ADVERTISEMENT

ಬಾರದ ಹಲ್ಲಿಗಾಗಿ ಮುರಿಯಿತೇ ಮದುವೆ?

ದಾನೇಶ್ವರಿ ಬಿ.ಸಾರಂಗಮಠ
Published 27 ಫೆಬ್ರುವರಿ 2015, 19:30 IST
Last Updated 27 ಫೆಬ್ರುವರಿ 2015, 19:30 IST
ಬಾರದ ಹಲ್ಲಿಗಾಗಿ ಮುರಿಯಿತೇ ಮದುವೆ?
ಬಾರದ ಹಲ್ಲಿಗಾಗಿ ಮುರಿಯಿತೇ ಮದುವೆ?   

‘ನಿನ್ನ ದವಡೆ ಹತ್ತಿರವಿರುವ ಹಲ್ಲನ್ನು ಕಳೆದುಕೊಂಡ ನೀನು, ನಮ್ಮ ಮನೆಯ ಯಾವ ಕಾರ್ಯದಲ್ಲೂ ಭಾಗವಹಿಸುವಂತಿಲ್ಲ. ನೀನು ಬರೋಬ್ಬರಿ ಇಲ್ಲ. ಮದುವೆ ಕ್ಯಾನ್ಸಲ್ ಮಾಡು ಅಂತ ನೀನೇ ನಿಮ್ಮ ಅಪ್ಪ, ಅವ್ವನಿಗೆ ತಿಳಿಸು’ ಹೀಗಂತ ನಿಶ್ಚಿತಾರ್ಥವನ್ನು ಅದ್ದೂರಿಯಾಗಿಯೇ ಮುಗಿಸಿ, ಮದುವೆಗೆ ಒಂದು ತಿಂಗಳವಷ್ಟೇ ಬಾಕಿ ಇರುವಾಗ ಹುಡುಗ ಈ ಹೊಸ ವರಾತ ಪ್ರಾರಂಭ ಮಾಡಿದ್ದರಿಂದ  ಮದುವೆ ಮುರಿದು ಬಿತ್ತು. ಒಂದಾಗಬೇಕಿದ್ದ ಎರಡು ಹೃದಯಗಳು ಅನುಮಾನದ ಭೂತದಿಂದ ಬೇರೆಯಾಗುವ ಹಾಗೆ ಆಯ್ತು. 

ಅಂದು ಬೆಳ್ಳಂ ಬೆಳಿಗ್ಗೆ ಡ್ಯೂಟಿಗೆ ಹೋಗುವಾಗ ರಸ್ತೆ ದಾಟುವ ಸಂದರ್ಭದಲ್ಲಿ ಎದುರಿಗೆ ಬಂದ ದ್ವಿಚಕ್ರ ವಾಹನ ಆಕೆಗೆ ಡಿಕ್ಕಿ ಹೊಡೆದಿತ್ತು. ಅದು ಹೊಡೆದ ರಭಸಕ್ಕೆ ಗಾಡಿಯ ಹ್ಯಾಂಡಲ್ ಆಕೆಯ ಹೊಟ್ಟೆಯಲ್ಲಿ ಮರೆಯಲಾರದ ಗಾಯ ಮಾಡಿತ್ತು. ಒಂದೆರಡು ತಿಂಗಳು ಹೈಟೆಕ್ ಆಸ್ಪತ್ರೆಯ ವಾಸದ ನಂತರ ಸುಧಾರಿಸಿಕೊಂಡು ಬಂದು ಎಷ್ಟೋ ವರುಷಗಳಾದರೂ ಹೊಟ್ಟೆಯ ಮೇಲಿನ ‘ಎಲ್ ’ ಆಕಾರದ ಆಪರೇಷನ್ ಕಲೆ ಆಕೆಗೆ ಶಾಶ್ವತ ನೆನಪು ಉಳಿಸಿತ್ತು. 

