ADVERTISEMENT

ಹೈದರಾಬಾದ್‌ ಕರ್ನಾಟಕಕ್ಕೆ ಎರಡೇ ಪದಕ !

ಸಿದ್ದೇಶ
Published 25 ಡಿಸೆಂಬರ್ 2016, 19:30 IST
Last Updated 25 ಡಿಸೆಂಬರ್ 2016, 19:30 IST
ಹೈದರಾಬಾದ್‌ ಕರ್ನಾಟಕಕ್ಕೆ ಎರಡೇ ಪದಕ !
ಹೈದರಾಬಾದ್‌ ಕರ್ನಾಟಕಕ್ಕೆ ಎರಡೇ ಪದಕ !   
ಕಲಬುರ್ಗಿಯಲ್ಲಿ ಮೊಟ್ಟಮೊದಲ ಬಾರಿಗೆ ಪದವಿಪೂರ್ವ ಕಾಲೇಜುಗಳ ರಾಜ್ಯ ಅಥ್ಲೆಟಿಕ್‌ ಕೂಟ ನಡೆಯಿತು. ಮೂಲಭೂತ ಸೌಲಭ್ಯಗಳಿದ್ದರೂ, ಆತಿಥೇಯ ಕಲಬುರ್ಗಿ ಜಿಲ್ಲೆ ಈ ಕೂಟದಲ್ಲಿ ಗಳಿಸಿದ್ದು ಒಂದೇ ಒಂದು ಕಂಚು.
 
ಎನ್‌.ವಿ. ಕಾಲೇಜಿನಲ್ಲಿ ಕಲಿಯುತ್ತಿರುವ ಇಂದ್ರಜಿತ್  ಹೈಜಂಪ್‌ನಲ್ಲಿ  ಮೂರನೇ ಸ್ಥಾನ ಗಿಟ್ಟಿಸುವ ಮೂಲಕ ಕಲಬುರ್ಗಿ ಜಿಲ್ಲೆಗೆ ಏಕೈಕ ಪದಕ ತಂದಿತ್ತರು. ಕಲಬುರ್ಗಿ ಸೇರಿದಂತೆ ಹೈದರಾಬಾದ್‌–ಕರ್ನಾಟಕದ ಆರು ಜಿಲ್ಲೆಗಳಿಂದ 393 ಮಂದಿ ಕಣಕ್ಕಿಳಿದಿದ್ದರು. 3,000 ಮೀ. ಓಟದಲ್ಲಿ ಕೊಪ್ಪಳದ ಹನುಮಂತಪ್ಪ ಮತ್ತೊಂದು ಕಂಚು ಗೆದ್ದರು. ಹೈದರಾಬಾದ್‌ ಕರ್ನಾಟಕದ 200 ಬಾಲಕರು ಪಾಲ್ಗೊಂಡಿದ್ದರು. ಇಷ್ಟೂ ಮಂದಿ ಗಳಿಸಿದ್ದು ಕೇವಲ ಎರಡು ಪದಕ !
 
ಇನ್ನು ಬಾಲಕಿಯರ ಬಗ್ಗೆ ಮಾತನಾಡದಿರುವುದೇ ಒಳಿತು. ಹೈ–ಕ ಪ್ರತಿನಿಧಿಸಿದ್ದ 193 ವನಿತೆಯರು ಒಂದೇ ಒಂದು ಪದಕ ಗೆಲ್ಲಲಾಗಲಿಲ್ಲ.  ಇದಕ್ಕೆ ವಿರುದ್ಧ ಎಂಬಂತೆ ಕೇವಲ 69 ಕ್ರೀಡಾಪಟುಗಳನ್ನು ಕಣಕ್ಕಿಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆ ಒಟ್ಟು 49 ಪದಕ ಬೇಟೆಯಾಡುವ ಮೂಲಕ 12ನೇ ಬಾರಿಗೆ ಚಾಂಪಿಯನ್‌ ಪಟ್ಟ ಪಡೆಯಿತು. 
 
ಸಿಂಥೆಟಿಕ್‌ ಟ್ರ್ಯಾಕ್ ಹೊಂದಿರುವ ಕಲಬುರ್ಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡೆಗೆ ಪೂರಕವಾದ ವಾತಾವರಣವಿದೆ. ಆದರೆ, ಕ್ರೀಡೆಯ ಬಗೆಗಿನ ಮಾಹಿತಿ,  ಲಾಭದ ಬಗ್ಗೆ ಜನರಿಗೆ ತಿಳಿವಳಿಕೆ ಇಲ್ಲ. ಇದರಿಂದ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸುವ ಮನೋಭಾವ ಮಕ್ಕಳು ಹಾಗೂ ಪೋಷಕರಲ್ಲಿ ಇಲ್ಲ. ಇದನ್ನು ಸರಿಪಡಿಸಬೇಕಾದ ಗುರುಗಳೂ ಪಠ್ಯಕ್ರಮ ಪೂರ್ಣಗೊಳಿಸುವುದು ಸೇರಿದಂತೆ ಮತ್ತಿತರ ಚಟುವಟಿಕೆಗಳಲ್ಲಿ ಮುಳುಗಿರುವುದರಿಂದ ಕ್ರೀಡೆ ಬದುಕಿನ ಭಾಗವಾಗುತ್ತಿಲ್ಲ ಎಂಬುದು ಬಹುತೇಕ ದೈಹಿಕ ಶಿಕ್ಷಣ ಶಿಕ್ಷಕರ ಕೊರಗು.
 
