ADVERTISEMENT

ವಿಪುಲ ಅವಕಾಶಗಳ ಕ್ಷೇತ್ರ ಸಿಮೆಂಟ್‌ ತಂತ್ರಜ್ಞಾನ

ರವಿ ಎಸ್.ಬಳೂಟಗಿ
Published 21 ಡಿಸೆಂಬರ್ 2014, 19:30 IST
Last Updated 21 ಡಿಸೆಂಬರ್ 2014, 19:30 IST

ಸಿಮೆಂಟ್ ಉದ್ಯಮದಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ. ಹತ್ತು ಹಲವು ಸವಾಲುಗಳ ನಡುವೆ ಭಾರತವೂ ಸಿಮೆಂಟ್ ರಂಗದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ದೇಶದಲ್ಲಿ ವಾರ್ಷಿಕ 300 ದಶಲಕ್ಷ ಟನ್ ಸಿಮೆಂಟ್ ಉತ್ಪಾದನೆಯಾಗುತ್ತಿದೆ. 2020ರ ವೇಳೆಗೆ 500 ದಶಲಕ್ಷ ಟನ್ ಉತ್ಪಾದನೆಯ ಗುರಿ ಇದೆ. ಕಲಬುರ್ಗಿ ಕರ್ನಾಟಕದ ‘ಸಿಮೆಂಟ್ ರಾಜಧಾನಿ’.

ಇಲ್ಲಿ ಲಭಿಸುವ ಸುಣ್ಣದ ಕಲ್ಲು ಸಿಮೆಂಟ್ ತಯಾರಿಕೆಗೆ ಉಪಯುಕ್ತ. ಜಿಲ್ಲೆಯಲ್ಲಿ ಪ್ರತಿಷ್ಠಿತ ಎಸಿಸಿ, ಅಲ್ಟ್ರಾಟೆಕ್, ವಾಸವಾದತ್ತಾ, ಚಟ್ಟಿನಾಡು ಕಂಪೆನಿಗಳ ಘಟಕಗಳಿವೆ. ಜತೆಗೆ ಕಿರು ಘಟಕಗಳು ಸಾಕಷ್ಟಿವೆ. ಇಂಥ ಕ್ಷೇತ್ರಕ್ಕಾಗಿ ತಂತ್ರಜ್ಞರನ್ನು ರೂಪಿಸುತ್ತಿದೆ ಪೂಜ್ಯ ದೊಡ್ಡಪ್ಪ ಅಪ್ಪಾ (ಪಿಡಿಎ) ಎಂಜಿನಿಯರಿಂಗ್ ಕಾಲೇಜು.

ಏನಿದು ಕೋರ್ಸ್‌: ಕಲಬುರ್ಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜು ಸ್ಥಳೀಯ ಅಗತ್ಯ ಪೂರೈಸುವ ಆಶಯದೊಂದಿಗೆ 1983ರಲ್ಲಿ ‘ಸಿರ್‌್ಯಾಮಿಕ್ ಹಾಗೂ ಸಿಮೆಂಟ್ ತಂತ್ರಜ್ಞಾನ’ದಲ್ಲಿ ಬಿ.ಇ ಪದವಿ ಆರಂಭಿಸಿತು. ದಕ್ಷಿಣ ಭಾರತದಲ್ಲಿಯೇ ಈ ಕೋರ್ಸ್‌ ಅಳವಡಿಸಿಕೊಂಡ ಏಕೈಕ ಕಾಲೇಜು ಇದಾಗಿದೆ. ದೇಶದ 3 ಎಂಜಿನಿಯರಿಂಗ್ (ಹಿಂದೂ ಬನಾರಸ್ ಹಾಗೂ ಕೊಲ್ಕತ್ತಾ) ಕಾಲೇಜುಗಳು ಮಾತ್ರ ಕೋರ್ಸ್ ಅಳವಡಿಸಿಕೊಂಡಿವೆ. ಇತ್ತೀಚೆಗೆ ದೇಶದ ವಿವಿಧ ಕಾಲೇಜುಗಳು ಸಹ ಆಸಕ್ತಿ ವಹಿಸಿವೆ.

