ADVERTISEMENT

ನೀ ಧಾರಾವಾಹಿಯೊಳಗೋ ಅದೇ ನಿನ್ನೊಳಗೋ...

ಸುಚೇತನಾ ನಾಯ್ಕ
Published 3 ಫೆಬ್ರುವರಿ 2017, 19:30 IST
Last Updated 3 ಫೆಬ್ರುವರಿ 2017, 19:30 IST
ನೀ ಧಾರಾವಾಹಿಯೊಳಗೋ  ಅದೇ ನಿನ್ನೊಳಗೋ...
ನೀ ಧಾರಾವಾಹಿಯೊಳಗೋ ಅದೇ ನಿನ್ನೊಳಗೋ...   

‘ವಿದ್ಯಾ, ನಿನ್ನೆ ಆ ಧಾರಾವಾಹಿ ನೋಡಿದ್ಯಾ? ಯಾರಾದರೂ ಅಷ್ಟು ಮುಗ್ಧ ಇರ್ತಾರಾ? ಅದೇನಂಥ ತೋರಿಸ್ತಾರೋ... ನನಗಂತೂ ಅವಳ ಅತಿ ಎನಿಸುವ ಮುಗ್ಧತೆ ನೋಡಿದರೆ ಕೋಪ ನೆತ್ತಿಗೇರುತ್ತೆ...’

‘ಹೌದು ಕಣೆ ಸುಮಾ... ಆ ಧಾರಾವಾಹಿ ಸಾಯ್ಲಿ... ಈ ಧಾರಾವಾಹಿದೂ ಅದೇ ಕತೆ. ಇದ್ರಲ್ಲಿ ಅತ್ತೆಯನ್ನು ಎಷ್ಟು ಕೆಟ್ಟದಾಗಿ ತೋರಿಸಿದ್ದಾರೆ ಗೊತ್ತಾ? ಅದನ್ನು ನೋಡಿದರೆ ಎಲ್ಲಾ ಅತ್ತೆಯಂದಿರೂ ಕ್ರೂರಿಗಳು ಎನ್ನೋ ಹಾಗೆ ಮಾಡಿದ್ದಾರೆ. ನನಗಂತೂ ಆ ಧಾರಾವಾಹಿ ಹೆಸ್ರು ಕೇಳಿದ್ರೆ ಸಿಟ್ಟು ಬರುತ್ತೆ...’

‘ಉಫ್‌ ನೀವು ನೋಡುವ ಈ ಧಾರಾವಾಹಿಗಳಾದ್ರೂ ಸ್ವಲ್ಪನಾದ್ರೂ ಬೇಕ್ರೆ. ಆ ಚಾನೆಲ್‌ನಲ್ಲಿ ಬರೋ ಈ ಧಾರಾವಾಹಿ ನೋಡಿ ಒಮ್ಮೆ. ಎರಡೆರಡು ಸಂಬಂಧ. ಮದುವೆಯಾದ್ರೂ ಗಂಡ ಹೆಂಡತಿಗೆ ಮುಟ್ಟಲ್ಲ, ಅವನು ಇನ್ನೊಬ್ಬಳನ್ನು ಪ್ರೀತಿಸೋದೇನೋ, ಅದನ್ನು ಅತ್ತೆ ಮಾವನಿಗೆ ಗೊತ್ತಾಗದ ಹಾಗೆ ಹೆಂಡತಿ ಕಾಪಾಡೋದೇನೋ, ದೇವರ ಮುಂದೆ ಕೂತ್ಕೊಂಡು ಅಳೋದೇನೋ... ಅಸಹ್ಯ ಎನಿಸ್ತದೆ. ಚಾನೆಲ್‌ ಚೇಂಜ್‌ ಮಾಡ್ಬೇಕು ಅನ್ನಿಸ್ತದೆ...’ ಮತ್ತೆ ಆ ರಿಯಾಲಿಟಿ ಷೋ... ಅಬ್ಬೋ ಅದೇನು ಜಗಳ, ವಿಚಿತ್ರ ನಡವಳಿಕೆ... ಅದಕ್ಕಿಷ್ಟು ವಿಪರೀತ ಪ್ರಚಾರ ಬೇರೆ ಕೇಡು...’

