ADVERTISEMENT

ಅವಳು ಹೆಣ್ಣು; ಯಂತ್ರವಲ್ಲ...

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2016, 19:30 IST
Last Updated 23 ಸೆಪ್ಟೆಂಬರ್ 2016, 19:30 IST
ಅವಳು ಹೆಣ್ಣು; ಯಂತ್ರವಲ್ಲ...
ಅವಳು ಹೆಣ್ಣು; ಯಂತ್ರವಲ್ಲ...   

ಕುಟುಂಬದಲ್ಲಿ ಪುರುಷನಿಲ್ಲದೆ ಸ್ತ್ರೀಯನ್ನು, ಸ್ತ್ರೀಯಿಲ್ಲದೆ ಪುರುಷನನ್ನು ಯೋಚಿಸುವುದೇ ಕಷ್ಟ. ಜೀವನದಲ್ಲಿ ಪುರುಷ ಮತ್ತು ಸ್ತ್ರೀ ಒಬ್ಬರಿಗೊಬ್ಬರು ಪರಸ್ಪರ ಅರಿತು ಬಾಳಿದರೆ ಸ್ವರ್ಗಸುಖ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿಂದೆ ಪುರುಷ ಮನೆಯ ಹೊರಗೆ ದುಡಿಯುತ್ತಿದ್ದ,; ಮನೆಯ ಸಮಾಜದ ಸಮಸ್ತ ಜವಾಬ್ದಾರಿ ಹೊತ್ತು ಬಾಹ್ಯ ಪ್ರಪಂಚದ ಅರಿವಿಲ್ಲದೆ, ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದಳು ಸ್ತ್ರೀ. ಮನೆಯೊಳಗಿನ ಕೆಲಸ ಮಾಡಿದರೆ ಮಾತ್ರ ತನಗೆ ಸದ್ಗತಿ ದೊರೆಯುವುದೆಂಬ ಭಾವನೆ ಅವಳಲ್ಲಿ ಬೇರೂರಿತ್ತು. ಹೊರ ಪ್ರಪಂಚದಲ್ಲಿ ಉದ್ಯೋಗ ಮಾಡುವುದು ಮಹಾ ಅಪರಾಧ ಎಂಬುದು ಅವಳ ನಂಬಿಕೆಯಾಗಿತ್ತು.

ಆದರೆ ಕಾಲ ಬದಲಾದಂತೆಲ್ಲ ಅವಳಿಗೆ ಶಿಕ್ಷಣ ದೊರೆತು ಈಗ ಪುರುಷನಿಗೆ ಸರಿಸಾಟಿಯಾಗಿ ನಿಲ್ಲುವ ಸಾಮರ್ಥ್ಯ ಪಡೆದಿದ್ದಾಳೆ. ಆರ್ಥಿಕವಾಗಿ ಸಾಮಾಜಿಕವಾಗಿ ಸ್ವಾವಲಂಬಿಯಾಗಿ ಬದುಕಬೇಕೆಂಬುದು ಅವಳ ಉನ್ನತ ಆಕಾಂಕ್ಷೆಯಾಗಿದೆ. ಹೀಗಾಗಿ ‘ಉದ್ಯೋಗಂ ಪುರುಷ ಲಕ್ಷಣಂ’ ಎಂಬ ಹಳೆಯ ಮಾತು ಸುಳ್ಳಾಗಿ ಇಂದು ಹೆಣ್ಣು ಕೂಡ ಉದ್ಯೋಗವನ್ನು ಮಾಡುತ್ತಿದ್ದಾಳೆ.

