ADVERTISEMENT

ಆ್ಯಪ್‌ ಅನ್‌ಇನ್ಸ್ಟಾಲ್‌ ಮಾಡುವ ಮುನ್ನ

ದಯಾನಂದ ಎಚ್‌.ಎಚ್‌.
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST

ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಿದಂತೆಲ್ಲಾ ಆ್ಯಪ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ದಿನಕ್ಕೆ ನೂರಾರು ಹೊಸ ಆ್ಯಪ್‌ಗಳು ಈಗ ಆ್ಯಪ್‌ ಸ್ಟೋರ್‌ನಲ್ಲಿ ತುಂಬಿಕೊಳ್ಳುತ್ತಿವೆ. ಎಷ್ಟೇ ಆ್ಯಪ್‌ಗಳಿದ್ದರೂ ಯಾವುದು ನಿತ್ಯದ ಬಳಕೆಗೆ ಹೆಚ್ಚು ಯೋಗ್ಯವೋ ಅವನ್ನಷ್ಟೇ ನಾವು ಹೆಚ್ಚಾಗಿ ಬಳಸುತ್ತಿರುತ್ತೇವೆ.

ನಿತ್ಯ ಬಳಸುವ ಆ್ಯಪ್‌ಗಳ ಜತೆಗೆ ಆಗೊಮ್ಮೆ ಈಗೊಮ್ಮೆ ಮಾತ್ರ ಬಳಸುವ ಆ್ಯಪ್‌ಗಳೂ ಅನೇಕರ ಮೊಬೈಲ್‌ನಲ್ಲಿ ತುಂಬಿರುತ್ತವೆ. ಇಂಥ ಆ್ಯಪ್‌ಗಳು ಮೊಬೈಲ್‌ನ ಮೆಮೊರಿ ಸ್ಪೇಸ್‌ ಕಡಿಮೆ ಮಾಡುವ ಕಾರಣಕ್ಕೆ ಅಂಥ ಆ್ಯಪ್‌ಗಳನ್ನು ಅನ್‌ಇನ್ಸ್ಟಾಲ್‌ ಮಾಡುವುದು ಹಲವರ ರೂಢಿ.

ಹೀಗೆ ಯಾವುದೇ ಆ್ಯಪ್‌ ಅನ್‌ಇನ್ಸ್ಟಾಲ್‌ ಮಾಡುವ ಮುನ್ನ ಕೆಲವೊಂದು ಎಚ್ಚರಗಳನ್ನು ವಹಿಸುವುದು ಅಗತ್ಯ.ನೀವು ಯಾವ ಆ್ಯಪ್‌ ಅನ್‌ಇನ್ಸ್ಟಾಲ್‌ ಮಾಡುತ್ತೀರೋ ಆ ಆ್ಯಪ್‌ನಲ್ಲಿರುವ ಡೇಟಾ ಕೂಡ ಅದರೊಂದಿಗೆ ಅಳಿಸಿಹೋಗುತ್ತದೆ. ಉದಾಹರಣೆಗೆ, ನೀವು ದಾಖಲೆಗಳನ್ನು ಸ್ಕ್ಯಾನ್‌ ಮಾಡಲು ಕ್ಯಾಮ್‌ ಸ್ಕ್ಯಾನರ್‌ ಆ್ಯಪ್‌ ಇನ್ಸ್ಟಾಲ್‌ ಮಾಡಿಕೊಂಡಿದ್ದೀರಿ ಎಂದಿಟ್ಟುಕೊಳ್ಳಿ.

ADVERTISEMENT

ನೀವು ಸ್ಕ್ಯಾನ್‌ ಮಾಡಿರುವ ದಾಖಲೆಗಳನ್ನು ನೀವು ಗ್ಯಾಲರಿಗೆ ಸೇವ್‌ ಆಗುವಂತೆ ಆಯ್ಕೆ ಬದಲಿಸದಿದ್ದಲ್ಲಿ ನೀವು ಸ್ಕ್ಯಾನ್‌ ಮಾಡಿದ ದಾಖಲೆಗಳೆಲ್ಲವೂ ಆ ಆ್ಯಪ್‌ನ ಡೇಟಾ ಆಗಿ ಸೇವ್‌ ಆಗಿರುತ್ತವೆ. ನೀವು ಈ ಆ್ಯಪ್‌ ಅನ್ನು ಅನ್‌ಇನ್ಸ್ಟಾಲ್‌ ಮಾಡಿದರೆ ನೀವು ಸ್ಕ್ಯಾನ್‌ ಮಾಡಿದ್ದ ದಾಖಲೆಗಳೆಲ್ಲವೂ ಅಳಿಸಿಹೋಗುತ್ತವೆ.