ಬೆಳಿಗ್ಗೆ ಕಚೇರಿಗೆ ಬರುತ್ತಿದ್ದಂತೆಯೇ ಹಿಂದಿನ ರಾತ್ರಿ ನೋಡಿದ ಧಾರಾವಾಹಿ, ರಿಯಾಲಿಟಿ ಷೋಗಳ ‘ಪೋಸ್ಟ್‌ಮಾರ್ಟಂ’ ಈ ಸ್ನೇಹಿತೆಯರು ಮಾಡುತ್ತಿದ್ದಂತೆಯೇ, ನಡುವೆ ಒಂದು ಗಂಡುದನಿ ತೇಲಿಬರುತ್ತದೆ, ‘ಅಲ್ಲಾ ಮೇಡಂಗಳಿರಾ... ದಿನವೂ ನಿಮ್ಮದು ಇದೇ ‘ಗೋಳು’ ಆಯ್ತಲ್ಲಾ. ನಿಮ್ಮನೇಲಿ ಯಾರಾದ್ರೂ ಈ ಧಾರಾವಾಹಿಗಳನ್ನು ನೋಡಿ ಅಂತ ಒತ್ತಾಯ ಮಾಡ್ತಾ ಇದ್ದಾರಾ, ಅಥ್ವಾ ಧಾರಾವಾಹಿ ಬಗ್ಗೆ ಆಫೀಸ್‌ನಲ್ಲಿ ಎಕ್ಸಾಮ್‌ ಏನಾದ್ರೂ ಇಟ್ಟಿದ್ದಾರಾ? ಧಾರಾವಾಹಿ ನೋಡೋದ್ಯಾಕೆ? ಇಷ್ಟಪಟ್ಟು ನೋಡೋದಾದ್ರೆ ಅದರ ಬಗ್ಗೆ ಇಷ್ಟೆಲ್ಲಾ ಕೆಟ್ಟ ಕಮೆಂಟ್‌ ಯಾಕೆ...? ’
ಮೂವರು ಮಹಿಳಾಮಣಿಗಳ ಮಾತಿಗೆ ಆ ದಿನದ ಮಟ್ಟಿಗೆ ಫುಲ್‌ಸ್ಟಾಪ್!

ಇದು ಮಹಿಳೆಯರು ಒಂದೆಡೆ ಇರುವಲ್ಲೆಲ್ಲಾ ಹೆಚ್ಚಾಗಿ ಕೇಳಿಬರುವ ಮಾತುಗಳೇ. ಅದು ಕಚೇರಿನೇ ಆಗಬೇಕೆಂದೇನೂ ಇಲ್ಲ. ಅಕ್ಕ–ಪಕ್ಕದ ಮನೆಯ ಮಹಿಳೆಯರು ಸೇರಿದರೂ ಆದೀತು. ಅಲ್ಲಿ ಧಾರಾವಾಹಿಗಳ ಒಂದಿಷ್ಟು ಮಾತು ಇದ್ದೇ ಇರುತ್ತದೆ. ಹಾಗೆಂದ ಮಾತ್ರಕ್ಕೆ ಪುರುಷರು ಇದರ ಬಗ್ಗೆ ಮಾತನಾಡುವುದೇ ಇಲ್ಲವೆಂದೇನಲ್ಲ ಅಥವಾ ಧಾರಾವಾಹಿ ನೋಡುವುದೇ ಇಲ್ಲವೆಂದೂ ಅಲ್ಲ. ಆದರೆ ಧಾರಾವಾಹಿ, ರಿಯಾಲಿಟಿ ಷೋಗಳ ವಿಷಯ ಬಂದಾಗ ಮಹಿಳೆಯರ ಪಾಲೇ ಅಧಿಕ ಎನ್ನಬಹುದೇನೋ.

