ADVERTISEMENT

‘ಓಪನ್ ಕಿಚನ್’ನ ಪ್ರವಚನ

ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ – 2017 ಮೆಚ್ಚುಗೆ ಗಳಿಸಿದ ಪ್ರಬಂಧ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2017, 19:30 IST
Last Updated 24 ಫೆಬ್ರುವರಿ 2017, 19:30 IST
‘ಓಪನ್ ಕಿಚನ್’ನ ಪ್ರವಚನ
‘ಓಪನ್ ಕಿಚನ್’ನ ಪ್ರವಚನ   

– ಶ್ವೇತಾ ಸುರೇಶ ಪಾಟೀಲ

‘ಓಪನ್ ಮೈಂಡ್’ ಎಂದರೆ ‘ವಿಶಾಲ ಮನೋಭಾವ.’ ಈ ಆಧುನಿಕ ಕಾಲದಾಗ ಇರೋದೇನೋ ಭಾಳ ಚೊಲೋ. ಅದರ ನಾವು ಎಲ್ಲಾ ಕಡೇನೂ ಓಪನ್ ಮೈಂಡ್‌ನಿಂದ  ವಿಚಾರ ಮಾಡಿ ಎಲ್ಲಾನೂ ಸ್ವೀಕರಿಸಾಕ ಆಗಂಗಿಲ್ಲ. ಈಗ ಆಧುನಿಕ ಟ್ರೆಂಡ್ ಏನಂದ್ರ ಮೈಂಡ್ ಓಪನ್ ಇಲ್ಲದ ಇದ್ರೂನೂ, ಮನೀ ಮುಂದ ಓಪನ್ ಸ್ಪೇಸ್ ಇಲ್ದೆ ಇದ್ರೂನೂ ಅತಿ ಸಂಕುಚಿತ ಮನೋಭಾವ ಇದ್ದವರೂ ಸಹ ತಮ್ಮ ಸ್ವಂತ ಮನ್ಯಾಗ ಕಿಚನ್ ಮಾತ್ರ ಓಪನ್ ಇರಬೇಕು.

ಆದ್ರ ಇದನ್ನ ಸ್ವೀಕರಿಸೋದು ಸ್ವಲ್ಪ ಕಷ್ಟನs. ಅಂದ್ರ ಫಾರಿನ್ಯಾಗ ಇದ್ದಂಗ ಹಾಲಿನ್ಯಾಗ ಅಡಿಗೀಮನಿ ಕಟ್ಟೋದನ್ನ ‘ಓಪನ್ ಕಿಚನ್’ ಅಂತಾರ. ಫಾರಿನ್ಯಾಗ ಈ ಓಪನ್ ಕಿಚನ್ ಓಕೆ. ಯಾಕಂದ್ರ ಅವರ ಅಡುಗಿ ಪದ್ಧತೀನ ಬ್ಯಾರೆ. ನಮ್ಮಂಗ ರೊಟ್ಟಿ ಬಡಿಯೂದು, ಚಟ್ನಿ ಕುಟ್ಟೂದು, ಒಗ್ಗರಣೆ ಹಾಕೂದು, ಸಿಂಕಿನ ಕೆಳಗೆ ಬುಟ್ಯಾಗ ಮುಸುರಿ ಒಟ್ಟಿ ಇಡೂದು – ಇಂಥಾವೇನೂ ಇರಂಗಿಲ್ಲ. ಅವರ ಅಡಿಗಿ ನಮ್ಮಂಥ ಸಂಕೀರ್ಣ ವಸ್ತುಗಳಿಂದನೂ ಕೂಡಿರಂಗಿಲ್ಲ. ಓವನ್, ಟೋಸ್ಟರ್, ಡಿಶ್‌ವಾಷರ್ ಕೆಲವೇ ಅಡಿಗೀ ಸಾಮಾನುಗಳು; ಸಿರಾಮಿಕ್ ತಾಟು, ಬಟ್ಟಲಾ, ಪ್ಲೇಟುಗಳು ಇರೋದ್ರಿಂದ ‘ಓಪನ್ ಕಿಚನ್’ ಅಗ್ಧೀ ಛಂದ ಅನಸ್ತೇತಿ. ಆದ್ರ ನಮ್ಮ ಅಗಡೀಮನೀ ನೋಡ್ರಿ, ಕೊಣಮಗಿ, ಜರಡಿ, ರೊಟ್ಟಿಬುಟ್ಟಿ ಹನ್ನೆರಡು ತರಹದ್ದು ಬೋಗುಣಿಗಳು, ಹಲವಾರು ನಮೂನಿ ಚಮಚಾ, ತಾಟುಗಳು, ಸಿಂಕಿನ ಕೆಳಗೆ ಮುಸುರಿ ತುಂಬಿದ ಭಾಂಡೆ ಬುಟ್ಟಿ, ಮಸೀ ಅರಿವೆಗಳು, ಕಾಳು–ಕಡ್ಡಿ, ಹಿಟ್ಟಿನ ಡಬ್ಬಿ, ಸಕ್ಕರೆ ಚಹಾಪುಡಿ ಡಬ್ಬಿಗಳು