ಸಿರ್‌್ಯಾಮಿಕ್ ವಿಷಯದ ವಿಭಾಗ ಹಲವೆಡೆ ಇದೆ. ಆದರೆ, ಸಿಮೆಂಟ್–ಸಿರ್‌್ಯಾಮಿಕ್ ಎರಡೂ ವಿಷಯ ಬೋಧಿಸುವ ಪ್ರತ್ಯೇಕ ವಿಭಾಗ ಇರುವುದು ಇಲ್ಲಿ ಮಾತ್ರ. ಸುಣ್ಣದ ಕಲ್ಲಿನ ಸುಧಾರಿತ ರೂಪವೇ ಸಿಮೆಂಟ್. ಪರಿಸರದಲ್ಲಿ ಕಚ್ಚಾ ವಸ್ತುವಿನ ರೂಪದಲ್ಲಿ ಇದು ಲಭಿಸುತ್ತಿದ್ದು, ಯಥಾಪ್ರಕಾರ ಬಳಕೆ ಅಸಾಧ್ಯ. ಕಾರ್ಖಾನೆಗಳಲ್ಲಿ ನಾನಾ ಹಂತದಲ್ಲಿ ಸಂಸ್ಕರಣೆಗೆ ಒಳಪಡುತ್ತದೆ. ನಂತರ ಸಿಮೆಂಟ್‌ನ ರೂಪ ಪಡೆಯುತ್ತದೆ. ಇಂಥ ಸಿಮೆಂಟ್ ಕಾರ್ಖಾನೆಗಳಲ್ಲಿ ಪರಿಣತಿ ಪಡೆದವರಿಗೆ ಉದ್ಯೋಗವಕಾಶಗಳಿವೆ.

ಏನು ಕಲಿಕೆ: ಸಿಮೆಂಟ್‌ನ ಸಮಗ್ರ ಮಾಹಿತಿ ಈ ಕೋರ್ಸ್‌ ಒಳಗೊಂಡಿದೆ. ವಿದ್ಯಾರ್ಥಿಗಳ ಕೌಶಲ ತರಬೇತಿ ಇಲ್ಲಿ ನಡೆಯುತ್ತಿದೆ. ಸಿಮೆಂಟ್‌ ಸಂಸ್ಕರಣೆ ಪ್ರಯೋಗಾಲಯ, ಆಧುನಿಕ ಪರಿಕರಗಳಿವೆ. ಸಿಮೆಂಟ್ ತಂತ್ರಜ್ಞಾನದ ಪ್ರಾಥಮಿಕ ಜ್ಞಾನ ವಿದ್ಯಾರ್ಥಿಗೆ ಲಭಿಸುತ್ತದೆ. ಜಿಲ್ಲೆಯ ಸೇಡಂ, ಶಹಾಬಾದ್‌ನ ಸಿಮೆಂಟ್ ಕಾರ್ಖಾನೆಗಳಲ್ಲಿ ಕ್ಷೇತ್ರ ಅಧ್ಯಯನ ಕೈಗೊಳ್ಳಲಾಗುತ್ತದೆ.

