ADVERTISEMENT

ಮೂಡುವುದೇ ಹೊಸಬೆಳಕು?

ವಿಕ್ರಂ ಕಾಂತಿಕೆರೆ
Published 27 ಆಗಸ್ಟ್ 2017, 19:30 IST
Last Updated 27 ಆಗಸ್ಟ್ 2017, 19:30 IST
ಮೂಡುವುದೇ ಹೊಸಬೆಳಕು?
ಮೂಡುವುದೇ ಹೊಸಬೆಳಕು?   

‘ಇನ್ನಾದರೂ ಬೇರೆ ದೇಶದವರು ನಮ್ಮಲ್ಲಿಗೆ ಬಂದು ಕ್ರಿಕೆಟ್ ಆಡುವ ಮನಸ್ಸು ಮಾಡಲಿ...’ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಕೈಯಲ್ಲಿ ಹಿಡಿದು ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಸರ್ಫರಾಜ್ ಅಹಮ್ಮದ್‌ ಆಡಿದ ಆ ಮಾತು ಕ್ರೀಡಾ ಜಗತ್ತಿನ ಅಂತಃಕರ ಣವನ್ನು ಕಲಕಿತ್ತು.

ಈ ಮಾತಿನ ಹಿಂದೆ ಇದ್ದದ್ದು ಕೇವಲ ಮನವಿಯ ಧ್ವನಿಯಷ್ಟೇ ಅಲ್ಲ. ದೇಶದಲ್ಲಿ ಕ್ರಿಯಾಶೀಲ ಕ್ರಿಕೆಟ್‌ ಚಟುವಟಿಕೆ ನಡೆಯದೇ ವರ್ಷಗಳೇ ಕಳೆದಿರುವುದರ ಹಿಂದಿನ ನೋವು ಇತ್ತು, ತಮ್ಮೂರಿನಲ್ಲಿ ಮತ್ತೆ ಅಂತರರಾಷ್ಟ್ರೀಯ ಪಂದ್ಯಗಳು ನಡೆಯಬೇಕು ಎಂಬ ಅದಮ್ಯ ಬಯಕೆ ಇತ್ತು. ಅವರ ಈ ಬಯಕೆ ಈಡೇರುವ ಕಾಲ ಈಗ ಸಮೀಪಿಸುತ್ತಿದೆ. ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಪಾಕಿಸ್ತಾನದಲ್ಲಿ ಟ್ವೆಂಟಿ–20 ಪಂದ್ಯಗಳನ್ನು ಆಡಲು ಒಪ್ಪಿಕೊಂಡಿವೆ.

ಭಯೋತ್ಪಾದನೆಗೆ ನಲುಗಿರುವ ಪಾಕಿ ಸ್ತಾನದಲ್ಲಿ ಕ್ರಿಕೆಟ್‌ಗೂ ಭಾರಿ ಹೊಡೆತ ಬಿದ್ದಿದೆ. 2002ರಲ್ಲಿ ನ್ಯೂಜಿಲೆಂಡ್‌ ತಂಡ ಉಳಿದುಕೊಂಡಿದ್ದ ಕರಾಚಿಯ ಹೋಟೆಲ್‌ ಬಳಿ ನಡೆದ ಬಾಂಬ್‌ ಸ್ಫೋಟ, ಪ್ರೇಕ್ಷಕರ ಅನುಚಿತ ವರ್ತನೆಯಿಂದ ಪಂದ್ಯಗಳಿಗೆ ಅಡ್ಡಿ, ಪಂದ್ಯ ರದ್ದು ಇತ್ಯಾದಿ
ಸಣ್ಣಪುಟ್ಟ ಘಟನೆಗಳು ಆಗಾಗ ನಡೆಯುತ್ತಿದ್ದ ಪಾಕ್‌ನಲ್ಲಿ 2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಗುಂಡಿನ ದಾಳಿಗೆ ಒಳಗಾಗಿತ್ತು. ನಂತರ ಅಲ್ಲಿ ಕ್ರಿಕೆಟ್‌ ಚಟುವಟಿಕೆ ಸಂಪೂರ್ಣ ಮುರುಟಿ ಹೋಗಿತ್ತು.

