ADVERTISEMENT

ಡಬಲ್ಸ್ ಪ್ರತಿಭೆ ಜಗದೀಶ್

ಮಾನಸ ಬಿ.ಆರ್‌
Published 9 ಏಪ್ರಿಲ್ 2017, 19:30 IST
Last Updated 9 ಏಪ್ರಿಲ್ 2017, 19:30 IST
ಡಬಲ್ಸ್  ಪ್ರತಿಭೆ ಜಗದೀಶ್
ಡಬಲ್ಸ್ ಪ್ರತಿಭೆ ಜಗದೀಶ್   

ತಡವಾಗಿ ಬ್ಯಾಡ್ಮಿಂಟನ್ ಅಂಗಳಕ್ಕೆ ಕಾಲಿಟ್ಟರೂ ಸಿಂಗಲ್ಸ್‌ ವಿಭಾಗದ ರಾಜ್ಯ ರ‍್ಯಾಂಕಿಂಗ್ ‌ನಲ್ಲಿ ಅಗ್ರಸ್ಥಾನಕ್ಕೆ ಏರಿದ್ದ ತೆರೆಮರೆಯ ಪ್ರತಿಭೆ ಜಗದೀಶ್ ಯಾದವ್ ಇಂದು ಡಬಲ್ಸ್ ವಿಭಾಗದಲ್ಲಿ ರಾಜ್ಯದ ಪ್ರಮುಖ ಆಟಗಾರರಾಗಿ ಬೆಳೆದಿದ್ದಾರೆ.

ಕಾಲೇಜು ಮಟ್ಟದಲ್ಲಿ ಕ್ರಿಕೆಟ್‌ ತಂಡ ಕಟ್ಟಿಕೊಂಡಿದ್ದ ಜಗದೀಶ್‌ ಅವರಿಗೆ ಕ್ರಮೇಣ ಬ್ಯಾಡ್ಮಿಂಟನ್‌ನಲ್ಲಿ ಆಸಕ್ತಿ ಬೆಳೆಯಿತು. ಎಂಜಿನಿಯರಿಂಗ್ ಮುಗಿಸಿದ ಬಳಿಕ ವಿಪ್ರೊದಲ್ಲಿ ಸಿಕ್ಕಿದ್ದ ಕೆಲಸ ಬಿಟ್ಟು ವೃತ್ತಿಬದುಕಿಗಾಗಿ ಅವರು ಬ್ಯಾಡ್ಮಿಂಟನ್ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡರು.

ಊರು ಬೆಂಗಳೂರಿನ ಕೆ.ಆರ್‌. ಪುರಂ. ಇವರು ಮೊದಲು ರೈಲ್ವೇಸ್‌ನಲ್ಲಿ ಆಡಿದರು. ಬಳಿಕ ಇನ್‌ಕಮ್‌ಟ್ಯಾಕ್ಸ್ ತಂಡದ ಮೂಲಕ ಗುರುತಿಸಿಕೊಂಡಿದ್ದಾರೆ. ಡಬಲ್ಸ್ ವಿಭಾಗದ ಪ್ರಸಕ್ತ ರ‍್ಯಾಂಕಿಂಗ್ ‌ ಪಟ್ಟಿಯಲ್ಲಿ ಅವರು 165ನೇ ಸ್ಥಾನದಲ್ಲಿದ್ದಾರೆ. 2015ರಲ್ಲಿ 94ನೇ ಸ್ಥಾನಕ್ಕೆ ಏರಿದ್ದು ಈವರೆಗಿನ ಅವರ ಉತ್ತಮ ಸಾಧನೆ.

ADVERTISEMENT

‘ಡಬಲ್ಸ್ ರ‍್ಯಾಂಕಿಂಗ್ ‌ನಲ್ಲಿ 50ರೊಳಗಿನ ಸ್ಥಾನಕ್ಕೆ ಏರಿದರೆ ಮಾತ್ರ ಪ್ರಾಯೋಜಕರು ಸಿಗುತ್ತಾರೆ. ಇಲ್ಲದಿದ್ದರೆ ನಮ್ಮ ಹಣದಲ್ಲಿಯೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವುದು ಕಷ್ಟ. ಅಭ್ಯಾಸ, ಪ್ರಯಾಣ ಎಲ್ಲವನ್ನೂ ಸೇರಿ ವರ್ಷಕ್ಕೆ ₹30ರಿಂದ ₹40 ಲಕ್ಷ ಖರ್ಚಾಗುತ್ತದೆ. ಅಷ್ಟು ಹಣ ಹೊಂದಿಸುವುದು ಕಷ್ಟ. ಹೆಚ್ಚು ಟೂರ್ನಿಗಳನ್ನು ಆಡಿದರೆ ಮಾತ್ರ ರ‍್ಯಾಂಕಿಂಗ್ ಉತ್ತಮಪಡಿಸಿಕೊಳ್ಳಬಹುದು’ ಎನ್ನುವುದು ಜಗದೀಶ್ ಅವರ ಅಳಲು.

