ADVERTISEMENT

ಗೂಗಲ್‌ ಸ್ಟೋರ್‌ನಲ್ಲಿ ಹೊಸ ಹೊಸ ಆ್ಯಪ್‌ಗಳು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2016, 19:30 IST
Last Updated 18 ಅಕ್ಟೋಬರ್ 2016, 19:30 IST
ಗೂಗಲ್‌ ಸ್ಟೋರ್‌ನಲ್ಲಿ ಹೊಸ ಹೊಸ ಆ್ಯಪ್‌ಗಳು
ಗೂಗಲ್‌ ಸ್ಟೋರ್‌ನಲ್ಲಿ ಹೊಸ ಹೊಸ ಆ್ಯಪ್‌ಗಳು   

ಗ್ರಾಹಕರನ್ನು ತಮ್ಮತ್ತ ಸೆಳೆದು ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುವ ಹಂಬಲ ಬಹುತೇಕ ಎಲ್ಲಾ ಕಂಪೆನಿಗಳಿಗೂ ಇದ್ದೆ ಇರುತ್ತದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಮೂಲಕ ಗ್ರಾಹಕರನ್ನು ಸೆಳೆಯಲು ಕಂಪೆನಿಗಳು ವಿವಿಧ ಕಸರತ್ತುಗಳನ್ನೂ ನಡೆಸುತ್ತವೆ. ಅವುಗಳಲ್ಲಿ ಉಚಿತ ಕೊಡುಗೆ,  ಆಕರ್ಷಕ ಬಹುಮಾನ ಮತ್ತು ಹೊಸ ಆ್ಯಪ್‌ಗಳ ವಿನ್ಯಾಸ ಸೇರಿರುತ್ತವೆ.

ಇದೀಗ ಸ್ಪೋರ್ಟ್ಸ್‌  ಫ್ಲ್ಯಾಷ್‌ ಕಂಪೆನಿಯ ಫ್ಲ್ಯಾಷ್‌ ಆ್ಯಪ್‌, ಏರ್‌ಟೆಲ್‌ನ  ಮೈ ಏರ್‌ಟೆಲ್‌ ಆ್ಯಪ್‌,  ಗೋಡ್ಯಾಡಿಯ  ಫ್ಲೇರ್‌ ಇನ್‌ ಆ್ಯಪ್‌ ಮತ್ತು ಫೇಸ್‌ಬುಕ್‌ನ ಇಂಟ್ರಾ ಆಫೀಸ್‌ ಡಾಟಾ ಟೂಲ್‌ ಮಾರುಕಟ್ಟೆ  ಪ್ರವೇಶಿಸಿವೆ. ಆಸಕ್ತರು ಗೂಗಲ್‌ ಸ್ಟೋರ್‌ನಿಂದ ಈ ಆ್ಯಪ್‌ಗಳನ್ನು ಪಡೆದುಕೊಳ್ಳಬಹುದು.

ನೇರ ಪ್ರಸಾರದ  ಸ್ಪೋರ್ಟ್ಸ್‌  ಫ್ಲ್ಯಾಷ್‌  ಆ್ಯಪ್‌
ಕ್ರೀಡಾ ಪ್ರಿಯರಿಗೆ ಸಂತಸದ ಸುದ್ದಿ!  ಇನ್ನು ಮುಂದೆ ಕ್ರೀಡಾ ಅಭಿಮಾನಿಗಳು ಕಚೇರಿಯಲ್ಲಿ ಅಥವಾ ಪ್ರಯಾಣದ ವೇಳೆಯಲ್ಲಿ  ತಮ್ಮ ಸ್ಮಾರ್ಟ್‌ಫೋನ್‌ ಮೂಲಕ ಇಷ್ಟದ ಆಟದ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಸ್ಮಾರ್ಟ್‌ಫೋನ್‌ಗಳಲ್ಲಿ ಕ್ರೀಡೆಯ ನೇರ ಪ್ರಸಾರ ನೋಡುವಂತಹ ಆ್ಯಪ್‌ ಅನ್ನು ಮಲೇಷ್ಯಾ ಮೂಲದ ಸ್ಪೋರ್ಟ್ಸ್‌  ಫ್ಲ್ಯಾಷ್‌ ಎಂಬ ಸಂಸ್ಥೆ ಅಭಿವೃದ್ಧಿಪಡಿಸಿದೆ.‘ ಸ್ಪೋರ್ಟ್ಸ್‌ ಆ್ಯಪ್‌’ ಎಂದು ಹೆಸರಿಟ್ಟಿರುವ ಈ ಆ್ಯಪ್‌ ಅನ್ನು ರಾಮನ್‌ ರಹೇಜಾ ಎಂಬುವರು ವಿನ್ಯಾಸ ಮಾಡಿದ್ದಾರೆ.

