ADVERTISEMENT

ಭಾವನೆಗಳಿಗೂ ವಿಶ್ರಾಂತಿ ಇರಲಿ...

ಸ್ವಸ್ಥ ಬದುಕು

ಪ್ರಜಾವಾಣಿ ವಿಶೇಷ
Published 1 ಆಗಸ್ಟ್ 2014, 19:30 IST
Last Updated 1 ಆಗಸ್ಟ್ 2014, 19:30 IST

ತುಂಬಾ ಜನ ವಿಶ್ರಾಂತಿಯ ಮಹತ್ವವನ್ನು ಅರಿತಿರುವುದಿಲ್ಲ. ನಮ್ಮ ದೇಹ, ಮನಸ್ಸು ಹಾಗೂ ಚೈತನ್ಯಗಳಲ್ಲಿ ಹೊಸ ಶಕ್ತಿ, ಉತ್ಸಾಹ ತುಂಬಿಕೊಳ್ಳುವಂತೆ, ಆರಾಮವಾಗಿ ನಿದ್ರಿಸಲು ಅನುಕೂಲವಾಗುವಂತೆ ರಾತ್ರಿಯ ಹೊತ್ತು ಕತ್ತಲು ಆವರಿಸುತ್ತದೆ.

ಆದರೆ, ನಾವು ಸೋಮಾರಿಗಳಾಗುವಷ್ಟು ಅತಿ ವಿಶ್ರಾಂತಿ ತೆಗೆದುಕೊಳ್ಳಬಾರದು. ನಮಗೆ ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವೇ ಇಲ್ಲದಷ್ಟು ದಣಿಯಲೂಬಾರದು. ಜಡತ್ವದಿಂದ ಕೂಡಿರುವುದು, ಅತಿಯಾಗಿ ದಣಿಯುವುದು ಎರಡೂ ಒಳ್ಳೆಯದಲ್ಲ. ಇದು ನಮ್ಮ ದೇಹದೊಳಗಿನ ಸೌಹಾರ್ದ ಕದಡಿ, ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಈ ಎರಡೂ ಪರಿಸ್ಥಿತಿಗಳಲ್ಲಿ ನಾವು ಬದುಕಿ ಉಳಿಯುವಷ್ಟು ಶಕ್ತಿ ನಮ್ಮಲ್ಲಿ ಇರುತ್ತದೆ. ಆದರೆ, ಇದು ಆರೋಗ್ಯಕರವಾಗಿರುವುದಿಲ್ಲ.

ಅಚ್ಚರಿಯ ವಿಚಾರವೆಂದರೆ ಕಷ್ಟಪಟ್ಟು ಕೆಲಸ ಮಾಡುವುದರಿಂದ ನಮಗೆ ದಣಿವಾಗುವುದಿಲ್ಲ. ನಮ್ಮ ಮನೋಭಾವ, ನಮ್ಮ ಆಲೋಚನೆಗಳು ನಮ್ಮನ್ನು ದಣಿಸುತ್ತವೆ. ಯಾರೋ ನಮ್ಮನ್ನು ಬಳಸಿಕೊಂಡಿದ್ದಾರೆ ಎಂಬ ಬಗ್ಗೆ ಕೋಪ, ನಮ್ಮನ್ನು ಟೀಕಿಸಿದ್ದಕ್ಕೆ, ನಮ್ಮನ್ನು ಶೋಷಿಸಿದ್ದಕ್ಕೆ ಅಸಮಾಧಾನ, ಯಾರದೋ ಅಹಿತ ನಡವಳಿಕೆಯ ಬಗ್ಗೆ ಹೇವರಿಕೆ, ನಿಮಗೆ ಇಷ್ಟವಿಲ್ಲದಿದ್ದರೂ ಪತಿಯ ಒತ್ತಾಯಕ್ಕೆ ಕಟ್ಟುಬಿದ್ದು ಯಾರದೋ ಸಂಬಂಧಿಗಳ ಮನೆಗೆ ಹೋಗುವುದು ಇವೆಲ್ಲ ನಿಮ್ಮನ್ನು ದಣಿಸುತ್ತವೆ.