ADVERTISEMENT

ಹಾಗೆ ನೋಡಿದರೆ ಅಂದು ದಾಳಿಗೆ ಒಳ ಗಾದ ಶ್ರೀಲಂಕಾ ತಂಡದ ಆಟಗಾರರಿಗೆ ಇಂಥ ಪ್ರತಿಗಾಮಿಗಳ ಚಟುವಟಿಕೆಯ ಬಿಸಿ ತಟ್ಟಿದ್ದು ಮೊದಲೇನಲ್ಲ. ಶ್ರೀಲಂಕಾದಲ್ಲೂ ಎಲ್‌ಟಿಟಿಇ ಕಾರ್ಯಕರ್ತರು ಕ್ರಿಕೆಟ್‌ಗೆ ಅಡ್ಡಿಪಡಿಸಿದ, ಕ್ರಿಕೆಟ್ ಅಭಿಮಾನಿಗಳಿಗೆ ತೊಂದರೆ ನೀಡಿದ ಪ್ರಸಂಗಗಳು ಸಾಕಷ್ಟು ನಡೆದಿದ್ದವು.

ನಮ್ಮ ಬೆಂಗಳೂರಿನಲ್ಲೂ ಕ್ರಿಕೆಟ್‌ಗೆ ಭಯೋತ್ಪಾದಕ ಚಟುವಟಿಕೆಯ ಆತಂಕ ಕಾಡಿದ ಪ್ರಸಂಗ ಏಳು ವರ್ಷಗಳ ಹಿಂದೆ ನಡೆದಿತ್ತು. ಅಂದು ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಆರಂಭವಾಗುವ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದ ಎರಡು ಭಾಗಗಳಲ್ಲಿ ಬಾಂಬ್‌ ಸ್ಫೋಟಗೊಂಡಿತ್ತು. 17 ಮಂದಿ ಗಾಯಗೊಂಡಿದ್ದರು. ಕ್ರಿಕೆಟ್‌ಗೆ ಮಾತ್ರವಲ್ಲ, ಇತರ ಕ್ರೀಡೆಗಳಿಗೂ ಪ್ರತಿಗಾಮಿ ಸಂಘಟನೆಗಳ ಬಿಸಿ ತಟ್ಟಿದ ಪ್ರಸಂಗಗಗಳು ಇವೆ. 1972ರ ಮ್ಯೂನಿಚ್‌ ಒಲಿಂಪಿಕ್ಸ್‌ ಸಂದರ್ಭದಲ್ಲಿ ಪ್ಯಾಲೆಸ್ಟಿನ್‌ ಉಗ್ರ ವಾದಿಗಳು ಇಸ್ರೇಲ್‌ ರಾಷ್ಟ್ರೀಯ ತಂಡವನ್ನು ಕೂಡಿ ಹಾಕಿ 11 ಮಂದಿಯ ಶಿರಚ್ಛೇದ ಮಾಡಿದ್ದು, 1996ರ ಒಲಿಂಪಿಕ್ಸ್ ಸಂದರ್ಭದಲ್ಲಿ ಬಾಂಬ್ ಸ್ಫೋಟಿಸಿದ್ದು ಮುಂತಾದ ಎಷ್ಟು ಘಟನೆಗಳು ಕ್ರೀಡಾ ಜಗತ್ತನ್ನು ಬೆಚ್ಚಿ ಬೀಳಿಸಲಿಲ್ಲ?