ಇದರಿಂದ ಆಕೆಯ ದಾಂಪತ್ಯ ಜೀವನಕ್ಕೆ ಸಮಸ್ಯೆ ಇಲ್ಲ ಎಂದು ವೈದ್ಯರು ವರದಿ ಕೊಟ್ಟಿದ್ದೂ ಆಯಿತು. ಹುಡುಗಿಯನ್ನು ನೋಡಲು ಹುಡುಗನ ಮನೆಯವರು ಬಂದಾಗಲೊಮ್ಮೆ ಇದರ ಪ್ರಸ್ತಾಪ ಬಂದು ಅಸಮ್ಮತಿಯಾಗುತ್ತಿತ್ತು. ಜೀವ ಹಿಡಿ ಮಾಡಿಕೊಂಡೇ ಪಾಲಕರು ಮಗಳನ್ನು ವರನ ಕಡೆಯವರಿಗೆ ತೋರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೈರಾಣವಾಗಿ ಕೊನೆಗೊಂದು ದಿನ ಈ ಮನೆತನ ಕೂಡಿಬಂದಿತ್ತು.

ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇನ್ನುವ ರೂಪ, ಸರ್ಕಾರಿ ನೌಕರಿ ತಂದುಕೊಡುವ ಕೈತುಂಬ ಸಂಬಳವಿರುವ ಹುಡುಗಿಗೆ ಹುಡುಗ ಚೆಂದ ಇದ್ದಾನೆ, ಮೇಲಾಗಿ ಆತ ತುಂಬಾ ಪ್ರತಿಭಾವಂತ, ಒಳ್ಳೆಯ ಉದ್ಯೋಗ ಇದೆ, ತಮ್ಮ ಮಗಳು ಸುಖವಾಗಿರಬಲ್ಲಳು ಎಂದ ಹೆಣ್ಣಿನವರು, ತಮಗೆ ಗೊತ್ತಿದ್ದ ವೈದ್ಯರ ಮೂಲಕ ಆಕೆಯ ವೈದ್ಯಕೀಯ ಸರ್ಟಿಫಿಕೇಟ್  ಪರಶೀಲಿಸಿ ವೈವಾಹಿಕ ಜೀವನಕ್ಕೆ ಯಾವುದೇ ತೊಂದರೆಯಾಗುವದಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಂಡೇ ಗಂಡಿನವರು ಪರಸ್ಪರ ಒಪ್ಪಿಗೆ ಸೂಚಿಸಿದ್ದರು. ಭರ್ಜರಿ ಪೆಂಡಾಲ ಹಾಕಿಸಿ ದೊಡ್ಡ ಪ್ರಮಾಣದಲ್ಲಿ ನಿಶ್ಚಿತಾರ್ಥವೂ ನಡೆದಿತ್ತು. ಅಲ್ಲಿಯವರೆಗೂ ಚೆನ್ನಾಗಿಯೇ ಇದ್ದ ಹುಡುಗ ಅನಂತರ ಫೋನ್‌ನಲ್ಲಿ ಹುಡುಗಿಗೆ ತೊಂದರೆ ಕೊಡಲಿಕ್ಕೆ ಪ್ರಾರಂಭಿಸಿದ.