ಮಕ್ಕಳ ಬುದ್ಧಿಮತ್ತೆ ಹೆಚ್ಚಿಸುವಂಥ, ಆರೋಗ್ಯದ ಸಲಹೆ ನೀಡುವ, ಮಹಿಳೆಯರಿಗೆ ಅತ್ಯುತ್ತಮ ಎನಿಸುವ, ಸಂಗೀತ–ನೃತ್ಯ ಕಲೆಗಳನ್ನು ತಿಳಿಸುವ, ವಿಜ್ಞಾನದ ವಿಷಯ ತಿಳಿಸುವ... ಹೀಗೆ ಎಷ್ಟೋ ಚಾನೆಲ್‌ಗಳು ನಮ್ಮ ಮನೆಯ ಟೀವಿಯಲ್ಲಿ ಬರುತ್ತವೆ ಎಂಬ ವಿಷಯದ ಅರಿವೇ ನಮಗಿಲ್ಲ. ಆ ಪರಿಯಾಗಿ ಧಾರಾವಾಹಿಗಳು, ರಿಯಾಲಿಟಿ ಷೋಗಳು, ಅಪರಾಧ ಸುದ್ದಿಗಳು ನಮ್ಮನ್ನು ಆವರಿಸಿಬಿಟ್ಟಿವೆ. ಟೀವಿಯನ್ನು ಹೆಚ್ಚು ನೋಡಿ ಅಭ್ಯಾಸದ ಕಡೆ ಗಮನ ಕೊಡುವುದಿಲ್ಲ ಎಂದು ತಮ್ಮ ಮಕ್ಕಳನ್ನು ಸದಾ ಬೈಯುವ ಅಮ್ಮಂದಿರಿಗೆ ಮಾತ್ರ ತಮ್ಮ ನೆಚ್ಚಿನ ಧಾರಾವಾಹಿ ಬಿಡಲು ಆಗುವುದೇ ಇಲ್ಲ. ಆದರೆ ಆ ಧಾರಾವಾಹಿ ತುಂಬಾ ಇಷ್ಟ ಏಕೆ ಎಂಬ ಕಾರಣವೂ ಅವರಿಗೆ ಗೊತ್ತಿರಲಿಲ್ಲ!

ಬೆಳಗಿನಿಂದ ಸಂಜೆಯವರೆಗೆ ಹೊರಗೆ ದುಡಿದು ಹೈರಾಣಾಗಿರುವ ಜೀವಕ್ಕೆ ಕೊಂಚ ರಿಲೀಫ್‌ ಬೇಕೆನಿಸುವ ಕಾರಣಕ್ಕೆ ದುಡಿವ ಮಹಿಳೆಯರು ಧಾರಾವಾಹಿ ನೋಡುತ್ತಾರೆ ಎನ್ನುವುದು ಸತ್ಯ. ಅದೇ ರೀತಿ ಮನೆಯ ಜವಾಬ್ದಾರಿ ಜೊತೆ ಗಂಡ–ಮಕ್ಕಳ ಆರೈಕೆಯಲ್ಲಿ ದಿನಪೂರ್ತಿ ದುಡಿಯುವ ಗೃಹಿಣಿಯರಿಗೆ ಯಾವುದೇ ಮನೋರಂಜನೆಗಳು ಸಿಗದ ಕಾರಣ, ಅವರು ಟೀವಿ ಧಾರಾವಾಹಿ, ರಿಯಾಲಿಟಿ ಷೋಗಳಿಗೆ ಮೊರೆ ಹೋಗುವುದೂ ಸಹಜವೇ.