ಪುರುಷನಿಗಿಂತ ಸ್ತ್ರೀ ಕೆಲಸದಲ್ಲಿ ಹೆಚ್ಚು ಶ್ರದ್ಧೆಯುಳ್ಳವಳು ಎಂಬುದು ಸಿದ್ಧವಾಗಿ ಅವಳು ಹೆಚ್ಚು ಉದ್ಯೋಗ ಅವಕಾಶಗಳನ್ನೂ ಪಡೆಯುತ್ತಿದ್ದಾಳೆ. ಮಹಿಳೆ ಉದ್ಯೋಗಸ್ಥೆಯಾಗಲು ಪ್ರಮುಖ ಕಾರಣವೆಂದರೆ, ಈಗ ಒಬ್ಬರ ದುಡಿಮೆ ಕುಟುಂಬದ ನಿರ್ವಹಣೆಗೆ ಸಾಲದಿರುವುದು.

ಇಂದಿನ ಮಹಿಳೆ ಉದ್ಯೋಗ ಮಾಡುತ್ತಿರುವುದು ಹೆಮ್ಮೆಯ ವಿಷಯವೇನೋ ನಿಜ. ಆದರೆ ಈ ಉದ್ಯೋಗಸ್ಥ ಮಹಿಳೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗಾಣದೆತ್ತಿನಂತೆ ಮನೆಯಲ್ಲೂ ಆಫೀಸನಲ್ಲೂ ವಿಶ್ರಾಂತಿಯಿಲ್ಲದೆ ದುಡಿಯಬೇಕು. ಆಫೀಸಿನಲ್ಲಿ ದುಡಿದು ಬಂದ ಅವಳು ವಿರಮಿಸಬೇಕೆಂದರೆ ಮನೆಯಲ್ಲಿ ಸಾಧ್ಯವಾಗದು; ಮನೆಗೆ ಬಂದ ಕೂಡಲೇ ಮನೆಯ ಕೆಲಸಗಳು ಅವಳನ್ನು ಕಾಯುತ್ತಿರುತ್ತವೆ.

ಕೆಲವು ಮನೆಗಳಲ್ಲಿ ದುಡಿಯುವ ಮಹಿಳೆ ಎಷ್ಟು ಅಸಹಾಯಕಳೆಂದರೆ ತನಗೆ ಬೇಕಾದ ಬಟ್ಟೆಗಳನ್ನಾಗಲಿ, ಆಭರಣಗಳನ್ನಾಗಲಿ ಕೊಂಡುಕೊಳ್ಳಲು ಮತ್ತು ಧರಿಸಲು ಮನೆಯವರ ಅನುಮತಿ ಪಡೆಯಬೇಕಾಗುತ್ತದೆ. ಅವಳಿಗೂ ಒಂದು ಜೀವವಿದೆ, ಆಸೆ ಆಕಾಂಕ್ಷೆಗಳಿವೆ ಎಂಬುದನ್ನು ಯಾರೂ ಲಕ್ಷಿಸುವುದಿಲ್ಲ.

ಇದು ಅವಿಭಕ್ತ ಕುಟುಂಬದಲ್ಲಿಯ ಉದ್ಯೋಗಸ್ಥ ಮಹಿಳೆಯ ಕಥೆಯಾದರೆ, ಇನ್ನು ವಿಭಕ್ತ ಕುಟುಂಬದಲ್ಲಿ ಇವಳ ಪಾಡಂತೂ ಹೇಳತೀರದು. ಕೌಟುಂಬಿಕ ಜೀವನಕ್ಕೆ ಬೇಕಾಗುವ ಎಲ್ಲ ಅವಶ್ಯಕತೆಗಳನ್ನು ತಾನೇ ಪೂರೈಸಿಕೊಳ್ಳಬೇಕು; ಗಂಡನ ಮಕ್ಕಳ ಕೆಲಸಗಳಿಗೂ ಇವಳೇ ಜವಾಬ್ದಾರಿ ಹೊರಬೇಕಾಗಿರುತ್ತದೆ.

