ADVERTISEMENT

ಅಪ್ಪ ನನಗೆ ಆಕಾಶ..

ನಾವೆಂಕಿ, ಕೋಲಾರ.
Published 3 ಜುಲೈ 2015, 19:30 IST
Last Updated 3 ಜುಲೈ 2015, 19:30 IST

ನನ್ನ ಅಪ್ಪ ಮಹಾ ಮೌನಿ, ಮೌನ ಮುರಿದರೆ ಅಷ್ಟೇ ಕೋಪಿ. ಮಿತವಾಗಿ ಮಾತನಾಡುವ ಧ್ಯಾನಿ. ನಾನು ನಾಟಕದ ಬಾಲ ಪಾತ್ರ ಒಂದಕ್ಕೆ ಆಯ್ಕೆ ಆಗಿದ್ದೆ. ನಾಟಕದ ಗುರುವಿಗೆ ಗುರು ದಕ್ಷಿಣೆಯಾಗಿ ಕಣದ ರಾಶಿಯಿಂದ ರಾಗಿ ಕದ್ದು ಕೊಟ್ಟಿದ್ದು ತಿಳಿದು. ನನ್ನನ್ನು ಹೊಡೆಯಲು ಅಟ್ಟಿಸಿಕೊಂಡು ಬಂದರು. ಓಡಲು ದಾರಿ ಮುಗಿದು ತುಂಬಿದ ಕೆರೆಗೆ ಧುಮುಕಿದೆ.

ಅವರೂ ಧುಮುಕಿ ನನ್ನನ್ನು ನೀರಿನಲ್ಲಿಯೇ ಹೊಡೆದರು. ಈಜಿ ದಡಕ್ಕೆ ಬಂದು ತಿರುಗಿ ಮನೆಯ ಕಡೆ ಕಾಲು ಕಿತ್ತೆ. ಆದರೂ ಬಿಡದೆ ಹಿಂಬಾಲಿಸಿ ಅವರ ಕೋಪ ತೀರಿಸಿಕೊಂಡರು. ನನಗೆ ಪ್ರೋಸಸ್ ಸರ್ವರ್ ಹುದ್ದೆಗೆ ಸಂದರ್ಶನ ಬಂದಾಗ  ಬಸ್ ಚಾರ್ಜಿಗೆ ಹಣ ನೀಡದೆ ದನಕರುಗಳಿಗೆ ಮೇವು ತರಲು ಬೆಟ್ಟಕ್ಕೆ ಹೋಗಿದ್ದರು.

ನಾನು ಅವರನ್ನು ಹುಡುಕಿ ಬೆಟ್ಟಕ್ಕೆ ಹೋಗಿ `ಅಪ್ಪಾ ಅಪ್ಪಾ’ ಎಂದು ಕೂಗಿದ್ದು, ಅಲ್ಲಿ ಅದು ಪ್ರತಿಧ್ವನಿಸಿದ್ದು, ನನ್ನ ಕಿವಿಗಳಲ್ಲಿ ಇಂದಿಗೂ ಮೊರೆಯುತ್ತಿದೆ. ಕಿತ್ತು ತಿನ್ನುವ ಬಡತನ, ಸತತವಾಗಿ ಮೂರು ವರ್ಷ ಮಳೆ ಕೈಕೊಟ್ಟು ಕ್ಷಾಮ ತಲೆದೋರಿತ್ತು. ಮನೆಯಲ್ಲಿ ಹೊಟ್ಟೆ ತಂಬಾ ಊಟ ಸಿಗುವುದು ಅಪರೂಪವಾಗಿತ್ತು. ಅದೆಷ್ಟೋ ದಿನಗಳು ನನಗೆ ಉಣಿಸಿ ತಾನು ಹಸಿದು ಮಲಗಿದ ದಿನಗಳು ಈಗ ನೆನಪಾಗುತ್ತಿದೆ. ಹಬ್ಬ, ಹರಿದಿನಗಳಲ್ಲಿ ಅಪ್ಪನೇ ಅಡಿಗೆ ಭಟ್ಟ.

ಬಡತನದ ಬೇಗೆಯಲ್ಲಿ ಹಬ್ಬಕ್ಕೆ ಟರ್ಲಿನ್ ಬಟ್ಟೆ ಕೊಡಿಸಲು ಸಾಲ ಮಾಡಿ ತನ್ನ ಸ್ವಾಭಿಮಾನವನ್ನು ಬಲಿಕೊಟ್ಟು ನೊಂದ ದಿನಗಳೂ ಉಂಟು. ಜಾತ್ರೆಗೆ ಅಥವಾ ದೂರದ ಪಯಣದಲ್ಲಿ ನನ್ನನ್ನು ತನ್ನ ಹೆಗಲ ಮೇಲೆ ಹೊತ್ತು ‘ಅಪ್ಪ ಎಂದರೆ ಆಕಾಶ’ ಎನ್ನುವ ಸಾಲನ್ನು ನಿಜ ಮಾಡಿದ್ದರು. ಇಷ್ಟದ ವಸ್ತುಗಳು ಬೇಕೆಂದು ಹಠ ಮಾಡಿದಾಗ ತನ್ನ ಕಷ್ಟಗಳನ್ನು ನನಗೆ ಹೇಳಿ ಒಪ್ಪಿಸುತ್ತಿದ್ದರು. ಈ ಕಷ್ಟ ಕೋಟಲೆಗಳಲ್ಲೇ ಮೂರಕ್ಷರ ಓದಿಸಿದರು.

ನಾನು ನಟ ಎನಿಸಿಕೊಳ್ಳಲು ನನ್ನ ಅಪ್ಪ ಅನುಮಾನದಿಂದಲೇ ಅಂದು ನಾಟಕಕ್ಕೆ ಕೊಟ್ಟ ಅನುಮತಿಯೇ ಕಾರಣ. ಅಂದು ನನ್ನಪ್ಪ ಬೆವರು ಸುರಿಸಿ ಕೂಲಿ ಮಾಡಿ ನೀಡಿದ ಕಿಂಚಿತ್ ಹಣದಿಂದ ರಂಗಭೂಮಿ ಪ್ರವೇಶ ಮಾಡಿದವನು.

ಇಂದು ಒಬ್ಬ ನಟನಾಗಿ ಕನ್ನಡ ನಾಡಿನ ಮೇರು ನಾಟಕಕಾರರಾದ ಪಿ.ಲಂಕೇಶ್‌ ಅವರ ‘ಸಂಕ್ರಾಂತಿ’, ತೇಜಸ್ವಿಯವರ ‘ಕಿರುಗೂರಿನ ಗಯ್ಯಾಳಿಗಳು’, ಮಾಸ್ತಿ ಅವರ ‘ಕಾಕನಕೋಟೆ’ ಜಯಂತ್ ಕಾಯ್ಕಿಣಿ ಅವರ ‘ಜತೆಗಿರುವನು ಚಂದಿರ’ ನಾಟಕಗಳನ್ನು ಹತ್ತಾರು ಕಡೆ ಅಭಿನಯಿಸಿ, ಪ್ರದರ್ಶನ ನೀಡಿ ಜನ ಮನ್ನಣೆ ಗಳಿಸಿದವನು. ಇದೀಗ ನಾಟಕಕಾರನಾಗಿ ಹೊರಹೊಮ್ಮಲು ನನ್ನಪ್ಪನ ಅಂತಃಕರಣದ ಒಲವೇ ನನಗೆ ಸ್ಫೂರ್ತಿಯ ಸೆಲೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT