ADVERTISEMENT

ಪ್ರತಿಕ್ರಿಯೆಯಲ್ಲಿ ಅರಳಿದ ಅನುಭವ

ಕೈಬರಹ-ಕೈಪಿಡಿ ಭಾಗ 25

ಜಿ.ಕೆ.ವೆಂಕಟೇಶಮೂರ್ತಿ
Published 26 ಮೇ 2013, 19:59 IST
Last Updated 26 ಮೇ 2013, 19:59 IST

ಕೈಬರಹ ಕುರಿತ ಈ ಲೇಖನ ಸರಣಿಯನ್ನು ನಾನು ಪ್ರಾರಂಭಿಸಿದಾಗ, ಕೈಬರಹದ ಬಗ್ಗೆ ಅಷ್ಟೊಂದು ತಿಳಿಯವುದೇನಿದೆ ಎಂದು ಅನೇಕರು ಹುಬ್ಬೇರಿಸಿದರು. ಕೆಲವರಂತೂ ಕೈಬರಹ ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ, ಅದು ಹುಟ್ಟಿನಿಂದಲೇ ಬರುತ್ತದೆ, ತಂದೆ ತಾಯಿಯ ಕೈಬರಹ ಚೆನ್ನಾಗಿದ್ದರೆ ಮಕ್ಕಳಿಗೂ ಅದು ಆನುವಂಶೀಯವಾಗಿ ಬರುತ್ತದೆ ಎಂದು ಭಾವಿಸುತ್ತಾರೆ.

ಮೂರು ವರ್ಷಗಳ ಹಿಂದೆ ಕೈಗಾದಲ್ಲಿ ಒಂದು ದಿನದ `ಕೈಬರಹ ಕಾರ್ಯಾಗಾರ' ನಡೆಯಿತು. ಅದು ಅಲ್ಲಿಯ ಸಹ್ಯಾದ್ರಿ ಕನ್ನಡ ಸಂಘದಿಂದ ಏರ್ಪಾಡಾಗಿತ್ತು. ಈ ಕಾರ್ಯಾಗಾರಕ್ಕೆ ಕೈಗಾ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ (ಸಿವಿಲ್) ಎಂ.ಎಂ.ಛಬ್ಬಿ ಅವರ ಮೂವರು ಮಕ್ಕಳೂ ಬಂದಿದ್ದರು.

ಕಾರ್ಯಾಗಾರದ ಕಡೆಯಲ್ಲಿ ನಡೆದ ಮುಕ್ತಾಯ ಸಮಾರಂಭಕ್ಕೆ ಛಬ್ಬಿಯವರು ಬಂದಿದ್ದರು. ಅವರು ತಮ್ಮ ಮಕ್ಕಳ ತರಬೇತಿಯ ಮೊದಲಿನ ಮತ್ತು ಆ ನಂತರದ ಕೈಬರಹವನ್ನು ನೋಡಿ ನನಗೆ ಹೇಳಿದರು. `ಎಷ್ಟೋ ವರ್ಷಗಳಿಂದ ನಮ್ಮ ಮಕ್ಕಳ ಕೈಬರಹ ಸುಧಾರಿಸಿಕೊಳ್ಳಲು ಹೇಳೀ ಹೇಳೀ ಸಾಕಾಗಿತ್ತು. ಇದು ಅಷ್ಟೇ ಎಂದು ಬಿಟ್ಟುಬಿಟ್ಟಿದ್ದೆ. ಆದರೆ ನಿಮ್ಮ ಕಾರ್ಯಾಗಾರಕ್ಕೆ ಮೊದಲು ನಮ್ಮ ಮಕ್ಕಳು, ಅವರು ಸಾಮಾನ್ಯವಾಗಿ ಬರೆಯುವುದಕ್ಕಿಂತ ಚೆನ್ನಾಗಿ ಬರೆದಿದ್ದಾರೆ.

ತರಬೇತಿಯ ನಂತರದ ಅವರ ಬರಹ ನೋಡಿದರೆ ನಮ್ಮ ಮಕ್ಕಳೇ ಇದನ್ನು ಬರೆದರೇ ಎಂದು ಆಶ್ಚರ್ಯವಾಗುತ್ತದೆ. ಒಂದೇ ದಿನದಲ್ಲಿ ನೀವು ಪವಾಡವನ್ನೇ ಮಾಡಿದ್ದೀರಿ. ನಾನೂ ನಿಮ್ಮ ಕೈಬರಹದ ವಿದ್ಯಾರ್ಥಿ ಆಗಬೇಕೆನ್ನಿಸುತ್ತದೆ'. ಧಾರವಾಡದಲ್ಲಿ ನಡೆದ ಕಾರ್ಯಾಗಾರದ ನಂತರ ಡಾ. ಸಂಜೀವ ಕುಲಕರ್ಣಿಯವರು ಇದೇ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದರು.

