ADVERTISEMENT

ಕಾರ್‌ ರೇಸಿಂಗ್ ಗೇಮ್: ಮತ್ತಷ್ಟು ರೋಚಕ

​ಪ್ರಜಾವಾಣಿ ವಾರ್ತೆ
Published 21 ಜೂನ್ 2016, 19:30 IST
Last Updated 21 ಜೂನ್ 2016, 19:30 IST
ಕಾರ್‌ ರೇಸಿಂಗ್ ಗೇಮ್: ಮತ್ತಷ್ಟು ರೋಚಕ
ಕಾರ್‌ ರೇಸಿಂಗ್ ಗೇಮ್: ಮತ್ತಷ್ಟು ರೋಚಕ   

ಮೋಟಾರ್‌ ಕಾರ್‌ ರೇಸಿಂಗ್ ಸ್ಪರ್ಧೆ ನೋಡುವಾಗ ಯಾರಿಗೆ ತಾನೆ ಮೈನವಿರೇಳುವುದಿಲ್ಲ ಹೇಳಿ. ರೇಸಿಂಗ್‌ ಕಾರ್‌ಗಳನ್ನು ಓಡಿಸಬೇಕು ಎಂಬ ಆಸೆ ಇದ್ದರೂ ಬಹುತೇಕ ಮಂದಿಗೆ ಅದು ಸಾಧ್ಯವಾಗುವುದಿಲ್ಲ. ಆದರೂ ಶರವೇಗದಲ್ಲಿ ಕಾರು ಓಡಿಸಿದ ಅನುಭವ ನೀಡುವ ಗೇಮ್‌ಗಳು ಗ್ಯಾಜೆಟ್‌ ಲೋಕದಲ್ಲಿ ಸಾಕಷ್ಟಿವೆ. ಅವುಗಳಲ್ಲಿ ಕೆಲವು  ಗೇಮ್‌ಗಳ ವಿವರ ಇಲ್ಲಿದೆ.

ಜಿಟಿ ರೇಸಿಂಗ್ 2
ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹೆಚ್ಚು ಡೌನ್‌ಲೋಡ್ ಆಗಿರುವ ರೇಸಿಂಗ್‌ ಗೇಮ್‌ಗಳಲ್ಲಿ ಇದರದ್ದು ಮೊದಲ ಸ್ಥಾನ. ಈ ರೇಸಿಂಗ್ ಗೇಮ್ ವಾಸ್ತವಕ್ಕೆ ಹೆಚ್ಚು ಹತ್ತಿರದ ಅನುಭವ ನೀಡುತ್ತದೆ. ಉದಾಹರಣೆಗೆ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಜಖಂ ಆದರೆ, ಜಖಂ ಆದ ಕಾರಿನ ಭಾಗ ಹೊರಡಿಸುವ ಸದ್ದು ಗೇಮ್‌ ಆಡುತ್ತಿರುವವರಿಗೆ ಕೇಳಿಸುತ್ತಿದೆ. ಕಾರಿನ ಬಂಪರ್‌ ನೆಲಕ್ಕೆ ತಾಗುತ್ತಿದ್ದರೆ ಆ ಘರ್ಷಣೆಯಲ್ಲಿ ಉಂಟಾಗುವ ಬೆಂಕಿಯ ಕಿಡಿ ಗೋಚರಿಸುತ್ತದೆ ಮತ್ತು ಸದ್ದು ಕಿವಿಗೆ ಅಪ್ಪಳಿಸುತ್ತದೆ.