ಪ್ರಪಂಚದ ಯಾವ ಮೂಲೆಯಲ್ಲೇ  ಕ್ರೀಡಾ ಟೂರ್ನಿಗಳು ನಡೆಯುತ್ತಿದ್ದರೂ ಆ ಪಂದ್ಯಾವಳಿಗಳನ್ನು ನೇರವಾಗಿ ವೀಕ್ಷಿಸಬಹುದಾದ ಸೌಲಭ್ಯವನ್ನು ಈ  ಆ್ಯಪ್‌ನಲ್ಲಿ ರೂಪಿಸಿಲಾಗಿದೆ.   ಎಚ್‌ಡಿ ಗುಣಮಟ್ಟದ ವಿಡಿಯೊ ಮತ್ತು ಉತ್ತಮ ಸೌಂಡ್‌ ಈ ಆ್ಯಪ್‌ನ ಮತ್ತೊಂದು ವಿಶೇಷ.

ಆಂಡ್ರಾಯ್ಡ್‌, ಐಒಎಸ್‌, ವಿಂಡೋಸ್‌ ಪ್ಲಾಟ್‌ಫಾರಂನಲ್ಲಿ ಈ ಆ್ಯಪ್‌ ಲಭ್ಯವಿದೆ. ಈಗಾಗಲೇ ರಿಯೊ ಒಲಿಂಪಿಕ್ಸ್‌, ಹಾಕಿ, ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿಗಳನ್ನು ಈ ಆ್ಯಪ್‌ ಮೂಲಕ ನೇರ ಪ್ರಸಾರ ಮಾಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಯುರೋಪ್‌, ಆಫ್ರಿಕಾ ಮತ್ತು ಏಷ್ಯಾದ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿನ ಮಾರುಕಟ್ಟೆಗೆ ಈ ಆ್ಯಪ್‌ ಅನ್ನು ಬಿಡುಗಡೆ ಮಾಡುವ ಗುರಿಯನ್ನು ಕಂಪೆನಿ ಹೊಂದಿದೆ.

ಮೈ ಏರ್‌ಟೆಲ್‌ ಆ್ಯಪ್‌
ದೇಶದಲ್ಲಿ  ರಿಲಯನ್ಸ್‌ ಕಂಪೆನಿಯ ಜಿಯೊ ನೆಟ್‌ರ್ವರ್ಕ್‌ ಆರಂಭವಾದಾಗಿನಿಂದ ಮೊಬೈಲ್‌ ಕ್ಷೇತ್ರದಲ್ಲಿ ಡೇಟಾ ಮತ್ತು ವಾಯ್ಸ್‌ ಕಾಲಿಂಗ್‌ನಲ್ಲಿ ದರ ಸಮರ ಶುರುವಾಗಿದೆ.ವಿವಿಧ ಮೊಬೈಲ್‌ ಸೇವಾದಾತ ಕಂಪೆನಿಗಳು  ಜಿಯೊಗೆ ಪ್ರಬಲ ಪೈಪೋಟಿ ನೀಡಿ ಗ್ರಾಹಕರನ್ನು ತಮ್ಮ ಸೇವಾ ವ್ಯಾಪ್ತಿಯಲ್ಲಿ ಉಳಿಸಿಕೊಳ್ಳಲು ವಿವಿಧ ಕೊಡುಗೆಗಳನ್ನು ನೀಡುವ  ದಿಟ್ಟ ಹೆಜ್ಜೆ ಇಟ್ಟಿವೆ.

ಈಗ ಏರ್‌ಟೆಲ್‌ ಕಂಪೆನಿಯು ತಮ್ಮ ಗ್ರಾಹಕರಿಗಾಗಿ ‘ಮೈ ಏರ್‌ಟೆಲ್‌ ಆ್ಯಪ್‌’ ಎಂಬ ನೂತನ ಕೊಡುಗೆಯನ್ನು ಪರಿಚಯಿಸಿದೆ.  ಈ ಉಚಿತ ಕೊಡುಗೆಯ ಅನುಸಾರ ಏರ್‌ಟೆಲ್‌ ಗ್ರಾಹಕರು  50 ನಿಮಿಷಗಳವರೆಗೆ ಉಚಿತ ವಾಯ್ಸ್‌ ಕಾಲ್‌ , 100ಕ್ಕೂ ಹೆಚ್ಚು ಲೈವ್‌ ಟಿ.ವಿಗಳ ವೀಕ್ಷಣೆ ಹಾಗೂ ಏರ್‌ಟೆಲ್‌ ಕ್ಲೌಡ್‌ ಮ್ಯಾನೆಜಿಂಗ್‌  ವ್ಯವಸ್ಥೆಯಲ್ಲಿ 2ಜಿಬಿ ವರೆಗಿನ ದತ್ತಾಂಶವನ್ನು ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.  ಈ ಎಲ್ಲ ಸೌಲಭ್ಯವನ್ನು ಗ್ರಾಹಕರು ರಾತ್ರಿವೇಳೆ ಮಾತ್ರ ಬಳಸಬಹುದು ಎಂದು ಏರ್‌ಟೆಲ್‌ ಭಾರ್ತಿ ಕಂಪೆನಿ ತಿಳಿಸಿದೆ.

ಸಮುದಾಯ ಆಧಾರಿತ ಫ್ಲೇರ್‌ ಆ್ಯಪ್‌
ವ್ಯಾಪಾರ ಮತ್ತು ವಾಣಿಜ್ಯ ಕ್ಷೇತದಲ್ಲಿ  ಅಗತ್ಯವಿರುವ ತಂತ್ರಾಂಶಗಳನ್ನು ವಿನ್ಯಾಸ ಮಾಡುತ್ತಿರುವ ಗೋಡ್ಯಾಡಿ ಕಂಪೆನಿ ಇದೀಗ ಸಮುದಾಯ ಆಧರಿತ ‘ ಫ್ಲೇರ್‌’ ಇನ್‌’ ಎಂಬ ಆ್ಯಪ್‌ ವಿನ್ಯಾಸ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ವಾಣಿಜ್ಯ ಮತ್ತು ವ್ಯಾಪಾರ ವಹಿವಾಟು ನಡೆಸುತ್ತಿರುವವರ ಅನುಕೂಲಕ್ಕಾಗಿ ಈ ಆ್ಯಪ್‌ ಅನ್ನು ವಿನ್ಯಾಸ ಮಾಡಲಾಗಿದೆ ಎಂದು ಗೋಡ್ಯಾಡಿ ಕಂಪೆನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ  ರಾಜೀವ್‌ ಸೋದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸದಾಗಿ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸುವವರು, ಕಂಪೆನಿಗಳನ್ನು ತೆರೆಯುವವರು, ವಿದೇಶಗಳಲ್ಲಿ ವ್ಯಾಪಾರ ನಡೆಸುತ್ತಿರುವವರು, ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವವರ ಸಂವಹನಕ್ಕಾಗಿಯೇ ಈ ಆ್ಯಪ್‌ ವಿನ್ಯಾಸ ಮಾಡಲಾಗಿದೆ ಎನ್ನುತ್ತಾರೆ ಸೋದಿ.

ಇದರ ಮೂಲಕ ಹಣಕಾಸು ವಹಿವಾಟು, ಬೌದ್ದಿಕ ಮತ್ತು ತಂತ್ರಜ್ಞಾನವನ್ನು ಕೂಡ ವಿನಿಮಯ ಮಾಡಿಕೊಳ್ಳಬಹುದು.  ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸುವವರಿಗೂ ಈ  ಆ್ಯಪ್‌ ತುಂಬಾ ಅನುಕೂಲವಾಗಲಿದೆ ಎಂದು ಗೋಡ್ಯಾಡಿ ಕಂಪೆನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.