ADVERTISEMENT

ಸವಾಲಿಗೆ ಸಜ್ಜು ರೋಲಿಂಗ್‌ ಹಾಕಿ

ವಿಕ್ರಂ ಕಾಂತಿಕೆರೆ
Published 25 ಡಿಸೆಂಬರ್ 2016, 19:30 IST
Last Updated 25 ಡಿಸೆಂಬರ್ 2016, 19:30 IST
ಗೋಲು ಗಳಿಸುವುದಕ್ಕೆ ಸಂಬಂಧಿಸಿದ ತರಬೇತಿ
ಗೋಲು ಗಳಿಸುವುದಕ್ಕೆ ಸಂಬಂಧಿಸಿದ ತರಬೇತಿ   
ಮೈಯನ್ನು ಸೋಕಿ ಹೊಟ್ಟೆಯೊಳಗೆ ಇಳಿದು ಚುರುಗುಟ್ಟುವ ಚಳಿ. ಹೊದ್ದು ಮಲಗಿದವರು ಸೂರ್ಯ ಕಿರಣಗಳು ಮನೆಯೊಳಗೆ ಇಣುಕುವ ವರೆಗೆ ಏಳಲು ಮನಸ್ಸು ಮಾಡಲಾರರು. ಇಂಥ ವಾತಾವರಣದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಹಾಕಿ ಸ್ಟಿಕ್‌ಗಳೊಂದಿಗೆ ಅಂಗಣಕ್ಕೆ ಇಳಿಯುವ ಆಟಗಾರರು ಚಳಿಯನ್ನು ಹಿಮ್ಮೆಟ್ಟಿಸುತ್ತಾರೆ. 
 
ಸಹ್ಯಾದ್ರಿ ಬೆಟ್ಟಗಳ ಮಡಿಲಿನ ಮನೋಹರ, ಆಹ್ಲಾದಕರ ಪ್ರದೇಶದ ಅಂಗಣಕ್ಕೆ ಈ ಆಟಗಾರರು ಇಳಿದರೆ ತಾಸುಗಟ್ಟಲೆ ಸ್ಟಿಕ್–-ಚೆಂಡಿನ ಸದ್ದು. ಚೆಂಡನ್ನು ಬೆನ್ನಟ್ಟಿ, ಎದುರಾಳಿಯಿಂದ ಕಸಿದುಕೊಂಡು ಗೋಲುಪೆಟ್ಟಿಗೆಯೊಳಗೆ ಸೇರಿಸಲು ಓಡುವ ಆಟಗಾರರ ವೇಗ ಮತ್ತು ತಿರುವುಗಳಿಗೆ ಕಾಲಿನ ಚಕ್ರಗಳ ‘ಕಿರ್…ಕಿರ್…’ ಸದ್ದು ಸಾಥ್ ನೀಡಿದಾಗ ಅಲ್ಲಿ ಹೊಸ ಪ್ರಪಂಚ ಸೃಷ್ಟಿಯಾಗುತ್ತದೆ. 
 
ಉತ್ತರ ಕನ್ನಡ ಜಿಲ್ಲೆಯ ದಟ್ಟ ಕಾನನದ ನಡುವೆ, ಕಾಳಿ ನದಿಯ ಅಂಚಿನಲ್ಲಿ ಕೈಗಾ ಉದ್ಯೋಗಿಗಳಿಗಾಗಿ ನಿರ್ಮಿಸಿರುವ ವಸತಿ ಪ್ರದೇಶದ ಸ್ಕೇಟಿಂಗ್ ರಿಂಕ್‌ನಲ್ಲಿ ನಿತ್ಯ ಬೆಳಿಗ್ಗೆ ಇಂಥ ನೋಟ ಸಹಜ. ರೋಲರ್ ಹಾಕಿಗೆ ಸಂಬಂಧಿಸಿ ರಾಜ್ಯದ ಕೆಲವೇ ಕೆಲವು ಪ್ರಬಲ ಕೇಂದ್ರಗಳ ಪೈಕಿ ಒಂದು ಕೈಗಾ ರೋಲರ್ ಹಾಕಿ ಕೇಂದ್ರ. ರಾಜಧಾನಿ ಬೆಂಗಳೂರು ಬಿಟ್ಟರೆ ಬೆಳಗಾವಿ, ಮೈಸೂರು, ಕೊಡಗು ಮತ್ತು ಕೈಗಾ ಕೇಂದ್ರವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ರೋಲರ್ ಹಾಕಿ ಬಲಿಷ್ಠವಾಗಿದೆ. 
 
