ADVERTISEMENT

ಬೌದ್ಧ ಸನ್ಯಾಸಿ ಟಕಮಿಸು ಕಬಡ್ಡಿ ಪ್ರೀತಿ...

ಪ್ರಮೋದ ಜಿ.ಕೆ
Published 3 ಸೆಪ್ಟೆಂಬರ್ 2017, 19:30 IST
Last Updated 3 ಸೆಪ್ಟೆಂಬರ್ 2017, 19:30 IST
ಜಪಾನ್‌ ಆಟಗಾರ ಟಕಮಿಸು ಕೊನೊ
ಜಪಾನ್‌ ಆಟಗಾರ ಟಕಮಿಸು ಕೊನೊ   

ಬೌದ್ಧ ಸನ್ಯಾಸಿಯಾಗಿ ಅರ್ಚಕ ವೃತ್ತಿ ಮಾಡುವುದರ ಜೊತೆಗೆ ತಂದೆಯಿಂದ ಕಬಡ್ಡಿ ಕಲಿತಿರುವ ಜಪಾನ್‌ನ ಟಕಮಿಸು ಕೊನೊ ಈ ಬಾರಿಯ ಪ್ರೊ ಕಬಡ್ಡಿ ಟೂರ್ನಿಯ ಆಕರ್ಷಣೆಯಾಗಿದ್ದಾರೆ.


25 ವರ್ಷದ ಟಕಮಿಸು ಹಿಂದೆ ದಬಾಂಗ್ ಡೆಲ್ಲಿ ತಂಡದಲ್ಲಿದ್ದರು. ಈ ವರ್ಷ ಪುಣೇರಿ ಪಲ್ಟನ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬೌದ್ಧ ಧರ್ಮದ ಕುರಿತು ಟೋಕಿಯೊದಲ್ಲಿ ಪದವಿ ಪಡೆದಿರುವ ಅವರು ಡಿಫೆಂಡರ್‌ ಆಗಿದ್ದಾರೆ. ಮೂರು ತಿಂಗಳಿಂದ ಪುಣೆ ತಂಡದ ಜೊತೆ ತರಬೇತಿ ಪಡೆಯುತ್ತಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

* ಭಾರತದಲ್ಲಿ ಕಬಡ್ಡಿಗೆ ಸಿಗುತ್ತಿರುವ ಬೆಂಬಲ ನೋಡಿದರೆ ಏನೆನಿಸುತ್ತದೆ?
ಬಹಳ ಖುಷಿಯಾಗುತ್ತದೆ. ಪ್ರೊ ಕಬಡ್ಡಿ ಈಗ ವಿಶ್ವದ ಬಹುತೇಕ ದೇಶಗಳಲ್ಲಿ ಖ್ಯಾತಿ ಪಡೆಯುತ್ತಿದೆ. ಪುಣೆ ತಂಡದಲ್ಲಿ ಅನೇಕ ಉತ್ತಮ ಆಟ ಗಾರರು ಇದ್ದಾರೆ. ಕ್ರಿಕೆಟ್‌ಗೆ ಸಮನಾಗಿ ಬೆಳೆಯುತ್ತಿದೆ. ಪಂದ್ಯ ನೋಡಲು ಬರುವ ಅಭಿಮಾನಿ ಗಳು ಎಲ್ಲಾ ಆಟಗಾರರನ್ನು ಹುರಿ ದುಂಬಿಸುತ್ತಾರೆ.

ADVERTISEMENT

* ನಿಮ್ಮ ದೇಶದಲ್ಲಿ ಕಬಡ್ಡಿ ಬೆಳವಣಿಗೆ ಹೇಗಿದೆ?
ನಮ್ಮಲ್ಲಿ ಫುಟ್‌ಬಾಲ್‌, ಕರಾಟೆ, ಬೇಸ್‌ಬಾಲ್, ರಗ್ಬಿ ಆಡುವುದು ಹೆಚ್ಚು. ಕಬಡ್ಡಿ ಆಡುತ್ತಾರೆ. ಆದರೆ ಭಾರತದಲ್ಲಿ ಇರುವಷ್ಟು ಖ್ಯಾತಿ ಇಲ್ಲ.