– ಹೀಗೆ ತರಾವರಿ ಸಾಮಾನುಗಳಿಂದ ತುಂಬಿರತೈತಿ. ಹಿಂಗಾಗಿ ಎಷ್ಟ ಸ್ವಚ್ಛ ಇಟ್ರೂನೂ ನೋಡವ್ರಿಗೆ ಛಂದ ಅನಿಸಿಲಿಕ್ಕಿಲ್ಲ. ಹಾಲಿನ್ಯಾಗ ಬಂದರಿಗೆಲ್ಲ ಈ ಸಾಮಾನುಗಳ ದರ್ಶನ ಅವರಿಗೂ ನಮಗೂ ಕೂಡೇ ಮುಜುಗರ. ಈ ಓಪನ್ ಕಿಚನ್‌ಗೆ ಗೋಡೆ, ಬಾಗಲಾ, ಚಿಲಕಾ ಇಂಥಾವೇನೂ ಇರಂಗಿಲ್ಲ. ಅಂದ ಮ್ಯಾಲೆ ಇದನ್ನ ಅಡಗೀ’ಮನಿ’, ಅಡುಗಿ‘ಕೋಣಿ’ ಅನ್ನಾಕೆ ಹೆಂಗ ಸಾಧ್ಯ? ಭಾಳ ಅಂದ್ರ ಅಡೀಗೀ ಮಾಡೂ ಜಗಾ ಅನಬಹುದು ಅಷ್ಟ.

ನಮಗ ಹೆಣ್ಣಮಕ್ಕಳಿಗೆ ಅಡಿಗೀಮನೀನ ಅರಮನಿ. ನಾವು ಅರ್ಧ ಆಯುಷ್ಯ ಅಡಿಗೀಮನ್ಯಾಗ ಕಳೀತೀವಿ. ನಾವು ನಮ್ಮ ಹಕ್ಕು ಅಧಿಕಾರ ಚಲಾಯಿಸುವಂಥಾ ಜಗಾ. ಅದರ ಮ್ಯಾಲೇ ನಮ್ಮ ಸರ್ವಾಧಿಕಾರತ್ವ. ಅದರೊಳಗ ನಾವು ಮಾಡೂ ಅಡುಗೀ ಜೊತೆಗೆ ಎಷ್ಟೋ ಗುಟ್ಟುಗಳೂ ಅಡಿಗಿರತಾವ. ಈ ಅಡಿಗೀಮನ್ಯಾಗ ಹಂಗ ಎಲ್ಲಾರನ್ನೂ ಒಳಗ ಬಿಟಕೋಳಾಕ ನಮಗ ಸೇರಂಗಿಲ್ಲ. ಅದು ನಮ್ಮ ಪ್ರೈವೇಟ್ ಪರ್ಸನಲ್ ಜಗಾ. ಆದ್ರ ಓಪನ್ ಕಿಚನ್ ಇದ್ದಲ್ಲೇ ಅಡುಗೀಮನೀ ಅನ್ನೂದು ಜನರಲ್ ವಾರ್ಡ್ ಆಗಿಬಿಡತೇತಿ. ಅಲ್ಲೆ ಯಾರ ಬೇಕಾದ್ರೂ ಅಡ್ಡಾಡಬಹುದು. ಯಾಕಂದ್ರ ಅಡುಗೀಮನೀಗೆ ಮತ್ತ ಹಾಲಿಗೆ ಬೇರ್ಪಡಿಸುವಂತಹ ಯಾವ ಲಕ್ಷ್ಮಣರೇಖಾನೂ ಇರಂಗಿಲ್ಲ. ಹೊಸ್ತಲ, ಬಾಗಲೂ ಇಲ್ಲ ಅಂದ ಮ್ಯಾಲೆ ಅದು ಪಬ್ಲಿಕ್ ಪ್ರಾಪರ್ಟಿನs.