ಈ ಋಣಾತ್ಮಕ ಭಾವನೆಗಳು ನಿಮ್ಮನ್ನು ದಣಿಸಿ, ಸುತ್ತಲೂ ಇರುವ ವೈರಾಣುಗಳು ನಿಮ್ಮ ಮೇಲೆ ಯಶಸ್ವಿಯಾಗಿ ದಾಳಿ ನಡೆಸಲು ಅನುಕೂಲ ಮಾಡಿಕೊಡುತ್ತವೆ. ದುಗುಡ, ಖಿನ್ನತೆ, ಆತ್ಮವಿಶ್ವಾಸದ ಕೊರತೆ, ನಂಬಿಕೆಯ ಕೊರತೆ, ಆತ್ಮ ನ್ಯೂನತಾ ಭಾವ ರೋಗಗಳು ನಿಮ್ಮ ಮೇಲೆ ಹತೋಟಿ ಸಾಧಿಸಲು ದಾರಿ ಮಾಡಿಕೊಡುತ್ತವೆ.

ಅದಕ್ಕಾಗಿ ನಿತ್ಯವೂ ನಮ್ಮ ಭಾವನೆಗಳು ಹಾಗೂ ಆಲೋಚನೆಗಳಿಗೆ ವಿಶ್ರಾಂತಿ ನೀಡಬೇಕಾಗುತ್ತದೆ. ನಿಮ್ಮ ಮನೆಯ ಕಿಟಕಿಯ ಬಳಿ ಒಬ್ಬರೇ ಮೌನವಾಗಿ ಕುಳಿತುಕೊಳ್ಳಿ. ನಿಮ್ಮ ಮೊಬೈಲ್ ಫೋನ್ ಸೈಲೆಂಟ್ ಮೋಡ್‌ನಲ್ಲಿ ಇರಲಿ. ಆಕಾಶದತ್ತ ದಿಟ್ಟಿಸಿ ನೋಡಿ. ಅದರ ಅಗಾಧತೆ, ಮೌನ, ಸ್ತಬ್ಧತೆಯನ್ನು ನಿಮ್ಮೊಳಗೆ ಇಂಗಿಸಿಕೊಳ್ಳಿ. ಭೂತ, ಭವಿಷ್ಯ ಎಲ್ಲವನ್ನೂ ಮರೆತುಬಿಡಿ. ವರ್ತಮಾನದ ಆ ಕ್ಷಣ ಅಷ್ಟೊಂದು ಸುಂದರವಾಗಿ ಇರಬೇಕಾದರೆ ಎಲ್ಲ ಯೋಚನೆಗಳು, ತಾಕಲಾಟಗಳು ಮನದಿಂದ ಮಾಯವಾಗುತ್ತವೆ.

ಭಾವನೆಗಳ ಬಿರುಗಾಳಿ ಬೀಸಿ ಮರುಭೂಮಿಯಾದಂತಹ ಮನಸ್ಸು ತನ್ನ ಜೀವಂತಿಕೆ, ಹೊಳಪು ಎಲ್ಲವನ್ನೂ ಕಳೆದುಕೊಂಡಿತ್ತು. ಈಗ  ಆರೋಗ್ಯಕರವಾದ ಮೌನ, ತೊರೆಯಂತೆ ಹರಿದು ಎಲ್ಲವನ್ನೂ ಸ್ವಚ್ಛಗೊಳಿಸುತ್ತದೆ. ಫಲವತ್ತುಗೊಳಿಸುತ್ತದೆ. ಮೌನದಲ್ಲಿ, ನಿಶ್ಶಬ್ದದಲ್ಲಿ ನೀವು ಹಿತಾನುಭವ ಪಡೆಯುತ್ತೀರಿ. ಏಕೆಂದರೆ, ಮೌನ, ಶಾಂತಿ ನಿಮ್ಮ ಸಹಜ ಗುಣವಾಗಿರುತ್ತದೆ. ಒರಟುತನ, ಕಿರಿಕಿರಿ, ಯಾವುದೇ ಬೆದರಿಕೆ ಇಲ್ಲಿರುವುದಿಲ್ಲ. ಈ ಮೌನ, ನಿಶ್ಶಬ್ದ ನಿಮ್ಮಿಂದ ಏನನ್ನೂ ಬೇಡುವುದಿಲ್ಲ, ಬಯಸುವುದಿಲ್ಲ. ಕೇವಲ ನೀಡುತ್ತ ಹೋಗುತ್ತದೆ.

