ADVERTISEMENT

‘ಅದ್ವಿತೀಯ’ ಸಾಧನೆಯತ್ತ ಭರವಸೆಯ ಹೆಜ್ಜೆ...

ಪ್ರಮೋದ ಜಿ.ಕೆ
Published 28 ಸೆಪ್ಟೆಂಬರ್ 2018, 19:45 IST
Last Updated 28 ಸೆಪ್ಟೆಂಬರ್ 2018, 19:45 IST
ಹುಬ್ಬಳ್ಳಿಯ ಕೆಎಲ್‌ಇ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನಲ್ಲಿ ಶುಕ್ರವಾರ ಆರಂಭವಾದ ಮೇಳದಲ್ಲಿ ರೊಬೊ ವಾರ್ಬಟರ್‌ ಪ್ರಾತ್ಯಕ್ಷಿಕೆ ತೋರಿಸಿದ ಭಾವಿ ಎಂಜಿನಿಯರ್‌ಗಳು
ಹುಬ್ಬಳ್ಳಿಯ ಕೆಎಲ್‌ಇ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನಲ್ಲಿ ಶುಕ್ರವಾರ ಆರಂಭವಾದ ಮೇಳದಲ್ಲಿ ರೊಬೊ ವಾರ್ಬಟರ್‌ ಪ್ರಾತ್ಯಕ್ಷಿಕೆ ತೋರಿಸಿದ ಭಾವಿ ಎಂಜಿನಿಯರ್‌ಗಳು   

ಸಮತಟ್ಟು ಅಲ್ಲದ ರಸ್ತೆಯಲ್ಲಿ, ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಏರಿಳಿತಗಳ ಹಾದಿಯಲ್ಲಿ ಒಂದಿಂಚೂ ಸಮತೋಲನ ತಪ್ಪದೇ ರೊಬೊ ವಾರ್ಬಟರ್‌ ಚಲಾಯಿಸುವುದೆಂದರೆ ತಮಾಷೆಯ ಮಾತೆ? ಅದೂ ಕಣ್ಣು ಮುಚ್ಚಿಕೊಂಡು! ಕುಸ್ತಿ ಅಖಾಡದಲ್ಲಿ ನಿಂತು ಯಾರ ಸಹಾಯವಿಲ್ಲದೇ ಎರಡು ರೋಬೊಟ್‌ಗಳು ಕಾದಾಡುವುದು ಸುಲಭವೇ?

ಹೀಗೆಂದು ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಗೆಳೆಯರನ್ನು, ಬೇರೆ ಕಾಲೇಜಿನಿಂದ ಬಂದಿದ್ದ ಶಿಕ್ಷಕರನ್ನು ಮತ್ತು ಮಾಧ್ಯಮದವರನ್ನು ಕೇಳಿದರು. ‘ಇದೆಲ್ಲವೂ ಆಗದ ಕೆಲಸ’ ಎನ್ನುವ ಉತ್ತರ ಬಂತು. ಇಷ್ಟೊಂದು ಸುಲಭದ ಕೆಲಸವೂ ಕಷ್ಟವೇ? ಎನ್ನುವಂತೆ ನೋಡಿದರು ‘ಭಾವಿ ಎಂಜಿನಿಯರ್‌ಗಳು’.

ಹಾಗೆ ನೋಡುವುದಷ್ಟೇ ಅಲ್ಲ ಸುಲಭವಾಗಿ ಹೊಸ ಸಾಹಸಗಳನ್ನು ಮಾಡಿ ತೋರಿಸಿದರು. ಇದರಿಂದ ರೊಬೊ ವಾರ್ಬಟರ್‌ ಅಖಾಡದಲ್ಲಿ ನಿಂತು ಭರ್ಜರಿ ಕುಸ್ತಿಯಾಡಿತು. ಎದುರಾಳಿ ಸ್ಪರ್ಧೆಗೆ ಪದೇ ಪದೇ ಇರಿದು ಗಾಯಗೊಳಿಸಿತು. ಕಡಿದಾದ ರಸ್ತೆ, ದುರ್ಗಮವಾದ ಹಾದಿಯಲ್ಲಿ ಹತ್ತಾರು ಅಡೆತಡೆಗಳನ್ನು ದಾಟಿ ಗುರಿ ಮುಟ್ಟಿತು.

