ADVERTISEMENT

ಸ್ಯಾಮ್ಸಂಗ್‌ ಕ್ಯುಎಲ್‌ಇಡಿ ಟಿವಿ

ವಿಶ್ವನಾಥ ಎಸ್.
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಸ್ಯಾಮ್ಸಂಗ್‌ ಕ್ಯುಎಲ್‌ಇಡಿ ಟಿವಿ
ಸ್ಯಾಮ್ಸಂಗ್‌ ಕ್ಯುಎಲ್‌ಇಡಿ ಟಿವಿ   

ಟಿ.ವಿ ಎಂದರೆ  ಮೂರ್ಖರ ಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದ ಕಾಲವೊಂದಿತ್ತು. ಆದರೆ ಈಗ ಹಾಗಿಲ್ಲ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ‘ಸ್ಮಾರ್ಟ್‌ ಸಾಧನ’ವಾಗಿ ಬದಲಾಗಿದೆ.

ಆರಂಭದಲ್ಲಿ ಕ್ಯಾಥೋಡ್‌ ರೇ ಟ್ಯೂಬ್‌ನಿಂದ (ಸಿಟಿಆರ್‌) ದೊಡ್ಡ ಗಾತ್ರದ  ಟಿ.ವಿಗಳು ಬಂದವು. ನಂತರ ಡಿಜಿಟಲ್‌ ಲೈಟ್‌ ಪ್ರೊಸೆಸಿಂಗ್‌ (ಡಿಎಲ್‌ಪಿ), ಲಿಕ್ವಿಡ್‌ ಕ್ರಿಸ್ಟಲ್‌ ಡಿಸ್‌ಪ್ಲೇ (ಎಲ್‌ಸಿಡಿ), ಪ್ಲಾಸ್ಮಾ, ಎಲ್‌ಇಡಿ..ಹೀಗೆ  ಗಾತ್ರ, ಗುಣಮಟ್ಟ ಮತ್ತು ತಂತ್ರಜ್ಞಾನದಲ್ಲಿ ಹಲವು ಹಂತಗಳಲ್ಲಿ ಬದಲಾವಣೆಗೆ ಒಳಪಟ್ಟಿತು. ಸದ್ಯ ಮಾರುಕಟ್ಟೆಯಲ್ಲಿರುವುದು ಕ್ರಿಸ್ಟಲ್‌ ಎಲ್‌ಇಡಿ ಟಿವಿ. ಇದು ಎಲ್ಲಾ ರೀತಿಯಲ್ಲಿಯೂ ಈ ಹಿಂದಿನ ಮಾದರಿಗಳಿಗಿಂತ ಉತ್ತಮವಾಗಿದೆ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ  ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌ ಕಂಪೆನಿಯು ಹೊಸ  ಪೀಳಿಗೆಯ ‘ಕ್ಯುಎಲ್‌ಇಡಿ’ ಟಿ.ವಿ. ಬಿಡುಗಡೆ ಮಾಡಿದೆ. ಇದು ಪ್ರೀಮಿಯಂ ಟಿ.ವಿ. ಮಾರುಕಟ್ಟೆಯಲ್ಲಿಯೇ ಹೊಸ ಮೈಲುಗಲ್ಲು ಸೃಷ್ಟಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

‘ಹನ್ನೊಂದು ವರ್ಷಗಳಿಂದಲೂ  ಜಾಗತಿಕ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್‌ ಅತಿದೊಡ್ಡ ಟಿ.ವಿ. ಬ್ರ್ಯಾಂಡ್‌ ಸ್ಥಾನ ಹೊಂದಿದೆ. ಭಾರತದಲ್ಲಿಯೂ ಪ್ರಮುಖ ಸ್ಥಾನದಲ್ಲಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ ಆಗಿದೆ’ ಎಂದು ಕಂಪೆನಿ ಅಧ್ಯಕ್ಷ ಎಚ್‌.ಸಿ. ಹಾಂಗ್‌ ತಿಳಿಸಿದರು. ‘ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌ ಕಂಪೆನಿಯು ಈ ವರ್ಷದ ಅಂತ್ಯಕ್ಕೆ ತನ್ನ ಪ್ರೀಮಿಯಂ ಟಿ.ವಿ. ವಿಭಾಗದಲ್ಲಿ ಶೇ 60 ರಷ್ಟು ಮಾರುಕಟ್ಟೆ ಷೇರು ಹೊಂದುವ ನಿರೀಕ್ಷೆ ಹೊಂದಿದೆ’ ಎಂದರು. ಈ ಟಿ.ವಿಗಳು ಮೂರು ಸರಣಿಗಳಲ್ಲಿ ಲಭ್ಯ ಇವೆ. ಇವುಗಳ ಬೆಲೆ ₹3.14 ಲಕ್ಷ ದಿಂದ ₹24 ಲಕ್ಷದವರೆಗಿದೆ.   ಮೇ 21 ರವರೆಗೆ ಬುಕಿಂಗ್‌ ಅವಕಾಶ ನೀಡಲಾಗಿದೆ.
ವಿಶೇಷತೆ

ADVERTISEMENT

* ಚಿತ್ರದ ಗುಣಮಟ್ಟ ಉತ್ತಮಪಡಿಸಲು ಬಣ್ಣದ ಮಿಶ್ರಣ, ಬ್ರೈಟ್‌ನೆಸ್‌ ಮತ್ತು ಕಾಂಟ್ರಾಸ್ಟ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಇದರಲ್ಲಿ ಶೇ 100ರಷ್ಟು ಕಲರ್‌ ವಾಲ್ಯೂಮ್‌, 2000 ಎಚ್‌ಡಿಆರ್‌.

* ಕೊಠಡಿಯ ಬೆಳಕಿನ ಪ್ರಮಾಣದಲ್ಲಿ ವ್ಯತ್ಯಾಸವಾದರೂ  ಟಿ.ವಿ. ಪರದೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 

* ಟಿ.ವಿಗೆ ಎಷ್ಟು ಸಾಧನಗಳನ್ನು ಬೇಕಿದ್ದರೂ ಸಂಪರ್ಕಿಸಬಹುದು. ಆದರೆ ಅವುಗಳನ್ನು ಟಿ.ವಿ ಬಳಿಯೇ ಇಡುವ ಅಗತ್ಯ ಇಲ್ಲ. ಕೇವಲ ಒಂದು ಕೇಬಲ್‌ನಿಂದ ಟಿ.ವಿಗೆ ಸಂಪರ್ಕಿಸಬಹುದು.

* ಟಿ.ವಿಯನ್ನು ಗೋಡೆಗೆ ನೇತುಹಾಕುವಾಗ ಸಾಮಾನ್ಯವಾಗಿ ವಾಲ್‌ಮೌಂಟ್‌ ಮತ್ತು ಗೋಡೆ ಮಧ್ಯೆ ಖಾಲಿ ಜಾಗ ಉಳಿಯುತ್ತದೆ. ಆದರೆ ಇಲ್ಲಿ ಯಾವುದೇ ಜಾಗ ಬಿಡದೇ ಇರುವಂತೆ ವ್ಯವಸ್ಥೆ ಮಾಡಲಾಗಿದೆ.  ಸ್ಟುಡಿಯೊ ಸ್ಟ್ಯಾಂಡ್‌ನಲ್ಲಿಯೂ ಟಿ.ವಿಯನ್ನು ಇಡಬಹುದು.

* ಸ್ಯಾಮ್ಸಂಗ್‌ ವೊನ್‌ ರಿಮೋಟ್‌ ಬಳಸಿ ಟಿ.ವಿಗೆ ಸಂಪರ್ಕಿಸಿರುವ ಎಲ್ಲಾ ಸಾಧನಗಳನ್ನು ನಿಯಂತ್ರಿಸಬಹುದು. ಇದಲ್ಲದೆ, ಸ್ಮಾರ್ಟ್‌ ವೀವ್‌ ಆ್ಯಪ್‌ ಮೂಲಕ ಸ್ಮಾರ್ಟ್‌ಫೋನ್‌ ಮತ್ತು ಟಿ.ವಿ ಮಧ್ಯೆ ಸಂಪರ್ಕ ಸಾಧಿಸಿ, ಚಿತ್ರ, ವಿಡಿಯೊ, ಸಂಗೀತವನ್ನೂ ಆಲಿಸಬಹುದು.

* ಟಿ.ವಿ. ಫ್ರೇಮ್‌ ಆಯ್ಕೆಯೂ ವಿಶಿಷ್ಟವಾಗಿದೆ. ಲ್ಯಾಂಡ್‌ಸ್ಕೇಪ್‌, ವೈಲ್ಡ್‌ಲೈಫ್‌ ಹೀಗೆ 10 ವರ್ಗಗಳಲ್ಲಿ 100ಕ್ಕೂ ಹೆಚ್ಚಿನ ಚಿತ್ರಕಲೆಗಳಿರುವ ಫ್ರೇಮ್‌ಗಳಿವೆ.

(ಸಂಸ್ಥೆಯ ಆಹ್ವಾನದ ಮೇರೆಗೆ ವರದಿಗಾರ, ನವದೆಹಲಿಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.