ಸುಧಾರಿಸಿಕೊಳ್ಳದ ಪಾಕಿಸ್ತಾನ

ಕ್ರೀಡೆಯ ಮೇಲೆ ನಡೆದ ದಾಳಿಯಿಂದ ಪ್ರಪಂಚದ ಎಲ್ಲ ಭಾಗಗಳು ಕೂಡ ಸುಧಾ ರಿಸಿಕೊಂಡಿವೆ. ಆದರೆ ಪಾಕಿಸ್ತಾನಕ್ಕೆ ಭಯೋ ತ್ಪಾದನೆ ದಾಳಿ ನೀಡಿದ ಪೆಟ್ಟು ಭಾರಿ ದೊಡ್ಡದು. ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ 19 ಕ್ರೀಡಾಂಗಣಗಳು ಇರುವ ಪಾಕಿಸ್ತಾನದಲ್ಲಿ ಕಳೆದ ಎಂಟು ವರ್ಷಗಳಲ್ಲಿ ನಡೆದದ್ದು ಕೇವಲ ಮೂರು ಏಕದಿನ ಮತ್ತು ಎರಡು ಟ್ವೆಂಟಿ–20 ಪಂದ್ಯಗಳು ಮಾತ್ರ. ಅಲ್ಲಿನ ಕ್ರಿಕೆಟ್ ಪ್ರೇಮಿಗಳು ತವರಿನಲ್ಲಿ ಟೆಸ್ಟ್ ಪಂದ್ಯವನ್ನು ಕಣ್ಣಾರೆ ಕಂಡು ಒಂದು ದಶಕ ಸಮೀಪಿಸುತ್ತಿದೆ.

2009ರಲ್ಲಿ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಎರಡನೇ ಟೆಸ್ಟ್‌ನ ಮೂರನೇ ದಿನದಾಟಕ್ಕಾಗಿ ತೆರಳುತ್ತಿದ್ದ ಲಂಕಾ ತಂಡದ ಮೇಲೆ ಭಯೋತ್ಪಾದಕರು ಗುಂಡಿನ ಮಳೆಗರೆದಿದ್ದರು. ಹೀಗಾಗಿ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿ ಲಂಕಾ ತಂಡ ಕ್ರೀಡಾಂಗಣದಿಂದಲೇ ವಾಯುಪಡೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಊರಿಗೆ ವಾಪಸಾಗಿತ್ತು. ಈ ದಾಳಿ ಆ ದೇಶದ ಕ್ರಿಕೆಟ್‌ನ ಜೀವಸತ್ವವನ್ನೇ ನುಂಗಿ ಹಾಕಿತು. ನಂತರ 2015ರ ವರೆಗೆ ಕ್ರಿಕೆಟ್ ಆಡುವುದಕ್ಕಾಗಿ ಪಾಕಿಸ್ತಾನಕ್ಕೆ ತೆರಳಲು ಯಾವ ರಾಷ್ಟ್ರವೂ ಮುಂದಾಗಲಿಲ್ಲ. 2015ರಲ್ಲಿ ಧೈರ್ಯ ಮಾಡಿದ ಜಿಂಬಾಬ್ವೆ ಎರಡು ಟಿ–20 ಮತ್ತು ಮೂರು ಏಕದಿನ ಪಂದ್ಯಗಳನ್ನು ಈ ನೆಲದಲ್ಲಿ ಆಡಿ ಮರಳಿತು. 1952ರಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಪಾಕಿಸ್ತಾನ 1955ರಲ್ಲಿ ತವರಿನಲ್ಲಿ ಮೊತ್ತ ಮೊದಲ ಅಂತರರಾಷ್ಟ್ರೀಯ ಪಂದ್ಯ (ಟೆಸ್ಟ್‌) ಆಡಿತ್ತು.