ಎರಡು ವರ್ಷಗಳ ಹಿಂದೆ ನನ್ನದೇ ಕೈಬರಹದಲ್ಲಿ ಕೈಬರಹ ಕುರಿತ ಲೇಖನ ಮಾಲೆಯು ಒಂದು ತಿಂಗಳ ಕಾಲ ಪ್ರತಿ ದಿನ (ಭಾನುವಾರ ಬಿಟ್ಟು) ಕಾರವಾರದ ಸ್ಥಳೀಯ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಸಂಪಾದಕ ಮತ್ತು ಈಗ ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿರುವ ಗಂಗಾಧರ ಹಿರೇಗುತ್ತಿಯವರ ಪ್ರೋತ್ಸಾಹದಿಂದ ಇದು ಸಾಧ್ಯವಾಯಿತು.

ಈ ಲೇಖನಗಳ ಜೆರಾಕ್ಸ್ ಪ್ರತಿಯೊಂದನ್ನು ಬೆಂಗಳೂರಿನ ನನ್ನ ಸ್ನೇಹಿತರೊಬ್ಬರಿಗೆ ಕೊಟ್ಟಿದ್ದೆ. ಕಳೆದ ವರ್ಷ ಅಕ್ಟೋಬರ್ 1ರಂದು ಬೆಂಗಳೂರಿನಿಂದ ಅವರ ಫೋನ್ ಬಂತು. `ನಾನು ಪ್ರೊ. ಜಿ.ವೆಂಕಟಸುಬ್ಬಯ್ಯ (ಶತಾಯುಷಿ, ನಿಘಂಟು ತಜ್ಞ) ಅವರ ಮನೆಯಲ್ಲಿದ್ದೇನೆ. ಕೈಬರಹ ಕುರಿತ ನಿಮ್ಮ ಹಸ್ತಪ್ರತಿಯನ್ನು ಅವರಿಗೆ ಹೀಗೇ ತೋರಿಸಿದೆ. ಇಗೋ ಅವರೇ ನಿಮ್ಮಡನೆ ಮಾತನಾಡುತ್ತಾರೆ' ಎಂದರು. (ನನಗೆ ಇದುವರೆಗೂ ಪ್ರೊ. ಜಿ.ವಿ. ಅವರನ್ನು ಮುಖತಃ ನೋಡಿ ಮಾತನಾಡುವ ಸಂದರ್ಭ ಬಂದಿಲ್ಲ).

ನಂತರ ಜಿ.ವಿ. ಅವರ ಧ್ವನಿ. `ನಿಮ್ಮ ಕೈಬರಹ ಅದ್ಭುತವಾಗಿದೆ. ಹಸ್ತಪ್ರತಿ ನೋಡಿದ ತಕ್ಷಣ ಐ ಜಸ್ಟ್ ಲವ್ಡ್ ಇಟ್. ಎಂತಹ ಮುಖ್ಯವಾದ ಒಳ್ಳೆಯ ಕೆಲಸ ಮಾಡಿ ಮುಚ್ಚಿಟ್ಟುಕೊಂಡಿದ್ದೀರಲ್ಲ? ಇದು ಪಠ್ಯಪಸ್ತಕ ಆಗಬೇಕು. ಪ್ರತಿ ಶಾಲೆ, ಶಿಕ್ಷಕ ಹಾಗೂ ಮನೆಗೆ ಇದು ತಲುಪಬೇಕು. ನೀವು ಬೆಂಗಳೂರಿನಲ್ಲಿ ಇದ್ದಿದ್ದರೆ ಇಷ್ಟು ಹೊತ್ತಿಗೆ ಈ ಕೆಲಸ ಆಗಿಹೋಗುತ್ತಿತ್ತು'. ಆ ಹಿರಿಯರ ಮಾತಿನಿಂದ ನನಗೆ ಆನೆ ಬಲ ಬಂತು. ನಾನು `ಪ್ರಜಾವಾಣಿ'ಗೆ ಆ ಲೇಖನಗಳನ್ನು ಪರಿಷ್ಕರಿಸಿ, ಪುಷ್ಟೀಕರಿಸಿ ಕಳುಹಿಸುವ ಯೋಚನೆ ಮಾಡಿದ್ದು ಈ ಪ್ರತಿಕ್ರಿಯೆಯ ನಂತರವೇ.

`ಪ್ರಜಾವಾಣಿ'ಯಲ್ಲಿ ಈ ಲೇಖನಗಳು ಪ್ರಕಟವಾಗತೊಡಗಿದ ಮೇಲೆ ಬೆಂಗಳೂರಿನ ನಿವೃತ್ತ ಡಿ.ಡಿ.ಪಿ.ಐ. ಗಂಗಾಧರ ಗೌಡರು ಫೋನ್ ಮಾಡಿ ಹೇಳಿದರು. `ಕೈಬರಹ ನನ್ನ ಆಸಕ್ತಿಯ ವಿಷಯ. ಇದರ ಬಗ್ಗೆ ಇಂಗ್ಲಿಷಿನಲ್ಲೂ ಪುಸ್ತಕಗಳಿಗಾಗಿ ನಾನು ಹುಡುಕಾಡಿದ್ದೇನೆ. ಕೈಬರಹದ ಬಗ್ಗೆ ಇಷ್ಟು ವಿಸ್ತೃತ ಲೇಖನಗಳು ಅಥವಾ ಪುಸ್ತಕ ಇಂಗ್ಲಿಷಿನಲ್ಲೂ ಇಲ್ಲ'.