ಸರ್ಕಾರದ ನೀತಿ–ನಿರೂಪಣೆಗಳು ಆಕರ್ಷಕವಾಗಿವೆಯಾದರೂ ಪ್ರಾಯೋಗಿಕವಾಗಿ ಅವು ಅನುಷ್ಠಾನಗೊಳ್ಳುತ್ತಿಲ್ಲ. ಉನ್ನತ ಶಿಕ್ಷಣ, ಉದ್ಯೋಗಕ್ಕೆ ರಹದಾರಿ ಯನ್ನಾಗಿಸಿಕೊಳ್ಳಲು ಕ್ರೀಡಾ ಪ್ರಮಾಣಪತ್ರಗಳು ಬಳಕೆಯಾಗುತ್ತಿವೆ. ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿನ ಜನರ ಸಾಮಾಜಿಕ–ಆರ್ಥಿಕ ಸ್ಥಿತಿಯೂ ಕ್ರೀಡೆಗೆ ಪೂರಕವಾಗಿಲ್ಲ ಎಂಬ ವಾದವನ್ನು ಅಲ್ಲಗಳೆಯಲಾಗದು.
 
‘ಅಥ್ಲೆಟಿಕ್‌ ಕೂಟದಲ್ಲಿ ಪಾಲ್ಗೊಂಡಿದ್ದ ಹೈದರಾಬಾದ್‌–ಕರ್ನಾಟಕದ  ಕ್ರೀಡಾಪಟುಗಳು ತರಬೇತಿ ಪಡೆದವರಲ್ಲ. ಕೂಟದಲ್ಲಿ ಪಾಲ್ಗೊಳ್ಳಬೇಕು ಎನ್ನುವ ಕಾರಣಕ್ಕೆ ಅವರನ್ನು ಕರೆದುಕೊಂಡು ಬರಲಾಗಿದೆ. ಉತ್ಸಾಹದಿಂದ ಕ್ರೀಡಾಪಟುಗಳು ಪದಕ ಗೆದ್ದರೆ ಅವರಿಗೆ ಪ್ರೋತ್ಸಾಹವಾಗಲಿ, ಆರ್ಥಿಕವಾಗಿ ಸಹಾಯ ಮಾಡಲು ಇಲಾಖೆಯಿಂದ ಅವಕಾಶವಿಲ್ಲ. ಕೂಟದಲ್ಲಿ ಪಾಲ್ಗೊಳ್ಳಲು ಬರುವ ಕ್ರೀಡಾಪಟುಗಳಿಗೆ ಜಿಲ್ಲಾ ಕೇಂದ್ರದಿಂದ ಉಚಿತವಾಗಿ ಬಸ್ ಟಿಕೆಟ್ ನೀಡಲಾಗುತ್ತದೆ. ಆನಂತರ ಅಲ್ಲಿಂದ ಮಕ್ಕಳು ತಮ್ಮ ಮನೆಗೆ ತೆರಳಲು ತಮ್ಮ ಕೈಯಿಂದ ಹಣ ಖರ್ಚು ಮಾಡಬೇಕು. ಇದು ವಾಸ್ತವ’ ಎನ್ನುತ್ತಾರೆ ಅಥ್ಲೆಟಿಕ್ ಕೂಟ ಆಯೋಜಕರೊಬ್ಬರು.
 
‘ಪದವಿಪೂರ್ವ ಕಾಲೇಜು ಅಥ್ಲೆಟಿಕ್‌ ಕೂಟ ನಡೆಸಲು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಮಾರು 40 ಶಿಕ್ಷಕರ ಸೇವೆ ಬಳಸಿಕೊಂಡಿದ್ದೇವೆ. ಇದೇ ಸಂಪನ್ಮೂಲ ನಮ್ಮಲ್ಲಿದ್ದರೆ ನಮ್ಮ ಜಿಲ್ಲೆಯ ಕ್ರೀಡಾಪಟುಗಳಿಂದ ಇನ್ನಷ್ಟು ಉತ್ತಮ ಸಾಧನೆ ನಿರೀಕ್ಷಿಸಬಹುದಾಗಿತ್ತು’ ಎನ್ನುತ್ತಾರೆ ಕಲಬುರ್ಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎಸ್‌. ಸಾಳುಂಕೆ.
 
‘ರಾಜ್ಯದ ಬಹುತೇಕ ಶಾಲೆಗಳಲ್ಲಿ ಕ್ರೀಡಾಂಗಣವಿಲ್ಲ. ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿದ್ದರಾದರೂ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಆ ಹುದ್ದೆಯೇ ಇಲ್ಲ. ಈ ಎರಡೂ  ವಿದ್ಯಾರ್ಥಿ ಕ್ರೀಡಾ ಜೀವನದ ಪ್ರಮುಖ ಹಂತ’ ಎನ್ನುತ್ತಾರೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಕಲಬುರ್ಗಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಜಿ. ಬಿರಾದಾರ.
 
‘ಕಲಬುರ್ಗಿ ಹೊರತುಪಡಿಸಿ ಹೈದರಾಬಾದ್‌ ಕರ್ನಾಟಕದ ಬೇರಾವ ಜಿಲ್ಲೆಗಳಲ್ಲೂ ಸಿಂಥೆಟಿಕ್‌ ಟ್ರ್ಯಾಕ್‌ ಇಲ್ಲ. ಈ ದಿಕ್ಕಿನಲ್ಲಿ ಸೌಲಭ್ಯ ಕಲ್ಪಿಸುವುದು ಅಗತ್ಯ’ ಎನ್ನುತ್ತಾರೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಮಾಳಗೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.