ಒಂದು ಗಂಟೆಗಳ ಕಾಲ ಏನೂ ಮಾಡದೇ ಸುಮ್ಮನಿರಿ. ಏನೂ ಯೋಚಿಸದಿರಿ. ಯಾವುದೇ ಕೆಲಸ ಮಾಡದೇ ಗೊಂಬೆಯಂತೆ ಕುಳಿತುಕೊಂಡು ಆ ನಿಶ್ಶಬ್ದವನ್ನು ಅನುಭವಿಸಿ. ಕನಿಷ್ಠ ಒಂದು ಗಂಟೆ ಕಾಲವಾದರೂ ಅಂತಹ ಶಾಂತಿಯ ಬದುಕು ನಿಮಗೆ ಬೇಕು. 24 ಗಂಟೆಯೊಳಗೆ ಮೌನವಾಗಿ ಕಳೆದ ಈ ಒಂದು ಗಂಟೆ ನೀವು ಇನ್ನುಳಿದ 23 ಗಂಟೆಗಳನ್ನು ಉಲ್ಲಾಸಮಯವಾಗಿ ಕಳೆಯಲು ಅನುವು ಮಾಡಿಕೊಡುತ್ತದೆ. ಇದು ಬಹುದೊಡ್ಡ ಹೂಡಿಕೆ. ಯಾವ ಬ್ಯಾಂಕೂ ಇಂತಹ ಪ್ರತಿಫಲ ನೀಡುವುದಿಲ್ಲ.

ಈ ಸುಂದರ ನಿಶ್ಶಬ್ದಕ್ಕೆ ಸಂಪೂರ್ಣವಾಗಿ ಶರಣಾದರೆ ನೀವು ಸಂಪೂರ್ಣ ತೃಪ್ತಿ ಅನುಭವಿಸುತ್ತೀರಿ. ನೀವು ಆಲೋಚನಾ ಶಕ್ತಿ ಕಳೆದುಕೊಳ್ಳುತ್ತಿದ್ದೀರಿ ಅಂದುಕೊಳ್ಳಬೇಡಿ. ನೀವು ಅನಗತ್ಯವಾದುದ್ದನ್ನೆಲ್ಲ ತೆಗೆದುಹಾಕುತ್ತೀರಿ. ಸೀಮಿತ ದಂಡೆಯ ಸರೋವರದಿಂದ ಅಪರಿಮಿತ ತೀರ ಹೊಂದಿರುವ ಮಹಾಸಾಗರದ ಪಯಣಕ್ಕೆ ಅಣಿಯಾಗುತ್ತೀರಿ. ಸೀಮಿತ ತೀರದೊಳಗೆ ನಾವು ಕೇವಲ ನಮ್ಮ ದೃಷ್ಟಿಕೋನದಿಂದ ಮಾತ್ರ ಯೋಚಿಸುತ್ತೇವೆ. ನಮ್ಮಿಂದ ಬೇರೆಯಾಗಿ ಯೋಚಿಸುವವರು ನಮಗೆ ತಪ್ಪಾಗಿ ಕಾಣುತ್ತಾರೆ. ಅವರನ್ನು ನಮ್ಮ ಬದುಕಿನಿಂದ ಹೊರಹಾಕುತ್ತೇವೆ.

ಅಪರಿಮಿತ ಮಹಾಸಾಗರದಲ್ಲಿ ತೇಲುವ ನೀವು ಕೆಲ ಸುಂದರ ಅಭ್ಯಾಸಗಳನ್ನು ಮಾಡಿಕೊಳ್ಳುವುದು ಒಳ್ಳೆಯದು. 

*ಪ್ರತಿ ಗಂಟೆಗೊಮ್ಮೆ ನಿಮ್ಮ ಸಹಜ ಗುಣವನ್ನು ನೆನಪಿಸಿಕೊಳ್ಳಿ. ’ನಾನು ಶಾಂತಿಯಿಂದ ಕೂಡಿದ ಸುಂದರ ಆತ್ಮ, ಇದು ನನ್ನ ಸತ್ಯ’ ಎಂದು ಹೇಳಿಕೊಳ್ಳಿ. ನೀವು ಗಂಟೆ ಹೊಡೆದು ಸುಮ್ಮನಾದರೂ ಅದರ ನಿನಾದ ತಲೆಯಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ. ಹಾಗೆಯೇ ಈ ವಾಕ್ಯಗಳು ಸಹ ನಿಮ್ಮ ಮಿದುಳಿನಲ್ಲಿ ಅಚ್ಚೊತ್ತಿಬಿಡುತ್ತವೆ.