ಕಚೇರಿಯ ಒತ್ತಡ, ಕಿರಿಕಿರಿ ಅನುಭವಿಸಿ ಮನೆಗೆ ಬಂದ ಮಹಿಳೆಯರಿಗೆ ಹಾಗೂ ದಿನಪೂರ್ತಿ ಮನೆಗೆಲಸದಲ್ಲಿ ಸುಸ್ತಾಗಿರುವ ಗೃಹಿಣಿಯರಿಗೆ ‘ವಿಜ್ಞಾನದ ವಿಷಯ ನೋಡು, ಜಗತ್ತಿನ ಬಗ್ಗೆ ತಿಳಿದುಕೋ, ಕೆಲವು ಚಾನೆಲ್‌ಗಳಲ್ಲಿ ಬರುವ ಬುದ್ಧಿಮಾತು ಕೇಳು’ ಎಂದರೆ ಸಹ್ಯವಾಗದೇ ಹೋದೀತು. ಅದಕ್ಕಾಗಿಯೇ ಅವರೆಲ್ಲಾ ಕಂಡುಕೊಳ್ಳುವ ಸುಲಭ ಮಾರ್ಗ ಧಾರಾವಾಹಿಗಳು. ಅಷ್ಟಕ್ಕೂ ಬಹುತೇಕ 24/7 ಖಾಸಗಿ ಸುದ್ದಿ ವಾಹಿನಿಗಳಲ್ಲಿ ‘ನ್ಯೂಸ್’ಗಿಂತ ಹೆಚ್ಚಾಗಿ ‘ನ್ಯೂಸೆನ್ಸ್’ಗಳೇ ಬರುವ ಕಾರಣ, ಅದರ ಬದಲು ಧಾರಾವಾಹಿ, ರಿಯಾಲಿಟಿ ಷೋಗಳನ್ನೇ ನೋಡುವುದೇ ಒಳಿತು ಎಂದುಕೊಳ್ಳುತ್ತಾರೆ ಹಲವರು.
ಆದ ಕಾರಣ, ಮನೋರಂಜನೆಗಾಗಿ ಧಾರಾವಾಹಿ ನೋಡುವುದೇ ಕೆಟ್ಟದ್ದು ಎಂದೋ... ಧಾರಾವಾಹಿಗಳಿಂದ ಬರೀ ಕೆಟ್ಟದ್ದೇ ಆಗುತ್ತದೆ ಎಂದೋ ಹೇಳುವುದು ಸರಿಯಲ್ಲ. ಆದರೆ, ‘ಅತಿಯಾದರೆ ಅಮೃತವೂ ವಿಷ’ ಅಲ್ಲವೇ...? ಇದು ಎಲ್ಲದಕ್ಕೂ, ಎಲ್ಲರಿಗೂ ಅನ್ವಯ!

ಅದೇನೇ ಇರಲಿ... ಮದ್ಯಪಾನ, ಧೂಮಪಾನ ಚಟಗಳಿಗೆ ದಾಸರಾದವರಂತೆ ಮಹಿಳೆಯರನ್ನು ಆವರಿಸಿಕೊಳ್ಳುವ ಧಾರಾವಾಹಿಗಳು, ರಿಯಾಲಿಟಿ ಷೋಗಳು ಅವರ ಮೆದುಳಿನ ಮೇಲೆ ಅವರಿಗೆ ಅರಿವು ಇಲ್ಲದಂತೆಯೇ ಗಂಭೀರ ಪರಿಣಾಮ ಉಂಟುಮಾಡುತ್ತದೆ ಎನ್ನುತ್ತಾರೆ ಮನೋವಿಜ್ಞಾನಿಗಳು ಹಾಗೂ ಆಪ್ತಸಮಾಲೋಚಕರು. ಧಾರಾವಾಹಿಗಳಿಗೂ, ಖಿನ್ನತೆಗೂ ನೇರಾನೇರ ಸಂಬಂಧ ಇದೆ ಎನ್ನುವುದು ಅವರ ಮಾತು.

‘ಪುರುಷರಿಗಿಂತ ಮಹಿಳೆಯರ ಮನಸ್ಸು ಸೂಕ್ಷ್ಮವಾಗಿರುವ ಕಾರಣ ಟೀವಿ ಧಾರಾವಾಹಿಗಳು, ರಿಯಾಲಿಟಿ ಷೋಗಳು ಹಾಗೂ ಟೀವಿಗಳಲ್ಲಿ ತೋರಿಸುವ ಅಪರಾಧಿಕ ಸುದ್ದಿಗಳು ಅವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎನ್ನುತ್ತಾರೆ  ಮನೋವೈದ್ಯ ಡಾ. ಮೋಹನ್‌ ರಾಜು.

