್ರಮಿಸಿದ ಸಂದರ್ಭದಲ್ಲಿ ಅವರ ಮೂಳೆ ಮುರಿದಿತ್ತು. 
 
‘ಇದೊಂದು ಅಪರೂಪದ ಪ್ರಕರಣ. ಕುಸ್ತಿಯಲ್ಲಿ ಈ ರೀತಿ ಮೂಳೆ ಮುರಿತಕ್ಕೆ ಒಳಗಾದ ಪ್ರಸಂಗ ನನ್ನ ಗಮನಕ್ಕೆ ಈ ವರೆಗೆ ಬಂದಿಲ್ಲ. ಕ್ರೀಡಾಪಟುಗಳು ಹೆಚ್ಚು ಭಾವಾವೇಶಕ್ಕೆ ಒಳಗಾದಾಗ ಇಂಥ ದುರಂತಗಳು ಸಂಭವಿಸುತ್ತವೆ. ಆದರೆ ಸಂತೋಷನ ಸಾವಿಗೆ ಎಲುಬು ಮುರಿತ ಕಾರಣವಲ್ಲ. ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಇರುವುದು ಕಾರಣವಾಗಿರಬಹುದು’ ಎಂದು ಕ್ರೀಡಾ ವೈದ್ಯ ಡಾ.ಕಿರಣ ಕುಲಕರ್ಣಿ ವಿಶ್ಲೇಷಿಸುತ್ತಾರೆ.

ಸಂತೋಷ ಅವರಿಗೆ ಆದಂಥ ಮೂಳೆ ಮುರಿತಕ್ಕೆ ವಿಶೇಷ ಚಿಕಿತ್ಸೆಯ ಅಗತ್ಯವೇನೂ ಇರಲಿಲ್ಲ. ಹುಬ್ಬಳ್ಳಿ–ಧಾರವಾಡದಲ್ಲಿ ಇರುವ ಆಸ್ಪತ್ರೆಗಳಲ್ಲಿ ಇಂಥ ಚಿಕಿತ್ಸೆಗೆ ಬೇಕಾದ ಎಲ್ಲ ಸೌಲಭ್ಯಗಳೂ ಇವೆ. ಆದರೆ ಕೊಬ್ಬಿನ ಅಂಶ ರಕ್ತದಲ್ಲಿ ಸೇರುವ ಅಪರೂಪದ ವಿದ್ಯಮಾನಕ್ಕೆ ಅವರು ಬಲಿಯಾಗಿದ್ದಾರೆ ಎಂಬುದು ಅವಳಿ ನಗರದ ಪ್ರಮುಖ ವೈದ್ಯರ ಅಭಿಪ್ರಾಯ.
 
ಆ್ಯಾಂಬೊಲಿಸಂ ಎಂದರೆ ಏನು?
ಆ್ಯಾಂಬೊಲಿಸಂ ಎಂಬುದು ರಕ್ತದಲ್ಲಿ ಕೊಬ್ಬು ಸೇರಿಕೊಂಡು ಹೃದಯ, ಶ್ವಾಸಕೋಶ ಮತ್ತು ಮಿದುಳಿಗೆ ರಕ್ತಸಂಚಾರವನ್ನು ತಡೆಯುವ ವಿದ್ಯಮಾನ. 
ವೈದ್ಯರ ಪ್ರಕಾರ ಈ ವಿದ್ಯಮಾನದಲ್ಲಿ ಶ್ವಾಸಕೋಶಕ್ಕೆ ರಕ್ತ ಸಂಚಾರ ಆಗುವ ನಾಳದಲ್ಲಿ ಕೊಬ್ಬು ಸೇರಿದರೆ ಹೆಚ್ಚು ಅಪಾಯ. ಹೀಗೆ ಆದರೆ ಕೇವಲ ಎರಡೇ ನಿಮಿಷದಲ್ಲಿ ಸಾವು ಸಂಭವಿಸಬಹುದು. ಹೃದಯಕ್ಕೆ ರಕ್ತಸಂಚಾರವಾಗುವ ನಾಳದಲ್ಲಿ ಕೊಬ್ಬು ತುಂಬಿದರೆ ಹೃದಯಾಘಾತವಾಗಿ ಸಾವು ಸಂಭವಿಸುತ್ತದೆ. ಮಿದುಳಿಗೆ ರಕ್ತ ಸಾಗಿಸುವ ನಾಳದಲ್ಲಿ ತುಂಬಿದರೆ ಪಾರ್ಶ್ವವಾಯುವಿಗೆ ತುತ್ತಾಗಬಹುದು. 
 