ನಮ್ಮ ಹೆಣ್ಮಕ್ಕಳು ಚಟಾ ಏನಂದ್ರ ಒಬ್ಬರ ಅಡಿಗೀ ಮಾಡಾಕತ್ತಿದ್ರೂ ಮನ್ಯಾಗಿನ ಇತರೇ ಹೆಣ್ಣಮಕ್ಕಳೂ ಅಡಿಗೀ ಮನ್ಯಾಗ ಸೇರವಿ ಆಗಿರ್ತಾರೆ. ಅಲ್ಲೇನ ಸುಮ್ನಿರತಾರ ಅಂತಿರೇನು? ಆ ಸುದ್ದಿ ಈ ಸುದ್ದಿ, ಅತ್ತೀ–ಸೊಸೆ, ನಾದಿನಿ, ನೆರೆಹೊರೆ  ಅವರನ್ನ ಗುಸುಗುಸು ಪಿಸುಪಿಸು ಅಂತ ಆಡಿಕೊಳ್ಳಾಕ ಅಡಿಗೀಮನೀನ ಫರ್‌ಫೆಕ್ಟ್ ಫ್ಲೇಸು. ಹೆಂಗೂ ಗಂಡಸರಂತೂ ಈ ಕಡೆ ತಲೆ ಹಾಕಂಗಿಲ್ಲ. ದೊಡ್ಡ ಅಡಿಗೀಮನಿ ಮನ್ಯಾಗ ಸ್ವಲ್ಪ ಹಿಂದಕತ ಇತ್ತಂದ್ರೆ ಅಂತೂ ಅದು ಪ್ರಮೀಳಾ ರಾಜ್ಯನ. ಓಪನ್ ಕಿಚನ್ಯಾಗ ಇವೆಲ್ಲ ಸಾಧ್ಯ ಐತಿ ಅಂತಿರೇನು? ಏನು ಮಾಡಿದ್ರೂ ಮಾತನಾಡಿದ್ರೂನೂ ಹಾಲಿನ್ಯಾಗ ಕುಂತವರ ಕಿವಿಗೆ ಬಿದ್ದs ಬಿಳತೇತಿ. ಈ ‘ಚಾಡಾ’ ಆಡಿಕೊಳ್ಳಲಿಲ್ಲಂದ್ರ ನಮ್ಮ ಮನಸ್ಸಿಗೆ ಸಮಾಧಾನ ಇರಂಗಿಲ್ಲ. ಈ ಸುಡುಗಾಡು ಓಪನ್ ಕಿಚನ್ಯಾಗ ಚಾಡಾನೂ ಆಡಿಕೊಳ್ಳೂವಂಗಿಲ್ಲ. ಆಡಿಕೊಳ್ಳಾಕ ಆಗಂಗಿಲ್ಲ ಅಂತ ಸಿಡಿಮಿಡಿನೂ ಮಾಡಾಕ ಆಗಂಗಿಲ್ಲ. ಎಲ್ಲಾ ಓಪನ್ ಇರೂದು ಭಾರೀ ಫಜೀತಿ ನೋಡ್ರೀ. ಈಗ ಈ ನಮ್ಮ ಧಾರಾವಾಹಿಗಳನ್ನ ತೋಗೋರಿ ಎಷ್ಟs ಆಧುನಿಕ ಇದ್ರೂನೂ ಭಾಳಷ್ಟು ಧಾರಾವಾಹ್ಯಾಗ ಅಡಿಗೀಮನೀ ಸೆಪರೇಟs ಇರ್ತಾವು. ಕಿಚನ್ ಓಪನ್ ಇದ್ದ ಬಿಟ್ರ ಕುತಂತ್ರನೂ ಇಲ್ಲ, ಕತೀನೂ ಮುಂದುವರಿಯಂಗಿಲ್ಲ.