ನಿಜ ಜೀವನದಲ್ಲಿ ಸುರಂಗ ರಸ್ತೆಯಲ್ಲಿ ಕಾರು ಚಲಾಯಿಸುವಾಗ ಎಂಜಿನ್‌ ಸದ್ದು ದುಪ್ಪಟ್ಟಾಗುತ್ತದೆ. ಇದರಲ್ಲೂ ಸುರಂಗವನ್ನು ಹಾದು ಹೋಗುವಾಗ ಎಂಜಿನ್‌ ಸದ್ದು ಕಿವಿಗೆ ಅಪ್ಪಳಿಸುತ್ತದೆ. ಇಂತಹ ಸಣ್ಣ ಸಣ್ಣ ವಿವರಗಳಿಗೂ ಗೇಮ್‌ ರೂಪಿಸಿದವರು ಆದ್ಯತೆ ನೀಡಿದ್ದಾರೆ. ಒಟ್ಟಾರೆ ಈ ಗೇಮ್‌ ಕಾರ್‌ ಸ್ಟಿಮ್ಯುಲೇಟರ್‌ನ ಅನುಭವ ನೀಡುತ್ತದೆ. ರೇಸಿಂಗ್‌ ಗೇಮ್‌ ಆಡುವಾಗ ಆರಂಭದಲ್ಲಿ ಕಾರು ನಿಯಂತ್ರಣಕ್ಕೆ ಸಿಗದೆ ಅಡ್ಡಾದಿಡ್ಡಿಯಾಗಿ ಚಲಿಸಿ ಅಪಘಾತವಾಗುವುದು ಸಹಜ.

ಇದಕ್ಕಾಗಿ ಸ್ವಯಂಚಾಲಿತ ಬ್ರೇಕಿಂಗ್ ಮತ್ತು ಸ್ಟೀರಿಂಗ್ ನಿಯಂತ್ರಣ ಆಯ್ಕೆಗಳಿವೆ. ಪರಿಣತಿ ಬಂದ ನಂತರ ಈ ಆಯ್ಕೆಗಳನ್ನು ನಿಷ್ಕ್ರಿಯ ಮಾಡಬಹುದು. ಈ ಗೇಮ್‌ನಲ್ಲಿ ವಿವಿಧ ಮಾರ್ಗ ಮತ್ತು ಟ್ರ್ಯಾಕ್‌ಗಳ ಆಯ್ಕೆ ಇದೆ. ಜತೆಗೆ ಸ್ಪರ್ಧೆ ಗೆಲ್ಲುತ್ತಾ ಹೋದಂತೆ ಹೆಚ್ಚು ಶಕ್ತಿಶಾಲಿ ಕಾರುಗಳು ಚಾಲಕನ ಗ್ಯಾರೇಜ್‌ಗೆ ಸೇರ್ಪಡೆಯಾಗುತ್ತವೆ. ಇದು ಸಂಪೂರ್ಣ ಉಚಿತವಾದ ಅ್ಯಾಪ್. ಹೀಗಾಗಿ ಮಧ್ಯೆ ಮಧ್ಯೆ ಕುಕೀ ಮತ್ತು ಪಾಪ್‌ ಅಪ್‌ಗಳು ಬರುತ್ತಿರುತ್ತವೆ.

ಫಾಸ್ಟ್ ಅಂಡ್ ಫ್ಯೂರಿಯಸ್ ಲಿಜೆಸಿ
ಸ್ಟ್ರೀಟ್ ರೇಸಿಂಗ್ ಮತ್ತು ಕಳ್ಳರ ಗುಂಪಿನ ನಡುವಿನ ಪೈಪೋಟಿ ಆಧರಿಸಿದ  ಹಾಲಿವುಡ್ ಸರಣಿ ಚಲನಚಿತ್ರ ಫಾಸ್ಟ್ ಅಂಡ್ ಫ್ಯೂರಿಯಸ್‌ ಅನ್ನು ಆಧರಿಸಿ ಅಭಿವೃದ್ಧಿ ಪಡಿಸಿರುವ ಗೇಮ್ ಇದು. ಹೆಚ್ಚು ಡೌನ್‌ಲೋಡ್‌ ಆದ ಗೇಮ್‌ಗಳ ಪಟ್ಟಿಯಲ್ಲಿ ಇದರದ್ದು  ಎರಡನೇ ಸ್ಥಾನ. ಚಲನಚಿತ್ರದಲ್ಲಿ ಬರುವ ಪಾತ್ರಗಳೆಲ್ಲವೂ ಈ ಗೇಮ್‌ನಲ್ಲಿವೆ. ಜತೆಗೆ ಗೇಮ್‌ ಒಂದು ಕಥೆಯ ಜತೆ ಸಾಗುತ್ತದೆ. ಚಾಲಕ ಬೇರೆ ಬೇರೆ ಪಾತ್ರಗಳ ಕಳ್ಳತನ ಮಾಡುತ್ತಾ, ಸ್ಪರ್ಧೆಯಲ್ಲಿ ಕಾರುಗಳನ್ನು ಗೆಲ್ಲುತ್ತಾ ಸಾಗಬೇಕು.