ತುಮಕೂರಿನ ಮಾರುತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಫೋನ್ ಮಾಡಿದ್ದರು. ಅವರ ಪ್ರಕಾರ ಕೈಬರಹ ಒಂದು ಮೂಲಭೂತ ಕೌಶಲ. ಅವರು ನನ್ನ ಲೇಖನಗಳೆಲ್ಲವನ್ನೂ ಸಂಗ್ರಹಿಸಿ ಇಟ್ಟುಕೊಂಡಿದ್ದಾರಂತೆ. ಅದರ ವಿಷಯಗಳನ್ನು ತಮ್ಮ ಶಾಲೆಯ ಶಿಕ್ಷಕರಿಗೆ ಹೇಳುತ್ತಾರಂತೆ. ಮುಂದಿನ ಶೈಕ್ಷಣಿಕ ವರ್ಷದ ಮೊದಲ ತಿಂಗಳು ಪ್ರತಿ ದಿನ ಮೊದಲ ತರಗತಿಯಲ್ಲಿ ಮಕ್ಕಳ ಕೈಬರಹ ಸುಧಾರಿಸುವ ಚಟುವಟಿಕೆ ಇಟ್ಟುಕೊಳ್ಳುವುದಾಗಿ ಅವರು ಹೇಳಿದರು.

ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ (ಹಿಂದಿನ) ಮುಖ್ಯಸ್ಥ ಡಾ. ಸೈಯದ್ ಫಸೀಯುದ್ದೀನ್ ಹೇಳುತ್ತಾರೆ. `ನಾವು ಮಕ್ಕಳಿಗೆ ಸುಮ್ಮನೆ ಚೆನ್ನಾಗಿ ಬರೆಯಿರಿ ಎಂದು ಹೇಳುತ್ತೇವೆ ಅಷ್ಟೆ. ಆದರೆ ಚೆನ್ನಾಗಿ ಬರೆಯುವುದು ಹೇಗೆ ಎಂಬುದನ್ನು ಮೂರ್ತಿಯವರು ಪರಿಣಾಮಕಾರಿಯಾಗಿ ಕಲಿಸುತ್ತಾರೆ'.

ಕುಮಟಾದ ಭಂಡಾರಿಯವರು `ಇದುವರೆಗೂ ಯಾರೂ ಮಾಡದ, ಆದರೆ ಅಗತ್ಯವಾಗಿ ಆಗಬೇಕಾಗಿದ್ದ ಕೆಲಸವನ್ನು ನೀವು ಮಾಡುತ್ತಿದ್ದೀರಿ. ಇದೂ ಒಂದು ರೀತಿಯ ಸಮಾಜ ಸೇವೆ' ಎಂದು ಫೋನಿನಲ್ಲಿ ತಿಳಿಸಿದರು. ಮತ್ತೊಬ್ಬ ಹಿರಿಯರ ಪ್ರಕಾರ, ಕೈಬರಹದ ಬಗ್ಗೆ ಇದೊಂದು ಸಂಶೋಧನೆ.

ಕೆಲವು ಪ್ರತಿಕ್ರಿಯೆಗಳ ಸ್ವಲ್ಪ ಭಾಗವನ್ನು ಮಾತ್ರ ನಾನು ತಿಳಿಸಿದ್ದೇನೆ. ಇವೆಲ್ಲವನ್ನೂ ಆತ್ಮಪ್ರಶಂಸೆಗಾಗಿ ನಾನು ಹೇಳುತ್ತಿಲ್ಲ. ಕೈಬರಹ ಅವಗಣನೆಗೆ ಒಳಗಾಗಿದೆ, ಅದಕ್ಕೆ ಪ್ರಾಶಸ್ತ್ಯ ನೀಡಿದರೆ ಮಹತ್ವದ ಬದಲಾವಣೆ ಆಗುತ್ತದೆ ಎಂದು ತಿಳಿಸುವುದೇ ನನ್ನ ಉದ್ದೇಶ. ನಾನು ಬ್ಯಾಟಿಂಗ್ ಮಾಡುತ್ತಿರುವುದು ನನ್ನ ಪರವಾಗಿ ಅಲ್ಲ, ಕೈಬರಹದ ಪರವಾಗಿ. ಕೈಬರಹದ ಬಗ್ಗೆ ತಿಳಿಯಬೇಕಾದ ಎಲ್ಲ ವಿಷಯಗಳು ಎಲ್ಲರಿಗೂ ತಿಳಿಯಲಿ, ಎಲ್ಲರ ಕೈಬರಹ ಸುಧಾರಣೆಯಾಗಲಿ, ಅವರ ವ್ಯಕ್ತಿತ್ವವೂ ಅರಳಲಿ ಎಂಬುದೇ ನನ್ನ ಆಶಯ. ಹಾಗಾದರೆ ನನ್ನ ಶ್ರಮವೂ ಸಾರ್ಥಕ.
(ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.