ಕೈಗಾದಲ್ಲಿ 2008ರಲ್ಲಿ ಈ ಕ್ರೀಡೆಯನ್ನು ಪರಿಚಯಿಸಿದವರು ದಿಲೀಪ ಹನಬರ. ಕೆಲವೇ ವರ್ಷಗಳಲ್ಲಿ ಎಲ್ಲ ವಯೋಮಾನದ ಆಟಗಾರರೂ ಇಲ್ಲಿ ಸಿದ್ಧಗೊಂಡಿದ್ದು ಗೃಹಿಣಿಯರು ಕೂಡ ಈ ಕ್ರೀಡೆಯಲ್ಲಿ ಪಳಗಿದ್ದಾರೆ. ಇಲ್ಲಿ ಈಗ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯಕ್ಕೆ ಪದಕ ತಂದು ಕೊಡುವ ಸವಾಲು ಎದುರಿಸುವ ಲೆಕ್ಕಾಚಾರದಲ್ಲಿದ್ದಾರೆ, ಆಟಗಾರರು ಮತ್ತು ಆಯ್ಕೆ ಸಮಿತಿಯವರು. 
 
ರೋಲರ್ ಹಾಕಿ ಬಗ್ಗೆ
ಸ್ಕೇಟಿಂಗ್ ಮಾಡುತ್ತ ಹಾಕಿ ಆಡುವುದು ರೋಲರ್ ಹಾಕಿ. ಇದರಲ್ಲಿ ಎರಡು ಬಗೆ. ಒಂದೇ ಚಕ್ರದಲ್ಲಿ ಸ್ಕೇಟಿಂಗ್ ಮಾಡಿ ಆಡುವುದು ‘ಇನ್‌ಲೈನ್’ ಹಾಕಿ. ನಾಲ್ಕು ಚಿಕ್ರಗಳಿದ್ದರೆ ಅದು ‘ಕಾಡ್’ ಹಾಕಿ. ಸಣ್ಣ ಅಂಗಣದಲ್ಲಿ ಆಡುವ ಆಟ ಇದು. ಪ್ರತಿ ತಂಡದಲ್ಲಿ ಗೋಲ್ ಕೀಪರ್ ಸೇರಿ ಐದು ಮಂದಿ ಇರುತ್ತಾರೆ. ಸಣ್ಣ ಗೋಲು ಪೆಟ್ಟಿಗೆಗೆ ಹತ್ತಿರದಿಂದ ಶೂಟ್ ಮಾಡಲು ಆಟಗಾರರು ಪ್ರಯತ್ನಿಸುತ್ತಾರೆ. ಇದು ಈ ಆಟದ ರೋಚಕತೆ ಹೆಚ್ಚಿಸುತ್ತದೆ. 
 
‘ರಾಜ್ಯದಲ್ಲಿ ಇನ್ ಲೈನ್ ಹಾಕಿ ಬಲಿಷ್ಠವಾಗಿದ್ದು ಹತ್ತಕ್ಕೂ ಹೆಚ್ಚು ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡ ಪಾಲ್ಗೊಂಡಿದೆ. ಕೈಗಾ ಕೇಂದ್ರದಲ್ಲಿ ತರಬೇತಿ ಪಡೆದವರು ಸತತ ನಾಲ್ಕು ವರ್ಷಗಳಿಂದ ರಾಜ್ಯ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ’ ಎಂದು ಈ ಕೇಂದ್ರದ ಕೋಚ್ ದಿಲೀಪ್ ಹನಬರ ತಿಳಿಸಿದರು. 
‘ರೋಲರ್ ಹಾಕಿಯಲ್ಲಿ ಹರಿಯಾಣ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ ಮುಂತಾದ ರಾಜ್ಯಗಳು ಬಲಿಷ್ಠವಾಗಿವೆ. ಕರ್ನಾಟಕ ಇತ್ತೀಚೆಗೆ ಈ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿದೆ. ರಾಜ್ಯದ ಕಿರಿಯರ ವಿಭಾಗದಲ್ಲಿ ಪ್ರತಿಭಾವಂತ ಆಟಗಾರರಿದ್ದು ಕಳೆದ ಬಾರಿ ಇನ್‌ಲೈನ್ ವಿಭಾಗದಲ್ಲಿ ಬಾಲಕಿಯರು ಬೆಳ್ಳಿ ಗೆದ್ದಿದ್ದಾರೆ. ಸಬ್ ಜೂನಿಯರ್ ವಿಭಾಗದ ಬಾಲಕರು ಕಂಚು ಗೆದ್ದಿದ್ದಾರೆ’ ಎನ್ನುತ್ತಾರೆ ದಿಲೀಪ. 
 
