ADVERTISEMENT

ಖಾರಾ–ಸಿಹಿಯ ಸವಿ ತಿನಿಸುಗಳು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2017, 19:30 IST
Last Updated 3 ನವೆಂಬರ್ 2017, 19:30 IST
ಖಾರಾ–ಸಿಹಿಯ ಸವಿ ತಿನಿಸುಗಳು
ಖಾರಾ–ಸಿಹಿಯ ಸವಿ ತಿನಿಸುಗಳು   

ಸಿಹಿತಿಂಡಿಗಳು ಎಂದರೆ ಅನೇಕರಿಗೆ ಅಚ್ಚುಮೆಚ್ಚು. ‘ಕಜ್ಜಾಯ, ಹೋಳಿಗೆ ಎಂದರೆ ನನಗೆ ಇಷ್ಟ’ ಎಂದು ಹೇಳುವವರೇ ಅನೇಕರು. ಕೆಲವು ತಿನಿಸುಗಳು ಕೆಲವು ರಾಜ್ಯಗಳಲ್ಲಿ ವಿಶೇಷವಾಗಿರುತ್ತದೆ. ಇನ್ನು ಸಿರಿಧಾನ್ಯದ ತಿನಿಸುಗಳಂತೂ ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ. ಈ ತಿನಿಸುಗಳನ್ನು ನಾವು ಹೋಟೆಲ್‌ಗೆ ಹೋಗಿಯೋ, ಬೇಕರಿಯಿಂದಲೂ ತಂದು ತಿನ್ನಬೇಕಾಗಿಲ್ಲ. ಮನೆಯಲ್ಲಿಯೇ ಸುಲಭ ವಿಧಾನದಲ್ಲಿ ಈ ತಿಂಡಿಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದಾರೆ ಸೀತಾ ಎಸ್. ನಾರಾಯಣ.

ದಿಢೀರ್ ಹೋಳಿಗೆ
ಬೇಕಾಗುವ ಸಾಮಗ್ರಿಗಳು: ಹೂರಣಕ್ಕೆ: ಶೇಂಗಾ, ಬಿಳಿಎಳ್ಳು, ಗಸಗಸೆ, ಬಾದಾಮಿ, ಗೋಡಂಬಿ, ಒಣಕೊಬ್ಬರಿ ತುರಿ, ಹುರಿಗಡಲೆ – ತಲಾ 2 ದೊಡ್ಡ ಚಮಚ, ಅಕ್ಕಿಹಿಟ್ಟು, ಗೋಧಿಹಿಟ್ಟು ತಲಾ –  1ಚಮಚ,  ಬೆಲ್ಲದ ಪುಡಿ – ರುಚಿಗೆ ತಕ್ಕಷ್ಟು, ಏಲಕ್ಕಿ ಪುಡಿ – 1/2ಚಮಚ,  ಕಣಕಕ್ಕೆ: ಮೈದಾ –1ಕಪ್, ಹೋಳಿಗೆ ರವೆ – 1/2ಕಪ್, ತುಪ್ಪ – 3ರಿಂದ 4 ಚಮಚ, ಅರಿಶಿಣ, ಉಪ್ಪು – ಚಿಟಿಕೆ, ಎಣ್ಣೆ – ಸ್ವಲ್ಪ