ಅಡಿಗೀಮನೀ ಅನ್ನೂದು ಅಡುಗೀಮನೀ ಅಷ್ಟ ಅಲ್ಲ; ಹುಡುಗರ ಆಟದ ಮೈದಾನ, ಹೆಣ್ಮಕ್ಕಳ ಹರಟೆ ಕಟ್ಟಿ, ಕೆಲವೊಂದು ಸಲ ಊಟದ ಖೋಲೀನೂ ಆಗಿ ಏಕಪಾತ್ರಾಭಿನಯ ನಿರ್ವಹಿಸ್ತದ. ನಾವೆಲ್ಲ ಹುಡುಗರನ್ನ ಏನರೆ ತಿನ್ನಾಕ ಕೊಟ್ಟು ಆಡಾಕ ಹಚ್ಚಿ ಅವರನ್ನ ನಿಗರಾಣಿ ಮಾಡಿಕೊಂತನ ಅಡಿಗೀ ಮಾಡತಿರ್ತೀವಿ. ಸಂಕೋಚ ಸ್ವಭಾವದವರು ಹಿರ್‍್ಯಾರಿದ್ರ ಅವರಿಗೆ ಅಲ್ಲೇ ಊಟದ ತಾಟು ಹಚ್ಚಿಕೊಡ್ತೀವಿ. ಅಷ್ಟs ಯಾಕ ನಾವು ಅಡಿಗೀ ಮಾಡಿಕೊಂತ ಶೇಂಗಾ, ಪುಠಾಣಿ, ಬೆಲ್ಲ, ಕೊಬ್ಬರಿ ಬಾಯಾಗ ಹಾಕ್ಕೊಂತ ತಿಂಡಿ–ತಿನಿಸುಗಳಿದ್ರ ಕುರುಕ್ಕೊಂತ ಅಡಿಗೀ ಮಾಡ್ತಿರ್ತೀವಿ. ಓಪನ್ ಕಿಚನ್ಯಾಗ ಈ ನಮ್ಮ ತಿಂದೋಡಿತನಕ್ಕ, ಬಾಯಾಡಿಸೋ ಚಟಕ್ಕ ಕಡಿವಾಣ ಹಾಕ್ಕೋಬೇಕಾಗತೈತಿ. ಭಾರೀ ತ್ರಾಸು. ಹಾಲಿನ್ಯಾಗ ಪಲ್ಲೆ ಸೋಸಕೊಂತ ಕುಂತ ಅತ್ತಿ, ಪೇಪರ್ ಓದಕೊಂತ ಮಾವ, ಚಾ ಕುಡಕೋತ ಕುಂತ ಭಾವ – ಇವರಿಗೆಲ್ಲ ಬ್ಯಾಡ ಅಂದ್ರೂ ಇಡೀ ಅಡಿಗೀಮನಿ ಓಪನ್ ಆಗಿ ಕಾಣತಿರತೈತಿ.