*ಹಾಗೆಯೇ ನನಗೇನು ಬೇಕಾಗಿದೆ ಎಂದು ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ಶಾಂತಿ, ಸಂತಸ, ಸಕಾರಾತ್ಮಕ ಆಲೋಚನೆಗಳು ನಿಮಗೆ ಬೇಕಾಗಿವೆ. ನಿಮ್ಮೊಳಗಿನ ಸತ್ಯದ ಶಕ್ತಿಯಿಂದಲೇ ನೀವು ವಿಭಿನ್ನವಾಗಿ ಆಲೋಚಿಸತೊಡಗುತ್ತೀರಿ. ನಾನು ಸರಿಯಾಗಿದ್ದೇನೆ. ನನ್ನಿಂದ ವಿಭಿನ್ನವಾಗಿ ಆಲೋಚಿಸುವ ವ್ಯಕ್ತಿ ಸಹ ಅವನ ನೆಲೆಯಲ್ಲಿ ಸರಿಯಾಗಿಯೇ ಇದ್ದಾನೆ. ಇಂತಹ ಆಲೋಚನೆ ನಿಮ್ಮ ಕಣ್ಣನ್ನು ತೆರೆಸುತ್ತದೆ. ನಿಮ್ಮ ಮನಸ್ಸು ಹಾಗೂ ಹೃದಯದ ಕಿಟಕಿಯನ್ನೂ ತೆರೆಸುತ್ತದೆ.

*ಸೀಮಿತ ಪ್ರತಿಕ್ರಿಯೆಯ ಬದಲಾಗಿ ಬೇರೆಯವರು ನಿಮ್ಮ ಅಭಿಪ್ರಾಯವನ್ನು ವಿರೋಧಿಸಿದಾಗ ಅದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳುತ್ತೀರಿ. ಇದು ಉನ್ನತ ಆಲೋಚನಾ ವಿಧಾನ. ಮೇಲಕ್ಕೆ ಏರುತ್ತ ಹೋದಂತೆ ಎಲ್ಲವೂ ವಿಶಾಲವಾಗಿ ಕಾಣುತ್ತದೆಯಲ್ಲವೇ?

*ನನ್ನ ಅಭಿಪ್ರಾಯ ಎಂಬ ಅಹಂಕಾರವನ್ನು ತೊಡೆದಾಗ ಮತ್ತಷ್ಟು ನಿರಾಳ ಭಾವ ನಿಮ್ಮದಾಗುತ್ತದೆ. ನಿಮ್ಮೊಳಗಿನ ತೃಪ್ತಿಯೂ ಹೆಚ್ಚುತ್ತದೆ. ಇದರರ್ಥ ನೀವು ತಪ್ಪು, ಅವರು ಸರಿ ಎಂದಲ್ಲ. ಇಲ್ಲಿ ಯಾವುದೇ ತೀರ್ಮಾನಕ್ಕೆ ನೀವು ಬಂದಿರುವುದಿಲ್ಲ. ಒಂದು ಅಭಿಪ್ರಾಯಕ್ಕೆ ಕಟ್ಟುಬಿದ್ದಾಗ ನಿಮ್ಮ ದೃಷ್ಟಿಕೋನ ಸಂಕುಚಿತವಾಗುತ್ತ ಹೋಗುತ್ತದೆ. ಹಾಗೆ ಎದುರಿನವರ ಅಭಿಪ್ರಾಯವನ್ನು ಸ್ವೀಕರಿಸಿದಾಗ ಎರಡು ಆತ್ಮಗಳ ನಡುವೆ ಸುಂದರ ಸೇತುವೆ ಬೆಸೆದಿರುವುದು ನಿಮ್ಮ ಅನುಭವಕ್ಕೆ ಬರುತ್ತದೆ.

ಎರಡು ಬೃಹತ್ ಕಂಬಗಳನ್ನು ಊಹಿಸಿಕೊಳ್ಳಿ. ಅವು ಒಂದರ ಪಕ್ಕ ಒಂದು ಇದ್ದಾಗ ನಾವು ವೇದಿಕೆಯನ್ನು ನಿರ್ಮಿಸುತ್ತೇವೆ. ಅವು ದೂರದಲ್ಲಿ ಇದ್ದಾಗ ಸೇತುವೆ ನಿರ್ಮಿಸುತ್ತೇವೆ. ಇದು ದೈವಿಕ ನಿಯಮ. ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ನಾವು ಬದುಕುತ್ತ ಹೋದಂತೆ ಆರೋಗ್ಯಕರವಾಗಿ, ಶಕ್ತಿಯುತವಾಗಿ ಬದುಕುತ್ತೇವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.