ತಯಾರಿಸುವ ವಿಧಾನ: ಮೈದಾ, ರವೆ, ಅರಿಶಿಣ, ಉಪ್ಪು, ತುಪ್ಪ ಸೇರಿಸಿ ಚಪಾತಿ ಹಿಟ್ಟಿನಂತೆ ಮೃದುವಾಗಿ ಕಲಸಿ ಕಣಕ ತಯಾರಿಸಿ. ಸ್ವಲ್ಪ ಎಣ್ಣೆ ಹಾಕಿ ಅರ್ಧ ಘಂಟೆ ನೆನೆಯಲು ಬಿಡಿ. ಶೇಂಗಾ, ಬಿಳಿಎಳ್ಳು, ಗಸಗಸೆ ಹದವಾಗಿ ಹುರಿದುಕೊಳ್ಳಿ. ಬಾದಾಮಿ, ಗೋಡಂಬಿಯನ್ನು ಬೆಚ್ಚಗೆ ಮಾಡಿ. ತಣಿದ ಮೇಲೆ ಹುರಿಗಡಲೆ, ಒಣಕೊಬ್ಬರಿತುರಿಯೊಂದಿಗೆ ಎಲ್ಲವನ್ನೂ ಸೇರಿಸಿ ನುಣ್ಣಗೆ ಪುಡಿಮಾಡಿಕೊಳ್ಳಿ. ಅದಕ್ಕೆ ಹುರಿದ ಗೋಧಿಹಿಟ್ಟು, ಅಕ್ಕಿಹಿಟ್ಟನ್ನೂ ಸೇರಿಸಿ. ಪುಡಿ ಎಷ್ಟಿದೆಯೋ ಅಷ್ಟು ಬೆಲ್ಲವನ್ನು ತೆಗೆದುಕೊಂಡು ಸ್ವಲ್ಪವೇ ನೀರು ಹಾಕಿ ಒಲೆಯ ಮೇಲಿಡಿ. ಎಳೆಯ ಪಾಕ ಬಂದ ಮೇಲೆ ಮಾಡಿಟ್ಟುಕೊಂಡ ಪುಡಿ ಹಾಕಿ. ಗಂಟಿಲ್ಲದಂತೆ ಚೆನ್ನಾಗಿ ಕೈಯಾಡಿಸಿ ಹೂರಣ ತಯಾರಿಸಿ, ಒಲೆ ಆರಿಸಿ. ಏಲಕ್ಕಿ ಪುಡಿ, 1ಚಮಚ ತುಪ್ಪ ಸೇರಿಸಿ, ಕಲಸಿಟ್ಟ ಕಣಕವನ್ನು ಮತ್ತೊಮ್ಮೆ ಚೆನ್ನಾಗಿ ನಾದಿಕೊಳ್ಳಿ.

ADVERTISEMENT

ನಿಂಬೆಗಾತ್ರದ ಹೂರಣ ತೆಗೆದುಕೊಂಡು ಕಣಕದಲ್ಲಿ ತುಂಬಿ ಹೋಳಿಗೆ ಪೇಪರ್ ಮೇಲೆ ಎಣ್ಣೆ ಹಚ್ಚಿ ತೆಳ್ಳಗೆ ತಟ್ಟಿ ಅಥವಾ ಲಟ್ಟಿಸಿ. ತವಾ ಮೇಲೆ ಎಣ್ಣೆ ಹಾಕಿ ಲಟ್ಟಿಸಿದ ಹೋಳಿಗೆಯನ್ನು ಎರಡೂ ಕಡೆ ಹದವಾಗಿ ಗರಿಗರಿಯಾಗಿ ಬೇಯಿಸಿ. ತುಪ್ಪದೊಂದಿಗೆ ಸವಿಯಿರಿ. ಈ ಹೋಳಿಗೆಯನ್ನು ಎಂಟು ದಿನಗಳವರೆಗೆ ಇಡಬಹುದು.

ಬೊರೆಲು (ಆಂಧ್ರದ ಸಿಹಿ)
ಬೇಕಾಗುವ ಸಾಮಗ್ರಿಗಳು: ಕಡಲೆಬೇಳೆ – 1ಕಪ್‌, ಸಕ್ಕರೆ – 1ಕಪ್‌, ಕಾಯಿತುರಿ – 1/4ಕಪ್‌, ಏಲಕ್ಕಿ, ಹಿಟ್ಟು ತಯಾರಿಸಲು ಅಕ್ಕಿ – 3/4ಕಪ್‌, ಉದ್ದಿನಬೇಳೆ – 1/2ಕಪ್‌, ಉಪ್ಪು – ಚಿಟಿಕೆ, ಕರಿಯಲು ತುಪ್ಪ ಅಥವಾ ಎಣ್ಣೆ.

