ADVERTISEMENT

ಪ್ರಶ್ನೆಪತ್ರಿಕೆ ಅಧ್ಯಯನ ಮಹತ್ವ

ಯಶಸ್ಸಿನತ್ತ...

ಡಾ.ಫಕೀರಪ್ಪ ಕಾಗಿನೆಲಿ
Published 5 ಏಪ್ರಿಲ್ 2015, 19:30 IST
Last Updated 5 ಏಪ್ರಿಲ್ 2015, 19:30 IST

ವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿಕೊಂಡಿರುವ ಅಭ್ಯರ್ಥಿಗಳಿಗೆ ಹಳೆಯ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಬಹು ಮುಖ್ಯವಾಗಿರುತ್ತದೆ. ಸುಮಾರು 4ರಿಂದ 5 ವರ್ಷಗಳ ಹಿಂದಿನಿಂದ ನಡೆಸಲಾಗಿರುವ ಪ್ರಶ್ನೆ ಪತ್ರಿಕೆಗಳನ್ನು ಶೇಖರಿಸಿ ಅದರಲ್ಲಿ ಪ್ರಶ್ನೆಗಳನ್ನು ವಿಭಾಗಗಳಾಗಿ ವಿಂಗಡಿಸಿ ಅಂದರೆ ಇತಿಹಾಸ ವಿಭಾಗಕ್ಕೆ ಸಂಬಂಧಿಸಿದ ಪ್ರಶ್ನೆಗಳು, ರಾಜಕೀಯ ಶಾಸ್ತ್ರದ ಪ್ರಶ್ನೆಗಳು, ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದವು, ಪ್ರಚಲಿತ ವಿದ್ಯಾಮಾನಗಳಿಗೆ ಸಂಬಂಧಿಸಿದ ಪ್ರಶ್ನೆಗಳು, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದವು.

ಕ್ರೀಡೆಗೆ ಸಂಬಂಧಿಸಿದ ಪ್ರಶ್ನೆಗಳು ಹೀಗೆ ವಿಭಾಗಗಳಾಗಿ ಪ್ರತ್ಯೇಕಿಸಿ ಯಾವ ವಿಭಾಗದಲ್ಲಿ ಹೆಚ್ಚಿನ ಪ್ರಶ್ನೆಗಳು ಬಂದಿವೆ, ಯಾವುದಕ್ಕೆ ಹೆಚ್ಚು ಒತ್ತು ಕೊಡಬೇಕು ಎಂಬ ಅಂಶಗಳನ್ನು ಮನದಟ್ಟು ಮಾಡಿಕೊಂಡರೆ ಮುಂಬರುವ ಪರೀಕ್ಷೆಗೆ ಕ್ರಮ ಬದ್ಧ ತಯಾರಿಗೆ ಸಹಾಯಕವಾಗುತ್ತದೆ.

ಕೆ.ಎ.ಎಸ್. ಪರೀಕ್ಷೆಗೆ ಸಂಬಂಧಪಟ್ಟಂತೆ ಪೂರ್ವಭಾವಿ ಪರೀಕ್ಷೆಯ ವಿಧಾನವು 2011ರಿಂದ ಬದಲಾವಣೆ ಗೊಳಪಟ್ಟಿದ್ದು, ಹೊಸ ಮಾದರಿಯಲ್ಲಿ 2011-12ನೇ ಸಾಲಿನಲ್ಲಿ ಪರೀಕ್ಷೆಯನ್ನು ನಡೆಸಲಾಗಿದೆ. 2011-12ನೇ ಸಾಲಿನಲ್ಲಿ ನಡೆಸಿದ ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ-1 ಮತ್ತು ಸಾಮಾನ್ಯ ಅಧ್ಯಯನ-2 ಪ್ರಶ್ನೆ ಪತ್ರಿಕೆಗಳ ಲಭ್ಯವಿದ್ದು, ಬದಲಾದ ಪರೀಕ್ಷಾ ಪದ್ಧತಿಯನ್ನು ತಿಳಿದುಕೊಳ್ಳುವುದಕ್ಕೆ ಸಹಕಾರಿಯಾಗಿವೆ.

ಈ ಒಂದು ಲೇಖನದಲ್ಲಿ 2011ರಲ್ಲಿ ನಡೆದ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ ಪತ್ರಿಕೆ-1ಅನ್ನು ತೆಗೆದುಕೊಂಡು ಅದರಲ್ಲಿ ಕೆಳಲಾದ ಪ್ರಶ್ನೆಗಳನ್ನು ವಿಭಾಗಗಳಾಗಿ ವಿಂಗಡಿಸಿ ವಿಶ್ಲೇಷಿಸಲಾಗಿದೆ. 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನಪತ್ರಿಕೆ-1 ಅನ್ನು ತೆಗೆದುಕೊಂಡರೆ ಇದು 100 ಪ್ರಶ್ನೆಗಳನ್ನೊಳಗೊಂಡು 100ಅಂಕದ 2ಗಂಟೆ ಪ್ರಶ್ನೆ ಪತ್ರಿಕೆಯಾಗಿರುತ್ತದೆ.

ಇದು ಬದಲಾದ ಮಾದರಿಯಲ್ಲಿ ಪ್ರಥಮ ಬಾರಿಗೆ ನಡೆದ ಪರೀಕ್ಷೆಯಾಗಿರುತ್ತದೆ. ಈ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾದ 100ಪ್ರಶ್ನೆಗಳನ್ನು ನಾವು ವಿವಿಧ ವಿಭಾಗಗಳಾಗಿ ವಿಂಗಡಿಸುವುದಾದರೆ ಪ್ರಧಾನವಾಗಿ ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳು ಶೇಕಡ 16 ರಷ್ಟು ಇದರಲ್ಲಿ ಕರ್ನಾಟಕದ ಇತಿಹಾಸಕ್ಕೆ ಸಂಬಂಧಿಸಿದಂತೆ ಸುಮಾರು 5 ರಿಂದ 6 ಪ್ರಶ್ನೆಗಳು ಬಂದಿರುತ್ತವೆ. ಅದೇ ರೀತಿ ಭೂಗೋಳ ಶಾಸ್ತ್ರಕ್ಕೆ ಸಂಬಂಧಿಸಿದಂತೆ 18 ಪ್ರಶ್ನೆಗಳು ಅಂದರೆ ಶೇಕಡ 18 ರಷ್ಟು ಇದರಲ್ಲಿ ಕರ್ನಾಟಕದ ಭೂಗೋಳ ಶಾಸ್ತ್ರಕ್ಕೆ ಸಂಬಂಧಿಸಿದಂತೆ 5 ಪ್ರಶ್ನೆಗಳು ಬಂದಿರುತ್ತವೆ.

ಅದೇ ರೀತಿ ರಾಜ್ಯಶಾಸ್ತ್ರ ಹಾಗೂ ಭಾರತೀಯ ಸಂವಿಧಾನಕ್ಕೆ ಸಂಬಂಧಪಟ್ಟಂತೆ 12 ಪ್ರಶ್ನೆಗಳು ಅಂದರೆ ಶೇ. 12 ರಷ್ಟು ಪ್ರಶ್ನೆಗಳು, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಸುಮಾರು 20 ಪ್ರಶ್ನೆಗಳು ಬಂದಿದ್ದು, ಇದರಲ್ಲಿ ಹೆಚ್ಚಿನ ಪ್ರಶ್ನೆಗಳು ಪ್ರಚಲಿತ ವಿದ್ಯಾಮಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಾಗಿರುತ್ತವೆ. ವಿಜ್ಞಾನ-ತಂತ್ರಜ್ಞಾನ ಹಾಗೂ ಪರಿಸರಕ್ಕೆ ಸಂಬಂಧಿಸಿದ ಪ್ರಶ್ನೆಗಳು ಶೇಕಡ 6ರಷ್ಟು, ಕ್ರೀಡೆಗೆ ಸಂಬಂಧಿಸಿದಂತೆ 2 ಪ್ರಶ್ನೆಗಳು ಬಂದಿರುತ್ತವೆ.

ಪ್ರಶ್ನೆ ಪತ್ರಿಕೆಯಲ್ಲಿ ಬಹುಮುಖ್ಯ ಭಾಗವಾದ ಪ್ರಚಲಿತ ಘಟನೆಗಳು ವಿಭಾಗದಲ್ಲಿ ಶೇಕಡ 25ರಷ್ಟು ಪ್ರಶ್ನೆಗಳು ಕೇಳಲಾಗಿದ್ದು, ಅದರಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಪ್ರಚಲಿತ ಘಟನೆಗಳ 8 ಪ್ರಶ್ನೆಗಳು, ರಾಷ್ಟ್ರಕ್ಕೆ ಸಂಬಂಧಿಸಿದ ಪ್ರಚಲಿತ ಘಟನೆಗಳ 10 ಪ್ರಶ್ನೆಗಳು ಹಾಗೂ ಅಂತರರಾಷ್ಟ್ರೀಯ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ 8ರಿಂದ 10 ಪ್ರಶ್ನೆಗಳನ್ನು ಕೇಳಲಾಗಿದೆ.

2011ರ ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ ಪ್ರಶ್ನೆಪತ್ರಿಕೆ-1ಅನ್ನು ವಿಶ್ಲೇಷಿಸಿದಾಗ ನಮಗೆ ಬಹುಮುಖ್ಯವಾಗಿ ಎರಡು ಮಾದರಿಯ ಪ್ರಶ್ನೆಗಳು ಕಂಡುಬರುತ್ತವೆ. ಮೊದಲನೆಯದಾಗಿ ‘ಕ್ವಿಜ್’ ಮಾದರಿಯ ಪ್ರಶ್ನೆಗಳಾದರೆ ಎರಡನೆಯ ‘ವಿಸ್ತೃತ’ (Illustrativee) ಮಾದರಿಯ ಪ್ರಶ್ನೆಗಳು ಉದಾಹರಣೆಗಳೊಂದಿಗೆ ವಿವರಿಸುವುದಾದರೆ ಪ್ರಶ್ನೆ ಪತ್ರಿಕೆಯಲ್ಲಿ ಒಂದು ಪ್ರಶ್ನೆ ಈ ರೀತಿಯಾಗಿರುತ್ತದೆ.

ಪ್ರಶ್ನೆ: ‘ದೇವನಾಂಪ್ರಿಯ’ ಮತ್ತು ‘ಪ್ರಿಯದರ್ಶಿನಿ’ ಎಂಬುದು ಈ ಕೆಳಕಂಡ ವ್ಯಕ್ತಿಯ ಇತರ ಹೆಸರುಗಳು
1) ಹರ್ಷವರ್ಧನ, 2) ಮಹಾವೀರ 3) ಗೌತಮ ಬುದ್ಧ  4) ಅಶೋಕ
ಈ ಮೇಲಿನ ಪ್ರಶ್ನೆಯು ಕ್ವಿಜ್ ಮಾದರಿಯ ಪ್ರಶ್ನೆಯಾಗಿರುತ್ತದೆ.
ವಿಸ್ತೃತ ಮಾದರಿಯ ಪ್ರಶ್ನೆಗಳನ್ನು ನೋಡುವುದಾದರೆ ಈ ಕೆಳಗಿನ ಒಂದು ಪ್ರಶ್ನೆಯನ್ನು ನೋಡೋಣ.

ಪ್ರಶ್ನೆ: ಈ ಕೆಳಗಿನ ಯಾವ ಕ್ರಮಗಳನ್ನು ಜಾರಿಗೆ ತರುವ ಬಗ್ಗೆ ರೌಲಟ್ ಕಾಯ್ದೆ ಪ್ರಯತ್ನಿಸಿತು.
ಎ.  ಪತ್ರಿಕೆಗಳ ಮೇಲೆ ಇನ್ನೂ ಹೆಚ್ಚಿನ ಹಾಗೂ ಕಟ್ಟುನಿಟ್ಟಿನ ನಿಯಂತ್ರಣ
ಬಿ. ರಾಜಕೀಯ ಅಪರಾಧಿಗಳ ವಿಚಾರಣೆಯನ್ನು ನ್ಯಾಯವೇತ್ತರಿಲ್ಲದೆ (Juries) ನ್ಯಾಯಾಧೀಶರೇ ನಡೆಸುವುದು.
ಸಿ. ವಿಧ್ವಂಸಕ ಗುರಿ ಹೊಂದಿದವರು ಎಂದು ಸಂದೇಹಿಸಲಾದ ವ್ಯಕ್ತಿಗಳನ್ನು ವಿಚಾರಣೆಯಿಲ್ಲದೆ ಸ್ಥಾನ ಬದ್ದತೆಯಲ್ಲಿರಿಸುವದು.
ಡಿ. ದೇಶದಾದ್ಯಂತ ಸೈನಿಕ ಕಾನೂನಿನ ಆಡಳಿತ
ಮೇಲಿನ ವಿವರಣೆಗಳಲ್ಲಿ ಸರಿಯಾದುದು ಯಾವುವು?
ಎ ಮತ್ತು ಡಿ
ಎ, ಬಿ ಮತ್ತು ಸಿ
ಬಿ, ಸಿ ಮತ್ತು ಡಿ
ಮೇಲಿನ ಎಲ್ಲವೂ
ಈ ಪ್ರಶ್ನೆಯು ವಿಸ್ತೃತ ಮಾದರಿಯ ಪ್ರಶ್ನೆಯಾಗಿದ್ದು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಅಭ್ಯರ್ಥಿಗಳು ಮಾತ್ರ ಉತ್ತರಿಸಲು ಸಾಧ್ಯ.

‘ಸಿರಿಯಸ್’ ಆಗಿ ಪರೀಕ್ಷೆಯನ್ನು ಬರೆಯುತ್ತಿರುವ ಅಭ್ಯರ್ಥಿಗಳು ಹಾಗೂ ‘ನಾಮಕಾವಸ್ತೆ’ ಪರೀಕ್ಷೆ ಬರೆಯುವ ಅಭ್ಯರ್ಥಿಗಳನ್ನು ‘ಫಿಲ್ಟರ್’ ಮಾಡಲು ಇಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ. 2011ರ ಪ್ರಶ್ನೆಪತ್ರಿಕೆಯಲ್ಲಿ ಕ್ವಿಜ್ ಮಾದರಿಯ ಪ್ರಶ್ನೆಗಳು ಕಡಿಮೆಯಿದ್ದು, ಹೆಚ್ಚಿನ ಪ್ರಶ್ನೆಗಳು ವಿಸ್ತೃತ ಮಾದರಿಯ ಪ್ರಶ್ನೆಗಳಾಗಿರುತ್ತವೆ. ಕೆ.ಎ.ಎಸ್. ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಇತ್ತೀಚಿಗೆ ಯು.ಪಿ.ಎಸ್.ಸಿ. ಮಾದರಿಯಲ್ಲೇ ಬರುತ್ತಿದ್ದು ಆಳವಾದ ಅಧ್ಯಯನ ಬಹುಮುಖ್ಯವಾಗಿರುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.