‘ಪ್ರತಿಯೊಬ್ಬರ ಜೀವನದಲ್ಲಿಯೂ ಒಬ್ಬ ರೋಲ್‌–ಮಾಡೆಲ್‌ ಇರುತ್ತಾರೆ. ಆ ರೋಲ್‌–ಮಾಡೆಲ್‌ಗಳು ಇಂಥವರೇ ಆಗಿರಬೇಕೆಂದೇನೂ ಇಲ್ಲ. ಕೆಲವರಿಗೆ ತಮ್ಮ ರೋಲ್‌–ಮಾಡೆಲ್‌ಗಳು ಯಾರು ಎಂದು ತಿಳಿದಿದ್ದರೆ, ಹಲವರಿಗೆ ಇದು ಗೊತ್ತಿರುವುದಿಲ್ಲ. ಆದರೆ ಅವರ ಜೀವನ ಇವರಿಗೆ ಅನುಕರಣೀಯವಾಗಿರುತ್ತದೆ, ಅವರಂತೆಯೇ ತಾವು ಆಗಬೇಕು ಎಂಬ ಅವ್ಯಕ್ತ ಭಾವ ಕಾಡುತ್ತಿರುತ್ತದೆ. ಇಂಥ ಸಮಯದಲ್ಲಿ ಧಾರಾವಾಹಿಗಳನ್ನು, ರಿಯಾಲಿಟಿ ಷೋಗಳನ್ನು ಹೆಚ್ಚು ಹೆಚ್ಚು ನೋಡುವ ಮಹಿಳೆಯರಿಗೆ ಯಾವುದೋ ಒಂದು ಪಾತ್ರ ಇಷ್ಟವಾಗಿಬಿಡುತ್ತದೆ. ಅದೇ ಪಾತ್ರದಲ್ಲಿ ಅವರು ತಮ್ಮನ್ನು ಕಾಣುತ್ತಾರೆ. ಅವರನ್ನೇ ಅನುಸರಿಸಲು ನೋಡುತ್ತಾರೆ. ತಾವು ನೋಡುತ್ತಿರುವುದು ಕೇವಲ ಕತೆ, ಧಾರಾವಾಹಿಗಳಲ್ಲಿ ನಡೆಯುವುದು ನಿಜವಲ್ಲ ಎಂಬ ಸಂಪೂರ್ಣ ಅರಿವಿದ್ದರೂ ಆ ಪಾತ್ರ ಇವರನ್ನು ಆವರಿಸಿಕೊಳ್ಳಲು ಶುರುವಿಟ್ಟುಕೊಂಡು ಅದನ್ನೇ ತಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಬಿಡುತ್ತಾರೆ. ಒಳ್ಳೆಯ ಪಾತ್ರವಾದರೆ ಪರವಾಗಿಲ್ಲ. ಆದರೆ ಒಳ್ಳೆತನಕ್ಕಿಂತ ಕೆಟ್ಟ ಪಾತ್ರಗಳೇ ಧಾರಾಳವಾಗಿ ಈಗ ಕಾಣಸಿಗುವ ಕಾರಣ, ಅದೇ ಪಾತ್ರವನ್ನು ಮಹಿಳೆಯರು ಆವಾಹಿಸಿಕೊಳ್ಳುತ್ತಾರೆ. ಇದು ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತದೆ’ ಎಂದು ವಿವರಿಸುತ್ತಾರೆ ಡಾ. ಮೋಹನ್‌ ರಾಜು.