ತಯಾರಿಸುವ ವಿಧಾನ: ಉದ್ದಿನಬೇಳೆ ಮತ್ತು ಅಕ್ಕಿಯನ್ನು ನಾಲ್ಕು ಗಂಟೆ ನೆನೆಸಿ, ಚೆನ್ನಾಗಿ ತೊಳೆದು ಸ್ವಲ್ಪ ನೀರು ಹಾಕಿ ರುಬ್ಬಿ ಹಿಟ್ಟು ದೋಸೆ ಹಿಟ್ಟಿಗಿಂತ ಗಟ್ಟಿಯಾಗಿರಲಿ. ಎಂಟು ಗಂಟೆ ಹುದುಗಲು ಬಿಡಿ. ಕಡಲೆಬೇಳೆ ಅರ್ಧ ಘಂಟೆ ನೆನೆಸಿ, 2ಕಪ್ ನೀರು ಹಾಕಿ ಚೆನ್ನಾಗಿ ಬೇಯಿಸಿ. ಸಕ್ಕರೆ, ಕಾಯಿತುರಿಗಳನ್ನು ಸೇರಿಸಿ ಕುದಿಸಿ. ಮಿಶ್ರಣ ಗಟ್ಟಿಯಾಗಿರಲಿ. ಆರಿದ ಮೇಲೆ ಚೆನ್ನಾಗಿ ಮಸೆದು ಉಂಡೆ ಮಾಡಿಟ್ಟುಕೊಳ್ಳಿ. ಹುದುಗಿದ ಹಿಟ್ಟನ್ನು ಚೆನ್ನಾಗಿ ಮಿಶ್ರ ಮಾಡಿ, ಮಾಡಿಟ್ಟುಕೊಂಡ ಹೂರಣದ ಉಂಡೆಯನ್ನು ಹಿಟ್ಟಿನಲ್ಲಿ ಅದ್ದಿ ತುಪ್ಪ ಅಥವಾ ರೀಫೈನ್ಡ್ ಎಣ್ಣೆಯಲ್ಲಿ ಕರಿದು ಬಿಸಿ ಇರುವಾಗಲೇ ಸವಿಯಿರಿ.

ಬಾಳೆಹಣ್ಣಿನ ಕಜ್ಜಾಯ
ಬೇಕಾಗುವ ಸಾಮಗ್ರಿಗಳು: ಬಾಳೆಹಣ್ಣು – 2, ಬೆಲ್ಲ – 1ಕಪ್‌, ಅಕ್ಕಿಹಿಟ್ಟು – 1ಕಪ್‌, ಕಾಯಿತುರಿ – 1/2ಕಪ್‌, ಗಸೆಗಸೆ, ತುಪ್ಪ –1ಚಮಚ, ಏಲಕ್ಕಿ ಪುಡಿ – ಸ್ವಲ್ಪ.

ತಯಾರಿಸುವ ವಿಧಾನ: ಬಾಳೆಹಣ್ಣು, ಬೆಲ್ಲ, ಕಪ್ ಕಾಯಿತುರಿ ಸೇರಿಸಿ ಒಲೆಯ ಮೇಲಿಟ್ಟು ಕುದಿ ಬಂದ ಮೇಲೆ ಅಕ್ಕಿಹಿಟ್ಟು ಹಾಕಿ ಗಂಟಿಲ್ಲದಂತೆ ಕಲೆಸಿ ಒಲೆ ಆರಿಸಿ. ಅದಕ್ಕೆ ಗಸಗಸೆ, ತುಪ್ಪ, ಏಲಕ್ಕಿ ಸೇರಿಸಿ ತಂಬಿಟ್ಟು ತಯಾರಿಸಿ. ಆರಿದ ಮೇಲೆ ನಿಂಬೆ ಗಾತ್ರದ ತಂಬಿಟ್ಟು ತೆಗೆದುಕೊಂಡು ಕೈಗೆ ತುಪ್ಪ ಹಚ್ಚಿಕೊಂಡು ಪ್ಲಾಸ್ಟಿಕ್ ಹಾಳೆ ಮೇಲೆ ತಟ್ಟಿ ಕಾದ ಎಣ್ಣೆಗೆ ಹಾಕಿ ಮೀಡಿಯಮ್ ಉರಿಯಲ್ಲಿ ಎರಡೂ ಕಡೆ ಹದವಾಗಿ ಕಾಯಿಸಿ. ರುಚಿಯಾದ ಕಜ್ಜಾಯ ಸವಿಯಿರಿ.