‘ನೀನು ನನ್ನ ಫೋನ್ ಬೇಗ ಯಾಕೆ ಎತ್ತುವದಿಲ್ಲ? ಹೊರಗಡೆ ಯಾಕೆ ಹೋಗಿರ್ತಿಯಾ, ಯಾರ ಜೊತೆ ಮಾತನಾಡ್ತಿರ್ತಿ?’ ಹೀಗೆ ಅಸಂಖ್ಯಾತ ಪ್ರಶ್ನೆಗಳು. ರೂಪವಂತ ಹುಡುಗನ ಮನಸ್ಸು ಮಾತ್ರ ಕುರೂಪಿ. ಅನುಮಾನದ  ಸ್ವಭಾವ. ‘ನಾನು ಒಪ್ಪದಿದ್ದರೆ ನಿನ್ನನ್ನಾರು ಮದುವೆಯಾಗಲಿಕ್ಕೆ ಒಪ್ಪುತ್ತಿದ್ದರು’ ಎಂಬ ಮಾತು ಆತನ ಬಾಯಲ್ಲಿ ಸದಾ ಇರುತ್ತಿತ್ತು. ಈ ವಿಷಯ ಮನೆಯವರಿಗೆ ಹೇಗೆ ಹೇಳುವದು? ತಂದೆ ಹೃದ್ರೋಗಿ, ತಾಯಿಗೆ ಬಿ.ಪಿ. ಮಧುಮೇಹ. ಹೀಗಾಗಿ ಆತ ಅಂದದ್ದೆಲ್ಲವನ್ನು ನುಂಗಿಕೊಂಡ ಹುಡುಗಿ ತಂದೆ ತಾಯಿಯ ಮುಂದೆ ಬಾಯಿ ಬಿಡಲಿಲ್ಲ. ಕೊನೆಗೆ ಮಿತಿಮೀರಿದಾಗ ಅವನ ತಂದೆ ತಾಯಿಯ ಮುಂದೆ ಈ ವಿಷಯ ಪ್ರಸ್ತಾಪಕ್ಕೆ ಬಂದು ಮದುವೆ ನಿಂತಿತು.

ಒಂದೊಂದು ಸಲ ಬಾಯ್ಮುಚ್ಚಿಟ್ಟು ಕೊಂಡು ಪಶ್ಚಾತ್ತಾಪ ಪಡುತ್ತೇವೆ. ಒಮ್ಮೊಮ್ಮೆ ಬಾಯ್ಬಿಟ್ಟು ಹೇಳಿ ಪಶ್ಚಾತ್ತಾಪ ಪಡತೀವಿ. ಅನುಮಾನಕ್ಕೆ ಇಂಥದ್ದೇ ಕಾರಣಬೇಕಿಲ್ಲ. ಅನುಮಾನಕ್ಕಿಂತ ನಮ್ಮನ್ನ ದೀರ್ಘವಾಗಿ ಕಾಡುವ ಕಾಯಿಲೆ ಮತ್ತೊಂದಿಲ್ಲ. ಮಿಕ್ಕೆಲ್ಲ ಕಾಯಿಲೆಗಳಿಂದಲೂ ನಾವು ಈಚೆ ಬರಬಹುದು. ಆದರೆ ಅನುಮಾನ ಒಮ್ಮೆ ತಲೆಯನ್ನು ಹೊಕ್ಕಿಬಿಟ್ಟರೆ ಮುಗೀತು. ಆತ ಈ ಜನ್ಮದಲ್ಲಿ ನಗುವನ್ನ ಕಾಣಲಾರ. ಮಿಕ್ಕೆಲ್ಲಾ ಕಾಯಿಲೆಗಳು ಕಾಯಿಲೆ ಬಂದವನ ದೇಹವನ್ನಷ್ಟೇ ಹಿಂಸೆಗೆ ಈಡು ಮಾಡಿದರೆ ಅನುಮಾನ ಕಡಿಮೆ ಅಂದರೂ ಎರಡು ದೇಹಗಳನ್ನು ಏಕಕಾಲಕ್ಕೆ ಕುಗ್ಗಿಸುತ್ತಾ ಹೋಗುತ್ತದೆ.