ಈ ಮಾತನ್ನು ಒಪ್ಪುವ ಇನ್ನೊಬ್ಬ ಮನೋವೈದ್ಯ ಡಾ. ಹರೀಶ್‌ ಪಾಂಡೆ, ‘ಇಂದಿನ ಬಹುತೇಕ ಧಾರಾವಾಹಿಗಳಲ್ಲಿನ ಪಾತ್ರ ತೀರಾ ಅಸಹಜತೆಯಿಂದ ಕೂಡಿರುತ್ತದೆ. ಇಲ್ಲಿ ಹೆಚ್ಚಾಗಿ ಇರುವುದು ಹೆಣ್ಣು ಪಾತ್ರಗಳೇ. ಒಂದು ಪಾತ್ರ ಅತಿ ಮುಗ್ಧತೆಯಾಗಿದ್ದರೆ, ಇನ್ನೊಂದು ಅಸಹಜ ಎನ್ನುವಷ್ಟು ಕ್ರೂರತೆ ಬಿಂಬಿಸುತ್ತದೆ.  ಅದೇ ರೀತಿ ಅಕ್ರಮ ಸಂಬಂಧಗಳನ್ನು ಬಿಂಬಿಸುವ, ಮದುವೆಯಾದರೂ ದಂಪತಿ ಒಟ್ಟಿಗೆ ಇರದ ಪಾತ್ರಗಳು, ಕೂಗಾಟ–ರಂಪಾಟವೇ ಜೀವನ ಎಂದು ತೋರಿಸುವ ರಿಯಾಲಿಟಿ ಷೋಗಳು... ಹೀಗೆ ನೈಜ ಜೀವನಕ್ಕೆ ಹತ್ತಿರ ಎನಿಸದ ವಿಷಯಗಳು ಈಗ ಹೆಚ್ಚಿಗೆ ಬರುವುದರಿಂದ ಮಹಿಳೆಯರ ಮನಸ್ಸು ಕ್ರಮೇಣ ತನ್ನ ಸ್ಥಿಮಿತವನ್ನು ಕಳೆದುಕೊಳ್ಳುತ್ತದೆ ಎನ್ನುತ್ತಾರೆ.

ದೇಹದ ಮೇಲೂ ಪರಿಣಾಮ
‘ಧಾರಾವಾಹಿಗಳು ಆಗೀಗ ನೋಡಿ ಮನೋರಂಜನೆಗಷ್ಟೇ ಸೀಮಿತ ಮಾಡಿಕೊಂಡರೆ ಒಳ್ಳೆಯದು. ಆದರೆ ಇದನ್ನೇ ಚಟ ಮಾಡಿಕೊಂಡರೆ ದೇಹದ ಮೇಲೂ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ’ ಎನ್ನುತ್ತಾರೆ, ಆಪ್ತಸಮಾಲೋಚಕಿ ಸುನೀತಾ ರಾವ್‌.

‘ಧಾರಾವಾಹಿಗಳ ಸಮಯ ಬಂದರೆ ಸಾಕು, ಕೆಲವರು ಎಲ್ಲಾ ಕೆಲಸಗಳನ್ನು ಬಿಟ್ಟು ಟೀವಿ ಮುಂದೆ ಕೂರುತ್ತಾರೆ. ಒಂದಾದ ಮೇಲೊಂದು ಧಾರಾವಾಹಿಗಳು ಬರುವ ಕಾರಣ,   ಮನಸ್ಸೆಲ್ಲಾ ಅಲ್ಲೇ ನೆಟ್ಟಿರುತ್ತದೆ. ಅವಳಿಗೆ ಏನಾಗುತ್ತದೆ, ಈ ವಿಷಯ ಅವನಿಗೆ ಗೊತ್ತಾದರೆ ಏನು ಮಾಡೋದು... ಹೀಗೆ ಯೋಚನೆ ಮಾಡುತ್ತಾರೆ. ಇದರಿಂದ ರಚನಾತ್ಮಕ ಯೋಚನೆಗಳಿಗೆ ಅವಕಾಶವೇ ಇಲ್ಲದಂತೆ ಮನಸ್ಸು ತಲ್ಲಣಗೊಳ್ಳುತ್ತದೆ. ಇದು ಮಿತಿಮೀರಿದಾಗ ಮಾನಸಿಕ ಹಿಂಸೆ ಅನುಭವಿಸುತ್ತಾರೆ. ನನ್ನ ಬಳಿ ಕೌನ್ಸೆಲಿಂಗ್‌ಗೆ ಬಂದ ಹಲವು ಪ್ರಕರಣಗಳಲ್ಲಿ ಇದನ್ನು ನಾನು ಕಂಡಿದ್ದೇನೆ’ ಎನ್ನುತ್ತಾರೆ ಸುನೀತಾ.

‘ಅಲ್ಲೊಂದು... ಇಲ್ಲೊಂದು ಇಂಥ ಕೇಸು ಹೀಗೆ ಆಗಿರಲಿಕ್ಕೆ ಸಾಕು. ನನ್ನ ಮನಸ್ಸೇನು ಇಷ್ಟು ಸೂಕ್ಷ್ಮವಲ್ಲ ಬಿಡು’ ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುವವರಿಗೆ ಕೊನೆಯದಾಗಿ ಒಂದೇ ಒಂದು ಮಾತು. ಟೀವಿಯಲ್ಲಿ  ಬರುವ ಸೌಂದರ್ಯವರ್ಧಕ, ಅಡುಗೆಪದಾರ್ಥ, ತಂಪುಪಾನೀಯ ಇತ್ಯಾದಿಗಳ ಜಾಹೀರಾತುಗಳಲ್ಲಿ ಹುರುಳಿಲ್ಲ ಎಂದು ಪ್ರಚಾರಕರಿಗೂ ಗೊತ್ತು, ವೀಕ್ಷಕರಿಗೂ ಚೆನ್ನಾಗಿ ಗೊತ್ತು. ಅದರ ಹೊರತಾಗಿಯೂ ಸೆಲೆಬ್ರಿಟಿಗಳನ್ನು ಬಳಸಿಕೊಂಡು ಪದೇ ಪದೇ ಜಾಹೀರಾತು ನೀಡುವ ಉದ್ದೇಶ ಜನರನ್ನು ಮರುಳು ಮಾಡಲು ಅಲ್ಲವೇ?  ಈ ಜಾಹೀರಾತುಗಳನ್ನು ನೋಡಿದಾಗ ನಮ್ಮ ಅರಿವಿಗೆ ಬಾರದೇ ಪ್ರಭಾವಿತರಾಗಿ ಅದನ್ನೊಮ್ಮೆ ತಂದರೆ ಹೇಗೆ ಎಂದು ನಮಗೆ ಅನ್ನಿಸುವುದಿಲ್ಲವೇ...? ಯೋಚನೆ ಮಾಡಿ... ಧಾರಾವಾಹಿಗಳೂ ಹಾಗೆನೇ...!
*
ಆಡಂಬರ ಜೀವನದ ಪ್ರಭಾವದಿಂದ ಆತ್ಮಹತ್ಯೆ!
ಈ ಧಾರಾವಾಹಿಗಳ ಪಾತ್ರಗಳಲ್ಲೇ ಮಹಿಳೆಯರು ಪರಕಾಯ ಪ್ರವೇಶ ಮಾಡಿ ಖಿನ್ನತೆಗೆ ಹೋಗಿರುವ ಘಟನೆಗಳನ್ನು ನನ್ನ ವೃತ್ತಿ ಜೀವನದಲ್ಲಿ ಕಂಡಿದ್ದೇನೆ. ಎಷ್ಟೋ ಸಲ ಗಂಡ ಹೆಂಡತಿಯ ವರ್ತನೆ ಕಂಡು ಧಾರಾವಾಹಿ ಪಾತ್ರದ ಹೆಸರನ್ನೇ ಆಕೆಗೆ ಇಟ್ಟಿರುವುದನ್ನೂ ನೋಡಿದ್ದೇನೆ. ಮಲಗುವಾಗ, ಏಳುವಾಗ, ಅಡುಗೆ ಮಾಡುವಾಗ, ಮನೆಯಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಾಗ... ಹೀಗೆ ಎಲ್ಲಾ ಸಂದರ್ಭಗಳಲ್ಲೂ ರೇಷ್ಮೆ ಸೀರೆಗಳನ್ನೇ ಧರಿಸಿ, ಅತಿ ಎನಿಸುವಷ್ಟು ಮೇಕಪ್‌ ಮಾಡಿಕೊಂಡು ನೈಜ ಜೀವನಕ್ಕೆ ದೂರವಾದ ಪರಿಕಲ್ಪನೆಯನ್ನು ಧಾರಾವಾಹಿಗಳಲ್ಲಿ ತೋರಿಸುವುದು ಸಹಜ. ಈ ಆಡಂಬರವೇ ಜೀವನ ಎಂದು ನಂಬಿ ಅದನ್ನೇ ಅನುಸರಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯೊಬ್ಬರ ಕೇಸಿನಲ್ಲಿ ನಾನು ವಾದಿಸಿದ್ದೇನೆ. ಈ ಧಾರಾವಾಹಿಗಳಿಂದ ಉತ್ತೇಜಿತರಾದ ಆ ಮಹಿಳೆ, ಎಲ್ಲರೂ ತನ್ನತ್ತವೇ ಗಮನಹರಿಸಬೇಕು ಎಂದು ಬಯಸಿ ಹಾಗೆ ಆಗದಾಗ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಿ.ಎಚ್‌. ಹನುಮಂತರಾಯ,
ಹೈಕೋರ್ಟ್‌ ವಕೀಲರು
*
ಖಿನ್ನತೆಗೆ ಕಾರಣವಾಗಬಹುದು
ಹೆಚ್ಚಾಗಿ ಧಾರಾವಾಹಿಗಳಲ್ಲಿ ಅಥವಾ ರಿಯಾಲಿಟಿ ಷೋಗಳಲ್ಲಿ ಮಹಿಳೆ ಎಂದರೆ ಹೀಗೆಯೇ ಇರಬೇಕು, ಆಕೆ ಸುಂದರವಾಗಿ, ತೆಳ್ಳಗೆ–ಬೆಳ್ಳಗೆ ಇರಬೇಕು ಎಂದು ಬಿಂಬಿಸಲಾಗುತ್ತದೆ. ಹೀಗಿದ್ದರೆ ಮಾತ್ರ ಹೆಚ್ಚಿನ ಬೆಲೆ ಎಂದು ಅರ್ಥ ಬರುವಂತೆ ಹೇಳಲಾಗುತ್ತದೆ.  ಮೇಲಿಂದ ಮೇಲೆ ಇದನ್ನು ಕೇಳುವ ಕೆಲವು ಮಹಿಳೆಯರಿಗೆ ತಾವು ಸುಂದರವಾಗಿಲ್ಲ ಎಂಬ ನೋವು ಕಾಡಲು ಶುರುವಾಗುತ್ತದೆ. ಇದೇ ಕ್ರಮೇಣ ಅವರನ್ನು ಖಿನ್ನತೆಗೆ ದೂಡುತ್ತದೆ.
ಡಾ. ಮೋಹನ್‌ ರಾಜು,
ಮನೋವೈದ್ಯ
*
ಕುಟುಂಬದ ನೆಮ್ಮದಿ ಹಾಳು
ಮಹಿಳಾ ವೀಕ್ಷಕರೇ ಹೆಚ್ಚಾಗಿರುವ ಕಾರಣ, ಮಹಿಳಾ ಪ್ರಧಾನ ಧಾರಾವಾಹಿಗಳೇ ಈಗ ಹೆಚ್ಚಾಗಿ ಬರುತ್ತಿವೆ. ಇವುಗಳಲ್ಲಿ ನಕಾರಾತ್ಮಕ ಪಾತ್ರಗಳನ್ನು ಅತ್ಯಂತ ವೈಭವೀಕರಿಸಿ ತೋರಿಸಲಾಗುತ್ತದೆ. ‘ಲೇಡಿ ವಿಲನ್‌’ಗಳ ಪಾತ್ರಗಳನ್ನು ಜನರು ತುಂಬಾ ಇಷ್ಟಪಡುವ ಕಾರಣ, ಮಹಿಳೆಯರು ಅದರ ಬಗ್ಗೆಯೇ ಹೆಚ್ಚು ಯೋಚನೆ ಮಾಡುತ್ತಾ ಮನಸ್ಸಿನೊಳಗೆ ತುಂಬಿಕೊಂಡುಬಿಡುತ್ತಾರೆ. ಆ ಪಾತ್ರದಂತೆಯೇ ನಡೆದುಕೊಳ್ಳಲು ಶುರುವಿಟ್ಟುಕೊಂಡಾಗ ಒಂದು ಹಂತದಲ್ಲಿ ಇದೇ ಕೌಟುಂಬಿಕ ನೆಮ್ಮದಿ ಕೆಡಿಸಲೂಬಹುದು.
ಸುನೀತಾ ರಾವ್‌,
ಆಪ್ತ ಸಮಾಲೋಚಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.