ವಿಭಾಗಕ್ಕೆ ಪ್ರತಿವರ್ಷ 40 ವಿದ್ಯಾರ್ಥಿಗಳು ಸಿಇಟಿ ಮೂಲಕ ಪ್ರವೇಶ ಪಡೆಯುತ್ತಾರೆ. ಕೋರ್ಸ್‌ ಆರಂಭಿಸಿದಾಗ ಹೊರ ರಾಜ್ಯಗಳ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು. ಶೇ. 70ರಷ್ಟು ದೆಹಲಿ, ರಾಜಸ್ತಾನ, ಉತ್ತರ ಪ್ರದೇಶಗಳ ವಿದ್ಯಾರ್ಥಿಗಳೇ ಇರುತ್ತಿದ್ದರು. ಇತ್ತೀಚೆಗೆ ಕರ್ನಾಟಕದ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಸಿದೆ. ಅದರಲ್ಲೂ ಕಲಬುರ್ಗಿ, ಬೀದರ್ ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚಾಗಿ ಪ್ರವೇಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಉದ್ಯೋಗ ಖಚಿತ: ಈ ವಿಭಾಗದಲ್ಲಿ ಕಲಿತರಿಗೆ ಉದ್ಯೋಗ ಶೇ. 100ರಷ್ಟು ಖಚಿತ ಎಂಬ ಮಾತು ಕ್ಯಾಂಪಸ್‌ನಲ್ಲಿ ಚಾಲ್ತಿಯಲ್ಲಿದೆ. ಪ್ರತಿ ವರ್ಷ ನಾನಾ ಕಂಪೆನಿಗಳು ಪ್ರತಿಭೆಗಳ ಆಯ್ಕೆಗೆ ‘ಕ್ಯಾಂಪಸ್ ಸಂದರ್ಶನ’ ಆಯೋಜಿಸುತ್ತವೆ. ಪಿಡಿಎ ಕಾಲೇಜಿನಲ್ಲಿ ಅತಿ ಹೆಚ್ಚು ಕ್ಯಾಂಪಸ್ ಸಂದರ್ಶನ ನಡೆಯುವ ವಿಭಾಗ ಇದಾಗಿದೆ. ಈ ವರ್ಷ ಮೂವರು ವಿದ್ಯಾರ್ಥಿಗಳು ಗುಜರಾತ್‌ನ ಪ್ರತಿಷ್ಠಿತ ಕಂಪೆನಿಗೆ ಆಯ್ಕೆಯಾಗಿದ್ದಾರೆ.

ಕಲಬುರ್ಗಿ ಜಿಲ್ಲೆಯ ಅಲ್ಟ್ರಾಟೆಕ್, ರಾಜಶ್ರೀ, ಚಟ್ಟಿನಾಡ್, ವಾಸವಾದತ್ತಾ, ಐಸಿಸಿ ಕಾರ್ಖಾನೆಗಳಲ್ಲಿ ವಿದ್ಯಾರ್ಥಿಗಳು ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಬಳ್ಳಾರಿಯ ತೋರಣಗಲ್‌ನ ಜಿಂದಾಲ್‌ನಲ್ಲೂ ಪಿಡಿಎ ವಿದ್ಯಾರ್ಥಿಗಳು ಅಧಿಕ. ಗುಜರಾತ್, ಮುಂಬೈ ಭಾಗದ ಸಿಮೆಂಟ್ ಕಾರ್ಖಾನೆಗಳಲ್ಲಿ ಉದ್ಯೋಗಾವಕಾಶ ಹೇರಳವಾಗಿವೆ.

ಕಲಿಕೆ ಜತೆಗೆ ಸಿಮೆಂಟ್ ಕ್ಷೇತ್ರದ ಸಂಶೋಧನೆಗೂ ಆದ್ಯತೆ ನೀಡಲಾಗಿದೆ. ಯುಜಿಸಿ, ವಿಟಿಯು ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯು ಸಂಶೋಧನಾ ಉದ್ದೇಶಕ್ಕಾಗಿ ಅನುದಾನ ನೀಡುತ್ತಿವೆ. ಕೇಂದ್ರ ಸರ್ಕಾರದ ಶೈಕ್ಷಣಿಕ ಗುಣವರ್ಧನ ಕಾರ್ಯಕ್ರಮ (TEQEP) ಅಡಿ ಈಚೆಗೆ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಯಿತು. ಫ್ರಾನ್ಸ್, ಇಂಗ್ಲೆಂಡ್, ನೇಪಾಳ ಮುಂತಾದ ದೇಶಗಳ ಸಂಪನ್ಮೂಲ ವ್ಯಕ್ತಿಗಳ ಬಂದು ಉಪನ್ಯಾಸ ನೀಡಿದರು.