‘ಡಬಲ್ಸ್‌ ಆಟಗಾರರಿಗೆ ಕೋಚ್ ಇಲ್ಲ. ಸೀನಿಯರ್ ಆಟಗಾರರೊಂದಿಗೆ ಅಭ್ಯಾಸ ನಡೆಸಬೇಕು. ನಾವು ಮೊದಲು ಸಿಂಗಲ್ಸ್ ಆಡಿ ನಂತರ ಡಬಲ್ಸ್‌ಗೆ ಬರುತ್ತೇವೆ. ಇದು ತಪ್ಪು. ಮೊದಲಿನಿಂದ ಡಬಲ್ಸ್‌ಗೆ ಪ್ರಾಮುಖ್ಯತೆ ಕೊಡಬೇಕು. ಆದರೆ ಇಲ್ಲಿ ಸಿಂಗಲ್ಸ್ ಆಟಗಾರರಿಗೆ ಇರುವ ಮನ್ನಣೆ ನಮಗೆ ಸಿಗುತ್ತಿಲ್ಲ’ ಎನ್ನುತ್ತಾರೆ ಜಗದೀಶ್‌.

‘ಪ್ರಪಂಚದ ಎಲ್ಲಾ ಬ್ಯಾಡ್ಮಿಂಟನ್ ಆಟಗಾರರಂತೆ ನನಗೂ ಎರಡು ಪ್ರಮುಖ ಟೂರ್ನಿಗಳಲ್ಲಿ ಆಡುವ ಕನಸು ಇದೆ. ಒಲಿಂಪಿಕ್ಸ್‌ನಲ್ಲಿ ಆಡುವುದು ಇನ್ನೂ ಸಾಧ್ಯವಾಗಿಲ್ಲ. ಆದರೆ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಅರ್ಹತಾ ಸುತ್ತು ಆಡಿದ್ದೇನೆ. ಇದು ನನ್ನ ವೃತ್ತಿಬದುಕಿನ ಸ್ಮರಣೀಯ ಕ್ಷಣ’ ಎಂದು ಜಗದೀಶ್‌ ಅವರು ತಮ್ಮ ಕನಸುಗಳನ್ನು ಹಂಚಿಕೊಂಡರು.

‘ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್‌ ಹಂತದಲ್ಲಿ ಆಡಿದ ಆಟಗಾರರು ಮಾತ್ರ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಆಡಬಹುದು ಎಂಬ ಹೊಸ ನಿಯಮ ಜಾರಿಗೆ ತರುವ ಪ್ರಯತ್ನ ನಡೆದಿತ್ತು. ಆದರೆ ಇದರ ವಿರುದ್ಧ ನಾವು ಹೋರಾಟ ನಡೆಸಿದ್ದೆವು. ಈ ನಿಯಮದಿಂದಾಗಿ ಬಹಳಷ್ಟು ಆಟಗಾರರು ಬ್ಯಾಡ್ಮಿಂಟನ್ ತೊರೆಯುವ ಅಪಾಯ ಇತ್ತು’ ಎಂದು ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

**

ಜಗದೀಶ್ ಸಾಧನೆ

* 2012ರಲ್ಲಿ ಅಖಿಲ ಭಾರತ ಅಂತರ ರೈಲ್ವೆ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ.
* 2015ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಸೀನಿಯರ್‌ ವಿಭಾಗದಲ್ಲಿ ಕಂಚು.
* 2017ರ ಜಮೈಕಾ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಚಿನ್ನ.
* 2017ರಲ್ಲಿ ದಾವಣಗೆರೆಯಲ್ಲಿ ನಡೆದ ಸೀನಿಯರ್ ರಾಷ್ಟ್ರೀಯ ರ‍್ಯಾಂಕಿಂಗ್ ಟೂರ್ನಿಯಲ್ಲಿ ಕಂಚು.
* ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಬ್ಯಾಡ್ಮಿಂಟನ್ ನಲ್ಲಿ ಮೂರನೇ ಸ್ಥಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.