ಹಿಂಗಾಗಿ ನಾವು ಕಳವು ತುಡುಗಲೆ ಏನೂ ಮಾಡುವಂಗಿಲ್ಲ. ಕಾಯಿಪಲ್ಲೆದಾಗ, ರೇಷನ್ಯಾಗ ಕಷ್ಟಪಟ್ಟ ಉಳಿಸಿದ ಚಿಲ್ಲರಾ ಪಲ್ಲರಾ ರೊಕ್ಕ ಸಾಸಿವಿ, ಜೀರಿಗಿ ಡಬ್ಬಿ ಸೇರ್ಸೂದು ಸುಲಭಲ್ಲ. ಎಲ್ಲರೂ ಮಧ್ಯಾಹ್ನ ಮಲಕೊಂಡಾಗ ಬೆಕ್ಕಿನಂಗ ಕಳ್ಳಹೆಜ್ಜೀಲಿ ಹೋಗಿ ಇಂಥಾ ಕೆಲಸಾ ಮಾಡ ಬೇಕಾಕೈತಿ. ಹಾ! ಬೆಕ್ಕು ಅಂದ ತಕ್ಷಣ ನೆನಪಾತು ನೋಡ್ರೀ ನಾವಂತೂ ಅಡಿಗೀಮನ್ಯಾಗ ಹಾಲು, ಮೊಸರು ಬಿಂದಾಸಾಗಿ ಇಟ್ಟು ಕಿಟಕಿ, ಬಾಗಲಾ ಹಾಕಿ ಬೆಕ್ಕಿನ ಚಿಂತಿಲ್ಲ ಆರಾಮಿರ್ತೀವಿ, ಈ ಓಪನ್ ಕಿಚನಾರು ಏನು ಮಾಡ್ತಾರಾ? ಕಿಟಕಿ ಏನೋ ಮುಚ್ಚಿಡಬಹುದು.  ಆದ್ರ ಬಾಗಲಾ?! ಅದಿರಂಗೇ ಇಲ್ಲಲ. ಬೆಕ್ಕಿಗಂತೂ ರಾಜಮಾರ್ಗ. ಮತ್ತ ಹಳೇ ಕಾಲದವರಂಗ ಹಾಲು–ಮೊಸರು ಇಡಾಕ ‘ನೆಲವು’ ಕಟ್ಟಬೇಕಾಗತೈತಿ ಅಷ್ಟs....

ಹೀಂಗ ಒಮ್ಮೆ ನಮ್ಮ ಗೆಳತಿ ಹೊಸಾ ಮನೀಗೆ ಅನೀರಿಕ್ಷಿತವಾಗಿ ನಾನು ನಮ್ಮನೀಯವರು ಹೋದ್ವಿ. ಮನಿಯೊಳಗೆ ಕಾಲಿಡತಿದ್ದಂಗ ಧಪ್‌ಧಪ್ ಅಂತ ಭಯಂಕರ ಸಪ್ಪಳ ಕೇಳಿಸ್ತು. ಇದೇನಪ್ಪಾ ಅಂತ ನೋಡೂದ್ರಾಗ ಆಹಾ! ಎಂಥಾ ದೃಶ್ಯ!?... ಮಿಂಚುವ ಸೋಫಾಸೆಟ್ಟು, ಶೋಕೇಸು, ಟೀಪಾಯಿ, ಎಲ್ಇಡಿ ಟಿವಿಗಳಿಂದ ಭರ್ಜರಿಯಾಗಿ ಅಲಂಕೃತಗೊಂಡ ಹಾಲ್. ಅದರ ಸೌಂದರ್ಯ ಸವಿಯಬೇಕೆನ್ನುದ್ರಾಗ ಅದಕ್ಕಂಟಿಕೊಂಡ ಇದ್ದ ಓಪನ್ ಕಿಚನ್ನಿನ ದೃಶ್ಯಾವಳಿ ಹಾಲ್‌ನ ಸೌಂದರ್ಯಕ್ಕ ದೃಷ್ಟಿಬೊಟ್ಟು ಇಟ್ಟಂಗಾಗಿತ್ತು. ಹಿಟ್ಟು ಸಾಣಿಸಿದ ಜರಡಿ, ರೊಟ್ಟಿಬುಟ್ಟಿ, ಕೊಣಮಗಿ, ಅದರ ಸುತ್ತ ಬಿದ್ದ ಹಿಟ್ಟಿನ ರಂಗೋಲಿ ಅಷ್ಟಅಲ್ಲದನs ಮೊಣಕಾಲ ತನಕ ಸೀರಿ ಏರಿಸ್ಕೊಂಡು, ಮೈಕೈ ಹಿಟ್ಟು ಮಾಡ್ಕೊಂಡು ಧಪ್‌ಧಪ್ ರೊಟ್ಟಿ ಬಡಕೊಂತ ಕುಂತ ನಮ್ಮ ಗೆಳತೀ ಅತ್ತಿ. ಅಹಾ! ನೋಡಿ ಕಣ್ಣು ಪಾವನಾದುವು. ನಮ್ಮಷ್ಟs ಮುಜುಗರ ನನ್ನ ಗೆಳತಿಗೂ ಅವರತ್ತೀಗೂ ಆತು. ಅನಿವಾರ್ಯವಾಗಿ ಹ್ಹೆ ಹ್ಹೆ.. ಬರ್ರಿ ಬರ್ರಿ... ಕೂಡ್ರಿ  ಕೂಡ್ರಿ...

ನೀವೂ ಬಿಸಿ ರೊಟ್ಟಿ ತಿನ್ರಿ ಅಂತ ಪೆದ್ದುಪೆದ್ದಾಗಿ ನಕ್ಕರು. ‘ಈ ಓಪನ್ ಕಿಚನ್ಯಾಗ ನಿಂತ ನಿಂತ ಅಡಿಗೀ ಮಾಡಿ ನಮ್ಮತ್ತೀಯವರಿಗೆ ಮೊಣಕಾಲು ಬ್ಯಾನಿ ಬಂದುಬಿಟ್ಟಾವು. ರೊಟ್ಟಿ ಇಲ್ದ ನಡಿಯಂಗಿಲ್ಲ. ಕಟ್ಟಿ ಮ್ಯಾಲಿನ ಗ್ಯಾಸಂತೂ ಕಟ್ಟಿಗೆ ಫಿಕ್ಸ್ ಆಗಿರ್ತದ. ಕೆಳಗೆ ತೊಗೊಳಾಕ ಬರಂಗಿಲ್ಲ. ನನಗಂತೂ ರೊಟ್ಟೀನ ಬರಂಗಿಲ್ಲ. ಅದಕ್ಕ ಒಂದು ಸಿಂಗಲ್ ಒಲಿ ಖರೀದಿ ಮಾಡಿ ಕೆಳಗ ಕುಂತ ರೊಟ್ಟಿ ಬಡಿಯಾಕ ವ್ಯವಸ್ಥೆ ಮಾಡ್ಕೊಂಡಾರ...’ ಅಂತ ನನ್ನ ಗೆಳತಿ ಹೇಳಿದ್ದು ಕೇಳಿ ‘ಅಯ್ಯೋ ಈ ಓಪನ್ ಕಿಚನ್ನಿನ ಕರ್ಮವೇ’ ಅಂತ ಮನಸ್ಯ್ನಾಗ ಅನಕೊಂಡೆ. ಅದ ಅಡುಗಿ‘ಮನಿ’ ಅಂತ ಇದ್ರ ಈ ‘ಫ್ರೀ ಷೊ’ ಬಂದವರಿಗೆಲ್ಲ ಕಾಣೂ ಮುಜುಗರದ ಪರಿಸ್ಥಿತಿ ಎದುರಿಸೂದು ಬರತಿದ್ದಿಲ್ಲ. ಹೀಂಗs ಅವರ ಮನೀಗೇನ ಮತ್ತೊಂದು ಸಲ ಹೋಗೂ ಪ್ರಸಂಗ ಬಂತು. ಧಪ್‌ಧಪ್ ಸಪ್ಪಳೇನೋ ಕೇಳಿಸ್ತು, ಆದರ ದೃಶ್ಯಾವಳಿ ಏನ ಇದ್ದಿಲ್ಲ. ಯಾಕಂತೀರಿ? ಅಲ್ಲೆ ನಾಟಕದಾಗಿನಂಥಾ ದೊಡ್ಡ ಪರದಾ ಬಿದ್ದಿತ್ತು. ತಕ್ಷಣ ನನಗೆ ‘ಪರದೆಮೇ ರೆಹನೇ ದೋ...’