ADVERTISEMENT

ಕೆಲವು ಗಂಡಂದಿರು ತಾವಾಗಿ ಒಂದು ಲೋಟ ನೀರನ್ನು ಸಹ ತೆಗೆದುಕೊಂಡು ಕುಡಿಯುವುದಿಲ್ಲ. ಕುಡಿದರೆ ಎಲ್ಲಿ ತನ್ನ ಪೌರುಷಕ್ಕೆ ಪೆಟ್ಟು ಬೀಳುವದೋ ಎಂಬಂತೆ ವರ್ತಿಸುತ್ತಾರೆ; ಹೆಂಡತಿಯೇ ಸೇವೆ ಮಾಡಬೇಕು. ಮನೆಯ ಆಗುಹೋಗುಗಳನ್ನು ಗಮನದಲ್ಲಿರಿಸಿಕೊಂಡು, ಹೊರಗೂ ದುಡಿದು ಬರಬೇಕು.

ಮಕ್ಕಳ ಶಿಸ್ತು ಆಹಾರ ಅಭ್ಯಾಸದ ಬಗ್ಗೆ ಅವಳದ್ದೇ ಜವಾಬ್ದಾರಿ. ಇಷ್ಟೆಲ್ಲ ಮಾಡುವ ಅವಳಿಗೆ ಹೊರಗಿನ ಸಭೆ ಸಮಾರಂಭಗಳಲ್ಲಿ ಪಾಲ್ಗೊಳಲು ಗಂಡನ ಪರವಾನಿಗೆ ಇಲ್ಲದೆ ಹೋಗುವಷ್ಟು ಸ್ವತಂತ್ರಳಲ್ಲ. ಮನೆಗೂ ಅವಳು ಎಂದೂ ತಡವಾಗಿ ಬರುವಂತಿಲ್ಲ. ಬಂದರೆ ಗಂಡನ ಮತ್ತು ಸಮಾಜದ ಸಂಶಯ ದೃಷ್ಟಿಗೆ ಇವಳು ಗುರಿಯಾಗಬೇಕು.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರೋಪಾಯಗಳೇ ಇಲ್ಲವೆ ಎಂಬ ಪ್ರಶ್ನೆ ಅವಳನ್ನು ಸದಾ ಕಾಡುತ್ತಿರುತ್ತದೆ. ಇವಳ ಅಸಹಾಯಕತೆ ಬಗ್ಗೆ ಗಂಡ ಕೇವಲ ಬಾಯಿ ಮಾತಿನ ಕನಿಕರ ತೋರದೆ ಹೆಂಡತಿಗೆ ಮನೆಯ ಕೆಲಸದಲ್ಲಿ ನೆರವಾಗಬೇಕು. ಹೀಗೆ ಮಾಡುವುದು ತನ್ನ  ಆದ್ಯ ಕರ್ತವ್ಯ ಎಂದು ಅವನು ತಿಳಿಯಬೇಕು. ಹೆಂಡತಿ ಮನೆಗೆಲಸ ಮಾಡುವ ಯಂತ್ರ ಎಂಬ ಭಾವನೆ ಬಿಟ್ಟು ಮನೆಯವರೆಲ್ಲರೂ ಅವಳ ನೋವು ನಲಿವಿಗೆ ಸ್ಪಂದಿಸಬೇಕು.

ಸಹೋದ್ಯೋಗಿಗಳು ಅವಳ ಬಗ್ಗೆ ಕೀಳು ಅಭಿಪ್ರಾಯ ತಾಳದೆ, ತಮ್ಮ ಸಮಾನತೆಯಿಂದ ಕಾಣಬೇಕು. ಇಂಥ ಹತ್ತಾರು ಬದಲಾವಣೆಗಳು ಮನೆಯಲ್ಲೂ ಸಮಾಜದಲ್ಲೂ ಸಂಭವಿಸಿದಾಗ ಮಾತ್ರವಷ್ಟೆ ಉದ್ಯೋಗಸ್ಥ ಮಹಿಳೆ ನೆಮ್ಮದಿಯಿಂದ ಜೀವಿಸಲು ಆದೀತು.
-ಜಯಶ್ರೀ ಅಬ್ಬಿಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.