* ಭಾರತಕ್ಕೆ ಬಂದು ಪ್ರೊ ಕಬಡ್ಡಿ ಆಡುವುದರಿಂದ ನಿಮ್ಮ ದೇಶಕ್ಕೆ ಏನಾದರೂ ಲಾಭವಿದೆಯೇ?
ಕಬಡ್ಡಿ ಈಗ ವಿಶ್ವಮಟ್ಟದಲ್ಲಿ ಬೆಳೆಯುತ್ತಿರುವ ಕ್ರೀಡೆ. ನಮ್ಮಲ್ಲಿ ತಳಮಟ್ಟದಿಂದ ಈಗಷ್ಟೇ ಕ್ರೀಡೆ ಪ್ರಗತಿ ಕಾಣುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಮಾದರಿಯಲ್ಲಿಯೇ ಜಪಾನ್‌ನಲ್ಲಿಯೂ ಟೂರ್ನಿ ಆಯೋಜಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ.

* ಭಾರತದ ಆಹಾರ ನಿಮಗೆ ಹೊಂದಿಕೆಯಾಗುತ್ತದೆಯೇ?
ಇಲ್ಲಿ ಮಸಾಲ ಪದಾರ್ಥಗಳನ್ನು ಹೆಚ್ಚು ಬಳಸುತ್ತಾರೆ. ಇದರಿಂದ ಬಹಳ ಕಷ್ಟವಾಗುತ್ತಿದೆ. ನಮ್ಮಲ್ಲಿ ಮಸಾಲೆ ಪದಾರ್ಥ ಬಳಕೆ ತೀರಾ ಕಡಿಮೆ.

* ನಿಮ್ಮ ಕುಟುಂಬದ ಬಗ್ಗೆ ಹೇಳಿ?
ನಮ್ಮ ತಂದೆ, ತಾತ, ಮುತ್ತಾತ ಎಲ್ಲರೂ ಟೋಕಿಯೊ ಹತ್ತಿರವಿರುವ ಸೈತಾಮದ ಬೌದ್ಧಮಂದಿರದಲ್ಲಿ ಅರ್ಚಕರಾಗಿದ್ದವರು. ಟೋಕಿಯೊದಲ್ಲಿರುವ ರಿಷೊ ವಿಶ್ವವಿದ್ಯಾಲಯದಲ್ಲಿ ಬೌದ್ಧಧರ್ಮದ ಬಗ್ಗೆ ನಾನು ಪದವಿ ಪಡೆದಿದ್ದು ಅದೇ ವೃತ್ತಿಯಲ್ಲಿದ್ದೇನೆ. ಬೌದ್ಧ ಸನ್ಯಾಸಿಯೂ ಆಗಿದ್ದೇನೆ.

* ಕಬಡ್ಡಿ ಬಗ್ಗೆ ಆಸಕ್ತಿ ಬಂದಿದ್ದು ಹೇಗೆ?
ನನ್ನ ತಂದೆ ಜಪಾನ್‌ನ ಕಬಡ್ಡಿ ಫೆಡರೇಷನ್‌ನ ಮುಖ್ಯಸ್ಥರು. ಆದ್ದರಿಂದ ಮನೆಯಲ್ಲಿ ಕ್ರೀಡೆಯ ಬಗ್ಗೆ ಆಗಾಗ ಚರ್ಚೆಯಾಗುತ್ತಿತ್ತು. 18 ವರ್ಷದವನಾಗಿದ್ದಾಗ ಕಬಡ್ಡಿ ಆಡಲು ಆರಂಭಿಸಿದೆ. ನಂತರದ ವರ್ಷದಲ್ಲಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದೆ. ಇದೇ ವರ್ಷ ಅಹಮದಾಬಾದ್‌ನಲ್ಲಿ ನಡೆದಿದ್ದ ವಿಶ್ವಕಪ್‌ ಆಡಲು  ಬಂದಿದ್ದೆ. ನಿತ್ಯ ಬೆಳಿಗ್ಗೆ ಆರು ಗಂಟೆಗೆ ಬೌದ್ಧಮಂದಿರಕ್ಕೆ ಹೋಗಿ ಪೂಜೆ ಮಾಡುತ್ತೇನೆ. ಸಂಜೆ ವೇಳೆ ಕಬಡ್ಡಿ ಅಭ್ಯಾಸ ನಡೆಸುತ್ತೇನೆ.

* ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಫಿಟ್‌ನೆಸ್‌ ಉಳಿಸಿಕೊಳ್ಳಲು ಏನು ಮಾಡುತ್ತೀರಿ?
ಮೂರು ತಿಂಗಳು ಟೂರ್ನಿ ನಡೆಯುತ್ತದೆ. ಅದಕ್ಕೂ ಎರಡು ತಿಂಗಳು ಮೊದಲೇ ತರಬೇತಿ ಶಿಬಿರ ನಡೆದಿರುತ್ತದೆ. ಆದ್ದರಿಂದ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಆದ್ಯತೆ ನೀಡಲೇಬೇಕು. ಆಹಾರ ಸೇವನೆ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸುತ್ತೇನೆ. ನಿತ್ಯ ದೇಹದ ತೂಕ ಮಾಡಿಕೊಳ್ಳುತ್ತೇನೆ. ತೂಕ ಮಾಡಿಟ್ಟುಕೊಂಡು ಟೆಕ್ಕಿ ಮಸಾಲೆ ಮತ್ತು 400 ಗ್ರಾಂ ಅನ್ನ, 40 ಗ್ರಾಮ್‌ ಕ್ಯಾರೇಟ್‌ ತಿನ್ನುತ್ತೇನೆ. ಶಿಬಿರದಲ್ಲಿದ್ದಾಗ ಸತತ ಎರಡು ತಿಂಗಳು ಹೀಗೆ ಮಾಡಿದ್ದರಿಂದ ಈಗ ಒಂದು ಅಂದಾಜು ಸಿಕ್ಕಿದೆ. ನಿಯಮಿತವಾಗಿ ಆಹಾರ ಸೇವಿಸುತ್ತೇನೆ.

* ನಿಮ್ಮ ನೆಚ್ಚಿನ ಆಟಗಾರ ಯಾರು?
ಉತ್ತಮ ಶಿಸ್ತು ಹೊಂದಿರುವ ಪುಣೇರಿ ತಂಡದ ಎಲ್ಲಾ ಆಟಗಾರರು ಇಷ್ಟ. ಅದರಲ್ಲಿಯೂ ಸಂದೀಪ್‌ ನರ್ವಾಲ್‌ ರೈಡಿಂಗ್‌ ಚೆನ್ನಾಗಿದೆ. ಡಿಫೆನ್ಸ್‌ ವಿಭಾಗದಲ್ಲಿಯೂ ಬಲಿಷ್ಠವಾಗಿದ್ದಾರೆ. ರವೀಂದರ್ ಪಹಾಲ್‌, ನಿತಿನ್‌ ತೋಮಾರ್‌ ಆಟ ನೋಡಿ ಖುಷಿಯಾಗುತ್ತದೆ. ಭಾರತದ ಆಟಗಾರರಿಂದ ಕಲಿಯುವುದು ಸಾಕಷ್ಟಿದೆ.

ಅತ್ಯಂತ ಶಿಸ್ತಿನ ಆಟಗಾರ: ರಮೇಶ್
ಟಕಮಿಸು ಕೊನೊ ಅತ್ಯಂತ ಶಿಸ್ತುಬದ್ಧ ಆಟಗಾರ. ನಿತ್ಯದ ದಿನಚರಿ, ಅಭ್ಯಾಸದ ವೇಳೆ ತೋರುವ ಬದ್ಧತೆ ಮೆಚ್ಚುವಂಥದ್ದು. ಊಟದ ವಿಷಯದಲ್ಲಿ ಅತ್ಯಂತ ಕಟ್ಟುನಿಟ್ಟು. ಇಲ್ಲಿನ ವಾತಾವರಣಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ಮಾತ್ರ ಆಹಾರ ಸೇವಿಸುತ್ತಾರೆ. ಯಾವ ಆಹಾರ ಎಷ್ಟು ಸೇವಿಸಬೇಕು ಎನ್ನುವುದನ್ನು ನಿರ್ಧರಿಸಲು ಆಹಾರ ಅಳತೆ ಮಾಡಿಕೊಳ್ಳುತ್ತಾರೆ.

ನಮ್ಮ ತಂಡದಲ್ಲಿ ಡಿಫೆಂಡರ್‌ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಅಂತಿಮ ತಂಡದಲ್ಲಿ ಸ್ಥಾನ ಪಡೆಯಲು ಟಕಮಿಸು ಕಠಿಣ ಪೈಪೋಟಿ ಎದುರಿಸಬೇಕು. ನಮ್ಮಲ್ಲಿ ತರಬೇತಿ ಶಿಬಿರಕ್ಕೆ ಬಂದಾಗ ಬಹಳ ಸೂಕ್ಷ್ಮವಾಗಿದ್ದರು. ಎಲ್ಲರೊಂದಿಗೂ ಬೆರೆಯುತ್ತಿದ್ದರು. ಈಗ ಕಬಡ್ಡಿ ಆಟಕ್ಕೆ ಅಗತ್ಯವಿರುವ ದೈಹಿಕ ಸಾಮರ್ಥ್ಯ ಗಳಿಸಿಕೊಂಡಿದ್ದಾರೆ.
–ಬಿ.ಸಿ. ರಮೇಶ್‌,
ಪುಣೇರಿ ಪಲ್ಟನ್ ತಂಡದ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.