ADVERTISEMENT

ಈ ಚಿತ್ರಣ ಕಂಡುಬಂದಿದ್ದು ಗೋಕುಲ ರಸ್ತೆಯಲ್ಲಿರುವ ಕೆಎಲ್‌ಇ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನಲ್ಲಿ. ಶುಕ್ರವಾರ ಆರಂಭವಾದ ಎರಡು ದಿನಗಳ ರಾಷ್ಟ್ರೀಯ ತಂತ್ರಜ್ಞಾನ ಮೇಳ ‘ಅದ್ವಿತೀಯ’ದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಪ್ರಯೋಗಗಳ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು. ವೃತ್ತಿ ಸೇರಿದ ಬಳಿಕ ನಾವೂ ಸಮರ್ಥ ಎಂಜಿನಿಯರ್‌ಗಳಾಗುತ್ತೇವೆ ಎನ್ನುವ ಭರವಸೆ ಮೂಡಿಸಿದರು.

ದೇಶದ ಗಡಿಯಲ್ಲಿ ದುರ್ಗಮ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಎದುರಾಗುವ ಸಂಕಷ್ಟ ಎದುರಿಸುವುದು ಹೇಗೆ, ಹೊಸ ವಿನ್ಯಾಸದ ಮನೆಗಳು ಹಾಗೂ ವಿಲ್ಲಾಗಳನ್ನು ಕಟ್ಟುವುದು ಹೇಗೆ? ವಿಲ್ಲಾಗಳನ್ನು ಕಟ್ಟಲು ಬೇಕಾದ ಯೋಜನೆ, ಕೌಶಲ ಏನು ಎಂಬುದರ ಬಗ್ಗೆ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು.

ವೃತ್ತಿ ಜೀವನಕ್ಕೆ ಸೇರಿದ ಬಳಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಕಾರಣ ಕೆಎಲ್‌ಇ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜು ಎಂಟು ವರ್ಷಗಳಿಂದ ‘ಅದ್ವಿತೀಯ’ ಮೇಳ ನಡೆಸಿಕೊಂಡು ಬರುತ್ತದೆ. ವರ್ಷದಿಂದ ವರ್ಷಕ್ಕೆ ಪಾಲ್ಗೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತದೆ.

2012ರಲ್ಲಿ ಮೊದಲ ಬಾರಿಗೆ ಸ್ಪರ್ಧೆ ನಡೆದಾಗ 500 ಸ್ಪರ್ಧಿಗಳಷ್ಟೇ ಇದ್ದರು. ಈ ವರ್ಷ ಪಾಲ್ಗೊಂಡವರ ಸಂಖ್ಯೆ 1,250ಕ್ಕೆ ತಲುಪಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದಾರೆ. 950 ವಿದ್ಯಾರ್ಥಿಗಳು ಹೊರಗಿನ ಕಾಲೇಜುಗಳಿಂದ ಬಂದಿದ್ದಾರೆ.

ಹುಬ್ಬಳ್ಳಿಯ ಕೆಎಲ್‌ಇ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನಿಂದ ಮೆಕ್ಯಾನಿಕಲ್‌, ಸಿವಿಲ್‌, ಎಲೆಕ್ಟ್ರಾನಿಕ್ಸ್‌ ಆ್ಯಂಡ್ ಕಮ್ಯುನಿಕೇಷನ್‌, ಎಲೆಕ್ಟ್ರಿಕಲ್‌, ಎಂಸಿಎ ವಿಭಾಗದ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಇನ್‌ಫಾರ್ಮೇಷನ್ಸ್‌ ಸೈನ್ಸ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ಎರಡೂ ವಿಭಾಗಗಳನ್ನು ಒಂದುಗೂಡಿಸಿ ಒಂದು ತಂಡ ರೂಪಿಸಲಾಗಿದೆ.

‘ಪ್ರತಿ ವರ್ಷದ ಸೆಪ್ಟೆಂಬರ್‌ ಬಂದಾಗಲೆಲ್ಲ ರಾಜ್ಯ ಹಾಗೂ ಹೊರ ರಾಜ್ಯದ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ನಮ್ಮ ಕಾಲೇಜು ನೆನಪಾಗುತ್ತದೆ. ಪ್ರತಿ ವರ್ಷ ಇದೇ ತಿಂಗಳು ಅದ್ವಿತೀಯ ಕಾರ್ಯಕ್ರಮ ನಡೆಯುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯದ ಅನುಭವದ ಜೊತೆಗೆ ಸಂವಹನ ಕೌಶಲ, ನಾಯಕತ್ವ ಗುಣ ಬೆಳೆಸಲು ಮೇಳ ನೆರವಾಗುತ್ತದೆ’ ಎಂದು ಅದ್ವಿತೀಯ ಕಾರ್ಯಕ್ರಮದ ಸಂಯೋಜಕ ಡಾ. ಎ.ಎಸ್‌. ರೆಡ್ಡಿ ಹೇಳಿದರು.