***

ಪಾಕಿಸ್ತಾನದ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳು

ಜಫರ್‌ ಅಲಿ ಕ್ರೀಡಾಂಗಣ, ಸಾಹಿವಾಲ್‌
ಸ್ಪೋರ್ಟ್ಸ್ ಕ್ರೀಡಾಂಗಣ, ಸರ್ಗೋದ
ಸೌತ್ ಎಂಡ್ ಕ್ಲಬ್‌ ಕ್ರೀಡಾಂಗಣ, ಕರಾಚಿ
ನ್ಯಾಷನಲ್ ಕ್ರೀಡಾಂಗಣ, ಕರಾಚಿ
ಅರ್ಬಾಬ್‌ ನಿಯಾಜ್ ಕ್ರೀಡಾಂಗಣ, ಪೇಶಾವರ
ಶೇಖುಪುರ ಕ್ರೀಡಾಂಗಣ, ಶೇಖುಪುರ
ಮುಲ್ತಾನ್‌ ಕ್ರೀಡಾಂಗಣ, ಮುಲ್ತಾನ್‌
ಇಬ್ನ್‌ ಎ ಖಾಸಿಂ ಬಾಗ್ ಕ್ರೀಡಾಂಗಣ, ಮುಲ್ತಾನ್‌
ಇಕ್ಬಾಲ್ ಕ್ರೀಡಾಂಗಣ, ಫೈಜಲಾಬಾದ್‌
ಗದಾಫಿ ಕ್ರೀಡಾಂಗಣ, ಲಾಹೋರ್‌
ರಾವಲ್ಪಿಂಡಿ ಕ್ರೀಡಾಂಗಣ, ರಾವಲ್ಪಿಂಡಿ
ಪಿಂಡಿ ಕ್ಲಬ್ ಕ್ರೀಡಾಂಗಣ, ರಾವಲ್ಪಿಂಡಿ
ಪೇಶಾವರ ಕ್ಲಬ್‌ ಕ್ರೀಡಾಂಗಣ, ಪೇಶಾವರ
ಜಿನ್ನಾ ಕ್ರೀಡಾಂಗಣ, ಗುಜ್ರನ್‌ವಾಲ
ಜಿನ್ನಾ ಕ್ರೀಡಾಂಗಣ, ಸಿಯಾಲ್‌ಕೋಟ್‌
ಬಾಗ್ ಎ ಜಿನ್ನಾ ಕ್ರೀಡಾಂಗಣ, ಲಾಹೋರ್‌
ಆಯೂಬ್‌ ನ್ಯಾಷನಲ್ ಕ್ರೀಡಾಂಗಣ, ಕ್ವೆಟ್ಟಾ
ಬುಗಾಟಿ ಕ್ರೀಡಾಂಗಣ, ಕ್ವೆಟ್ಟಾ
ಬಹಾವಲ್‌ ಕ್ರೀಡಾಂಗಣ, ಬಹಾವಲ್‌ಪುರ್‌

ದೇಶಿ ಕ್ರೀಡಾಂಗಣಗಳು 25

***

ಬಿಗಡಾಯಿಸಿದ ಭಾರತ–ಪಾಕ್ ಸಂಬಂಧ

2009ರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧಕ್ಕೆ ಭಾರಿ ಧಕ್ಕೆಯಾಗಿದೆ. ರಾಜಕೀಯ ಸಂಬಂಧಗಳು ಆಗಾಗ ಬಿಗಡಾಯಿಸಿದ ಕಾರಣ ಕ್ರಿಕೆಟ್‌ ಕ್ರೀಡಾ ಸಂಬಂಧ ಬೆಳೆಸುವ ಕೆಲವು ಪ್ರಯತ್ನಗಳಿಗೂ ಅಡ್ಡಿಯಾಯಿತು. ಯಾವುದೇ ಕಾರಣಕ್ಕೂ ದ್ವಿಪಕ್ಷೀಯ ಕ್ರಿಕೆಟ್‌ ಆಯೋಜಿಸಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರ ಹೇಳುವುದರೊಂದಿಗೆ ಈ ಸಂಬಂಧಕ್ಕೆ ಪೂರ್ಣ ವಿರಾಮ ಬಿದ್ದಿದೆ.

ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ 12 ಏಕದಿನ ಪಂದ್ಯಗಳು ಮಾತ್ರ ನಡೆದಿವೆ. ಇದರಲ್ಲಿ ನಾಲ್ಕು ಭಾರತದಲ್ಲಿ ನಡೆದಿವೆ. ಉಳಿದೆಲ್ಲವುಗಳಿಗೂ ತಟಸ್ಥ ಸ್ಥಳ ಆತಿಥ್ಯ ವಹಿಸಿದೆ. 2009ರ ನಂತರ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಆಡಿದ ಟ್ವೆಂಟಿ – 20 ಪಂದ್ಯಗಳು ನಾಲ್ಕು. ಇವುಗಳಲ್ಲಿ ಮೂರಕ್ಕೆ ಭಾರತ ಆತಿಥ್ಯ ವಹಿಸಿತ್ತು. ದಾಳಿಯ ನಂತರ ಭಾರತ –ಪಾಕ್ ನಡುವೆ ಟೆಸ್ಟ್‌ ಕ್ರಿಕೆಟ್‌ ಪಂದ್ಯಗಳು ನಡೆಯಲೇ ಇಲ್ಲ. ಉಭಯ ರಾಷ್ಟ್ರಗಳು ಕೊನೆಯದಾಗಿ ಟೆಸ್ಟ್ ಆಡಿದ್ದು 2007ರ ಡಿಸೆಂಬರ್‌ ಎಂಟರಂದು, ಬೆಂಗಳೂರಿನಲ್ಲಿ.

***

ಆಸರೆ ನೀಡಿದ ಶಾರ್ಜಾ, ದುಬೈ, ಅಬುದಾಬಿ

ದಾಳಿಯ ನಂತರ ಪಾಕಿಸ್ತಾನ ಕ್ರಿಕೆಟ್‌ಗೆ ಆಸರೆ ನೀಡಿದ್ದು ದುಬೈ, ಅಬುದಾಬಿ ಮತ್ತು ಶಾರ್ಜಾ. ಯಾವುದೇ ರಾಷ್ಟ್ರದ ಜೊತೆ ಕ್ರಿಕೆಟ್ ಆಡಲು ಬಯಸಿದಾಗ ಅರಬ್‌ ರಾಷ್ಟ್ರಗಳು ಕ್ರೀಡಾಂಗಣವನ್ನು ಒದಗಿಸಿವೆ. 2009ರ ನಂತರ ಪಾಕಿಸ್ತಾನ ವಿವಿಧ ರಾಷ್ಟ್ರಗಳ ಜೊತೆ ಆಡಿದ 72 ಟೆಸ್ಟ್‌ ಪಂದ್ಯಗಳ ಪೈಕಿ 25 ಪಂದ್ಯಗಳು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ಶಾರ್ಜಾ ಕ್ರೀಡಾಂಗಣ ಮತ್ತು ಅಬುದಾಬಿಯ ಶೇಕ್‌ ಸೈಯದ್‌ ಸ್ಟೇಡಿಯಂನಲ್ಲಿ ನಡೆದಿವೆ. ದಾಳಿ ನಂತರ ಪಾಕಿಸ್ತಾನ ಒಟ್ಟು 196 ಏಕದಿನ ಪಂದ್ಯಗಳನ್ನು ಆಡಿದೆ. ಇವುಗಳ ಪೈಕಿ 41 ಪಂದ್ಯಗಳು ಈ ಮೂರು ಕ್ರೀಡಾಂಗಣದಲ್ಲಿ ನಡೆದಿವೆ. ಒಟ್ಟು 98 ಟ್ವೆಂಟಿ–20 ಪಂದ್ಯಗಳ ಪೈಕಿ 28ಕ್ಕೆ ಈ ಕ್ರೀಡಾಂಗಣಗಳು ಆತಿಥ್ಯ ವಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.