ಕೈಗಾ ಕೇಂದ್ರದಲ್ಲಿ ಈಗ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ರಾಷ್ಟ್ರೀಯ ಕೋಚ್ ವಿಶಾಲ್, ಭಾರತ ಪುರುಷರ ತಂಡದ ನಾಯಕ ಅಮಿತ್ ಶರ್ಮಾ ಮುಂತಾದವರು ರಾಜ್ಯದ ಆಟಗಾರರ ಸಾಮರ್ಥ್ಯ ಒರೆಗೆ ಹಚ್ಚುತ್ತಿದ್ದಾರೆ. 
 
‘ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಕಠಿಣ ಪರಿಶ್ರಮವೇ ಇದಕ್ಕೆ ಕಾರಣ. ಇಲ್ಲಿನ ವಾತಾವರಣ ಇಂಥ ಕ್ರೀಡೆಗೆ ಹೇಳಿ ಮಾಡಿಸಿದಂತಿದೆ. ದೆಹಲಿಯಲ್ಲಿ ಒಂದು ತಾಸು ಆಡಿದರೆ ಸುಸ್ತಾಗುತ್ತದೆ. ಆದರೆ ಕೈಗಾ ಕೇಂದ್ರದಲ್ಲಿ ಮೂರು ತಾಸು ಸತತ ಅಭ್ಯಾಸ ಮಾಡಿದರೂ ದೇಹ ದಣಿಯುವುದಿಲ್ಲ. ಇಂಥ ಅನುಕೂಲಕರ ವಾತಾವರಣವನ್ನು ಪದಕ ಗೆಲ್ಲುವ ಅವಕಾಶವಾಗಿ ಪರಿವರ್ತಿಸುವ ಕೆಲಸ ಆಗಬೇಕು. ಈ ಹಿನ್ನೆಲೆಯಲ್ಲಿ ಇಲ್ಲಿ ಪ್ರತಿಭಾ ಶೋಧ ನಡೆಯುತ್ತಿದೆ’ ಎಂದು ರಾಷ್ಟ್ರೀಯ ಕೋಚ್ ವಿಶಾಲ್ ತಿಳಿಸಿದರು.
 
ಭಾರತದಲ್ಲಿ ರೋಲರ್ ಹಾಕಿ
ದೇಶದಲ್ಲಿ ರೋಲರ್ ಹಾಕಿ ಈಗ ಹೆಸರುವಾಸಿಯಾಗಿದೆ. ದಕ್ಷಿಣದ ಎಲ್ಲ ರಾಜ್ಯಗಳು ಸೇರಿದಂತೆ ಒಟ್ಟು ಹನ್ನೆರಡು ರಾಜ್ಯಗಳು ರಾಷ್ಟ್ರೀಯ ರೋಲರ್ ಹಾಕಿ ಫೆಡರೇಷನ್‌ನಲ್ಲಿ ಸಂಲಗ್ನಗೊಂಡಿವೆ. ಭಾರತ ಪುರುಷರ ತಂಡ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಬೆಳ್ಳಿ, ಸತತ ಮೂರು ಬಾರಿ ಕಂಚು ಗೆದ್ದಿದೆ. ಮಹಿಳಾ ತಂಡ ನಾಲ್ಕು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚು ಗೆದ್ದಿದೆ. ಪುರುಷರ ತಂಡ ಐದನೇ ರ್‌್ಯಾಂಕ್‌ ಹೊಂದಿದ್ದರೆ, ಮಹಿಳಾ ತಂಡಕ್ಕೆ ಎರಡನೇ ರ್‌್ಯಾಂಕ್‌ನ ಗರಿಮೆ ಇದೆ.
 
**
ರೋಲರ್ ಹಾಕಿಯಲ್ಲಿ ಆಟಗಾರರನ್ನು ಪಳಗಿಸುವುದು ಸ್ವಲ್ಪ ಕಷ್ಟದ ಕೆಲಸ. ಪ್ರತಿಯೊಬ್ಬರ ಮೇಲೆಯೂ ವಿಶೇಷ ಗಮನ ಇರಿಸಿದರೆ ಮಾತ್ರ ಅವರ ಸಾಮರ್ಥ್ಯ ಬೆಳಕಿಗೆ ತರಲು ಸಾಧ್ಯ. ಈ ಬಾರಿ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವವರ ಪೈಕಿ ನೂರಕ್ಕೂ ಹೆಚ್ಚು ಮಂದಿ ಗಮನ ಸೆಳೆದಿದ್ದಾರೆ. ಹರಿಯಾಣ, ಚಂಡೀಗಢ ಮುಂತಾದ ಬಲಿಷ್ಠ ತಂಡಗಳನ್ನು ಮಣಿಸಿ ಈ ಬಾರಿ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ ರಾಜ್ಯ ತಂಡ.
–ದಿಲೀಪ ಹನಬರ, ಕೈಗಾ ಹಾಕಿ ಕೆಂದ್ರದ ಕೋಚ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.