ಪ್ರಸಕ್ತ ಸಾಲಿನಿಂದ ಸೆರ್‌್ಯಾಮಿಕ್–ಸಿಮೆಂಟ್ ವಿಷಯದಲ್ಲಿ ಎಂ.ಟೆಕ್ ಕೋರ್ಸ್ ಸಹ ಆರಂಭಿಸಲಾಗಿದೆ. ಎಂ.ಡಿ. ನರಸಿಂಹನ್ ವಿಭಾಗ (1983)ದ ಮೊದಲ ಮುಖ್ಯಸ್ಥರು. ಪ್ರಸ್ತುತ ಡಾ.ಜಾನ್ ಕೆನಡಿ ಮುಖ್ಯಸ್ಥರಾಗಿದ್ದಾರೆ. ‘ಬೇರೆ ಆಯ್ಕೆಗಳು ಇಲ್ಲದೇ ಈ ಕೋರ್ಸ್‌ಗೆ ಸೇರಿದೆ. 2ನೇ ಸೆಮಿಸ್ಟರ್ ನಂತರ ವಿಷಯದ ಮಹತ್ವ ಅರಿವಾಯಿತು.

ಸಿಮೆಂಟ್ ಕ್ಷೇತ್ರದಲ್ಲಿ ವಿಫುಲ ಉದ್ಯೋಗ ಅವಕಾಶಗಳು ಇರುವುದು ಮನದಟ್ಟಾಯಿತು. ಸಿಮೆಂಟ್ ತಾಂತ್ರಿಕತೆ ಅರಿಯಲು ಇವುಗಳಿಂದ ಸಾಧ್ಯವಾಗಿದೆ’ ಎಂದು ವಿಭಾಗದ ವಿದ್ಯಾರ್ಥಿನಿ ದಿವ್ಯಾ ಹೇಳುತ್ತಾರೆ.
ಮಾಹಿತಿಗೆ 08472–224262 ಸಂಪರ್ಕಿಸಬಹುದು

ಹೈ.ಕ ಭಾಗದ ವಿದ್ಯಾರ್ಥಿಗಳೇ ಹೆಚ್ಚು
ನಮ್ಮ ಕಾಲೇಜಿನ ಬಹುಬೇಡಿಕೆಯ ಕೋರ್ಸ್ ಇದಾಗಿದೆ. ರಾಜ್ಯದ ಯಾವುದೇ ಎಂಜಿಯರಿಂಗ್ ಕಾಲೇಜಿನಲ್ಲಿ ಇಂಥ ಕೋರ್ಸ್ ಇಲ್ಲ. ಹೈದರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ಅನುಕೂಲ ಆಗಿದೆ. ಈಚೆಗೆ ಹೈ.ಕ ಭಾಗದ ವಿದ್ಯಾರ್ಥಿಗಳೇ ಹೆಚ್ಚು ಪ್ರವೇಶ ಪಡೆಯುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳು ಬೃಹತ್‌ ಸಿಮೆಂಟ್‌ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಪಾಲಿಟೆಕ್ನಿಕ್, ಡಿಪ್ಲೊಮಾ ಕಾಲೇಜುಗಳಲ್ಲಿ ಈ ಕೋರ್ಸ್ ಪರಿಚಯಿಸಲಾಗುತ್ತಿದೆ. ಈ ಬೆಳವಣಿಗೆ ಸಿಮೆಂಟ್‌ ಕ್ಷೇತ್ರದ ಬೆಳವಣಿಗೆಗೆ ಪೂರಕ.
–ಪ್ರೊ.ಜಾನ್ ಯು. ಕೆನಡಿ, ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.