ವಿದ್ಯಾರ್ಥಿಗಳು ತಾವು ತಯಾರಿಸಿದ ಮಾದರಿ ವಸ್ತುಗಳ ಪ್ರಾತ್ಯಕ್ಷಿಕೆ ತೋರಿಸುತ್ತ ‘ನಾವು ಇದನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ, ಕಾರಣವೇನು’ ಎಂಬುದನ್ನು ಸಮರ್ಥವಾಗಿ ವಿವರಿಸಿದರು. ಪದವಿ ಪಡೆದು ವೃತ್ತಿ ಸೇರಿಕೊಂಡ ಬಳಿಕ ಒಂದು ತಂಡವಾಗಿ ಎಲ್ಲರ ಜೊತೆ ಕೆಲಸ ಮಾಡಬೇಕಾದ ಅನಿವಾರ್ಯತೆ ಮತ್ತು ಗುಣಮಟ್ಟ ಹೆಚ್ಚಿಸಿಕೊಳ್ಳುವ ಸವಾಲು ಪ್ರತಿಯೊಬ್ಬರ ಮುಂದಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಈಗಿನಿಂದಲೇ ತರಬೇತಿ ನೀಡಲಾಗುತ್ತಿದೆ.

ಸ್ಪರ್ಧೆಗೆ ಆಯ್ಕೆ ಹೇಗೆ?

ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಅನುಮತಿ ಪಡೆದು ತಾವು ತೋರಿಸುವ ಪ್ರಾತ್ಯಕ್ಷಿಕೆಯ ಮಾದರಿಯನ್ನು ಸಂಘಟಕರಿಗೆ ಕಳುಹಿಸಬೇಕು. ಗುಣಮಟ್ಟ ತೀರ್ಮಾನ ಸಮಿತಿ ಅದನ್ನು ಪರಿಶೀಲಿಸಿ ಆಯ್ಕೆ ಮಾಡುತ್ತದೆ. ಬಳಿಕ ವಿದ್ಯಾರ್ಥಿಗಳಿಗೆ ಆಹ್ವಾನ ನೀಡಲಾಗುತ್ತದೆ.

‘ಸೇನೆಯಲ್ಲಿ ಕೆಲಸ ಮಾಡುವವರಿಗೆ ಬಾಂಬ್‌ ಪತ್ತೆ ಹಚ್ಚುವ ವಿಧಾನ, ಕಡಿದಾದ ದಾರಿಯಲ್ಲಿ ವಾಹನ ಚಲಾಯಿಸುವ ಕೌಶಲವನ್ನು ರೊಬೊ ವಾರ್ಬಟರ್‌ ಮೂಲಕ ತಿಳಿದುಕೊಳ್ಳಬಹುದು. ವಿದ್ಯಾರ್ಥಿ ಹಂತದಲ್ಲಿಯೇ ಈ ರೀತಿಯ ಪ್ರಾಯೋಗಿಕ ಜ್ಞಾನ ಲಭಿಸಿದರೆ ವೃತ್ತಿ ಬದುಕಿನಲ್ಲಿ ಹೆಚ್ಚು ಕ್ರಿಯಾಶೀಲತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ’ ಎಂದು ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಹೇಳುತ್ತಾರೆ.

‘ಎಂಸಿಎ ವಿಭಾಗದವರಿಗೆ ಪ್ರತಿವರ್ಷ ಆರೋಹಣ ಎನ್ನುವ ಪ್ರತ್ಯೇಕ ಸ್ಪರ್ಧೆ ನಡೆಯುತ್ತಿತ್ತು. ಮೊದಲ ಬಾರಿಗೆ ಅದ್ವಿತೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದೆ. ನಮ್ಮ ವಿಭಾಗದಿಂದ 110 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ’ ಎಂದು ಅಕ್ಷಯ್‌ ದೀಕ್ಷಿತ್‌ ಹಾಗೂ ಅನೂಪ್‌ ಹೇಳಿದರು.

‘ಈಗ ಕ್ಯು ಆರ್‌ ಕೋಡ್ ಬಳಕೆ ಹೆಚ್ಚುತ್ತಿದೆ. ಇದರ ಬಗ್ಗೆ ಎಲ್ಲರಿಗೂ ಮಾಹಿತಿ ನೀಡುವುದು, ಇದರ ಅನುಕೂಲಗಳ ಬಗ್ಗೆ ತಿಳಿಸುವುದಕ್ಕೆ ಒತ್ತುಕೊಟ್ಟು ಪ್ರಾತ್ಯಕ್ಷಿಕೆ ತೋರಿಸುತ್ತಿದ್ದೇವೆ’ ಎಂದು ಎಂಸಿಎ ವಿಭಾಗದ ಸಿಬ್ಬಂದಿ ಹರ್ಷವರ್ಧನ್‌ ತಿಳಿಸಿದರು.

ಚಿತ್ರಗಳು: ಈರಪ್ಪ ನಾಯ್ಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.