‘ಆ್ಯಾಂಬೊಲಿಸಂ ಎಂದರೆ ಸಾವಿನ ಇನ್ನೊಂದು ರೂಪ. ಇದು ಸಂಭವಿಸಿದರೆ ಸಾವೇ ಗತಿ. ಇದನ್ನು ಮೊದಲೇ ಪತ್ತೆ ಮಾಡಲು ಅಥವಾ ಬಂದ ನಂತರ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎನ್ನುತ್ತಾರೆ ಸಂತೋಷ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ ಕಿಮ್ಸ್‌ನ ಆರ್ಥೊಪಿಡಿಕ್ ವಿಭಾಗದ ಮುಖ್ಯಸ್ಥ ಡಾ.ಎಸ್.ಎಫ್ ಕಮ್ಮಾರ. ಧಾರವಾಡ ಜಿಲ್ಲೆಯ ನಿವೃತ್ತ ವೈದ್ಯಾಧಿಕಾರಿ ಡಾ.ಎಚ್‌.ಎನ್‌.ಅಂಗಡಿ ಅವರದೂ ಇದೇ ಅಭಿಪ್ರಾಯ.      
 
ಮ್ಯಾಟ್‌ ಮತ್ತು ಮಟ್ಟಿ: ಭಾರಿ ವ್ಯತ್ಯಾಸ
ಗ್ರಾಮೀಣ ಪ್ರದೇಶಗಳಲ್ಲಿ ಆಡುವ ಮಟ್ಟಿ ಕುಸ್ತಿ (ಮಣ್ಣಿನ ಸಾಂಪ್ರದಾಯಿಕ ಕಣ) ಮತ್ತು ಪಾಯಿಂಟ್ ಕುಸ್ತಿಗಾಗಿ ಬಳಸುವ ಮ್ಯಾಟ್‌ ನಡುವೆ ಭಾರಿ ಅಂತರವಿದೆ. ಮಟ್ಟಿಯಿಂದ ದಿಢೀರ್‌ ಆಗಿ ಮ್ಯಾಟ್‌ಗೆ ಪರಿವರ್ತನೆಯಾದಾಗ ಕೆಲವು ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂಬ ವಾದವೂ ಕುಸ್ತಿ ಕ್ಷೇತ್ರದಲ್ಲಿ ಇದೆ.

‘ಗರಡಿ ಮನೆಗಳಲ್ಲಿ ಪಳಗಿದವರು ದೇಹಬಲದ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಆದ್ದರಿಂದ ಜಂಗಿ ನಿಕಾಲಿ ಕುಸ್ತಿಯನ್ನು ತಾಸುಗಟ್ಟಲೆ ಆಡಲು ಅವರು ಸಮರ್ಥರಿರುತ್ತಾರೆ. ಆದರೆ ಪಾಯಿಂಟ್ ಕುಸ್ತಿಯಲ್ಲಿ ತಂತ್ರಗಳ ಮೊರೆ ಹೋಗುವುದು ಹೆಚ್ಚು. ಇದೇ ಕಾರಣಕ್ಕೆ ಇಲ್ಲಿ ಅಪಾಯದಿಂದ ತಪ್ಪಿಸಿಕೊಳ್ಳುವ ಸೂತ್ರಗಳಿಗೂ ಆದ್ಯತೆ ನೀಡಲಾಗುತ್ತದೆ’ ಎನ್ನುತ್ತಾರೆ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಕುಸ್ತಿ ಕೋಚ್‌ ತುಕಾರಾಮ್‌.
 
‘ಮಟ್ಟಿ ಕುಸ್ತಿಯಲ್ಲಿ ಹೆಚ್ಚು ಪಳಗಿದವರು ಏಕಾಏಕಿ ಮ್ಯಾಟ್‌ ಮೇಲೆ ಆಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಅವರು ನಿಯಂತ್ರಣ ತಪ್ಪಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಕ್ರೀಡೆಯಲ್ಲಿ ಅಪಾಯವನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ. ಕೆಲವು ವಿಧಾನಗಳನ್ನು ಅನುಸರಿಸಿ ಅಪಾಯದ ಪ್ರಮಾಣ ಕಡಿಮೆ ಮಾಡಬಹುದಷ್ಟೇ’ ಎನ್ನುತ್ತಾರೆ ತುಕಾರಾಮ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.