ಒಮ್ಮೆ ಅನುಮಾನದ ಪರಿಧಿಯೊಳಕ್ಕೆ ಇಳಿದು ನೋಡಿ. ಅಲ್ಲಿ ಬರಿ ಪ್ರಶ್ನೆಗಳೇ ಇರುತ್ತವೆ. ಯಾರು..? ಏನು..? ಯಾಕೆ..? ಎಲ್ಲಿಗೆ ಹೋಗಿದ್ದು..? ಇಷ್ಟೊತ್ತು ಯಾರೊಂದಿಗೆ ಮಾತಾಡುತ್ತಿದ್ದುದ್ದು..? ನಂಗ್ಯಾಕೆ ಮೊದ್ಲೆ ಹೇಳಿಲ್ಲ..? ಇಂಥ ಇನ್ನೆಷ್ಟೋ ಪ್ರಶ್ನೆಗಳು ಅನುಮಾನದ ಆಯುಧಗಳಾಗಿರುತ್ತವೆ. ಆದರೂ ಆ ರೀತಿ ಅನುಮಾನದ ರೂಪದಲ್ಲಿ ಬರುವ ಪ್ರಶ್ನೆಗಳಿಗೆ ಉತ್ತರಿಸಲು ಮನಸ್ಸು ಒಪ್ಪುವುದೇ ಇಲ್ಲ. ಕಾರಣ ಇಗೋ. ನನ್ನ ಮೇಲೆ ನಂಬಿಕೆ ಇಲ್ವಾ.. ಹೌದು.. ನಾನು ಹೀಗೆ. ಏನೀಗ..’ ಅಂತ ವಾದಕ್ಕೆ ಬಿದ್ದರೆ ಇಬ್ಬರ ವಾದದಲ್ಲಿ ಪ್ರೀತಿ.. ಕಾಳಜಿ.. ಗೌರವ ಎಲ್ಲವೂ ನೆಲಕಚ್ಚಿಬಿಡುತ್ತವೆ.

ಮೆಚ್ಚಿದ ಹುಡುಗಿಯನ್ನ ಉಳಿಸಿಕೊಳ್ಳಬೇಕು ಅನ್ನುವ ಧಾವಂತದಲ್ಲಿ ಅವಳನ್ನ ಶಾಶ್ವತವಾಗಿ ಕಳೆದುಕೊಳ್ಳುವ ದಾರುಣಕ್ಕೆ ತುತ್ತಾಗದಿರಿ. ಅನುಮಾನ ಯಾರಿಂದ ಬಂದರೂ ತಕ್ಷಣ ಅದಕ್ಕೆ ಉತ್ತರವನ್ನ ಒಪ್ಪಿಸಿಬಿಡಿ. ಅದೆಷ್ಟೇ ಕಷ್ಟ ಆದ್ರೂ ಅನುಮಾನ ಮೂಡಿದ ತಕ್ಷಣಕ್ಕೆ ಅದನ್ನ ತಿಳಿಯಾಗಿಸುವ ಪ್ರಯತ್ನ ಮಾಡಿ. ಇಬ್ಬರ ನಡುವೆ ಬೆಟ್ಟದಷ್ಟು ಪ್ರೀತಿ ಇದ್ದರೆ ಸಾಕಾಗಲ್ಲ. ಸಾಕಷ್ಟು ವಿವೇಕ ಕೂಡ ಇರಬೇಕು.

ಆಗ ನಂಬಿಕೆಯ ಅವಶ್ಯಕತೆ ಇರುವುದಿಲ್ಲ. ಕುಡಿಯೋ ಗಂಡನ ಜೊತೆ ಬಾಳಬಹುದು, ಹೊಡೆಯೋ ಗಂಡನ ಜೊತೆಯಾದರೂ ಬಾಳಬಹುದು, ಆದರೆ ಅನುಮಾನ ಪಡುವಂತಹ ಗಂಡನ ಜೊತೆ ಬಾಳೋದು ಕಷ್ಟ. ಇದು ಅನುಮಾನ ಪಡುವವರ ಹೆಂಡತಿಯರು ದಿನ ನಿತ್ಯ ಹೇಳಿಕೊಳ್ಳುವಂತಹ ಗೋಳಿನ ಕಥೆ. ಅನುಮಾನ ಎಂಬುದು ಹುತ್ತ ಇದ್ದಂತೆ. ಒಮ್ಮೆ ಶುರುವಾದರೆ ವಿವಿಧ ಸ್ವರೂಪದಲ್ಲಿ ಬೆಳೆಯುತ್ತದೆ. ಈ ಅನುಮಾನದಿಂದ ಅದೆಷ್ಟೋ ಸಂಸಾರಗಳು ಇಂದು ಬೀದಿಗೆ ಬಂದು ನಿಂತಿದೆ. ಆದರೆ ಆ ಅನುಮಾನ, ಜಗಳಗಳೇ ವ್ಯಕ್ತಿಯ ಬದುಕಿಗೆ ಕೊನೆಯಾಗಬಾರದು....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.