ಬಿಸಿಬೇಳೆ ಬಾತ್
ಬೇಕಾಗುವ ಸಾಮಗ್ರಿಗಳು: ನವಣಕ್ಕಿ – 1ಕಪ್ (ಯಾವುದೇ ಸಿರಿಧಾನ್ಯ, ಅಕ್ಕಿ, ಅವಲಕ್ಕಿಯೂ ಆಗಬಹುದು), ತೊಗರಿಬೇಳೆ –1/2ಕಪ್, ಹೆಚ್ಚಿದ ಮಿಶ್ರ ತರಕಾರಿಗಳು– 2ಕಪ್, ಶೇಂಗಾಬೀಜ ಅಥವಾ ಹಸಿಬಟಾಣಿ – 2ಚಮಚ, ಅರಿಶಿಣ – 1/4ಚಮಚ, ಕಾಯಿತುರಿ – 1/2ಕಪ್, ಬಿಸಿಬೇಳೆ ಬಾತ್ ಪುಡಿ, ಹುಣಸೆರಸ, ಉಪ್ಪು, ಬೆಲ್ಲ, ರುಚಿಗೆ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಈರುಳ್ಳಿ, ಕರಿಬೇವು, ತುಪ್ಪ – 1ಚಮಚ (ಬಿಸಿಬೇಳೆಬಾತ್ ಪುಡಿ ಮಾಡುವ ವಿಧಾನ: ಉದ್ದಿನಬೇಳೆ, ಕಡಲೆಬೇಳೆ – 1ಚಮಚ, ಮೆಂತ್ಯ – 1/2ಚಮಚ, ದನಿಯಾ –2ಚಮಚ, ಜೀರಿಗೆ –1ಚಮಚ, ಮೆಣಸುಪುಡಿ – 1/2ಚಮಚ, ಏಲಕ್ಕಿ – 1, ಲವಂಗ – 4, ಚಕ್ಕೆ – 1, ಒಣಮೆಣಸು – 10, ಗಸಗಸೆ – 1/2 ಚಮಚ, ಒಣಕೊಬ್ಬರಿ – 2ಚಮಚ. ಎಲ್ಲವನ್ನೂ ತುಪ್ಪ ಹಾಕಿ ಹದವಾಗಿ ಹುರಿದು ಪುಡಿಮಾಡಿ).

ತಯಾರಿಸುವ ವಿಧಾನ: ನವಣಕ್ಕಿ, ತೊಗರಿಬೇಳೆ ಅರ್ಧ ಗಂಟೆ ನೆನೆಸಿ, ಅರಿಶಿಣ, ಶೇಂಗಾ ಮತ್ತು ತರಕಾರಿಯೊಂದಿಗೆ ತಕ್ಕಷ್ಟು ನೀರು ಹಾಕಿ 2 ವಿಶಲ್ ಕೂಗಿಸಿ ಬೇಯಿಸಿಕೊಳ್ಳಿ. ತಣ್ಣಗಾದ ಮೇಲೆ ತೆಗೆದು ಹುಣಸೆರಸ, ಬೆಲ್ಲ, ಉಪ್ಪು, ಬಿಸಿಬೇಳೆಬಾತ್ ಪುಡಿ, ಕಾಯಿತುರಿ ತಕ್ಕಷ್ಟು ನೀರು ಹಾಕಿ ಬಾತಿನ ಹದಕ್ಕೆ ಕುದಿಸಿ. ತುಪ್ಪ ಹಾಕಿ, ಒಗ್ಗರಣೆ ಮಾಡಿ ಹಾಕಿ. ಆರೋಗ್ಯಕರ ಬಾತ್ ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.