ಹಾಡು ನೆನಪಿಗೆ ಬಂದು ಕಿಸಕ್ಕನೆ ನಕ್ಕುಬಿಟ್ಟೆ. ಇದು ಬೇಕು . ಇನ್ನೊಬ್ಬರ ಸಂಬಂಧಿಕ ಮನೀಗೆ ಹೋದಾಗ ಅವರಂತೂ ಸಾಕ್ಷತ್ ಗಣಪತಿ ಹಂಗ ಹೊಟ್ಟಿ ಬಿಟಗೊಂಡು, ಸೀರೀ ಏರಿಸ್ಕೊಂಡು ಯಾವ ಮುಲಾಜಿಲ್ದನ ಕಟ್ಟೀ ಹತ್ತೀ ಕುಂತು ಕಡುಬು ಕರಿಯಾಕತ್ತಿದ್ರು. ಜೊತೆಗೆ ಅವರ ಮಗಳೂ ಮೆಣಸಿನಕಾಯಿ ಒಗ್ಗರಣೆ ಹಾಕ್ಕೊತ ಕುಂತಿದ್ಲು. ಕರಿಯೂ ಕಮುರು, ಒಗ್ಗರಣೆ ಘಾಟು ಎಲ್ಲಾ ಸೇರಿ ಕಣ್ಣು ಮೂಗು ಬಣ್ಣಗೆಟ್ಟು ಹೋಗಿ ತಾಸು ಕುಂದರ ಬೇಕಂತ ಹೋದವರು ತ್ರಾಸಪಟ್ಟು ಐದs ನಿಮಿಷದಾಗ ಹೊರಗ ಬಂದ್ವಿ. ನಮಗs ಅವರ ‘ರೀತಿ’ ನೋಡಿ ಮುಜುಗರ ಆತು. ಅವರಂತೂ ಒಂಚೂರು ಮುಜುಗರ ಪಟಗೊಳ್ಳಲಿಲ್ಲ!! ಅಯ್ಯೋ ದೇವರೇ ಈ ಓಪನ್ ಕಿಚನ್ನು ಕರ್ನಾಟಕದ ‘ಕ್ಯೂಸೆನ್ನು’ ಆಹಾಹಾ! ಏನ ಕಾಂಬಿನೇಷನ್ನು..?!

ಹೀಂಗ ನಾನು ನಮ್ಮನಿಯವರು ಸಂಬಂಧಿಕರೊಬ್ಬರ ಮನೀಗೆ ಹೋಗಿ ಇರೂ ಪ್ರಸಂಗ ಬಂತು. ಅಯ್ಯೋ ಪಾಪ ಅಲ್ಲಿ ನಮ್ಮನಿಯವರಿಗೆ ಆದ ಫಜೀತಿ ಕೇಳೀದ್ರ ಏನಂತೀರೇನೋ? ನಾವು ಹೋದವರ ಮನಿ ಹೊಸಾದು ಅಲ್ಲೂ ಓಪನ್ ಕಿಚನ್ನು. ಅಲ್ಲಿ ಚಹಾ–ನಾಷ್ಟಾದ ಕೆಲಸ ನಾನs  ವಹಿಸಿಕೊಂಡೆ. ನಮ್ಮನಿಯವರು ಬಹಳ ರಸಿಕರು. ಅವರಿಗೆ ಹಳೇ ಕನ್ನಡದ ಸಿನಿಮಾದಾಗಿನ ನಾಯಕ–ನಾಯಕಿಯರ ತರಹ ರೋಮ್ಯಾಂಟಿಕ್ ಆಗಿರೂದಂದ್ರ ಬಹಳ ಇಷ್ಟ. ನಾ ಸೀರಿ ಉಟಗೊಂಡು ಅಡಿಗೀ ಮಾಡಾಕ ನಿಂತ್ರ ಶಿಲಾಬಾಲಿಕೆ ತರಹ ಕಾಣಿಸ್ತೀ ಅಂತ ಅಂತಿರ್ತಾರ.