ನಿರ್ದಿಷ್ಟ ಸಂಖ್ಯೆಯ ಕಾರ್‌ಗಳನ್ನು ಸಂಪಾದಿಸಿದ ನಂತರವಷ್ಟೇ  ಕಳ್ಳರ ಗುಂಪಿನಲ್ಲಿ ಸ್ಥಾನ ಪಡೆಯಲು ಸಾಧ್ಯ. ಕಳ್ಳತನ ಮಾಡಿದ ನಂತರ ಪೊಲೀಸರಿಂದ ತಪ್ಪಿಸಿಕೊಳ್ಳುವ ಹಂತವಂತೂ ರೋಚಕ. ಒಬ್ಬ ಚಾಲಕ ಗರಿಷ್ಠ 50 ಕಾರುಗಳನ್ನು ಸಂಪಾದಿಸಲು ಅವಕಾಶವಿದೆ. ನಂತರ ಆ ಕಾರುಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬಹುದು. ಇದೂ ಸಹ ಉಚಿತ ಗೇಮ್‌. ಆದರೆ ಒಂದು ಹಂತ ಮುಟ್ಟಿದ ನಂತರ ಕಾರುಗಳನ್ನು ಕೊಳ್ಳಲು ಹಣ ತೆರಬೇಕಾಗುತ್ತದೆ.

ಆಸ್ಫಲ್ಟ್ 8- ಏರ್‌ಬೋನ್‌
ಮೊದಲಿನ ಎರಡು ಗೇಮ್‌ಗಳಂತೆ ಇದೇನು ವಾಸ್ತವಕ್ಕೆ ಹತ್ತಿರದ ಅನುಭವ ನೀಡುವ ಗೇಮ್‌ ಅಲ್ಲ. ಆದರೆ ಇದರಲ್ಲಿರುವ ಗ್ರಾಫಿಕ್ಸ್, ಸ್ಟಂಟ್‌ ಅವಕಾಶಗಳು ಮತ್ತು ಸಾಹಸಗಳು ಹೆಚ್ಚು ಮನರಂಜನೆ ನೀಡುತ್ತವೆ. ಈ ಗೇಮ್‌ನಲ್ಲೂ ಟ್ರ್ಯಾಕ್‌ ಮತ್ತು ಕಾರ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಇದರಲ್ಲಿ ಕಾರ್‌ಗಳ ಎಂಜಿನ್ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಆದರೆ ಅದೂ ಸಹ ಗೇಮ್‌ನ ಒಂದು ಭಾಗ. ಇಂಧನ ಗಾಳಿಯ ಮಿಶ್ರಣ ಸರಿಯಾಗಿ ಆಗದಿದ್ದರೆ ಎಂಜಿನ್ ಶಕ್ತಿ ಕಳೆದುಕೊಳ್ಳುತ್ತದೆ. ಹೀಗಾಗಿ ಈ ಹಂತವೂ ರೋಚಕವಾಗಿರುತ್ತದೆ. ಕಾರು ತಿರುಗಿದಂತೆಲ್ಲಾ ನಾವೂ ಓಲಾಡುವಂತೆ ಮಾಡುವಷ್ಟು ಗೇಮ್‌ ಮಜವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.