ಕೆಲವು ಫೋನ್‌ಗಳಲ್ಲಿ ಯಾವುದೇ ಆ್ಯಪ್‌ ಅನ್‌ಇನ್ಸ್ಟಾಲ್‌ ಮಾಡುವ ಮೊದಲು ‘ನೀವು ಆ್ಯಪ್‌ ಅನ್‌ಇನ್ಸ್ಟಾಲ್‌ ಮಾಡಿದರೆ ಅದರಲ್ಲಿರುವ ಡೇಟಾ ಕೂಡ ಡಿಲೀಟ್‌ ಆಗುತ್ತದೆ. ನೀವು ಮುಂದುವರಿಯಲು ಬಯಸುತ್ತೀರಾ?’ ಎಂಬ ನೋಟಿಫಿಕೇಷನ್‌ ಡೈಲಾಗ್‌ ಕಾಣಿಸಿಕೊಳ್ಳುತ್ತದೆ.

ಆಗ ನೀವು ಆ ಆ್ಯಪ್‌ ಅನ್‌ಇನ್ಸ್ಟಾಲ್‌ ಮಾಡದೆ ಆ ಆ್ಯಪ್‌ನಲ್ಲಿರುವ ಡೇಟಾ ಎಲ್ಲವನ್ನೂ ನಿಮ್ಮ ಡಿವೈಸ್‌ಗೆ ಅಥವಾ ಪಿಸಿಗೆ ಕಾಪಿ ಮಾಡಿಕೊಂಡು ಬಳಿಕ ಆ್ಯಪ್‌ ಅನ್ನು ಅನ್‌ಇನ್ಸ್ಟಾಲ್‌ ಮಾಡಿದರೆ ನಿಮ್ಮ ದಾಖಲೆಗಳ ಡೇಟಾ ನಿಮ್ಮಲ್ಲೇ ಉಳಿಯುತ್ತದೆ.

ಇನ್ನು ಕೆಲವು ಫೋನ್‌ಗಳಲ್ಲಿ ಆ್ಯಪ್‌ ಅನ್‌ಇನ್ಸ್ಟಾಲ್‌ ಮಾಡುವ ಮೊದಲು ಕನ್ಫರ್ಮೇಷನ್‌ ನೋಟಿಫಿಕೇಷನ್‌ ಅಷ್ಟೇ ಕಾಣಿಸಿಕೊಳ್ಳುತ್ತದೆ. ಇಂಥ ಫೋನ್‌ಗಳಲ್ಲಿ ಡೇಟಾ ಅಳಿಸಿ ಹೋಗುವ ಯಾವ ಮಾಹಿತಿಯೂ ನೋಟಿಫಿಕೇಷನ್‌ ಮೂಲಕ ಕಾಣುವುದಿಲ್ಲ. ಇದರಿಂದ ಬಹಳಷ್ಟು ಮಂದಿ ಅನ್‌ಇನ್ಸ್ಟಾಲ್‌ಗೆ ಒಕೆ ಒತ್ತಿದ ಬಳಿಕ ಡೇಟಾ ಕಳೆದುಕೊಂಡು ಸಂಕಟಪಡುತ್ತಾರೆ. ಹೀಗಾಗಿ ಆ್ಯಪ್‌ ಅನ್‌ಇನ್ಸ್ಟಾಲ್‌ ಮಾಡುವ ಮೊದಲು ಡೇಟಾ ಟ್ರಾನ್ಸ್‌ಫರ್‌ ಮಾಡಿಕೊಳ್ಳಿ.

ಒಂದು ವೇಳೆ ನೀವು ಫೋನ್‌ ಅನ್ನು ಡ್ರೈವ್‌ಗೆ ಆಟೊಸಿಂಕ್‌ ಮಾಡಿದ್ದರೆ ನಿಮ್ಮ ಡೇಟಾ ಅಳಿಸಿಹೋಗುವ ಆತಂಕವಿರುವುದಿಲ್ಲ. ಆದರೆ, ಆಗಾಗ ನಿಮ್ಮ ಡಿವೈಸ್‌ನ ಮುಖ್ಯವಾದ ಡೇಟಾ ಫಿಲ್ಟರ್‌ ಮಾಡಿ ಅದನ್ನು ಕ್ಲೌಡ್‌ಗೆ ಸಿಂಕ್‌ ಮಾಡುವ, ಡ್ರೈವ್‌ನಲ್ಲಿ ಡೂಪ್ಲಿಕೇಟ್‌ ಹಾಗೂ ಅನಗತ್ಯ ಫೈಲ್‌ಗಳು ತುಂಬಿಕೊಳ್ಳದಂತೆ ನೋಡಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳುವುದು ಒಳ್ಳೆಯದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.