ಹೀಂಗs ನಮ್ಮ ಮುದ್ದಣ್ಣ–ಮನೋರಮೆಯರ ಸರಸ–ಸಲ್ಲಾಪಗಳು ನಡಿಯೂದು ನಮ್ಮನಿಯೊಳಗಿನ ಅಡಿಗೀಮನ್ಯಾದನs ಅಲ್ಲಿ ಊರಿಗೆ ಹೋಗಿ ಮರುದಿನ ನಾಷ್ಟಾ ಮಾಡಾಕ ನಿಂತಿದ್ದೆ. ನಮ್ಮನಿಯವರು ಓಪನ್ ಕಿಚನ್ ಅನ್ನೂದು ಮರೆತು ಮುದ್ದಣ್ಣ ಆಗಿ ಬಂದು ಇನ್ನೇನ ಬಳಸಿ ಹಿಡಿಬೇಕು ಅನ್ನೂದ್ರಾಗ ಅಲ್ಲೇ ಹಾಲಿನ್ಯಾಗಿಂದ ಕಿಸಿ ಕಿಸಿ ನಗೂ ಶಬ್ದ ಕೇಳಿಸ್ತು. ನಮ್ಮನಿಯವರು ಬೆಚ್ಚಿ ಬಿದ್ದು ಮುಖಾ ಹುಳ್ಳಗೆ ಮಾಡಿಕೊಂಡು ‘ಅ.....ಅ... ಅದು ಶೇಂಗಾ ತಿನ್ನಾಕ ಬಂದಿದ್ದೆ... ಶೇಂಗಾ ಅಷ್ಟs ಕೊಡು ಈಗ... ‘ಬೆಲ್ಲಾ’ ಆಮೇಲೆ ಇಸಗೋತೀನಿ’ ಅಂತ ಹೋಗೇಬಿಟ್ರು. ನಂಗತೂ ಭಾಳ ನಾಚಿಕಿ ಬಂದ ಬಿಟ್ತು. ನಾ ಎಷ್ಟೋತನಕ ಅಡಿಗೀ ಮನಿಯಿಂದ ಹೊರಗs ಬರಲಿಲ್ಲ. ಬಾಗಲಾ, ಗೋಡೆ ಇಲ್ಲದ ಇರೂ ಇಲ್ಲಿನ ಸರಸ–ಸಲ್ಲಾಪಗಳು ವಿಧಾನಸಭಾದಾಗಿನ ಕಲಾಪಗಳಂಗ ಆಗಿದ್ದು ಸುಳ್ಳಲ್ಲ.

ಆ ಪರದೇಶದ ಓಪನ್ ಕಿಚನ್ನು ನಮ್ಮ ಈ ಸಾಂಪ್ರದಾಯಿಕ ಅಡಿಗೀ ವಿಧಾನ ಇವುಗಳ ‘ಫ್ಯೂಜನ್‌’ನ್ನಿನ ಫ್ಯಾಷನ್ನು ನನ್ನಂತೂ ಕನ್‌ಫ್ಯೂಶನ್ ನ್ಯಾಗ ಕಡವೇತಿ. ನಾನಂತೂ ಸ್ವಂತ ಮನೀ ಕಟ್ಟಿದ್ರ ನಮ್ಮ ಅಡುಗೀಮನಿ ಗುಟ್ಟು, ಸರಸ–ಸಲ್ಲಾಪ, ಸರ್ವಾಧಿಕಾರತ್ವ, ಹಕ್ಕು ಇವನ್ನೆಲ್ಲ ಉಳಿಸಿಕೊಳ್ಳಾಕ ನಾನಂತೂ ಓಪನ್ ಕಿಚನ್ ಅಂತೂ ಮಾಡಂಗಿಲ್ಲ. ‘ಬಯಲು’ ಆಲಯದೊಳಗೋ ಆಲಯ ಬಯಲೊಳಗೋ’ ಅನ್ನೂವಂಗ ‘ಹಾಲ್‌ನ್ಯಾಗ ಕಿಚನ್ನೋ ಕಿಚನ್ಯಾಗ ಹಾಲೋ’ ದೇವರೇ ಬಲ್ಲ. ಹೀಂಗ ಈ ‘ಓಪನ್ ಕಿಚನ್‌’ನ್ನಿನ ಪ್ರವಚನ ಎಷ್ಟ ಹೇಳಿದ್ರೂನೂ ಕಡಿಮೀನs.

ಈ ‘ಓಪನ್ ಕಿಚನ್’ ಬಂದು ಆಪ್ತ ಅಡುಗೆ ‘ಮನಿ‘, ಅಡುಗೆ ‘ಕೋಣೆ’ ಅನ್ನೂ ಪರಿಕಲ್ಪನೆಯ ಅಸ್ತಿತ್ವವೇ ಅಳಿಸಿ ಹೋಗಾಕತೈತೇನೋ ಅಂತ ನನಗನಸತೈತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT